Rajkumar: ಡಾ. ರಾಜ್‌ಕುಮಾರ್ ವಿಲನ್ ಆಗಿ ನಟಿಸಿದ ಸಿನಿಮಾಗಳಿವು; ದಾರಿತಪ್ಪಿದ ಮಗನಿಂದ ನಾನೊಬ್ಬ ಕಳ್ಳವರೆಗೆ ಇಲ್ಲಿದೆ ಲಿಸ್ಟ್
Dr Rajkumar Movies: ವರನಟ ಡಾ. ರಾಜ್‌ಕುಮಾರ್ ಎಂದಾಗ ನಮಗೆ ಅವರು ನಾಯಕ ನಟನಾಗಿ ನಟಿಸಿದ ಹಲವು ಸಿನಿಮಾಗಳು ನೆನಪಿಗೆ ಬರಬಹುದು. ಆದರೆ, ಅವರು ಕೆಲವೊಂದು ಸಿನಿಮಾಗಳಲ್ಲಿ ನೆಗೆಟಿವ್ ಶೇಡ್‌ಗಳಲ್ಲಿಯೂ ನಟಿಸಿದ್ದರು. ಅಂತಹ ಕೆಲವು ಸಿನಿಮಾಗಳ ವಿವರ ಇಲ್ಲಿದೆ.
ಇಂದು (ಏಪ್ರಿಲ್ 24) ದಿವಂಗತ ಡಾ. ರಾಜ್‌ಕುಮಾರ್ ಹುಟ್ಟುಹಬ್ಬ. ಈ ಸಮಯದಲ್ಲಿ ಅಣ್ಣಾವ್ರ ಅಭಿಮಾನಿಗಳಿಗೆ ಇವರು ನಟಿಸಿರುವ ಹತ್ತು ಹಲವು ಸಿನಿಮಾಗಳು ನೆನಪಿಗೆ ಬರಬಹುದು. ಇದೇ ಸಮಯದಲ್ಲಿ ಈಗಿನ ತಲೆಮಾರಿನವರಿಗೆ "ರಾಜ್‌ಕುಮಾರ್ ಯಾವುದಾದರೂ ಸಿನಿಮಾಗಳಲ್ಲಿ ವಿಲನ್ ರೋಲ್‌ನಲ್ಲಿ ನಟಿಸಿದ್ದಾರ? ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರ? ಇತ್ಯಾದಿ ಪ್ರಶ್ನೆಗಳು ಇರಬಹುದು. ಈ ಪ್ರಶ್ನೆಗೆ ಉತ್ತರ "ಹೌದು, ಡಾ. ರಾಜ್‌ಕುಮಾರ್ ಅವರು ದಾರಿತಪ್ಪಿದ ಮಗನಿಂದ ನಾನೊಬ್ಬ ಕಳ್ಳವರೆಗೆ ಹಲವು ಸಿನಿಮಾಗಳಲ್ಲಿ ನೆಗೆಟಿವ್ ಶೇಡ್‌ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅಂತಹ ಕೆಲವು ಸಿನಿಮಾಗಳ ವಿವರ ಇಲ್ಲಿದೆ.
ಭಕ್ತ ಪ್ರಹ್ಲಾದ
1983ರ ಭಕ್ತ ಪ್ರಹ್ಲಾದ ಸಿನಿಮಾ ನೋಡಿದರೆ ನಿಮಗೆ ಹಿರಣ್ಯಕಶಿಪುವಿನ ಅಟ್ಟಹಾಸ ನೆನಪಿಗೆ ಬರಬಹುದು. ಡಾ. ರಾಜ್‌ಕುಮಾರ್ ಅವರು ಹಿರಣ್ಯಕಶಿಪುವಾಗಿ ಮಾಡಿರುವ ಅಮೋಘ ನಟನೆ, ಡೈಲಾಗ್‌ಗಳು ಸದಾ ನೆನಪಿನಲ್ಲಿ ಇರುವಂತಹದ್ದು. ಈ ಸಿನಿಮಾದಲ್ಲಿ ಪ್ರಹ್ಲಾದನಾಗಿ ದಿವಂಗತ ಪುನೀತ್ ರಾಜ್‌ಕುಮಾರ್ ನಟಿಸಿದ್ದರು.
