logo
ಕನ್ನಡ ಸುದ್ದಿ  /  ಮನರಂಜನೆ  /  ಡಿವೋರ್ಸ್‌ ಅರ್ಜಿ ವಿಚಾರಣೆ ದಿನದಂದೇ ಅಮೆರಿಕಕ್ಕೆ ತೆರಳಿದ ಶ್ರೀದೇವಿ ಭೈರಪ್ಪ; ಹೆದರಲಾರೆ, ಮತ್ತೆ ಬರುವೆ ಎಂದ ಯುವ ರಾಜ್‌ಕುಮಾರ್‌ ಪತ್ನಿ

ಡಿವೋರ್ಸ್‌ ಅರ್ಜಿ ವಿಚಾರಣೆ ದಿನದಂದೇ ಅಮೆರಿಕಕ್ಕೆ ತೆರಳಿದ ಶ್ರೀದೇವಿ ಭೈರಪ್ಪ; ಹೆದರಲಾರೆ, ಮತ್ತೆ ಬರುವೆ ಎಂದ ಯುವ ರಾಜ್‌ಕುಮಾರ್‌ ಪತ್ನಿ

Praveen Chandra B HT Kannada

Jul 04, 2024 09:11 AM IST

google News

ಡಿವೋರ್ಸ್‌ ಅರ್ಜಿ ವಿಚಾರಣೆ ದಿನದಂದೇ ಅಮೆರಿಕಕ್ಕೆ ತೆರಳಿದ ಶ್ರೀದೇವಿ ಭೈರಪ್ಪ

    • Yuva Rajkumar Divorce Case: ದೊಡ್ಮನೆ ಕುಡಿ ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ಭೈರಪ್ಪ ಅವರ ವಿವಾಹ ವಿಚ್ಛೇದನದ ವಿಚಾರಣೆ ಇಂದು (ಜುಲೈ 4) ನಡೆಯಲಿದೆ. ನಿನ್ನೆ ವಿದೇಶದಿಂದ ಭಾರತಕ್ಕೆ ಬಂದಿದ್ದ ಶ್ರೀದೇವಿ ಭೈರಪ್ಪ ವಾಪಸ್‌ ಅಮೆರಿಕಕ್ಕೆ ಹೋಗಿದ್ದಾರೆ. ಅವರು ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿದ್ದಾರೆ.
ಡಿವೋರ್ಸ್‌ ಅರ್ಜಿ ವಿಚಾರಣೆ ದಿನದಂದೇ ಅಮೆರಿಕಕ್ಕೆ ತೆರಳಿದ ಶ್ರೀದೇವಿ ಭೈರಪ್ಪ
ಡಿವೋರ್ಸ್‌ ಅರ್ಜಿ ವಿಚಾರಣೆ ದಿನದಂದೇ ಅಮೆರಿಕಕ್ಕೆ ತೆರಳಿದ ಶ್ರೀದೇವಿ ಭೈರಪ್ಪ

ಬೆಂಗಳೂರು: ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಇಂದು (ಜುಲೈ 4) ದೊಡ್ಮನೆ ಕುಡಿ ಯುವ ರಾಜ್‌ಕುಮಾರ್‌ ಅವರ ಡಿವೋರ್ಸ್‌ ಅರ್ಜಿ ವಿಚಾರಣೆ ನಡೆಯಲಿದೆ. ವಿಚಾರಣೆ ಹಿನ್ನಲೆಯಲ್ಲಿ ಶ್ರೀದೇವಿ ಭೈರಪ್ಪ ಬೆಂಗಳೂರಿಗೆ ವಿದೇಶದಿಂದ ವಾಪಸ್‌ ಬಂದಿದ್ದರು. ಆದರೆ, ಅವರು ಮತ್ತೆ ಅಮೆರಿಕಕ್ಕೆ ತೆರಳಿದ್ದಾರೆ. ಈ ಸಮಯದಲ್ಲಿ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸುದೀರ್ಘ ಬರಹ ಬರೆದಿದ್ದಾರೆ. ಈ ವಿಷಯದಲ್ಲಿ ತನ್ನ ವಿರುದ್ಧ ಮಾಡಿರುವ ಸುಳ್ಳು ಆರೋಪಗಳಿಂದ ಮುಕ್ತಳಾಗುವವರೆಗೆ ಹೆದರಲಾರೆ ಎಂದಿದ್ದಾರೆ. ಶ್ರೀದೇವಿ ಅವರು ಅಮೆರಿಕಕ್ಕೆ ಹಿಂತುರುಗಿದ್ದರಿಂದ ಇಂದು ಕೋರ್ಟ್‌ ವಿಚಾರಣೆ ಮುಂದೂಡಲಿದೆಯೇ ಎಂದು ಕಾದು ನೋಡಬೇಕಿದೆ.

