ರಾಜ್‌ಕುಮಾರ್‌ಗೆ ಆ ವಿಷ್ಯ ಹೇಳಿರಲಿಲ್ಲ, ಬನ್ನಿ ಅಂತಲೂ ಕರೆದಿಲ್ಲ, ಎದುರಿಗೆ ಬಂದು ನನ್ನ ಕಣ್ಣೀರು ಒರೆಸಿ ತಾವೂ ಅತ್ತರು; ಮುಖ್ಯಮಂತ್ರಿ ಚಂದ್ರು
Aug 24, 2024 11:05 AM IST
ಮುಖ್ಯಮಂತ್ರಿ ಚಂದ್ರು ತಮ್ಮ ತಾಯಿ ತೀರಿದಾಗ, ನಡೆದ ಘಟನೆಯೊಂದನ್ನು ಕಣ್ಣಿಗೆ ಕಟ್ಟಿದಂತೆ ಹೇಳಿಕೊಂಡಿದ್ದಾರೆ. ಆಗ ಅಣ್ಣಾವ್ರು ವರ್ತಿಸಿದ ರೀತಿ ನೆನಪಿಸಿಕೊಂಡಿದ್ದಾರೆ.
- ಬರೀ ಸಿನಿಮಾದಲ್ಲಿ ಮಾತ್ರವಲ್ಲದೆ, ನಿಜ ಜೀವನದಲ್ಲಿಯೂ ಡಾ. ರಾಜ್‌ಕುಮಾರ್ ಅವರದ್ದು ಮೇರು ವ್ಯಕ್ತಿತ್ವ. ಅವರನ್ನು ಹತ್ತಿರದಿಂದ ನೋಡಿದ ನಟರಲ್ಲಿ ಮುಖ್ಯಮಂತ್ರಿ ಚಂದ್ರು ಸಹ ಒಬ್ಬರು. ಇದೀಗ ಇದೇ ಮುಖ್ಯಮಂತ್ರಿ ಚಂದ್ರು ತಮ್ಮ ತಾಯಿ ತೀರಿದಾಗ, ನಡೆದ ಘಟನೆಯೊಂದನ್ನು ಕಣ್ಣಿಗೆ ಕಟ್ಟಿದಂತೆ ಹೇಳಿಕೊಂಡಿದ್ದಾರೆ. ಆಗ ಅಣ್ಣಾವ್ರು ವರ್ತಿಸಿದ ರೀತಿ ನೆನಪಿಸಿಕೊಂಡಿದ್ದಾರೆ.
Mukhyamantri chandru on Dr Rajkumar: ಡಾ ರಾಜ್‌ಕುಮಾರ್ ಬಗ್ಗೆ ಹೇಳುವುದಕ್ಕೆ ಏನೂ ಉಳಿದಿಲ್ಲ. ನಾಡಿನ ಜನರ ನರನಾಡಿಗಳಲ್ಲಿ ಅವರು ಬೆರೆತಿದ್ದಾರೆ. ಕನ್ನಡ ಎಂದಾಗ ಅಣ್ಣಾವ್ರು ನೆನಪಾಗುತ್ತಾರೆ. ಬರೀ ಸಿನಿಮಾದಲ್ಲಿ ಮಾತ್ರವಲ್ಲದೆ, ನಿಜ ಜೀವನದಲ್ಲಿಯೂ ಅವರದ್ದು ಮೇರು ವ್ಯಕ್ತಿತ್ವ. ಅವರನ್ನು ಹತ್ತಿರದಿಂದ ನೋಡಿದ ನಟರಲ್ಲಿ ಮುಖ್ಯಮಂತ್ರಿ ಚಂದ್ರು ಸಹ ಒಬ್ಬರು. ಇದೀಗ ಇದೇ ಮುಖ್ಯಮಂತ್ರಿ ಚಂದ್ರು ತಮ್ಮ ತಾಯಿ ತೀರಿಹೋದಾಗ, ನಡೆದ ಘಟನೆಯೊಂದನ್ನು ಕಣ್ಣಿಗೆ ಕಟ್ಟಿದಂತೆ ಹೇಳಿಕೊಂಡಿದ್ದಾರೆ. ಆಗ ಅಣ್ಣಾವ್ರು ವರ್ತಿಸಿದ ರೀತಿಯನ್ನು ನೆನಪಿಸಿಕೊಂಡಿದ್ದಾರೆ.
ನಮ್ಮಮ್ಮ ತೀರಿದಾಗ...
