ಮತ್ತೆ ಒಂದಾಗ್ತಿದ್ದಾರಾ ರಜನಿಕಾಂತ್ ಪುತ್ರಿ ಐಶ್ಚರ್ಯ-ಧನುಷ್; ಅದ್ದೂರಿ ಪಾರ್ಟಿ ಮಾಡಿ ಮಗಳು ಅಳಿಯನನ್ನು ಒಗ್ಗೂಡಿಸಲಿದ್ದಾರಾ ಸೂಪರ್ಸ್ಟಾರ್?
2022 ಜನವರಿಯಲ್ಲಿ ಡಿವೋರ್ಸ್ ಘೋಷಿಸಿದ್ದ ಸೂಪರ್ಸ್ಟಾರ್ ರಜನಿಕಾಂತ್ ಪುತ್ರಿ ಐಶ್ಚರ್ಯ ಹಾಗೂ ನಟ ಧನುಷ್ ಈಗ ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೋರ್ಟ್ ನಿಗದಿಗೊಳಿಸದ ವಿಚಾರಣೆಗೆ ಇಬ್ಬರೂ ಗೈರಾಗಿದ್ದಾರೆ. ಮಗಳು ಅಳಿಯನನ್ನು ಒಗ್ಗೂಡಿಸಲು ರಜನಿಕಾಂತ್ ಶೀಘ್ರದಲ್ಲೇ ಪಾರ್ಟಿಯೊಂದನ್ನು ಅರೇಂಜ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಚಿತ್ರರಂಗದಲ್ಲಿ ಇದುವರೆಗೂ ಎಷ್ಟೋ ಡಿವೋರ್ಸ್ ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಅಪರೂಪ ಎಂಬಂತೆ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ ಸೆಲಬ್ರಿಟಿ ದಂಪತಿ ಮತ್ತೆ ಒಂದಾಗಿರುವುದನ್ನು ಕೇಳಿರುವುದು ಬಹಳ ಅಪರೂಪ. 2 ವರ್ಷಗಳ ಹಿಂದೆ ಡಿವೋರ್ಸ್ ಅನೌನ್ಸ್ ಮಾಡಿದ್ದ ಕಾಲಿವುಡ್ ಜೋಡಿ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತೆ ಒಂದಾಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
2004ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ
ಕಾಲಿವುಡ್ ನಿರ್ದೇಶಕ-ನಿರ್ಮಾಪಕ ಕಸ್ತೂರಿ ರಾಜಾ ಪುತ್ರ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ಚರ್ಯ 2004 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರದ್ದೂ ಲವ್ ಮ್ಯಾರೇಜ್. ಮದುವೆ ಸಮಯದಲ್ಲಿ ಧನುಷ್ಗೆ 21 ಹಾಗೂ ಐಶ್ವರ್ಯಾಗೆ 23 ವರ್ಷ ವಯಸ್ಸು. ಈ ದಂಪತಿಗೆ ಯಾತ್ರಾ ಹಾಗೂ ಲಿಂಗ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ಇವರು ಮಾದರಿ ಜೋಡಿ ಎಂದೇ ಹೆಸರಾಗಿದ್ದರು. ಧನುಷ್ ಹೆಸರು ಬೇರೆ ನಟಿಯರೊಂದಿಗೆ ಕೇಳಿ ಬಂದರೂ, ಅದೆಲ್ಲಾ ಗಾಸಿಪ್ ಎಂದೇ ನಂಬಲಾಗಿತ್ತು. ಆದರೆ ಅಭಿಮಾನಿಗಳು ಊಹೆಯೂ ಮಾಡಿರಂಥ ಸುದ್ದಿ 2022 ಜನವರಿ 17 ರಂದು ಹೊರಬಿತ್ತು. ಆ ದಿನ ಧನುಷ್ ಹಾಗೂ ಐಶ್ವರ್ಯ ಇಬ್ಬರೂ ಡಿವೋರ್ಸ್ ಘೋಷಿಸಿದರು.
