ಕನ್ನಡ ಸುದ್ದಿ  /  ಮನರಂಜನೆ  /  ಇಂದಿರಾ ಗಾಂಧಿ ವಿರುದ್ಧ ಮೇರುನಟ ಡಾ. ರಾಜ್‌ಕುಮಾರ್‌ ಚುನಾವಣೆಯಲ್ಲಿ ಯಾಕೆ ಸ್ಪರ್ಧಿಸಲಿಲ್ಲ? ಲೋಕಸಭಾ ಚುನಾವಣಾ ಸಮಯದಲ್ಲಿ ಹಳೆನೆನಪು

ಇಂದಿರಾ ಗಾಂಧಿ ವಿರುದ್ಧ ಮೇರುನಟ ಡಾ. ರಾಜ್‌ಕುಮಾರ್‌ ಚುನಾವಣೆಯಲ್ಲಿ ಯಾಕೆ ಸ್ಪರ್ಧಿಸಲಿಲ್ಲ? ಲೋಕಸಭಾ ಚುನಾವಣಾ ಸಮಯದಲ್ಲಿ ಹಳೆನೆನಪು

ದಿವಂಗತ ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬದ ಸವಿನೆನಪಿನ ಸಮಯದಲ್ಲಿ ಅಣ್ಣಾವ್ರ ಬದುಕಿನ ಕೆಲವೊಂದು ಮಹತ್ವದ ಘಟನೆಗಳನ್ನು ಇಲ್ಲಿ ನೆನಪಿಸಿಕೊಳ್ಳೋಣ. ಲೋಕಸಭಾ ಚುನಾವಣೆ 2024 ನಡೆಯುತ್ತಿರುವ ಈ ಸಮಯದಲ್ಲಿ ರಾಜ್‌ಕುಮಾರ್‌ ಅವರನ್ನೂ ಚುನಾವಣಾ ಗುರಾಣಿಯಾಗಿ ಬಳಸಲು ಆ ಕಾಲದ ರಾಜಕೀಯ ಬಯಸಿತ್ತು ಎನ್ನುವುದು ನಿಮಗೆ ಗೊತ್ತೆ?

ಇಂದಿರಾ ಗಾಂಧಿ ವಿರುದ್ಧ ಮೇರುನಟ ಡಾ. ರಾಜ್‌ಕುಮಾರ್‌ ಚುನಾವಣೆಯಲ್ಲಿ ಯಾಕೆ ಸ್ಪರ್ಧಿಸಲಿಲ್ಲ?
ಇಂದಿರಾ ಗಾಂಧಿ ವಿರುದ್ಧ ಮೇರುನಟ ಡಾ. ರಾಜ್‌ಕುಮಾರ್‌ ಚುನಾವಣೆಯಲ್ಲಿ ಯಾಕೆ ಸ್ಪರ್ಧಿಸಲಿಲ್ಲ?

