ಇದು 'ಮರ್ಯಾದೆ ಪ್ರಶ್ನೆ' ಸ್ವಾಮಿ; ನವೆಂಬರ್ 22ಕ್ಕೆ ರಿಲೀಸ್ ಆಗ್ತಿದೆ ಸುನಿಲ್ ರಾವ್, ನಾಗೇಂದ್ರ ಷಾ ಅಭಿನಯದ ಸಿನಿಮಾ
Oct 09, 2024 10:07 PM IST
ಬೆಂಗಳೂರು ಹೈಡ್ ಪಾರ್ಕ್ ಹೋಟೆಲ್‌ನಲ್ಲಿ ನಡೆದ ಮರ್ಯಾದೆ ಪ್ರಶ್ನೆ ಸಿನಿಮಾ ಸುದ್ದಿಗೋಷ್ಠಿ. ಸಕ್ಕತ್ ಸ್ಟುಡಿಯೋದ ಆರ್‌ಜೆ ಪ್ರದೀಪ್, ಪತ್ನಿ ಶ್ವೇತಾ, ಸುನಿಲ್ ರಾವ್ ಹಾಗೂ ಇತರರು ಪ್ರೆಸ್‌ಮೀಟ್‌ನಲ್ಲಿ ಭಾಗವಹಿಸಿದ್ದರು.
ಆರ್‌ಜೆ ಪ್ರದೀಪ್ ಸಕ್ಕತ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಮರ್ಯಾದೆ ಪ್ರಶ್ನೆ ಸಿನಿಮಾ ನವೆಂಬರ್ 22ರಂದು ತೆರೆ ಕಾಣುತ್ತಿದೆ. ಸುನಿಲ್ ರಾವ್, ನಾಗೇಂದ್ರ ಷಾ ಹಾಗೂ ಇತರರು ಚಿತ್ರದಲ್ಲಿ ನಟಿಸಿದ್ದು ನಾಗರಾಜ್ ಸೋಮಯಾಜಿ, ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸ ಕಥೆ ಹಾಗೂ ನಿರೂಪಣೆಯಲ್ಲಿ ಹೊಸತನವಿರುವ ಸಿನಿಮಾಗಳು ಹೆಚ್ಚು ಗಮನ ಸೆಳೆಯುತ್ತಿವೆ. ಈಗ ಈ ಸಾಲಿಗೆ 'ಮರ್ಯಾದೆ ಪ್ರಶ್ನೆ' ಸಿನಿಮಾ ಸೇರಿದೆ. ಈಗಾಗಲೇ ಇದು ವಿಭಿನ್ನ ಶೀರ್ಷಿಕೆ ಮೂಲಕ ಸದ್ದು ಮಾಡುತ್ತಿದೆ. ಸೆಟ್ಟೇರಿದಾಗಿನಿಂದಲೂ ಪ್ರೇಕ್ಷಕರನ್ನು ಸೆಳೆಯುತ್ತಿರುವ ಮರ್ಯಾದೆ ಪ್ರಶ್ನೆ ಸಿನಿಮಾ ತೆರೆಗೆ ಬರಲು ಮುಹೂರ್ತ ನಿಗದಿಯಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ಚಿತ್ರತಂಡ
ಬೆಂಗಳೂರಿನ ಹೈಡ್ ಪಾರ್ಕ್ ಹೋಟೆಲ್‌ನಲ್ಲಿ ಚಿತ್ರತಂಡ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ತಮ್ಮ ಸಿನಿಮಾ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದೆ. ಸಕ್ಕತ್ ಸ್ಟುಡಿಯೋ ಸಂಸ್ಥಾಪಕ ಆರ್‌ಜೆ ಪ್ರದೀಪ್, ನಿರ್ದೇಶಕ ನಾಗರಾಜ್ ಸೋಮಯಾಜಿ ಸೇರಿದಂತೆ ಇಡೀ ತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ನಿರ್ಮಾಪಕ ಆರ್‌ಜೆ ಪ್ರದೀಪ್, ಸಕ್ಕತ್ ಸ್ಟುಡಿಯೋ ನಮ್ಮ ಕನಸು. ಒಂದೊಳ್ಳೆ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ನಾನು, ನಾಗರಾಜ್ ಕಥೆ ಬಗ್ಗೆ ಚರ್ಚೆ ಮಾಡಿದ್ದು ಇಬ್ಬರೂ ಸೇರಿ ಸಿನಿಮಾಗಾಗಿ ಕೈ ಜೋಡಿಸಿದ್ದೆವು. ಹೀಗೆ ಈ ಸಿನಿಮಾ ಜರ್ನಿ ಶುರುವಾಯ್ತು. ಅಂದಿನಿಂದ ನಾವು ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ಎಲ್ಲರಿಗೂ ಇಷ್ಟವಾಗುವ ಸಿನಿಮಾ ಮಾಡಿಕೊಂಡು ಜನರಿಗೆ ತಲುಪಿಸಲು ರಿಲೀಸ್ ಡೇಟ್ ಫಿಕ್ಸ್ ಮಾಡಿಕೊಂಡು ನಿಮ್ಮ ಮುಂದೆ ಬಂದಿದ್ದೇವೆ ಎಂದರು.