ಶ್ರೀದೇವಿ ಭೈರಪ್ಪ ಸುದೀರ್ಘ ಬರಹ

ಶ್ರೀದೇವಿ ಭೈರಪ್ಪ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸುದೀರ್ಘ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ. "ಕಳೆದ ಹದಿನೈದು ದಿನದಿಂದ ನಾನು ಕರ್ನಾಟಕದಲ್ಲಿ ನನ್ನ ಕುಟುಂಬದ ಜೊತೆ ಇದ್ದ ಸಂದರ್ಭದಲ್ಲಿ ನನ್ನ ಖಾಸಗಿ ಬದುಕನ್ನು ಗೌರವಿಸಿ, ನನ್ನ ಘನತೆಯನ್ನು ಕಾಪಾಡುವಲ್ಲಿ, ಅತ್ಯಂತ ಸೂಕ್ಷ್ಮ ಮತ್ತು ಜವಾಬ್ದಾರಿಯುತ ನಡೆ ತೋರಿದ ಮಾಧ್ಯಮದ ಪ್ರತಿಯೊಬ್ಬರಿಗೂ ನಾನು ಪ್ರಾಮಾಣಿಕವಾಗಿ ನನ್ನ ಹೃದಾಯಾಂತರಾಳದಿಂದ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಶ್ರೀದೇವಿ ಭೈರಪ್ಪ ಪೋಸ್ಟ್‌ ಮಾಡಿದ್ದಾರೆ.

 

ಶ್ರೀದೇವಿ ಭೈರಪ್ಪ ಇನ್‌ಸ್ಟಾಗ್ರಾಂ ಸ್ಟೋರಿ

ಸುಳ್ಳಿನ ಸರಮಾಲೆ

"ಕಳೆದ ದಶಕಗಳಿಂದ ನನ್ನ ಜೊತೆಯಾಗಿದ್ದ ನನ್ನ ಸ್ನೇಹಿತರ ಬಳಗ, ಕೆಲವು ದಿನಗಳ ಹಿಂದಿನ ಸುಳ್ಳಿನ ಸರಮಾಲೆಗೆ ಬಲಿಯಾದದ್ದು ತೀರ ದುರದೃಷ್ಟಕರ" ಎಂದು ಶ್ರೀದೇವಿ ಹೇಳಿದ್ದಾರೆ. "ಆದರೂ ಸಹ, ನಿಮ್ಮ ತಾಳ್ಮೆಗೆ, ಸತ್ಯದ ಪರ ಧೃತಿಗೆಡದೆ ನಿಲ್ಲುವ ನಿಮ್ಮ ಹಾಗೂ ನಿಮ್ಮ ಕುಟುಂಬದ ಧೈರ್ಯಕ್ಕೆ, ಸಹಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಈ ವಿಚಾರದಲ್ಲಿ ನಿಮಗಾದ ನೋವಿಗೆ ನಾನು ವಿನಮ್ರತೆಯಿಂದ ಕ್ಷಮೆಯಾಚಿಸುತ್ತೇನೆ. ಎಲ್ಲರಿಗೂ ನಿಮ್ಮಂಥ ಸಹೃದಯಿ ಸ್ನೇಹ ಬಳಗ ಸಿಗುವ ಅದೃಷ್ಟ ಸಿಗಲಿ ಎಂದು ಹಾರೈಸುತ್ತೇನೆ" ಎಂದು ಅವರು ಬರೆದುಕೊಂಡಿದ್ದಾರೆ.

