ಹೈದಾರಾಬಾದ್ ಥಿಯೇಟರ್‌ಗಳ ಮುಂದೆ ರಾರಾಜಿಸಿದ ಮಾರ್ಟಿನ್ ಕಟೌಟ್; ಧ್ರುವ ಸರ್ಜಾ ಚಿತ್ರಕ್ಕೆ ಶುಭ ಕೋರಿದ ತೆಲುಗು ನಟ ಸಾಯಿ ಧರಮ್ ತೇಜ್
ಶುಕ್ರವಾರ ಆಯುಧ ಪೂಜೆ ಸಂಭ್ರಮದೊಂದಿಗೆ ಧ್ರುವ ಸರ್ಜಾ ಮಾರ್ಟಿನ್ ಸಿನಿಮಾ ಸದ್ದು ಕೂಡಾ ಜೋರಾಗಿದೆ. ಕರ್ನಾಟಕ ಮಾತ್ರವಲ್ಲದೆ ತೆಲಂಗಾಣ ಥಿಯೇಟರ್‌ಗಳ ಮುಂದೆ ಧ್ರುವ ಸರ್ಜಾ ಕಟೌಟ್ ರಾರಾಜಿಸುತ್ತಿವೆ. ತೆಲುಗು ನಟ ಸಾಯಿ ಧರಮ್ ತೇಜ್ ಮಾರ್ಟಿನ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಮಾರ್ಟಿನ್ ಸಿನಿಮಾ ಇಂದು ತೆರೆ ಕಾಣುತ್ತಿದೆ. ಸಿನಿಮಾ ಅನೌನ್ಸ್ ಆದಾಗಿನಿಂದ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಸಿತ್ತು. ಟೀಸರ್‌ನ ಸಣ್ಣ ಝಲಕ್, ಈ ಸಿನಿಮಾ ಖಂಡಿತ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತದೆ ಎಂಬ ನಿರೀಕ್ಷೆ ಹುಟ್ಟುಹಾಕಿತ್ತು. ಅದರಂತೆ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲಿ ಭಾರೀ ಹವಾ ಸೃಷ್ಟಿಸಿದೆ.
ರಜನಿಕಾಂತ್ ಜೊತೆಗೆ ಧ್ರುವ ಸರ್ಜಾ ಕಟೌಟ್
ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ವೃತ್ತಿ ಜೀವನದಲ್ಲಿ ಅವರ ಸಿನಿಮಾ 13 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಟ್ರೈಲರ್ ಕೂಡಾ 13 ಭಾಷೆಗಳಲ್ಲಿ ರಿಲೀಸ್ ಆಗಿತ್ತು. ವಿವಿಧ ದೇಶಗಳಿಂದ ಸಿನಿ ಪತ್ರಕರ್ತರು ಸಿನಿಮಾ ಸುದ್ದಿಗೋಷ್ಠಿಗೆ ಹಾಜರಿದ್ದರು. ಟೀಸರ್‌ನಲ್ಲಿದ್ದ ಆಕ್ಷನ್ ದೃಶ್ಯಗಳನ್ನು ನೋಡಿಯೇ ಸಿನಿಮಾ ಖಂಡಿತ ನಿರೀಕ್ಷೆ ಮಾಡಿದ್ದಕ್ಕಿಂತಲೂ ಚೆನ್ನಾಗಿದೆ ಎಂಬ ಮಾತು ಕೇಳಿಬಂದಿತ್ತು. ಶುಕ್ರವಾರ ಮಧ್ಯರಾತ್ರಿಯಿಂದಲೇ ಎಲ್ಲೆಡೆ ಮಾರ್ಟಿನ್ ಅಬ್ಬರ ಶುರುವಾಗಿದೆ. ವಿಶ್ವದಾದ್ಯಂತ ಮಾರ್ಟಿನ್ ಸಿನಿಮಾ 3000 ಸ್ಕ್ರೀನ್‌ಗಳಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಕರ್ನಾಟಕ ಮಾತ್ರವಲ್ಲ ನೆರೆ ರಾಜ್ಯ ತೆಲಂಗಾಣದ, ಆಂಧ್ರ ಪ್ರದೇಶದಲ್ಲಿ ಕೂಡಾ ಮಾರ್ಟಿನ್, ಜೋರಾಗಿ ಸದ್ದು ಮಾಡುತ್ತಿದ್ದಾನೆ. ಥಿಯೇಟರ್‌ಗಳ ಮುಂದೆ ಧ್ರುವ ಸರ್ಜಾ ಕಟೌಟ್ ರಾರಾಜಿಸುತ್ತಿದೆ.