1991ರಲ್ಲಿ ನಮ್ಮ ಅಮ್ಮ ತಿಮ್ಮಮ್ಮನಿಗೆ ಅನಾರೋಗ್ಯ ಕಾಡಿತ್ತು. ಅಲ್ಲೇ ಮಲ್ಲೇಶ್ವರದ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೆ. ತುಂಬ ಸೀರಿಯಸ್ ಆಗಿತ್ತು. ಉಳಿಸಿಕೊಳ್ಳಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಪಟ್ಟಿದ್ದೆ. ಸಿನಿಮಾದಲ್ಲಿ ಬಿಜಿಯಾಗಿದ್ದರಿಂದ ದುಡ್ಡಿತ್ತು. ಅನುಕೂಲ ಇತ್ತು. ಆದರೆ, ಏನೇ ಮಾಡಿದರೂ ಉಳಿಯಲಿಲ್ಲ. ಅಂತಿಮವಾಗಿ 1991ರಲ್ಲಿ ದೈವಾದೀನರಾದರು. ಅಮ್ಮನನ್ನು ಕಳೆದುಕೊಂಡ ದುಃಖ, ಸಂಬಂಧಿಕರಿಗೆ ಮಾತ್ರ ಹೇಳೋಣ, ಅದನ್ನೇ ವೈಭವೀಕರಿಸಿ ಹೇಳುವುದು ಬೇಡ ಎಂದು ಸುಮ್ಮನಾಗಿದ್ದೆ. ರಸ್ತೆಯಲ್ಲಿಯೇ ಪೆಂಡಾಲ್ ಹಾಕಿ, ಬಾಡಿ ಇಟ್ಕೊಂಡು ಕೊನೇ ಶಾಸ್ತ್ರ ಮಾಡಿದ್ವಿ.
ಇನ್ನೂ ಯಾರೋ ಒಬ್ಬರು ಬರಬೇಕಿತ್ತು. ಅದಕ್ಕೆ 3 ಗಂಟೆ ತಡವಾಗಲಿದೆ ಎಂದಿದ್ದರು. ಮೂರು ದಿನ ನನಗೆ ಹಗಲು ರಾತ್ರಿ ಆಸ್ಪತ್ರೆ ಓಡಾಡಿ, ಸುಸ್ತಾಗಿತ್ತು. ತಲೆ ನೋವು. ಹೊರಗಡೆ ಹೋಗಿ ಕಾಫಿ ಕುಡಿದ್ರಾಯ್ತು ಅಂತ ಇನ್ನೊಬ್ಬರ ಜತೆ ಹೋಗಿದ್ದೆ. ಆ ಸಮಯದಲ್ಲಿ ರಾಜ್‌ಕುಮಾರ್ ಜತೆಗೆ ನಾನು ತುಂಬ ಆಪ್ತನಾಗಿದ್ದೆ. ಅಮ್ಮನ ಸಾವಿನ ಬಗ್ಗೆ ಅವರಿಗೆ ಯಾವುದೇ ಮೆಸೆಜ್ ಕೊಟ್ಟಿರಲಿಲ್ಲ. ಈ ಥರದ ಮೀಡಿಯಾಗಳೂ ಆವತ್ತು ಇರಲಿಲ್ಲ. ಹೇಗೋ ಈ ವಿಚಾರ ಅವರಿಗೆ ತಲುಪಿದೆ. ಶೂಟಿಂಗ್‌ನಲ್ಲಿದ್ದವರು, ಅದನ್ನು ಕ್ಯಾನ್ಸಲ್ ಮಾಡಿ ಸೀದಾ ನಮ್ಮ ಮನೆಗೆ ಬಂದಿದ್ದಾರೆ.
ಅವರು ಬಂದಾಗ ನಾನು ಹೋಟೆಲ್‌ನಲ್ಲಿ ಕಾಫಿ ಕುಡಿಯೋಕೆ ಹೋಗಿದ್ದೆ. ಆಗ ಕಾರ್‌ನಲ್ಲಿ ಮನೆಗೆ ಬಂದಿದ್ದಾರೆ. ಅವ್ರು ಬರುತ್ತಿದ್ದಂತೆ, ಸಂಬಂಧಿಕರಿಗೂ ಗಾಬರಿ. ಏಕೆಂದರೆ ಆ ವರೆಗೂ ರಾಜ್‌ಕುಮಾರ್ ಅವರನ್ನು ಅವರ್ಯಾರು ನೇರವಾಗಿ ನೋಡಿದವರಲ್ಲ. ನನ್ನೊಬ್ಬನಿಗೆ ಬಿಟ್ಟರೆ ಬೇರೆ ಯಾರಿಗೂ ಅವರು ನಿಕಟವಾಗಿ ಸಂಬಂಧವಿರಲಿಲ್ಲ. ಚಂದ್ರು ಎಲ್ಲಿ ಎಂದು ನನ್ನನ್ನು ಕೇಳಿದ್ದಾರೆ. ನಾನು ಹೊರಗಡೆ ಹೋದ ವಿಷಯ ಅಲ್ಲಿದ್ದವರು ತಿಳಿಸಿದ್ದಾರೆ. ಅಮ್ಮನ ಕಾಲಿನ ಮುಂದೆ ರಾಜ್‌ಕುಮಾರ್ ಕೂತಿದ್ದಾರೆ. ಅವರ ಪಾದವನ್ನು ಹಿಡಿದಿದ್ದಾರೆ. ಕಣ್ಣೀರು ಹಾಕಿದ್ದಾರೆ. ಕಾಲಿಗೆ ನಮಸ್ಕರಿಸಿ ಒಂದು ಮೂಲೆಗೆ ಹೋಗಿ ನಿಂತಿದ್ದಾರೆ.
