ರಾಜ್‌ಕುಮಾರ್ ನಟನೆಯ ಸಂಪತ್ತಿಗೆ ಸವಾಲ್ ಸಿನಿಮಾಕ್ಕೆ 50 ವರ್ಷ; ಯಾವ ನಾಯಿಗೆ ಬೇಕೋ ಯಾವ ನಾಯಿಗೆ ಬೇಕೋ ನಿನ್ನ ಋಣ
Jun 01, 2024 02:48 PM IST
ರಾಜ್‌ಕುಮಾರ್ ನಟನೆಯ ಸಂಪತ್ತಿಗೆ ಸವಾಲ್ ಸಿನಿಮಾಕ್ಕೆ 50 ವರ್ಷ
- Sampathige Savaal Movie Completed 50 Years: ಡಾ. ರಾಜ್‌ಕುಮಾರ್ ನಟನೆಯ ಸಂಪತ್ತಿಗೆ ಸವಾಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 50 ವರ್ಷಗಳಾಗಿವೆ. ಅಣ್ಣಾವ್ರ ಈ ಸಿನಿಮಾದ ಕುರಿತು ಆಸಕ್ತಿದಾಯಕ ಅಂಶಗಳನ್ನು ತಿಳಿಯೋಣ ಬನ್ನಿ.
ಬೆಂಗಳೂರು: ಡಾ. ರಾಜ್‌ಕುಮಾರ್ ನಟನೆಯ ಸಂಪತ್ತಿಗೆ ಸವಾಲ್ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾಗಿ 50 ವರ್ಷಗಳಾಗಿವೆ. ಈ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್ ‘ಯಾರೇ ಕೂಗಾಡಲಿ, ಊರೇ ಹೋರಾಡಲಿ’ ಎಂಬ ಹಾಡನ್ನು ಹಾಡಿದ್ದರು. ಇದಾದ ಬಳಿಕ ಇವರು ಹಲವು ಸಿನಿಮಾಗಳಿಗೆ ಸ್ವತಃ ಹಾಡಿದ್ದಾರೆ. ಕನ್ನಡ ಚಿತ್ರರಂಗ ಸದಾ ನೆನಪಿನಲ್ಲಿಟ್ಟುಕೊಳ್ಳುವಂತಹ ಈ ಸಿನಿಮಾದ ಪ್ರಮುಖ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.
ಸಂಪತ್ತಿಗೆ ಸವಾಲ್ ಸಿನಿಮಾದ ಪ್ರಮುಖ ಡೈಲಾಗ್‌ಗಳು
"ಯಾವ ನಾಯಿಗೆ ಬೇಕೋ, ಯಾವ ನಾಯಿಗೆ ಬೇಕೋ ನಿನ್ನ ಋಣ" ಎಂದು ಭದ್ರ (ಡಾ. ರಾಜ್‌ಕುಮಾರ್) ಹೇಳುತ್ತಾರೆ. ಅದಕ್ಕೆ ದುರ್ಗಿ- " ಲೇ, ನೀನು ಗಂಡಸೇ ಆಗಿದ್ರೇ, ನೀನು ನಿಮ್ಮಪ್ಪನ ಮಗನೇ ಆಗಿದ್ರೆ , ಗಿಡಕ್ಕೆ ಕೈ ಹಾಕೋ ನೋಡೋಣ..." " ಬೇವರ್ಸಿ, ಹಳೆ ಬೇವರ್ಸಿ, ಬಿಕನಾಸಿ, ದರ್ವೇಸಿ " ಎನ್ನುತ್ತಾಳೆ. ಅದಕ್ಕೆ ಉತ್ತರವಾಗಿ ಸಾಹುಕಾರ್ ಸಿದ್ದಪ್ಪ ಹೀಗೆ ಹೇಳುತ್ತಾರೆ. " ಮಹಾ ಜನಗಳೇ ನೀವೆಲ್ಲ ನಮಗೆ ಮಕ್ಕಳಿದ್ದಂತೆ, ನಾವು ನಿಮಗೆ ತಂದೆ ಇದ್ದಂತೆ" ಅದಕ್ಕೆ ಬಾಲಕೃಷ್ಣ- " ವಿಶ್ವನ ಹೆಗಲೇರ್ತು, ಶುಕ್ರವಾರದ ಮಾರನೇ ದಿನ" ಎನ್ನುತ್ತಾರೆ. ಇಂತಹ ಹಲವು ಡೈಲಾಗ್‌ಗಳಿಗೆ ಸಂಪತ್ತಿಗೆ ಸವಾಲ್ ಸಿನಿಮಾ ಫೇಮಸ್ ಆಗಿತ್ತು. ಆ ಕಾಲದಲ್ಲಿ ಈ ಸಿನಿಮಾದ ಹಾಡುಗಳಿಗಿಂತ ಈ ಸಿನಿಮಾದ ಸಂಭಾಷಣೆಗಳ ಧ್ವನಿ ಸುರಳಿಯೇ ಫೇಮಸ್ ಆಗಿತ್ತು.
ಬಾಕ್ಸ್‌ಆಫೀಸ್ ಕೊಳ್ಳೆ ಹೊಡೆದ ಸಿನಿಮಾ
ಡಾ. ರಾಜ್‌ಕುಮಾರ್ ನಟನೆಯ ಸಂಪತ್ತಿಗೆ ಸವಾಲ್ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಆ ಕಾಲದಲ್ಲಿ ಜನರು ಈ ಸಿನಿಮಾವನ್ನು ಮತ್ತೆಮತ್ತೆ ಬಂದು ಚಿತ್ರಮಂದಿರಗಳಲ್ಲಿ ನೋಡುತ್ತಿದ್ದರು.
