ಕನ್ನಡ ಸುದ್ದಿ  /  ಮನರಂಜನೆ  /  ಶಿವರಾಜ್‌ ಕುಮಾರ್‌ ಬಳಸೋದು ವಿಗ್ಗಾ, ಅಸಲಿ ಕೂದಲಾ? ಸಿನಿಮಾ ರಿಲೀಸ್‌ ಯಾವಾಗ, ಭೈರವನ ಕೊನೆ ಪಾಠದ ಕುರಿತು ಹೇಮಂತ್‌ ರಾವ್‌ ಹೇಳಿದ್ದಿಷ್ಟು

ಶಿವರಾಜ್‌ ಕುಮಾರ್‌ ಬಳಸೋದು ವಿಗ್ಗಾ, ಅಸಲಿ ಕೂದಲಾ? ಸಿನಿಮಾ ರಿಲೀಸ್‌ ಯಾವಾಗ, ಭೈರವನ ಕೊನೆ ಪಾಠದ ಕುರಿತು ಹೇಮಂತ್‌ ರಾವ್‌ ಹೇಳಿದ್ದಿಷ್ಟು

Bhairavana Kone Paata: ಶಿವರಾಜ್‌ ಕುಮಾರ ನಟನೆಯ ಮುಂಬರುವ ಸಿನಿಮಾ ಭೈರವನ ಕೊನೆ ಪಾಠದ ಕುರಿತು ನಿರ್ದೇಶಕ ಹೇಮಂತ್‌ ರಾವ್‌ ಒಂದಿಷಟು ವಿವರ ನೀಡಿದ್ದಾರೆ. ಶಿವಣ್ಣ ನಟನೆಯ ಈ ಸಿನಿಮಾ ರಿಲೀಸ್‌ ಯಾವಾಗ? ಈ ಸಿನಿಮಾಕ್ಕಾಗಿ ಶಿವರಾಜ್‌ಕುಮಾರ್‌ ಉದ್ದವಾದ ಕೂದಲು ಬೆಳೆಸುತ್ತಾರ? ಇತ್ಯಾದಿ ಪ್ರಶ್ನೆಗಳಿಗೂ ಉತ್ತರ ದೊರಕಿದೆ.

ಶಿವರಾಜ್‌ ಕುಮಾರ್‌ ಬಳಸೋದು ವಿಗ್ಗಾ, ಅಸಲಿ ಕೂದಲಾ? ಸಿನಿಮಾ ರಿಲೀಸ್‌ ಯಾವಾಗ
ಶಿವರಾಜ್‌ ಕುಮಾರ್‌ ಬಳಸೋದು ವಿಗ್ಗಾ, ಅಸಲಿ ಕೂದಲಾ? ಸಿನಿಮಾ ರಿಲೀಸ್‌ ಯಾವಾಗ

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಕನ್ನಡ ಸಿನಿಮಾ ಉದ್ಯಮದಲ್ಲಿ ಬಿಡುವಿಲ್ಲದ ನಟ. ಜುಲೈ 12ರಂದು ಹುಟ್ಟುಹಬ್ಬ (Shivarajkumar Birthday July 12) ಆಚರಿಸಿಕೊಳ್ಳುತ್ತಿರುವ ಶಿವರಾಜ್‌ ಕುಮಾರ್‌ ಕೈಯಲ್ಲಿ ಹಲವು ಸಿನಿಮಾಗಳಿವೆ. ಭೈರತಿ ರಣಗಲ್‌ ಮತ್ತು ಉತ್ತರಕಾಂಡ ಸಿನಿಮಾ ಈ ವರ್ಷ ಬಿಡುಗಡೆಯಾಗಲಿವೆ. ಹಲವು ನಿರ್ದೇಶಕರು, ನಿರ್ಮಾಪಕರ ಜತೆ ಒಂದಾದ ನಂತರ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಪ್ತ ಸಾಗರದಾಚೆ ಎಲ್ಲೋ ಮೂಲಕ ಪ್ಯಾನ್‌ ಇಂಡಿಯಾದ ಗಮನ ಸೆಳೆದ ನಿರ್ದೇಶಕ ಹೇಮಂತ್‌ ಎಂ ರಾವ್‌ ನಿರ್ದೇಶನದ ಭೈರವನ ಕೊನೆ ಪಾಠದಲ್ಲೂ ಶಿವಣ್ಣ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೈಟಲ್‌ ರಿಲೀಸ್‌ ಆಗಿದೆ. ಇಷ್ಟು ಮಾತ್ರವಲ್ಲದೆ ಫಸ್ಟ್‌ ಲುಕ್‌ ಪೋಸ್ಟರ್‌ನಲ್ಲಿ ಶಿವಣ್ಣನ ಗೆಟಪ್‌ ಕೂಡ ರಿಲೀಸ್‌ ಆಗಿದೆ. ಶಿವರಾಜ್‌ ಕುಮಾರ್‌ ಈ ಹಿಂದೆ ಎಂದೂ ಕಾಣದ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.