ಚೇರ್ ಕೊಡ್ತಿನಿ ಅಂದರೂ ಬೇಡ ಎಂದು ಸನ್ನೆ ಮಾಡಿ, ಚಂದ್ರು ಬರಲಿ ಆಮೇಲೆ ಹೋಗ್ತಿನಿ ಎಂದು ಅಲ್ಲಿಯೇ ಕಾದಿದ್ದಾರೆ. ಒಂದು ಹತ್ತು ನಿಮಿಷ ಅಲ್ಲಿಯೇ ನಿಂತಿದ್ದಾರೆ. ರಾಜ್‌ಕುಮಾರ್ ಬಂದ ವಿಚಾರವನ್ನು ಯಾರೋ ಬಂದು ನನಗೆ ಹೇಳಿದ್ರು. ಆಗ ನಾನು ಬಂದೆ. ಹೆಗಲ ಮೇಲೆ ಕೈ ಹಾಕಿ, ಸ್ವಲ್ಪ ದೂರ ಕರೆದುಕೊಂಡು ಹೋಗಿ, "ಭಗವಂತನ ಇಚ್ಛೇ. ಯಾರು ಏನೂ ಮಾಡಲು ಆಗಲ್ಲ. ವಿಷಯ ಗೊತ್ತಾಯ್ತು ಅದಕ್ಕೆ ಬಂದೆ. ತಾಯಿ ಅಂದರೆ ಏನು ಅನ್ನೋದು ನಿಮಗಿಂತ ನನಗೆ ಜಾಸ್ತಿ ಗೊತ್ತು. ನಾನೂ ತಾಯಿಯನ್ನು ಕಳೆದುಕೊಂಡಿದ್ದೇನೆ. ನನ್ನ ಕಷ್ಟ ನೀವು ಅನುಭವಿಸಿದ್ದೀರೋ ಇಲ್ವೋ ಗೊತ್ತಿಲ್ಲ. ಆದರೆ ಗೊತ್ತಾಗುತ್ತೆ. ದುಃಖ ಪಡಬೇಡಿ. ಇದು ಎಲ್ಲರ ಮನೆಯಲ್ಲಿಯೂ ಆಗಬೇಕಾಗಿದ್ದೇ. ಇವತ್ತು ನಿಮ್ಮ ಮನೆಯಲ್ಲಿ ಆಗಿದೆ"
"ನಾನು ಅತ್ತಿದ್ದೇನೆ ನಿಜ, ನಿಮ್ಮ ತಾಯಿಗೆ ಅತ್ತಿದ್ದೇನೆ ಅಂತ ಅಂದುಕೊಳ್ಳಬೇಡಿ. ನಿಮ್ಮ ತಾಯಿಯನ್ನು ನೋಡಿ, ನನ್ನ ತಾಯಿಯನ್ನು ನೆನೆಸಿಕೊಂಡು ಅತ್ತೀದಿನಿ. ಇದೆಲ್ಲ ಮುಗಿದ ಮೇಲೆ ನಿಮಗೆ ಯಾರು ಇಷ್ಟ ಆಗ್ತಾರೋ, ಅವರನ್ನೇ ನೆನಸಿಕೊಂಡು ಅವರನ್ನೇ ತಾಯಿ ಅಂದುಕೊಳ್ಳಿ. ಎಲ್ಲರೂ ತಾಯಿಯೇ ಅಲ್ವರಾ? ನಮ್ಮ ತಾಯಿಯನ್ನೇ ತಾಯಿ ಎಂದು ಯಾಕೆ ಅಂದುಕೊಳ್ಳಬೇಕು. ಭೂಮಿ ಮೇಲೆ ಯಾರೆಲ್ಲ ಇನ್ನೊಂದು ಜೀವಕ್ಕೆ ಜೀವ ಕೊಟ್ಟಿದ್ದಾರೋ ಅವರೆಲ್ಲರೂ ತಾಯಿಯೇ. ಇದೆಲ್ಲ ಮುಗಿದ ಮೇಲೆ ಮನೆಗೆ ಬನ್ನಿ" ಎಂದು ಹೇಳಿ ಸುಮಾರು ಒಂದೂವರೆ ಗಂಟೆ ಅಲ್ಲಿದ್ದು ರಾಜ್‌ಕುಮಾರ್ ಹೊರಟರು ಎಂದು ಅಮ್ಮ ತೀರಿಹೋದ ದಿನದ ಕ್ಷಣವನ್ನು ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ ಮುಖ್ಯಮಂತ್ರಿ ಚಂದ್ರು.