ನಾಟಕದ ಕಥೆ ಸಿನಿಮಾವಾಯ್ತು
ಉತ್ತರ ಕರ್ನಾಟಕದ ನಾಟಕ ಕಂಪನಿಯೊಂದರ ನಾಟಕದ ಕಥೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿತ್ತು. 1973ರಲ್ಲಿ ಶಾರದಾ ಸಂಗೀತ ನಾಟಕ ಮಂಡಳಿಯು ಕನಕಪುರದಲ್ಲಿ ‘ಸಂಪತ್ತಿಗೆ ಸವಾಲು’ ನಾಟಕ ಮಾಡುತ್ತಿತ್ತು. ಆ ಸಿನಿಮಾ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಈ ನಾಟಕವನ್ನು ಸ್ವತಃ ರಾಜ್‌ಕುಮಾರ್ ಕನಕಪುರಕ್ಕೆ ಬಂದು ನೋಡುತ್ತಾರೆ. ಇದನ್ನು ಸಿನಿಮಾವಾಗಿ ಮಾಡಲು ಬಯಸುತ್ತಾರೆ. ಕಂಪನಿಯ ಮಾಲೀಕ ಬಸವರಾಜಪ್ಪ ಮತ್ತು ನಾಟಕ ಬರೆದ ಪಿ.ಬಿ.ಧುತ್ತರಗಿಗೆ ತಿಳಿಸಿ ಹೇಗೋ ಒಪ್ಪಿಸುತ್ತಾರೆ. ಬಳಿಕ ಇದು ಸಿನಿಮಾವಾಗಿ ಹೊಸ ಇತಿಹಾಸ ಸೃಷ್ಟಿಸುತ್ತದೆ.
ಹಲವು ಭಾಷೆಗಳಲ್ಲಿ ಬಿಡುಗಡೆ
ಡಾ. ರಾಜ್‌ಕುಮಾರ್ ನಟನೆಯ ಸಂಪತ್ತಿಗೆ ಸವಾಲ್‌ನ ಯಶಸ್ಸು ಉಳಿದ ಚಿತ್ರರಂಗಗಳ ಗಮನವನ್ನು ಸೆಳೆಯಿತು. ಮುಂದೆ ತೆಲುಗು,ತಮಿಳು,ಹಾಗೂ ಹಿಂದಿ ಭಾಷೆಗಳಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಿತ್ತು. ಪ್ಯಾನ್ ಇಂಡಿಯಾ ಪರಿಕಲ್ಪನೆ ಇಲ್ಲದ ಆ ಕಾಲದಲ್ಲಿ ಸಂಪತ್ತಿಗೆ ಸವಾಲ್ ಸಿನಿಮಾವು ವಿವಿಧ ಭಾಷೆಗಳಲ್ಲಿ ಚಿತ್ರೀಕರಣಗೊಂಡು ಎಲ್ಲಾ ಕಡೆ ಫೇಮಸ್ ಆಗಿತ್ತು.
ನಾಟಕ ನೋಡಿ ಪ್ರ್ಯಾಕ್ಟೀಸ್ ಮಾಡಿ
ರಾಜ್‌ಕುಮಾರ್ ಅವರು ಈ ಸಿನಿಮಾದಲ್ಲಿ ನಟಿಸುವ ಕಲಾವಿದರಿಗೆ ವಿಶೇಷ ಸೂಚನೆ ನೀಡಿದ್ದರು. ಶಾರದಾ ಮಂಡಳಿಯ ಕಲಾವಿದರ ನಟನೆಯನ್ನು ನೋಡಿಕೊಂಡು ಬನ್ನಿ, ಸಂಪತ್ತಿಗೆ ಸವಾಲ್ ನಾಟಕ ನೋಡಿಕೊಂಡು ಬಂದು ನಟಿಸಬೇಕೆಂದು ಎಲ್ಲಾ ಪಾತ್ರದಾರಿಗಳಿಗೆ ತಿಳಿಸಿದ್ದರು.
ಸಂಪತ್ತಿಗೆ ಸವಾಲ್ ಪೂರ್ಣ ಸಿನಿಮಾ ಇಲ್ಲಿದೆ ನೋಡಿ
ಸಂಪತ್ತಿಗೆ ಸವಾಲ್ ಸಿನಿಮಾದ ಪ್ರಮುಖ ಪಾತ್ರವರ್ಗ
ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿ ಭದ್ರನಾಗಿ ಡಾ.ರಾಜ್, ದುರ್ಗಿಯಾಗಿ - ಮಂಜುಳಾ, ಸಾಹುಕಾರ್ ಸಿದ್ದಪ್ಪನಾಗಿ ವಜ್ರಮುನಿ, ಅವರ ಸಹಾಯಕನಾಗಿ ಬಾಲ ಕೃಷ್ಣ ವಾವ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ವರನಟ ಡಾ. ರಾಜ್‌ಕುಮಾರ್‌ರನ್ನು ಬೈಯುವಂತಹ ಗಯ್ಯಾಳಿ ಪಾತ್ರ ಮಾಡಿದ ಮಂಜುಳ ಎಲ್ಲರ ಗಮನ ಸೆಳೆದಿದ್ದರು.
ಪೂರಕ ಮಾಹಿತಿ: ವಿಕಿಪೀಡಿಯಾ ಕನ್ನಡ