ಬೆಂಗಳೂರು: ಎಲ್ಲೆಡೆ ಲೋಕಸಭಾ ಚುನಾವಣೆ 2024ರ ಗಡಿಬಿಡಿ ಕಾಣಿಸುತ್ತಿದೆ. ನಾಡಿದ್ದು ಕರ್ನಾಟಕದಲ್ಲೂ ಚುನಾವಣಾ ಹಬ್ಬದ ಸಂಭ್ರಮವಿದೆ. ಇಂದು ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬದ ಸವಿನೆನಪಿನ ಸಂಭ್ರಮವಿದೆ. ಇದೇ ಸಮಯದಲ್ಲಿ ಚುನಾವಣೆಗೂ ರಾಜ್‌ಕುಮಾರ್‌ಗೂ ನಂಟಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇರಬಹುದು. ಚುನಾವಣಾ ರಾಜಕೀಯದಿಂದ ದಿವಂಗತ ಡಾ. ರಾಜ್‌ಕುಮಾರ್‌ ಸಾಕಷ್ಟು ದೂರ ಉಳಿದಿದ್ದರು. ತಮ್ಮ ಮಕ್ಕಳಿಗೂ ರಾಜಕೀಯದಿಂದ ದೂರ ಇರುವಂತೆ ಮೇರುನಟ ಮನವಿ ಮಾಡಿದ್ದರು. ಆದರೆ, ಹಿಂದೊಮ್ಮೆ ಭಾರತದ ಪ್ರಧಾನಿಯಾಗಿದ್ದ ದಿ. ಇಂದಿರಾ ಗಾಂಧಿಗೆ ರಾಜ್‌ಕುಮಾರ್‌ ಹೆಸರು ಕೇಳಿ ಭಯ ಹುಟ್ಟಿತ್ತು. ತಮ್ಮ ಎದುರು ರಾಜ್‌ಕುಮಾರ್‌ ನಿಂತರೆ ತಮಗೆ ಉಳಿಗಾಲವಿಲ್ಲ ಎಂದು ಭಾವಿಸಿದ್ದರು. ಆ ಕಾಲದ ರಾಜಕೀಯ ಮುಖಂಡರುಗಳು ಇಂದಿರಾ ಗಾಂಧಿ ವಿರುದ್ಧ ಅಣ್ಣಾವ್ರನ್ನು ಸ್ಪರ್ಧಿಸಲು ಬಯಸಿದ್ದರು. ಇದನ್ನು ತಿಳಿದ ರಾಜ್‌ಕುಮಾರ್‌ ಯಾರ ಕೈಗೂ ಸಿಗದಂತೆ ಅಕ್ಷರಶಃ ಅಡಗಿ ಕುಳಿತಿದ್ದರು. ಯಾಕೆ ಡಾ. ರಾಜ್‌ಕುಮಾರ್‌ ಅವರು ಇಂದಿರಾ ಗಾಂಧಿ ಎದುರು ಸ್ಪರ್ಧಿಸಲಿಲ್ಲ? ಚುನಾವಣಾ ರಾಜಕೀಯಕ್ಕೆ ಅಣ್ಣಾವ್ರು ಯಾಕೆ ಪ್ರವೇಶಿಸಿಲಿಲ್ಲ? ಎಂಬ ಪ್ರಶ್ನೆಗೆ ಕೆಲವು ವರ್ಷಗಳ ಹಿಂದೆಯೇ ಉತ್ತರ ದೊರಕಿತ್ತು. ಸ್ವತಃ ರಾಘವೇಂದ್ರ ರಾಜ್‌ಕುಮಾರ್‌ ಅವರು ತಮ್ಮ ತಂದೆಯ "ರಾಜಕೀಯ ನಿಲುವಿನ ಕುರಿತು" ವಿವರ ನೀಡಿದ್ದರು.

ಟ್ರೆಂಡಿಂಗ್​ ಸುದ್ದಿ

ಇಂದಿರಾ ಗಾಂಧಿಗೆ ಡಾ. ರಾಜ್‌ ಬಗ್ಗೆ ಭಯವಿತ್ತು

1978ರ ಉಪಚುನಾವಣೆಯಲ್ಲಿ ಗೆಲ್ಲುವುದು ಇಂದಿರಾ ಗಾಂಧಿಯವರಿಗೆ ಅತ್ಯಂತ ಮುಖ್ಯವಾಗಿತ್ತು. ತುರ್ತು ಪರಿಸ್ಥಿತಿ ಬಳಿಕದ ಸಾರ್ವತ್ರಿಕ ಚುನಾವಣೆಯ ವೈಯಕ್ತಿಕ ಸೋಲು ಅವರನ್ನು ಕಂಗೆಡಿಸಿತ್ತು. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇಂದಿರಾ ಗಾಂಧಿ ನಿಂತಿದ್ದರು. ಕಾಂಗ್ರೆಸ್‌ ಮುಖಂಡ ಡಿಬಿ ಚಂದ್ರೇಗೌಡ ಅವರು ಇಂದಿರಾಗಾಂಧಿಗಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಆ ಸಮಯದಲ್ಲಿ ಇಂದಿರಾ ಗಾಂಧಿ ಎದುರು ನಿಲ್ಲಲು ಸಮರ್ಥ ವ್ಯಕ್ತಿಗಾಗಿ ಪ್ರತಿಪಕ್ಷ ಹುಡುಕಾಟ ನಡೆಸುತ್ತಿತ್ತು. ಎಲ್ಲರ ಕಣ್ಣ ಡಾ. ರಾಜ್‌ಕುಮಾರ್‌ ಮೇಲಿತ್ತು. ಅವರು ಆ ಕಾಲದಲ್ಲಿಯೇ ದೊಡ್ಡಮಟ್ಟದ ಅಭಿಮಾನಿಗಳ ಬಳಗ ಹೊಂದಿದ್ದರು. ರಾಜ್‌ಕುಮಾರ್‌ ಚುನಾವಣೆಗೆ ನಿಂತರೆ ಗೆಲುವು ಖಾತ್ರಿ ಇತ್ತು. ಆದರೆ, ನಾಮ ನಿರ್ದೇಶನದವರೆಗೆ ಅಜ್ಞಾತವಾಸವನ್ನು ಡಾ. ರಾಜ್‌ಕುಮಾರ್‌ ಆಯ್ಕೆ ಮಾಡಿಕೊಂಡರು. ಇವರ ಮನವೋಲಿಕೆಗೆ ರಾಜಕಾರಣಿಗಳು ಸತತ ಪ್ರಯತ್ನ ಮಾಡುತ್ತಿದ್ದರು ಎಂದು ವಿವಿಧ ವರದಿಗಳು ನೆನಪಿಸಿಕೊಂಡಿವೆ.

ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ

ಏಕೆ ರಾಜ್‌ಕುಮಾರ್‌ ಅವರು ಇಂದಿರಾ ಗಾಂಧಿ ಎದುರು ಸ್ಪರ್ಧಿಸಲಿಲ್ಲ? ಇದಕ್ಕೆ ಏನಾದರೂ ವಿಶೇಷ ಕಾರಣಗಳು, ವಿಶೇಷ ರಾಜಕೀಯ ಒಲವು ನಿಲುವುಗಳು ಕಾರಣವೇ? ಈ ಕುರಿತು ನಾನಾ ಪ್ರಶ್ನೆಗಳು ಇದ್ದವು. ಆದರೆ, 2018ರಲ್ಲಿ ಸ್ವತಃ ರಾಘವೇಂದ್ರ ರಾಜ್‌ಕುಮಾರ್‌ ಅಣ್ಣಾವ್ರ ರಾಜಕೀಯ ನಿಲುವಿಗೆ ಕಾರಣ ತಿಳಿಸಿದ್ದರು. "ನಾನು ಪಿಯುಸಿ ಮುಗಿದಾಗಲೇ ಅಪ್ಪನಲ್ಲಿ ಈ ಎಲೆಕ್ಷನ್‌ ಬಗ್ಗೆ ಕೇಳಿದ್ದೆ. ಆದರೆ, ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ ಎಂದು ಕವಿರತ್ನ ಕಾಳಿದಾಸ ಸಿನಿಮಾದ ಡೈಲಾಗ್‌ ಮೂಲಕ ನನಗೆ ಉತ್ತರಿಸಿದ್ದರು" ಎಂದು ರಾಘವೇಂದ್ರ ರಾಜ್‌ಕುಮಾರ್‌ ನೆನಪಿಸಿಕೊಂಡಿದ್ದಾರೆ.

