‘ರಾಜ್‌ಕುಮಾರ್ ಯಾರನ್ನೂ ಬೆಳೆಯಲು ಬಿಡಲಿಲ್ಲ, ಎಲ್ಲರನ್ನೂ ತುಳಿದರು’ ಎಂಬ ಮಾತು ನಿಜನಾ? ಸಾಕ್ಷಿ ಸಮೇತ ಉತ್ತರ ಇಲ್ಲಿದೆ
Jul 11, 2024 06:43 AM IST
‘ರಾಜ್‌ಕುಮಾರ್ ಯಾರನ್ನೂ ಬೆಳೆಯಲು ಬಿಡಲಿಲ್ಲ, ಎಲ್ಲರನ್ನೂ ತುಳಿದರು’ ಎಂಬ ಮಾತು ನಿಜನಾ? ಸಾಕ್ಷಿ ಸಮೇತ ಉತ್ತರ ಇಲ್ಲಿದೆ
- ಡಾ. ರಾಜ್‌ಕುಮಾರ್ ಬಗ್ಗೆ ಈಗಿನ ಜನ ಏನೇ ಮಾತನಾಡಬಹುದು, ಆದರೆ ಸತ್ಯ ಯಾವತ್ತೂ ಸುಳ್ಳಾಗುವುದಿಲ್ಲ. ರಾಜ್‌ಕುಮಾರ್ ಯಾರನ್ನೂ ಬೆಳೆಯಲು ಬಿಟ್ಟಿಲ್ಲ, ಎಲ್ಲರನ್ನು ತುಳಿದರು ಎಂದೂ ಆಡಿಕೊಂಡಿವರಿದ್ದಾರೆ. ಆದರೆ, 4 ದಶಕಗಳ ಹಿಂದಿನ ವೈರಲ್ ಪ್ರಕಟಣೆಯೊಂದು ದೊಡ್ಮನೆಯ ದೊಡ್ಡತನವನ್ನು ಬಿಚ್ಚಿಟ್ಟಿದೆ.
Dwarakish Press Release About Dr Rajkumar: ಸಿನಿಮಾ ಅಂದರೆ ಸ್ಪರ್ಧೆ ಸಹಜ. ಯಶಸ್ಸಿನ ಹಿಂದೆ ಓಡುವ ಜನರೇ ಅಲ್ಲಿ ಜಾಸ್ತಿ. ಎಷ್ಟೇ ಆದ್ರೂ ಬಣ್ಣದ ಲೋಕ ಅಲ್ಲವೇ, ಅಲ್ಲಿಯೂ ಬಗೆಬಗೆ ವದಂತಿಗಳಿಗೂ ಜಾಗವಿರುತ್ತದೆ. ಗಾಸಿಪ್‌ಗಳೂ ಮೈಗಂಟಿಕೊಂಡಿರುತ್ತವೆ. ಇದೀಗ ಸೋಷಿಯಲ್ ಮೀಡಿಯಾ ಕಾಲ, ಚಿತ್ರರಂಗದಲ್ಲಿ ಸಣ್ಣ ಸದ್ದಾದರೂ ಅದು ದೊಡ್ಡ ಮಟ್ಟದಲ್ಲಿಯೇ ಮಾರ್ದನಿಸುತ್ತದೆ. ಅದೇ ರೀತಿ ಕೆಲವು ದಶಕಗಳ ಹಿಂದೆ ಬಾಯಿ ಮಾತೇ ಅಲ್ಲಿ ಎಲ್ಲದಕ್ಕೂ ಕುಮ್ಮಕ್ಕು ಕೊಡುತ್ತಿತ್ತು. ಅದರಲ್ಲೂ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಮತ್ತವರ ಕುಟುಂಬವನ್ನೂ ಈ ವದಂತಿಗಳು ಬಿಡಲಿಲ್ಲ. "ಚಿತ್ರೋದ್ಯಮದಲ್ಲಿ ಡಾ. ರಾಜ್‌ಕುಮಾರ್ ಯಾರನ್ನೂ ಬೆಳೆಯಲು ಬಿಡಲಿಲ್ಲ, ಎಲ್ಲರನ್ನೂ ತುಳಿದರು" ಎಂಬ ಮಾತನ್ನು ಇಂದಿಗೂ ಎಲ್ಲರೂ ಕೇಳಿರುತ್ತಾರೆ. ಅದಕ್ಕೀಗ ಸಾಕ್ಷಿ ಸಮೇತ ಉತ್ತರ ಸಿಕ್ಕಿದೆ.
