‘ನಮ್ಮೆಲ್ಲರ ಆಯಸ್ಸನ್ನೂ ಅವರಿಗೇ ಕೊಡಲಿ’; ರಾಜ್‌ಕುಮಾರ್‌ಗೆ ವಿಷ್ಣುವರ್ಧನ್‌ ಬರೆದ ಪತ್ರ ಎಂದಾದರೂ ಓದಿದ್ದೀರಾ? ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  ‘ನಮ್ಮೆಲ್ಲರ ಆಯಸ್ಸನ್ನೂ ಅವರಿಗೇ ಕೊಡಲಿ’; ರಾಜ್‌ಕುಮಾರ್‌ಗೆ ವಿಷ್ಣುವರ್ಧನ್‌ ಬರೆದ ಪತ್ರ ಎಂದಾದರೂ ಓದಿದ್ದೀರಾ? ಇಲ್ಲಿದೆ ನೋಡಿ

‘ನಮ್ಮೆಲ್ಲರ ಆಯಸ್ಸನ್ನೂ ಅವರಿಗೇ ಕೊಡಲಿ’; ರಾಜ್‌ಕುಮಾರ್‌ಗೆ ವಿಷ್ಣುವರ್ಧನ್‌ ಬರೆದ ಪತ್ರ ಎಂದಾದರೂ ಓದಿದ್ದೀರಾ? ಇಲ್ಲಿದೆ ನೋಡಿ

ಚಿತ್ರರಂಗದಲ್ಲಿ ಅವರು ಒಬ್ಬ ವ್ಯಕ್ತಿ ಅಲ್ಲ ಶಕ್ತಿ. ನಮ್ಮಂಥ ಕಲಾವಿದರಿಗೆಲ್ಲ ಅವರೊಂದು ಅಳತೆಗೋಲು. ಮಾನದಂಡ. ಅವರೊಂದಿಗೆ ನನ್ನ ಪ್ರತಿಯೊಂದು ಭೇಟಿಯೂ ಒಂದು ಥ್ರಿಲ್ಲಿಂಗ್‌ ಅನುಭವ. ಅವರ ಸರಳತೆ ನನ್ನನ್ನು ಮಾರುಹೋಗುವಂತೆ ಮಾಡುತ್ತದೆ. ಜನರ ಮಧ್ಯೆ ಅವರು ನಡೆದುಕೊಳ್ಳುವ ರೀತಿ ನಾನವರಿಂದ ಕಲಿತ ಪಾಠ ಎಂದು ಅಣ್ಣಾವ್ರ ಬಗ್ಗೆ ವಿಷ್ಣು ಬರೆದ ಪತ್ರ ಇಲ್ಲಿದೆ.

‘ನಮ್ಮೆಲ್ಲರ ಆಯಸ್ಸನ್ನೂ ಅವರಿಗೇ ಕೊಡಲಿ’; ರಾಜ್‌ಕುಮಾರ್‌ಗೆ ವಿಷ್ಣುವರ್ಧನ್‌ ಬರೆದ ಪತ್ರ ಎಂದಾದರೂ ಓದಿದ್ದೀರಾ? ಇಲ್ಲಿದೆ ನೋಡಿ
‘ನಮ್ಮೆಲ್ಲರ ಆಯಸ್ಸನ್ನೂ ಅವರಿಗೇ ಕೊಡಲಿ’; ರಾಜ್‌ಕುಮಾರ್‌ಗೆ ವಿಷ್ಣುವರ್ಧನ್‌ ಬರೆದ ಪತ್ರ ಎಂದಾದರೂ ಓದಿದ್ದೀರಾ? ಇಲ್ಲಿದೆ ನೋಡಿ

Dr Rajkumar and Vishnuvardhan: ಚಿತ್ರರಂಗದಲ್ಲಿನ ಸಾಧನೆ ಗುರುತಿಸಿ 1983ರಲ್ಲಿ ವರನಟ ಡಾ. ರಾಜ್‌ಕುಮಾರ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸುತ್ತದೆ. ಈ ಪ್ರಶಸ್ತಿ ಘೋಷಣೆ ಆದ ಬಳಿಕ ಚಂದನವನದಲ್ಲಿಯೂ ದೊಡ್ಡ ಸಂಭ್ರಮ. ಅದೇ ಪದ್ಮಭೂಷಣ ಹೆಸರಿನ ಅಭಿನಂದನಾ ಗ್ರಂಥವನ್ನು ಕನ್ನಡ ಚಿತ್ರರಂಗದ ವತಿಯಿಂದ ಅರ್ಪಿಸಲಾಗುತ್ತದೆ. ಆ ಗ್ರಂಥದಲ್ಲಿ ಸಾಕಷ್ಟು ಮಹನೀಯರು ರಾಜ್‌ಕುಮಾರ್‌ ಅವರ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಅಕ್ಷರರೂಪ ಕೊಟ್ಟಿದ್ದರು. ಆ ಪೈಕಿ ಸಾಹಸಸಿಂಹ ವಿಷ್ಣುವರ್ಧನ್‌ ಸಹ ನೆಚ್ಚಿನ ನಟ ರಾಜ್‌ಕುಮಾರ್‌ ಅವರ ಬಗ್ಗೆ ಮನದುಂಬಿ ಪತ್ರ ಬರೆದಿದ್ದರು. ಆ ಪತ್ರವೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

