logo
ಕನ್ನಡ ಸುದ್ದಿ  /  ಮನರಂಜನೆ  /  Leelavathi: ನೆಲಮಂಗಲದ ಅಂಬೇಡ್ಕರ್‌ ಮೈದಾನದಲ್ಲಿ ಹಿರಿಯ ನಟಿ ಲೀಲಾವತಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

Leelavathi: ನೆಲಮಂಗಲದ ಅಂಬೇಡ್ಕರ್‌ ಮೈದಾನದಲ್ಲಿ ಹಿರಿಯ ನಟಿ ಲೀಲಾವತಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

Praveen Chandra B HT Kannada

Dec 08, 2023 08:13 PM IST

google News

ಹಿರಿಯ ನಟಿ ಲೀಲಾವತಿ ನಿಧನ

    • Kannada Actress leelavathi: ಇಂದು ನಿಧನರಾದ ಹಿರಿಯ ನಟಿ ಲೀಲಾವತಿಯವರ ಅಂತಿಮ ದರ್ಶನಕ್ಕೆ ನಾಳೆ ಸಾರ್ವಜನಿಕರಿಗೆ ನೆಲಮಂಗಲದ ಅಂಬೇಡ್ಕರ್‌ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ದಿವಂಗತ ನಟಿ ಲೀಲಾವತಿ ಮನೆಗೆ ಗಣ್ಯರು, ಪ್ರಮುಖರು ಭೇಟಿ ನೀಡಿ ವಿನೋದ್‌ ರಾಜ್‌ಗೆ ಸಾಂತ್ವಾನ ಹೇಳುತ್ತಿದ್ದಾರೆ.
ಹಿರಿಯ ನಟಿ ಲೀಲಾವತಿ ನಿಧನ
ಹಿರಿಯ ನಟಿ ಲೀಲಾವತಿ ನಿಧನ

ಬೆಂಗಳೂರು: ಇಂದು ನಿಧನರಾದ ಹಿರಿಯ ನಟಿ ಲೀಲಾವತಿಯವರ ಅಂತಿಮ ದರ್ಶನಕ್ಕೆ ನಾಳೆ ಸಾರ್ವಜನಿಕರಿಗೆ ನೆಲಮಂಗಲದ ಅಂಬೇಡ್ಕರ್‌ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ನೆಲಮಂಗಲದ ಡಿವೈಎಸ್‌ಪಿ ಪುರುಷೋತ್ತಮ ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ನೆಲಮಂಗಲ ಪೋಲೀಸರು ಮತ್ತು ಅಲ್ಲಿನ ತಹಶಿಲ್ದಾರ್‌ ಆರುಂಧತಿ ನೇತೃತ್ವದಲ್ಲಿ ತಯಾರಿ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಲೀಲಾವತಿಯವರ ಪಾರ್ಥಿವ ಶರೀರವನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಯಿಂದ ಮನೆಗೆ ತೆಗೆದುಕೊಂಡು ಹೋಗಲಾಗಿದೆ. ನಾಳೆ ನೆಲಮಂಗಲದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗುತ್ತದೆ. ಈಗಾಗಲೇ ಸಿನಿರಂಗದ ಪ್ರಮುಖರು, ಗಣ್ಯರು ಲೀಲಾವತಿ ಮನೆಗೆ ಧಾವಿಸಿ ವಿನೋದ್‌ ರಾಜ್‌ಗೆ ಸಾಂತ್ವನ ಹೇಳುತ್ತಿದ್ದಾರೆ.

ಅಮ್ಮನನ್ನು ಕಳೆದುಕೊಂಡ ವಿನೋದ್‌ ರಾಜ್‌ ರಸ್ತೆಯಲ್ಲಿಯೇ ಕುಸಿದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಕೊನೆಗೂ ನನ್ನನ್ನು ಭಗವಂತ ಒಂಟಿಯಾಗಿ ಮಾಡಿಬಿಟ್ಟ. ಈ ಸಂದರ್ಭದಲ್ಲಿ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಅವರಿಗೆ ವಯಸ್ಸು ಆಗಿತ್ತು. ವಯೋಸಹಜ ಸಮಸ್ಯೆ ಇತ್ತು. ಹೃದಯ ಸ್ತಂಭನ ಆಗಿ ಕೊನೆಯ ಉಸಿರು ಎಳೆದಿದ್ದಾರೆ. ಕೊನೆಗೂ ನನ್ನಮ್ಮ ನನ್ನ ಊರಿಗೆ ಆಸ್ಪತ್ರೆ ಕಟ್ಟಿಸಿ ಸಾಧನೆ ಮಾಡಿದರು. ಅವರ ಜೀವನದ ಆಸೆಯನ್ನು ಈ ಮೂಲಕ ಈಡೇರಿಸಿದರು ಎಂದು ವಿನೋದ್‌ ರಾಜ್‌ ಹೇಳಿದ್ದಾರೆ.

ಹಿರಿಯ ನಟಿ ಲೀಲಾವತಿಯವರು ನಾಯಕಿಯಾಗಿ ಅವರು ಅಭಿನಯಿಸಿದ ಮೊದಲ ಚಿತ್ರ 'ಮಾಂಗಲ್ಯ ಯೋಗ'. ಡಾ.ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ರಣಧೀರ ಕಂಠೀರವ. ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯವಾಯಿತು. ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ಚಿತ್ರಗಳ ನಾಯಕಿಯಾದರು. ಕೆಲಚಿತ್ರಗಳಲ್ಲಿ ನಾಯಕನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದರು.

70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ತಮ್ಮನ್ನು ತೊಡಗಿಸಿಕೊಂಡರು. ನಾಯಕಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ ನಾನಾ ಬಗೆಯ ಪೋಷಕಪಾತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ಗೆಜ್ಜೆ ಪೂಜೆ, ಸಿಪಾಯಿ ರಾಮು, ನಾಗರಹಾವು, ಭಕ್ತ ಕುಂಬಾರ ಮುಂತಾದ ಚಿತ್ರಗಳು ಪ್ರಮುಖವಾದವು.

ಲೀಲಾವತಿಯವರು ಚಿತ್ರರಂಗಕ್ಕೆ ನೀಡಿದ ಸೇವೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್-2008, ಕನ್ನಡದ ಕಂದ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ- 2006, ಡಾ.ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ(1999-2000)ಗಳನ್ನು ಪಡೆದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