ಅದು 80ರ ದಶಕ. ಕನ್ನಡ ಚಿತ್ರೋದ್ಯಮದಲ್ಲಿ ರಾಜ್‌ಕುಮಾರ್ ಉತ್ತುಂಗದಲ್ಲಿದ್ದ ಸಮಯ. ಮಾಡಿದ ಸಿನಿಮಾಗಳೆಲ್ಲವೂ ಶತದಿನೋತ್ಸವ ಆಚರಿಸಿಕೊಳ್ಳುತ್ತಿದ್ದ ಕಾಲ. ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಸಹ ತಮ್ಮದೇ ಹಾಸ್ಯಭರಿತ ಸಿನಿಮಾಗಳನ್ನು ನೀಡುತ್ತ ಬಂದಿದ್ದರು. ಹೀಗಿರುವಾಗ, 1981ರ ಆಗಸ್ಟ್ 20ರಂದು ದ್ವಾರಕೀಶ್ ನಿರ್ಮಾಣ ಮಾಡಿದ್ದ, ಭಾರ್ಗವ ನಿರ್ದೇಶನದ ಗುರುಶಿಷ್ಯರು ಸಿನಿಮಾ ತೆರೆಗೆ ಬಂದಿತ್ತು. ಸ್ಟಾರ್ ತಾರಾಬಳಗ ಹೊಂದಿದ್ದ ಈ ಹಾಸ್ಯ ಸಿನಿಮಾ, ನೋಡುಗರಿಗೂ ಮೆಚ್ಚುಗೆಯಾಗಿತ್ತು. ರಾಜ್ಯದ ಜನತೆ ಚಿತ್ರವನ್ನು ಸೂಪರ್ ಹಿಟ್ ಮಾಡಿದ್ದರು.
ಗುರುಶಿಷ್ಯರಿಗೆ ಭಾಗ್ಯವಂತನ ಸವಾಲ್
ಹೀಗೆ ಒಂದು ಸಿನಿಮಾ ಚೆನ್ನಾಗಿ ಹೋಗ್ತಿದೆ ಎಂದಾಗ, ಇನ್ನೊಂದು ಹೊಸ ಸಿನಿಮಾ ಬಿಡುಗಡೆ ಆದರೆ, ಚಿತ್ರಮಂದಿರಗಳನ್ನು ವಶಕ್ಕೆ ಪಡೆಯುವ ಸಂಪ್ರದಾಯ ನಡೆಯುತ್ತಲೇ ಬಂದಿದೆ. ಆದರೆ, ಆವತ್ತು ಡಾ, ರಾಜ್‌ಕುಮಾರ್ ಆ ಕೆಲಸ ಮಾಡಲಿಲ್ಲ. ಕನ್ನಡದ ಸಿನಿಮಾವೊಂದಕ್ಕೆ (ಗುರುಶಿಷ್ಯರು) ಸಿಗುತ್ತಿದ್ದ ಮೆಚ್ಚುಗೆ ನೋಡಿ, ಅದನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಿದ್ದರು ರಾಜ್‌ಕುಮಾರ್. ಸಂಪಿಗೆ ಚಿತ್ರಮಂದಿದರಲ್ಲಿ ಮೆಚ್ಚುಗೆ ಗಳಿಸಿ ಮುನ್ನುಗ್ಗುತ್ತಿದ್ದ ಗುರುಶಿಷ್ಯರು ಚಿತ್ರವನ್ನು ತೆಗೆಸದೇ, ಅದರ ಓಟಕ್ಕೆ ತಡೆಯೊಡ್ಡಿರಲಿಲ್ಲ ರಾಜ್‌ಕುಮಾರ್. ಅದ್ಹೇಗೆ? ಅದನ್ನು ಸ್ವತಃ ದ್ವಾರಕೀಶ್ ಆವತ್ತಿನ ದಿನಗಳಲ್ಲಿಯೇ ದೊಡ್ಮನೆಯ ದೊಡ್ಡತನದ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಧನ್ಯವಾದ ತಿಳಿಸಿದ್ದರು. ಇದೀಗ ಆ ಪ್ರಕಟಣೆ ವೈರಲ್ ಆಗಿದೆ.