ದಾರಿ ತಪ್ಪಿದ ಮಗ
ಅಣ್ಣಾವ್ರ ಸಿನಿಮಾಗಳು ಪ್ರೇಕ್ಷಕರಿಗೆ ಅದ್ಭುತ ಸಂದೇಶ ನೀಡುವ ಗುಣ ಹೊಂದಿದ್ದವು. ದಾರಿ ತಪ್ಪಿದ ಮಗ ಎಂಬ ಸೂಪರ್‌ಹಿಟ್, ಬ್ಲಾಕ್‌ಬಸ್ಟರ್ ಸಿನಿಮಾದಲ್ಲಿ ರಾಜ್‌ಕುಮಾರ್ ಅವರು ಡಬಲ್ ಆಕ್ಟಿಂಗ್ ಮಾಡಿದ್ದರು. ಪ್ರಕಾಶ್ ಎಂಬ ಕಳ್ಳ, ಡಕಾಯಿತನಾಗಿ ನಟಿಸಿದ್ದರು. ಇದೇ ಸಮಯದಲ್ಲಿ ಪ್ರಸಾದ್ ಎಂಬ ಪ್ರೊಫೆಸರ್ ಆಗಿಯೂ ನಟಿಸಿದ್ದರು.
ಮೋಹಿನಿ ಭಸ್ಮಾಸುರ
ಈ ಸಿನಿಮಾದಲ್ಲಿ ರಾಜ್‌ಕುಮಾರ್ ಭಸ್ಮಾಸುರನಾಗಿ ನಟಿಸಿದ್ದರು. ಇದು ಕೂಡ ನೆಗೆಟಿವ್ ರೋಲ್.
ಭೂಕೈಲಾಸ
ಕೆ. ಶಂಕರ್ ನಿರ್ದೇಶನದ ಈ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್ ಅವರು ರಾವಣನಾಗಿ ಅಬ್ಬರಿಸಿದರು.
ಸತಿ ಶಕ್ತಿ
ಡಾ. ರಾಜ್‌ಕುಮಾರ್ ಅವರು ತಮ್ಮ ಸಿನಿಬದುಕಿನಲ್ಲಿ ಈ ಸಿನಿಮಾದಲ್ಲಿ ಮಾತ್ರ ಮಂತ್ರವಾದಿಯಾಗಿ ನಟಿಸಿದ್ದರು. ಇದು ಕೂಡ ಅಣ್ಣಾವ್ರು ಡಬಲ್ ಆಕ್ಟಿಂಗ್‌ನಲ್ಲಿ ನಟಿಸಿದ ಸಿನಿಮಾ. ರಕ್ತಾಕ್ಷ ಮತ್ತು ವಿರೂಪಾಕ್ಷನಾಗಿ ನಟಿಸಿದ್ದರು.
ದಶಾವತಾರ
ಈ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್ ಅವರು ಜಯ, ಹಿರಣ್ಯಕಶಿಪು, ರಾವಣ, ಶಿಶುಪಾಲನಾಗಿ ಕಾಣಿಸಿಕೊಂಡಿದ್ದರು.
ಮಹಿಷಾಸುರ ಮರ್ದಿನಿ
1959ರ ಈ ಸಿನಿಮಾದಲ್ಲಿ ರಾಜ್‌ಕುಮಾರ್ ಅವರು ಮಹಿಷಾಸುರನಾಗಿ ಕಾಣಿಸಿಕೊಂಡಿದ್ದರು.
ಹೃದಯ ಸಂಗಮ
ಈ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಮೂರು ನಿಮಿಷಗಳ ಕಾಲ ಡಾ. ರಾಜ್‌ಕುಮಾರ್ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು.
ನಾನೊಬ್ಬ ಕಳ್ಳ
ಈ ಸಿನಿಮಾದಲ್ಲಿ ಡಾ. ರಾಜ್ ಅವರು ಡಬಲ್ ಆಕ್ಟಿಂಗ್‌ನಲ್ಲಿ ನಟಿಸಿದ್ದರು. ಡಿಸಿಪಿ ಚಂದ್ರಶೇಕರ್ ಮತ್ತು ಅವರ ಪುತ್ರ ಗೋಪಿ ಎಂಬ ಕಳ್ಳನ ಪಾತ್ರದಲ್ಲಿ ನಟಿಸಿದ್ದರು.