ಇಂದಿರಾ ವಿರುದ್ಧ ರಾಜ್‌ಕುಮಾರ್‌ ಸ್ಪರ್ಧಿಸದೆ ಇರುವುದಕ್ಕೆ ಕಾರಣ

ಮೇರುನಟ ಡಾ. ರಾಜ್‌ಕುಮಾರ್‌ ಇಂದಿರಾ ಗಾಂಧಿ ವಿರುದ್ಧ ಸ್ಪರ್ಧಿಸದೆ ಇರುವುದಕ್ಕೆ ಕಾರಣವೇನೆಂದು 2005ರಲ್ಲಿ ರಾಘವೇಂದ್ರ ರಾಜ್‌ಕುಮಾರ್‌ಗೆ ತಿಳಿಸಿದ್ದರಂತೆ. ಅಂದರೆ, ಅಣ್ಣಾವ್ರು ಇಹಲೋಕ ತ್ಯಜಿಸುವ ಒಂದು ವರ್ಷದ ಮೊದಲು ರಾಘವೇಂದ್ರ ವಿದ್ಯಾರ್ಥಿಯಾಗಿದ್ದಾಗ ಕೇಳಿದ ಪ್ರಶ್ನೆಯನ್ನು ನೆನಪಿಸಿಕೊಂಡು ಉತ್ತರಿಸಿದ್ದರಂತೆ. "ಈ ಮಾಹಿತಿಯನ್ನು ನನಗೆ ಮಾತ್ರ ತಿಳಿಸಿದರು. ಬೇರೆ ಯಾರಿಗೂ ಹೇಳಿರಲಿಲ್ಲ. ಅಪ್ಪಾಜಿ ನೀಡಿದ ಕಾರಣ ತುಂಬಾ ಉತ್ತಮವಾಗಿತ್ತು. ರಾಜಕೀಯಕ್ಕೆ ಸೇರಿ ದೇಶಕ್ಕೆ ಒಳ್ಳೆಯ ಕೊಡುಗೆ ನೀಡುವಂತಹ ಉದ್ದೇಶದಿಂದ ನನ್ನನ್ನು ಸ್ಪರ್ಧಿಸಲು ತಿಳಿಸಿದ್ದರೆ ನಾನು ಆ ಕುರಿತು ಯೋಚಿಸಬಹುದಿತ್ತು. ಆದರೆ, ನನ್ನನ್ನು ಆ ಚುನಾವಣೆಯಲ್ಲಿ ಗುರಾಣಿ ರೀತಿ ಬಳಸುವ ಉದ್ದೇಶ ಇತ್ತು. ನನ್ನನ್ನು ಅಸ್ತ್ರವಾಗಿ ಬಳಸುವ ಉದ್ದೇಶವಿತ್ತು. ಚುನಾವಣೆಗೆ ನನ್ನ ಅವಶ್ಯಕತೆ ಇರಲಿಲ್ಲ. ನಾನು ಎದುರಾಳಿಯನ್ನು ಸೋಲಿಸಲು ಮಾತ್ರ ಬೇಕಿತ್ತು" ಎಂದು ರಾಘವೇಂದ್ರ ರಾಜ್‌ಕುಮಾರ್‌ ನೆನಪಿಸಿಕೊಂಡಿದ್ದರು.

ಇದಾದ ಬಳಿಕದ ವರ್ಷಗಳಲ್ಲೂ ಅಪ್ಪಾಜಿಯನ್ನು ರಾಜಕೀಯಕ್ಕೆ ಸೇರಿಸಲು ಒತ್ತಡವಿತ್ತು. ತಮಿಳುನಾಡು ಮತ್ತು ಆಂಧ್ರಪ್ರದೇಶದ ಜನಪ್ರಿಯ ಸಿನಿಮಾ ತಾರೆಯರು ಪಾಲಿಟಿಕ್ಸ್‌ಗೆ ಇಳಿದಿದ್ದರು. ರಾಜಕೀಯಕ್ಕೆ ಬೇಕಾದಷ್ಟು ಶಿಕ್ಷಣವಿಲ್ಲ ಎಂದು ಅವರು ಭಾವಿಸಿದ್ದರು. ಜತೆಗೆ ರಾಜಕೀಯದ ಮೂಲಕ ಯಾವುದೇ ಅಭಿಮಾನಿಯನ್ನು ದೂರ ಮಾಡಲು ಅವರು ಬಯಸಿರಲಿಲ್ಲ. ದೇವರು ನನ್ನನ್ನು ಈ ಭೂಮಿಗೆ ಸಿನಿಮಾಕ್ಕಾಗಿ ನೀಡಿದ್ದಾರೆ ಎಂದು ತಿಳಿದುಕೊಂಡಿದ್ದರು. ಆ ಹಾದಿಯನ್ನು ಬದಲಾಯಿಸಲು ಅವರು ಬಯಸಲಿಲ್ಲ" ಎಂದು ರಾಘವೇಂದ್ರ ರಾಜ್‌ಕುಮಾರ್‌ ಹೇಳಿದ್ದರು. ಒಟ್ಟಾರೆ, ಇಂದಿರಾ ಗಾಂಧಿಯವರ ವಿರುದ್ಧ ಡಾ. ರಾಜ್‌ ಅವರನ್ನು ನಿಲ್ಲಿಸಲು ಪ್ರತಿಪಕ್ಷಗಳು ಬಯಸಿದ್ದವು. ಆದರೆ, ಆ ಸಮಯದಲ್ಲಿ ಯಾರ ಕೈಗೂ ಸಿಗದಂತೆ ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ ಅಜ್ಞಾತವಾಸದಲ್ಲಿರುತ್ತಿದ್ದರು.

IPL_Entry_Point