ದ್ವಾರಕೀಶ್ ಪ್ರಕಟಿಸಿದ್ದ ಪತ್ರಿಕಾ ಪ್ರಕಟಣೆ
‘’ಕೃತಜ್ಞತೆಗಳು.. ಒಂದು ಕನ್ನಡ ಚಿತ್ರ ಯಶಸ್ವಿಯಾಗಿ ನಡೆಯುವುದೇ ಕಷ್ಟ, ಇಂತಹ ಸಂದರ್ಭದಲ್ಲಿ ಕನ್ನಡಿಗರ ಅಭಿಮಾನ ಹಾಗೂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದದಿಂದ ನನ್ನ ಚಿತ್ರ ‘ಗುರು ಶಿಷ್ಯರು’ ಯಶಸ್ವಿಯಾಗಿ ನಡೆಯುತ್ತಿದೆ. ಒಂದು ಚಿತ್ರ ಎಷ್ಟೇ ಯಶಸ್ವಿಯಾಗಿ ನಡೆಯುತ್ತಿದ್ದರೂ ಈಗಿರುವ ಚಿತ್ರಮಂದಿರಗಳ ಒತ್ತಡದಲ್ಲಿ ಮತ್ತೊಂದು ಕನ್ನಡ ಚಿತ್ರ ಪ್ರದರ್ಶನಕ್ಕೆ ನ್ಯಾಯವಾಗಿ ಅವಕಾಶ ಮಾಡಿಕೊಡಲೇಬೇಕು. ಅದೇ ರೀತಿ ಸಂಪಿಗೆ ಚಿತ್ರಮಂದಿರದಲ್ಲಿ ಶ್ರೀ ವಜ್ರೇಶ್ವರಿ ಕಂಬೈನ್ಸ್ ರವರ ‘ಭಾಗ್ಯವಂತ’ ಕನ್ನಡ ಚಿತ್ರವನ್ನು 16-10-81 ರಿಂದ ಪ್ರದರ್ಶಿಸಲು ಏರ್ಪಾಡಾಗಿತ್ತು. ಆದರೆ ಚೆನ್ನಾಗಿ ನಡೆಯುತ್ತಿರುವ ಒಂದು ಕನ್ನಡ ಚಿತ್ರವನ್ನು ತೆಗೆದು ತಮ್ಮ ಚಿತ್ರವನ್ನು ಆ ಚಿತ್ರಮಂದಿರದಲ್ಲಿ ಪ್ರದರ್ಶಿಸಲು ಒಪ್ಪದೇ ತಮಗೆ ಎಷ್ಟೇ ತೊಂದರೆಯಾದರೂ ನನ್ನ ಚಿತ್ರವನ್ನು ಸಂಪಿಗೆ ಚಿತ್ರಮಂದಿರದಲ್ಲಿಯೇ ಮುಂದುವರೆಸಲು ಅವಕಾಶ ಮಾಡಿಕೊಟ್ಟ ಶ್ರೀ ವಜೇಶ್ವರಿ ಕಂಬೈನ್ಸ್ ಹಂಚಿಕೆದಾರರಿಗೂ ಹಾಗೂ ನನ್ನ ಗುರು ಡಾ ರಾಜಕುಮಾರ್ ಅವರಿಗೂ, ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರಿಗೂ ನಾನು ಎಂದೆಂದೂ ಚಿರಋಣಿ. ನಿಮ್ಮೆಲ್ಲರ ಅಭಿಮಾನ ಸದಾಕಾಲವೂ ಇದೇ ರೀತಿಯಿರಲಿ ಎಂದು ಹಾರೈಸುವ ನಿಮ್ಮ ಅಭಿಮಾನಿ ನಟ ದ್ವಾರಕೀಶ್, ಅಲ್ಲ ನಿಮ್ಮ ಕುಳ್ಳ’’ ಎಂದು 1981ರಲ್ಲಿ ಗುರುಶಿಷ್ಯರು ಸಿನಿಮಾದ ನಟ ಮತ್ತು ನಿರ್ಮಾಪಕ, ದ್ವಾರಕೀಶ್ ಪತ್ರಿಕಾ ಪ್ರಕಟಣೆ ನೀಡಿದ್ದರು.
ದೊಡ್ಮನೆ ಯಾವತ್ತಿದ್ದರೂ ದೊಡ್ಮನೆಯೇ..
ಚಿತ್ರರಂಗದಲ್ಲಿ ದೊಡ್ಮನೆಯ ಯಾವತ್ತಿದ್ದರೂ ಆಲದ ಮರ. ಅದರ ನೆರಳಲ್ಲಿ ಬದುಕು ಕಟ್ಟಿಕೊಂಡವರೇ ಹೆಚ್ಚು ಹೊರತು, ತುಳಿಸಿಕೊಂಡವರಿಲ್ಲ. ಸದ್ಯ ವೈರಲ್ ಆಗಿರುವ ಈ ಪ್ರಕಟಣೆ ಕೇವಲ ಒಂದು ಉದಾಹರಣೆ ಮಾತ್ರ. ಇದರಾಚೆಗೆ ಬರೀ ಬಾಯಿ ಮಾತಿನ ಮೂಲಕ ಎಷ್ಟೋ ಒಳ್ಳೆಯ ಕೆಲಸಗಳನ್ನು ಡಾ. ರಾಜ್‌ಕುಮಾರ್ ಆವತ್ತೆ ಮಾಡಿದ್ದಾರೆ. ಒಂದು ವೇಳೆ ಈಗಿನ ರೀತಿ ಆವತ್ತೂ ಕೂಡ ಸೋಷಿಯಲ್ ಮೀಡಿಯಾ ಇದ್ದಿದ್ದರೆ, ಇದ್ಯಾವುದನ್ನೂ ಇಷ್ಟೊಂದು ಬಿಡಿಸಿ ಹೇಳಬೇಕಿರಲಿಲ್ಲ ಎಂದು ಪ್ರಕಟಣೆಯ ಫೋಟೋ ನೋಡಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.