"ಕಳೆದ 7 ತಿಂಗಳು ನನ್ನ ಪಾಲಿಗೆ ತೀವ್ರ ಒತ್ತಡ ಮತ್ತು ಆಘಾತದಿಂದ ಕೂಡಿದ್ದವು. ನನ್ನೊಂದಿಗೆ ಶಕ್ತಿಯಾಗಿ ನಿಂತ ನನ್ನ ಕುಟುಂಬ, ಸ್ನೇಹಿತರು, ಚಲನಚಿತ್ರರಂಗದ ಬಂಧುಗಳು, ಅನ್ಯಾಯದ ವಿರುದ್ಧ ದನಿಯೆತ್ತಿ ನನ್ನ ಪರ ನಿಂತ ಪ್ರತಿಯೊಬ್ಬರಿಗೂ, ವಿಶೇಷವಾಗಿ ನನ್ನೊಂದಿಗೆ ದುಃಖಿಸಿ ಸಾಂತ್ವಾನ ಹೇಳಿದ ನನ್ನ ವಿದ್ಯಾರ್ಥಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನನ್ನ ಶಕ್ತಿಯನ್ನು ಮರಳಿ ಪಡೆಯಲು ಮತ್ತು ನ್ಯಾಯದ ಪರ ಹೋರಾಡಲು ನೀವೆಲ್ಲರೂ ನನಗೆ ಸಹಾಯ ಮಾಡಿದ್ದೀರಿ. ನಿಮ್ಮ ಪ್ರೀತಿ, ದಯೆಯ ಋಣ ತೀರಿಸುವ ಅವಕಾಶ ನನಗೆ ಸಿಗಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಶ್ರೀದೇವಿ ಭೈರಪ್ಪ ಹೇಳಿದ್ದಾರೆ.

ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೆ ಹೋರಾಟ

"ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ ಹಾಗೂ ಅದಕ್ಕಾಗಿ ಹೋರಾಡುತ್ತೇನೆ ಎಂದು ನಾನು ಪುನರುಚ್ಚರಿಸುತ್ತೇನೆ. ನನ್ನ ಮೇಲೆ ಮಾಡಿರುವ ಪ್ರತಿಯೊಂದು ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೆ ನನ್ನ ದಾರಿಗೆ ಏನೇ ಎದುರಾದರೂ ಹೆದರುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಸಮಯ ಬಂದಾಗ ಹಿಂತುರುಗುವೆ

"ಹಾರ್ವರ್ಡ್‌ನಲ್ಲಿ ನಾನೊಂದು ಶೈಕ್ಷಣಿಕ ಯೋಜನೆಯನ್ನು ಶುರುಮಾಡಿದ್ದು, ಆ ಕಾಯಕವನ್ನು ಮುಂದುವರಿಸಲು ನಾನು ಅಮೆರಿಕಗೆ ಹಿಂತಿರುಗುತ್ತಿದ್ದೇನೆ. ಈ ಸಮಯವು, ನನಗೆ ಇನ್ನಷ್ಟು ಕಲಿಯಲು, ಬೆಳೆಯಲು ಮತ್ತು ಎಲ್ಲಾ ಆಘಾತಗಳಿಂದ ಗುಣಮುಖಳಾಗಲು ಸಹಾಯ ಮಾಡುತ್ತದೆ ಎಂದು ನಾನು ನಂಬಿದ್ದೇನೆ. ಸರಿಯಾದ ಸಮಯ ಬಂದಾಗ ನಾನು ಹಿಂದಿರುಗುತ್ತೇನೆ ಮತ್ತು ಇಲ್ಲಿನ ಕೆಲಸಗಳನ್ನು ಮುಂದುವರಿಸುತ್ತೇನೆ. ದೇವರ ಆಶೀರ್ವಾದ ಸದಾ ಎಲ್ಲರ ಮೇಲೆ ಇರಲಿ" ಎಂದು ತನ್ನ ಸುದೀರ್ಘ ಟಿಪ್ಪಣಿಯಲ್ಲಿ ಅವರು ಬರೆದುಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