ಶಿವರಾಜ್‌ ಕುಮಾರ್‌ ಹುಟ್ಟುಹಬ್ಬದ ಪ್ರಯುಕ್ತ ಈ ವಾರ ಶಿವಣ್ಣನ ಇತರೆ ಸಿನಿಮಾಗಳ ಘೋಷಣೆಯೂ ಆಗುವ ಸಾಧ್ಯತೆ ಇದೆ. ಈ ವಾರದ ಆರಂಭದಲ್ಲಿಯೇ ಶಿವಣ್ಣನ ಲುಕ್‌ ಅನ್ನು ಹೇಮಂತ್‌ ರಾವ್‌ ಬಿಡುಗಡೆ ಮಾಡಿದ್ದರು. ಇದನ್ನು ನೋಡಿ ಅಭಿಮಾನಿಗಳು "ಬೆಂಕಿ ಲುಕ್‌" ಎಂದಿದ್ದರು. ಸಾಮಾನ್ಯವಾಗಿ ಬಹುತೇಕ ನಟರು ತಮ್ಮ ವಯಸ್ಸಿಗಿಂತ ಕಡಿಮೆ ವಯಸ್ಸಿನ ಲುಕ್‌ನಲ್ಲಿ ಕಾಣಲು ಬಯಸುತ್ತಾರೆ. ಆದರೆ, ಭೈರವನ ಕೊನೆ ಪಾಠದಲ್ಲಿ ಶಿವರಾಜ್‌ ಕುಮಾರ್‌ ತನಗಿಂತ ಹೆಚ್ಚು ವಯಸ್ಸಿನ ಪಾತ್ರಗಳಲ್ಲಿ ಕಾಣಿಸಿದ್ದಾರೆ. ಈ ಚಿತ್ರದಲ್ಲಿ ಎರಡು ಲುಕ್‌ನಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಒಂದು ಲುಕ್‌ನಲ್ಲಿ ವಯಸ್ಸಾದ ಯೋಧನಂತಹ ಪಾತ್ರ. ಇನ್ನೊಂದು ಲುಕ್‌ನಲ್ಲಿಇದಕ್ಕಿಂತಲೂ ಹೆಚ್ಚು ವಯಸ್ಸಾದ ಹಿರಿಯನ ಪಾತ್ರ. ಪೊಗಸ್ತಾಗಿ ಬೆಳೆದ ಕೂದಲು ಮತ್ತು ಗಡ್ಡದಲ್ಲಿ ಶಿವಣ್ಣ ಬೇರೆಯದ್ದೇ ರೀತಿಯಲ್ಲಿ ಕಾಣಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಶಿವಣ್ಣನ ಹೊಸ ಲುಕ್‌ನ ವಿನ್ಯಾಸ

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸಹೋದರಿ ಪೋರ್ಟಲ್‌ ಮತ್ತು ಒಟಿಟಿಗಾಗಿಯೇ ಮೀಸಲಿಟ್ಟ ಒಟಿಟಿಪ್ಲೇಗೆ ಹೇಮಂತ್‌ ರಾವ್‌ ಸಾಕಷ್ಟು ಮಾಹಿತಿ ನೀಡಿದ್ದಾರೆ. "ಈ ವಯಸ್ಸಿನಲ್ಲಿ ತೋರಿಸುವುದು ಒಂದು ಕಲ್ಪನೆ. ಮಹಾಭಾರತ ಅಥವಾ ರಾಮಾಯಣದಂತಹ ಮಹಾಕಾವ್ಯಗಳಲ್ಲಿ ವಯಸ್ಸನ್ನು ತೋರಿಸುವ ರೀತಿ ಬೇರೆ ರೀತಿಯಾಗಿದೆ. ನಾವು ದ್ರೋಣಾಚಾರ್ಯರಂತಹ ವ್ಯಕ್ತಿಯನ್ನು ಅಂತಹ ಲುಕ್‌ನಲ್ಲಿ ನೀಡುತ್ತೇವೆ. ಆಯಾ ಸಂದರ್ಭದಕ್ಕೆ ತಕ್ಕಂತೆ ಅವರ ವೇಷಭೂಷಣಗಳು ಇರುತ್ತಿದ್ದವು. ಆಯಾ ಸಮಾಜದ ಸ್ತರಗಳನ್ನೂ ಇದು ಪ್ರತಿಬಿಂಬಿಸುತ್ತದೆ" ಎಂದು ಹೇಳಿದ್ದಾರೆ.