ನವೆಂಬರ್ 22ಕ್ಕೆ ತೆರೆ ಕಾಣ್ತಿದೆ ಮರ್ಯಾದೆ ಪ್ರಶ್ನೆ ಸಿನಿಮಾ
ನಾಗರಾಜ್ ಸೋಮಯಾಜಿ ಮಾತನಾಡಿ, ನಾನು ಪ್ರದೀಪ್ ಕ್ಲೋಸ್ ಫ್ರೆಂಡ್ಸ್. ಅದ್ಭುತ ತಾರಾಬಳಗ, ಪ್ರೇಕ್ಷಕರಿಗೆ ಇಷ್ಟವಾಗುವ ನೈಜತೆ ಇರುವ ಸಿನಿಮಾ ಮಾಡಿದ್ದೇವೆ. ತಾರಾಬಳಗದ ಜೊತೆಗೆ ನಮ್ ಟೆಕ್ನಿಕಲ್ ಟೀಂ ಕೂಡಾ ಸ್ಟ್ರಾಂಗ್ ಇದೆ. ಈ ಸಿನಿಮಾವನ್ನು ಜನರಿಗೆ ತಲುಪಿಸಲು ನಿಮ್ಮ ಪ್ರೀತಿ ಬೇಕು. ಉಳಿದದ್ದನ್ನು ಜನ ದುಪ್ಪಟ್ಟು ಮಾಡುತ್ತಾರೆ ಎಂದರು.
ಒಂದು ಯಶಸ್ವಿ ಚಿತ್ರ ಯಾವುದೆಲ್ಲಾ ರೀತಿ ಸ್ವರೂಪದಲ್ಲಿ ಪ್ರೇಕ್ಷಕರ ಗಮನ ಸೆಳೆಯಬೇಕೋ, ಆ ಎಲ್ಲಾ ಕಂಟೆಂಟ್ ಒಳಗೊಂಡ ಮರ್ಯಾದೆ ಪ್ರಶ್ನೆ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ, ನವೆಂಬರ್ 22ಕ್ಕೆ ಬಿಡುಗಡೆಯಾಗುತ್ತಿದೆ. ಆಕರ್ಷಕ ಪೋಸ್ಟರ್ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಘೋಷಣೆ ಮಾಡಿದೆ. ಚಿತ್ರದ ಪೋಸ್ಟರ್ ಇದೊಂದು ಫ್ಯಾಮಿಲಿ ಕುಳಿತು ನೋಡುವ ಸಿನಿಮಾ ಅನ್ನೋದನ್ನು ಹೇಳ್ತಿದೆ. ಕರ್ನಾಟಕ ಮಾತ್ರವಲ್ಲ ಹೈದರಾಬಾದ್, ಚೆನ್ನೈ, ಹೀಗೆ ಬೇರೆ ರಾಜ್ಯಗಳ ಜೊತೆಗೆ ವಿದೇಶದಲ್ಲೂ ಮರ್ಯಾದೆ ಪ್ರಶ್ನೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.
ಸುನಿಲ್ ರಾವ್ ಅಭಿನಯದ ಸಿನಿಮಾ
'ಮರ್ಯಾದೆ ಪ್ರಶ್ನೆ' ಸಿನಿಮಾದಲ್ಲಿ ರಾಕೇಶ್ ಅಡಿಗ, ಸುನಿಲ್ ರಾವ್, ಶೈನ್ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕೂರ್, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವಣ್ ಮುಖ್ಯ ತಾರಾಗಣದಲ್ಲಿದ್ದಾರೆ. ಸಕ್ಕತ್ ಸ್ಟುಡಿಯೋ ಬ್ಯಾನರ್ ಅಡಿ ಈ ಸಿನಿಮಾವನ್ನು ಪ್ರದೀಪ್ ನಿರ್ಮಿಸುತ್ತಿದ್ದು ಅವರೇ ಕಥೆ ಬರೆದಿದ್ದಾರೆ. ಪ್ರದೀಪ್‌ಗೆ ಕ್ರಿಯೇಟಿವ್ ಹೆಡ್ ಸಾಥ್ ಕೊಟ್ಟಿದ್ದಾರೆ. ಮರ್ಯಾದೆ ಪ್ರಶ್ನೆ ಚಿತ್ರವನ್ನು ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ದಿ ಬೆಸ್ಟ್ ಆ್ಯಕ್ಟರ್, ಮೈಕ್ರೋ ಮೂವಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮರಾವರ್ಕ್ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ನಿರ್ದೇಶನವಿದೆ.