''ಹಿತೈಷಿಗಳಾಗಿ, ಪೋಷಕರಾಗಿ, ಸ್ನೇಹಿತರಾಗಿ, ದಂಪತಿಗಳಾಗಿ 18 ವರ್ಷಗಳ ನಮ್ಮ ಜೀವನ ಪರಸ್ಪರ ಹೊಂದಾಣಿಕೆ, ಬೆಳವಣಿಗೆಯಿಂದ ಕೂಡಿತ್ತು. ಆದರೆ ಈಗ ನಾವು ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ. ಐಶ್ವರ್ಯ ಹಾಗೂ ನಾನು ಗಂಡ-ಹೆಂಡತಿ ಸಂಬಂಧದಿಂದ ಹೊರ ಬರುವ ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ನಿರ್ಧಾರವನ್ನು ದಯವಿಟ್ಟು ಗೌರವಿಸಿ ಹಾಗೂ ಅದನ್ನು ನಿಭಾಯಿಸುವಂತ ಪ್ರೈವೆಸಿಯನ್ನು ನಮಗೆ ನೀಡಿ'' ಎಂದು ಧನುಷ್ ಹಾಗೂ ಐಶ್ವರ್ಯ ಒಂದೇ ರೀತಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ ವಿಚಾರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದರು. ಇದು ಸುಳ್ಳಾಗಿರಲಿ, ಡಿವೋರ್ಸ್ ಬಗ್ಗೆ ಯೋಚಿಸದೆ ಮಕ್ಕಳಿಗಾಗಿ ಇಬ್ಬರೂ ಒಂದಾಗಿ ಎಂದು ಎಷ್ಟೋ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಕಾಮೆಂಟ್ ಮಾಡಿದ್ದರು.
ಮದುವೆ ನಂತರವೂ ಒಟ್ಟಿಗೆ ಕಾಣಿಸಿಕೊಂಡಿದ್ದ ಐಶ್ವರ್ಯ-ಧನುಷ್
ಡಿವೋರ್ಸ್ ನಂತರ ಕೂಡಾ ಐಶ್ಚರ್ಯ ಹಾಗೂ ಧನುಷ್, ಮಕ್ಕಳ ಸ್ಕೂಲ್ ಫಂಕ್ಷನ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಐಶ್ವರ್ಯಾ ನಿರ್ದೇಶನದ ಚಿತ್ರಕ್ಕೆ ಧನುಷ್ ಗುಡ್ ಲಕ್ ಹೇಳಿದ್ದರು, ಮಾವನ ಫೋಟೋಗಳಿಗೆ ಕಾಮೆಂಟ್ ಮಾಡುತ್ತಿದ್ದರು. ಇದೆಲ್ಲದರ ನಂತರ ಈ ಎರಡೂ ಕುಟುಂಬದವರು ಇಬ್ಬರನ್ನು ಒಂದು ಮಾಡಲು ರಾಜಿ ಸಂಧಾನ ನಡೆಸಿತ್ತು. ಇದೆಲ್ಲದರ ಫಲವಾಗಿ ಈಗ ಐಶ್ಚರ್ಯಾ ಹಾಗೂ ಧನುಷ್ ಮತ್ತೆ ಒಂದಾಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇತ್ತೀಚೆಗೆ ನ್ಯಾಯಾಲಯದಲ್ಲಿ ಧನುಷ್, ಐಶ್ವರ್ಯ ಡಿವೋರ್ಸ್ ಅರ್ಜಿ ವಿಚಾರಣೆ ನಡೆದಿತ್ತು. 2 ಬಾರಿ ನಿಗದಿಯಾದ ವಿಚಾರಣೆಗೂ ಇಬ್ಬರೂ ಗೈರಾಗಿದ್ದರು.
ಐಶ್ವರ್ಯಾ ಹಾಗೂ ಧನುಷ್ ಮತ್ತೆ ಒಂದಾಗಲಿದ್ದಾರೆ, ಮಗಳು ಮತ್ತು ಅಳಿಯ ಮತ್ತೆ ಒಂದಾಗುವ ದಿನ ರಜನಿಕಾಂತ್ ದೊಡ್ಡ ಪಾರ್ಟಿಯೊಂದನ್ನು ಆಯೋಜಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.