ಶಿವಣ್ಣ ಬಳಸೋದು ವಿಗ್‌ ಅಥವಾ ಅಸಲಿ ಕೂದಲು?

ಶಿವರಾಜ್‌ ಕುಮಾರ್‌ಗೆ ತಲೆಕೂದಲು ಮತ್ತು ಗಡ್ಡವನ್ನು ತಯಾರಿಸಲು ಭಾರತದ ಅತ್ಯುತ್ತಮ ವಿಗ್‌ ತಯಾರಕರ ಸಹಾಯವನ್ನು ಚಿತ್ರತಂಡ ಪಡೆದಿದೆಯಂತೆ. "ನನ್ನ ಮನಸ್ಸಿನಲ್ಲಿ ಶಿವರಾಜ್‌ ಕುಮಾರ್‌ ಸರ್‌ನ ಲುಕ್‌ನ ಕುರಿತು ನಿರ್ದಿಷ್ಟ ಕಲ್ಪನೆ ಇತ್ತು. ಅಂತಹ ಕಲ್ಪನೆಯನ್ನು ವಿಗ್‌ ಮೂಲಕ ಮಾತ್ರ ಸಾಧಿಸಲು ಸಾಧ್ಯ. ವಿಗ್‌ ಹೊರತುಪಡಿಸಿ ನೈಜ ಕೂದಲು ಬಳಸುವುದು ಪ್ರ್ಯಾಕ್ಟಿಕಲ್‌ ಅಲ್ಲ" ಎಂದು ಅವರು ಹೇಳಿದ್ದಾರೆ. "ಶಿವರಾಜ್‌ ಕುಮಾರ್ ಸರ್‌ ತನ್ನ ಸ್ವಂತ ಕೂದಲು ಮತ್ತು ಗಡ್ಡವನ್ನು ಬೆಳೆಸುವುದು ಕಷ್ಟ. ಏಕೆಂದರೆ, ಅವರು ಹಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ" ಎಂದು ಹೇಮಂತ್‌ ಹೇಳಿದ್ದಾರೆ.

ಭೈರವನ ಕೊನೆ ಪಾಠ ಸಿನಿಮಾ ಸೆಟ್ಟೇರುವುದು ಯಾವಾಗ ಎಂದು ಒಟಿಟಿಪ್ಲೇ ವರದಿಗಾರರ ಪ್ರಶ್ನೆಗೂ ಹೇಮಂತ್‌ ರಾವ್‌ ಉತ್ತರಿಸಿದ್ದಾರೆ. ಸೆಪ್ಟೆಂಬರ್‌ ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರುವುದು ನಿಜವೇ ಎಂಬ ಪ್ರಶ್ನೆಗೆ ಹೇಮಂತ್‌ ರಾವ್‌ "ಈ ವರ್ಷದ ಅಂತ್ಯದಲ್ಲಿ ಎಂದು ಹೇಳಬಹುದು. ಈ ಸಿನಿಮಾದ ಇತರೆ ಪಾತ್ರವರ್ಗದ ಕುರಿತು ಇನ್ನಷ್ಟು ಕ್ಲಾರಿಟಿ ದೊರಕಬೇಕಿದೆ. ಈ ಸಿನಿಮಾವನ್ನು ಲೈವ್‌ ಲೊಕೆಷನ್‌ಗಳಲ್ಲಿ ಮತ್ತು ಸೆಟ್‌ಗಳಲ್ಲಿ ಮಾಡಬೇಕಿದೆ. 2025ರಲ್ಲಿ ಈ ಚಿತ್ರ ತೆರೆಕಾಣಲಿದೆ. ಶೂಟಿಂಗ್‌ ಆರಂಭವಾದ ಮೊದಲ ದಿನ ನಾನು ಚಿತ್ರ ಬಿಡುಗಡೆ ದಿನಾಂಕ ಘೋಷಿಸುವೆ" ಎಂದು ಹೇಮಂತ್‌ ರಾವ್‌ ಹೇಳಿದ್ದಾರೆ.