ಮಾರ್ಟಿನ್‌ಗೆ ಶುಭ ಕೋರಿದ ಸಾಯಿ ಧರಮ್ ತೇಜ್
ಗುರುವಾರ ರಜನಿಕಾಂತ್ ಅಭಿನಯದ ವೇಟ್ಟೈಯನ್ ರಿಲೀಸ್ ಅಗಿತ್ತು. ರಜನಿಕಾಂತ್ ಕಟೌಟ್ ಜೊತೆಗೆ ಹೈದರಾಬಾದ್‌ನಲ್ಲಿ ಧ್ರುವ ಸರ್ಜಾ ಕಟೌಟ್ ಕೂಡಾ ನಿಲ್ಲಿಸಲಾಗಿದ್ದು ಅಭಿಮಾನಿಗಳು ಸಿನಿಮಾವನ್ನು ವೆಲ್‌ಕಮ್ ಮಾಡಲು ಎದುರು ನೋಡುತ್ತಿದ್ದಾರೆ. ತೆಲುಗು ನಟ ಸಾಯಿ ಧರಮ್ ತೇಜ್ ಕೂಡಾ ಮಾರ್ಟಿನ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಇಂದು ರಿಲೀಸ್ ಆಗುತ್ತಿರುವ ತೆಲುಗು, ಹಿಂದಿ ಭಾಷೆಗಳ ಸಿನಿಮಾ ಪೋಸ್ಟರ್ ಜೊತೆಗೆ ಮಾರ್ಟಿನ್ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಸಾಯಿ ಧರಮ್ ತೇಜ್, ಈ ಹಬ್ಬ ಬಹಳ ವಿಶೇಷವಾಗಿದೆ. ಹಲವು ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗ್ತಿವೆ. ಎಲ್ಲಾ ಚಿತ್ರತಂಡಕ್ಕೂ ಆಲ್ ದಿ ಬೆಸ್ಟ್, ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಲಿ ಎಂದು ಧರಮ್ ತೇಜ್ ವಿಶ್ ಮಾಡಿದ್ದಾರೆ. ಧ್ರುವಾ ಸರ್ಜಾ ಎಕ್ಸ್ ಖಾತೆಗೂ ತಮ್ಮ ಪೋಸ್ಟ್ ಟ್ಯಾಗ್ ಮಾಡಿದ್ದಾರೆ. ತೆಲುಗು ಸಿನಿಪ್ರಿಯರು ಕೂಡಾ ಮಾರ್ಟಿನ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
150 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಸಿನಿಮಾ
ಮಾರ್ಟಿನ್ ಚಿತ್ರವನ್ನು ವಾಸವಿ ಎಂಟರ್‌ಪ್ರೈಸಸ್, ಉದಯ್ ಕೆ ಮೆಹ್ತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಅದ್ದೂರಿ ಖ್ಯಾತಿಯ ಎಪಿ ಅರ್ಜುನ್ ಮಾರ್ಟಿನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಸಂಗೀತ ನೀಡಿದರೆ, ರವಿ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. 150 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ತಯಾರಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಜೊತೆಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಅನ್ಷೇಷಿ ಜೈನ್, ಸುಕ್ರುತಾ ವಾಘ್ಲೆ , ಚಿಕ್ಕಣ್ಣ, ಸಾಧು ಕೋಕಿಲ , ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.
ಸಿನಿಮಾ ಕನ್ನಡದ ಜೊತೆಗೆ ಬೆಂಗಾಳಿ, ಹಿಂದಿ, ತಮಿಳು, ತೆಲುಗು, ಕೊರಿಯನ್, ಅರೇಬಿಕ್, ಚೈನೀಸ್, ಸ್ಪಾನಿಷ್, ರಷ್ಯನ್, ಜಪಾನೀಸ್ ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಮಾರ್ಟಿನ್ ಚಿತ್ರ ಕನ್ನಡದ ಕೆಜಿಎಫ್, ಕಾಂತಾರದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಸಿನಿಪ್ರಿಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.