ಆಗಿನ ಕಾಲದಲ್ಲಿ ಡಾ. ರಾಜ್‌ಕುಮಾರ್‌ ಮತ್ತು ವಿಷ್ಣುವರ್ಧನ್‌ ಮಧ್ಯೆ ಯಾವುದೂ ಸರಿಯಿಲ್ಲ ಎಂಬ ಗಾಸಿಪ್‌ ಸಹ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಗಂಧದ ಗುಡಿ ಕ್ಲೈಮ್ಯಾಕ್ಸ್ ಶೂಟಿಂಗ್‌ ಸಮಯದಲ್ಲಿ‌ ವಿಷ್ಣು ಕೈಯಲ್ಲಿನ ಬಂದೂಕಿನಿಂದ ರಾಜ್‌ಕುಮಾರ್‌ ಕಡೆಗೆ ಚಿಮ್ಮಿದ ಗುಂಡು, ನಿಜವಾದ ಗುಂಡು ಎಂದೇ ಬಿಂಬಿಸಲಾಗಿತ್ತು. ಅಲ್ಲಿಂದ ವಿಷ್ಣುವರ್ಧನ್‌ ಸಾಕಷ್ಟು ಟೀಕೆಗಳಿಗೆ ಗುರಿಯಾದರು. ಅದು ಮುಂದುವರಿಯುತ್ತಲೇ ಹೋಯಿತು. ನಿಜಾಂಶ ತಿಳಿದ ಬಳಿಕ ವರ್ಷಗಳೇ ಉರುಳಿದ್ದವು. ಈ ನಡುವೆ ಅಣ್ಣಾವ್ರು ಅಂದರೆ ವಿಷ್ಣು ಅವರಿಗೆ ಎಷ್ಟು ಇಷ್ಟ ಎಂಬುದನ್ನು ಹೇಳುತ್ತದೆ ಈ ಪತ್ರ. 

ಹೀಗಿದೆ ಆ ಪತ್ರ..

"ನಾನು ಏಳು ವರ್ಷ ವಯಸ್ಸಿನ ಹುಡುಗನಾಗಿದ್ದಾಗಿನಿಂದಲೂ ಡಾ. ರಾಜ್‌ಕುಮಾರ್‌ ಅವರ ಕಟ್ಟಾ ಅಭಿಮಾನಿ. ಗಂಧದ ಗುಡಿ ಚಿತ್ರದಲ್ಲಿ ಅವರ ಜತೆಗೆ ನಟಿಸುವ ಅವಕಾಶ ನನಗೆ ಸಿಕ್ಕಿತು. ಆಗಿನ್ನೂ ಹೊಸಬನಾಗಿದ್ದರೂ, ರಾಜ್‌ರವರು ಎಲ್ಲರೊಂದಿಗೂ ಸರಿ ಸಮನಾಗಿ ಸಲುಗೆಯಿಂದ ಇರುತ್ತಿದ್ದರು. ನಾನು ಹೊಸಬ ಎಂಬ ಭಾವನೆಯೇ ನನಗೆ ಬರಲಿಲ್ಲ. ಅವರೊಂದಿಗೆ ಕೆಲಸ ಮಾಡುವಾಗ, ಅವರೊಬ್ಬ ಮಹಾವ್ಯಕ್ತಿ ಎನಿಸುವುದೇ ಇಲ್ಲ. ಅಷ್ಟು ಸರಳ ವ್ಯಕ್ತಿತ್ವ ಅವರದ್ದು. ಕಲಾವಿದರಿಗೆಲ್ಲ ಒಂದು ವಿಶ್ವವಿದ್ಯಾಲಯವಿದ್ದಂತೆ. ಅವರ ಸತತ ಶ್ರಮ, ಸೇವೆ , ಸಾಧನೆ, ಯಾವನೇ ಕಲಾವಿದನಿಗೂ ಅನುಕರಣೀಯ"

ಅವರ ವೈಯಕ್ತಿಕ ಜೀವನದ ಶಿಸ್ತು ನನಗೆ ಸ್ಫೂರ್ತಿ

"ರಾಜ್‌ಕುಮಾರ್‌ ಅವರು ತಮ್ಮ ಕಷ್ಟದ ದಿನಗಳನ್ನು ನೆರಳಾಗಿ ಇಟ್ಟುಕೊಂಡಿದ್ದಾರೆ. ಆದ್ದರಿಂದಲೇ ಅವರು ಮಹಾನ್‌ ಆಗಿ ಬೆಳೆಯುತ್ತಿದ್ದಾರೆ. ನನ್ನ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದಿದ್ದರೆ ಅವರಂತೆ ಆಗಬೇಕು. ಅವರ ವೃತ್ತಿನಿಷ್ಠೆ, ಸಾಧನೆ, ಏಕಾಗ್ರತೆ ಬೇಕು ಎಂದು ನಾನು ಸತತ ಪ್ರಯತ್ನಿಸುತ್ತಿದ್ದೇನೆ. ನಾನು ಕೆಲಸ ಮಾಡುವಾಗ ಬೇಸರವಾದರೆ, ಸಮಸ್ಯೆಗಳು ಎದುರಾದರೆ ರಾಜ್‌ಕುಮಾರ್‌ ಅವರ ಮೂರ್ತಿ ನನ್ನ ಅಂತಃಪಟಲದ ಮೇಲೆ ಮೂಡಿ ಸ್ಫೂರ್ತಿ ಕೊಡುತ್ತದೆ. ನಾನು ಬೆಳೆದ ವಾತಾವರಣ ಬೇರೆಯಾದರೂ, ಅವರ ವೈಯಕ್ತಿಕ ಜೀವನದ ಶಿಸ್ತು ನನಗೆ ಇನ್‌ಸ್ಪೈರ್‌ ಮಾಡುತ್ತದೆ"

ಚಿತ್ರರಂಗದಲ್ಲಿ ಅವರು ಒಬ್ಬ ವ್ಯಕ್ತಿ ಅಲ್ಲ ಶಕ್ತಿ

"ಚಿತ್ರರಂಗದಲ್ಲಿ ಅವರು ಒಬ್ಬ ವ್ಯಕ್ತಿ ಅಲ್ಲ ಶಕ್ತಿ. ನಮ್ಮಂಥ ಕಲಾವಿದರಿಗೆಲ್ಲ ಅವರೊಂದು ಅಳತೆಗೋಲು. ಮಾನದಂಡ. ಅವರೊಂದಿಗೆ ನನ್ನ ಪ್ರತಿಯೊಂದು ಭೇಟಿಯೂ ಒಂದು ಥ್ರಿಲ್ಲಿಂಗ್‌ ಅನುಭವ. ಅವರ ಸರಳತೆ ನನ್ನನ್ನು ಮಾರುಹೋಗುವಂತೆ ಮಾಡುತ್ತದೆ. ಜನರ ಮಧ್ಯೆ ಅವರು ನಡೆದುಕೊಳ್ಳುವ ರೀತಿ ನಾನವರಿಂದ ಕಲಿತ ಪಾಠ. ಅವರ ಸಮಯಪ್ರಜ್ಞೆ, ಕೆಲಸದಲ್ಲಿ ಅವರ ಇನ್‌ವಾಲ್ವ್‌ಮೆಂಟ್‌ ಇವನ್ನು ಅನುಕರಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಮೂವತ್ತು ವರ್ಷಗಳ ಸೇವೆಯಿಂದ ಬೆಳೆದು ಬಂದ ವ್ಯಕ್ತಿಗೆ ನಾಡಿನ ಅತ್ಯುತ್ತಮ ಪ್ರಶಸ್ತಿ ಸಿಕ್ಕಬೇಕು. ಪದ್ಮಭೂಷಣ ಪ್ರಶಸ್ತಿಗೆ ಅವರಿಗಿಂತ ಅರ್ಹ ವ್ಯಕ್ತಿ ಮತ್ಯಾರೂ ಇಲ್ಲ"

ನಮ್ಮೆಲ್ಲರ ಆಯಸ್ಸನ್ನೂ ದೇವರು ಅವರಿಗೆ ಕೊಡಲಿ

"ಅವರ ಬಗ್ಗೆ ಈಗಾಗಲೇ ಬಹಳಷ್ಟು ಮಂದಿ ಬಹಳಷ್ಟು ಹೇಳಿದ್ದಾರೆ. ಹೆಚ್ಚು ಹೇಳುವುದೇನೂ ಇಲ್ಲ. ನಾನು ಅವರೆಲ್ಲರ ಅಭಿಪ್ರಾಯಗಳೊಂದಿಗೆ ಏಕೀಭವಿಸುತ್ತೇನೆ. ಕನ್ನಡಿಗರ ಕಣ್ಮಣಿ. ಕನ್ನಡ ಕಲಾರಂಗದ ಆಧಾರಸ್ತಂಭ ರಾಜ್‌ಕುಮಾರ್‌ ಅವರಿಗೆ ನಮ್ಮೆಲ್ಲರ ಆಯಸ್ಸನ್ನೂ ದೇವರು ಕೊಡಲಿ ಎಂದು ನನ್ನ ಪ್ರಾರ್ಥನೆ" ಎಂದು ಪತ್ರ ಮುಗಿಸಿದ್ದಾರೆ.

Whats_app_banner