logo
ಕನ್ನಡ ಸುದ್ದಿ  /  ಮನರಂಜನೆ  /  The Lion King ಸಿನಿಮಾಕ್ಕೂ ದರ್ಶನ್‌ ನಟನೆಯ ಸಾರಥಿಗೂ ಸಾಮ್ಯತೆ, ಕಥೆ ಕದ್ದವರಾರು? ವಾಲ್ಟ್‌ ಡಿಸ್ನಿ ಅಥವಾ ದಿನಕರ ತೂಗುದೀಪ

The Lion King ಸಿನಿಮಾಕ್ಕೂ ದರ್ಶನ್‌ ನಟನೆಯ ಸಾರಥಿಗೂ ಸಾಮ್ಯತೆ, ಕಥೆ ಕದ್ದವರಾರು? ವಾಲ್ಟ್‌ ಡಿಸ್ನಿ ಅಥವಾ ದಿನಕರ ತೂಗುದೀಪ

Praveen Chandra B HT Kannada

Aug 28, 2024 11:53 AM IST

google News

ದಿ ಲಯನ್‌ ಕಿಂಗ್‌ ಮತ್ತು ಸಾರಥಿ ಸಿನಿಮಾದ ಕಥೆಗೆ ಹೋಲಿಕೆ

    • The Lion King vs Sarathi: ಕನ್ನಡ ನಟ ದರ್ಶನ್‌ ಅಭಿನಯದ ಸಾರಥಿ ಸಿನಿಮಾ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಯಲ್ಲಿರುವ ದಿ ಲಯನ್‌ ಕಿಂಗ್‌ (2019) ಸಿನಿಮಾದ ಕಥೆಗೆ ಸಾಮ್ಯತೆ ಇದೆಯೇ? ಈ ಎರಡು ಸಿನಿಮಾಗಳಲ್ಲಿ ಕೆಲವು ನಿರ್ದಿಷ್ಟ ದೃಶ್ಯಗಳಲ್ಲಿರುವ ಕಥೆಯ ಸಾಮ್ಯತೆ ಏನು? ಇಲ್ಲಿದೆ ವಿವರ.
ದಿ ಲಯನ್‌ ಕಿಂಗ್‌ ಮತ್ತು ಸಾರಥಿ ಸಿನಿಮಾದ ಕಥೆಗೆ ಹೋಲಿಕೆ
ದಿ ಲಯನ್‌ ಕಿಂಗ್‌ ಮತ್ತು ಸಾರಥಿ ಸಿನಿಮಾದ ಕಥೆಗೆ ಹೋಲಿಕೆ

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ದಿ ಲಯನ್‌ ಕಿಂಗ್‌ (2019) ಎಂಬ ಸಿನಿಮಾ ಕಣ್ಣಿಗೆ ಬಿತ್ತು. ಪುಟ್ಟ ಮಗನಿಗೆ ಪ್ರಾಣಿಗಳ ಕುರಿತು ಅರಿವು ಮೂಡಿಸಲು ಒಳ್ಳೆಯ ಅವಕಾಶ ಎಂದೆನಿಸಿ ಕ್ಲಿಕ್‌ ಮಾಡಿದೆ. ಕಾಡು ಪ್ರಾಣಿಗಳು, ಸಿಂಹ, ಮುದ್ದಾದ ಪುಟಾಣಿ ಸಿಂಹ.. ಹೀಗೆ ಪ್ರಾಣಿ ಜಗತ್ತು ಮಗನಿಗೆ ಖುಷಿ ನೀಡ್ತು. ತುಂಬಾ ಒಳ್ಳೆಯ ಸಿನಿಮಾ. ಮಕ್ಕಳು ಮಾತ್ರವಲ್ಲದೆ ದೊಡ್ಡವರೂ ನೋಡಬಹುದಾದ ಅದ್ಭುತ ಸಿನಿಮಾ ಸೃಷ್ಟಿ ಇದಾಗಿದೆ. ಅಂದಹಾಗೆ, ದಿ ಲಯನ್‌ ಕಿಂಗ್‌ (The Lion King Movie) 2019ರಲ್ಲಿ ಬಿಡುಗಡೆಯಾದ ಸಿನಿಮಾ. ವಾಲ್ಟ್ ಡಿಸ್ನಿ ಪಿಕ್ಚರ್ಸ್ ಮತ್ತು ಫೇರ್‌ವ್ಯೂ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ ಈ ಚಿತ್ರಕ್ಕೆ ಜಾನ್ ಫಾವ್ರೂ ನಿರ್ದೇಶನವಿದೆ. ಫೋಟೊರಿಯಾಲಿಸ್ಟಿಕಲ್ ಅನಿಮೇಟೆಡ್ ಸಿನಿಮಾ ಇದಾಗಿದೆ. ಇದರಲ್ಲಿ ಪ್ರಾಣಿಗಳು ಮನುಷ್ಯರಂತೆ ಮಾತನಾಡುತ್ತವೆ. ನಿಜವಾದ ಪ್ರಾಣಿಗಳಂತೆ ಅದ್ಭುತವಾಗಿ ಪ್ರಾಣಿ ಪಕ್ಷಿಗಳು ಕಾಣಿಸುತ್ತವೆ.

ದಿ ಲಯನ್‌ ಕಿಂಗ್‌ ಕಥೆಯೇನು?

ಒಂದು ಕಾಡು. ತನ್ನ ಪ್ರಜೆಗಳನ್ನೆಲ್ಲ ಚೆನ್ನಾಗಿ ನೋಡಿಕೊಳ್ಳುವ ರಾಜ ಸಿಂಹ. ಅದರ ಹೆಸರು ಮುಫಾಸ. ಆ ಸಿಂಹಕ್ಕೆ ಒಂದು ಪುಟ್ಟ ಮಗುವಿದೆ. ಆ ಮರಿಸಿಂಹ ಮುಂದಿನ ರಾಜನಾಗಲಿದ್ದಾನೆ. ಮರಿಸಿಂಹದ ಹೆಸರು ಸಿಂಬಾ. ಆದರೆ, ರಾಜಸಿಂಹದ ಸಹೋದರ ಸಿಂಹಕ್ಕೆ (ಸ್ಕಾರ್‌) ಪಟ್ಟದ ಮೇಲೆ ಕಣ್ಣು. ವೈರಿ ಪ್ರಾಣಿಗಳ (ಹೈನಾ) ಜತೆ ಸೇರಿ ಮರಿಸಿಂಹವನ್ನು ಸಾಯಿಸಲು ಪ್ರಯತ್ನಿಸುತ್ತದೆ. ಕೆಲವು ಬಾರಿ ವಿಫಲವಾಗುತ್ತದೆ. ಮುಂದಿನ ಕಥೆ ಗಮನಿಸಿ.

ಆ ಸಮಯದಲ್ಲಿ ಸ್ಕಾರ್‌ ಮಾತು ಕೇಳಿ ಮರಿ ಸಿಂಹ ಸಿಂಬ ಒಂದು ದೊಡ್ಡ ಕಂದಕದತ್ತ ಹೋಗುತ್ತದೆ. ಸಡನ್‌ ಆಗಿ ನೂರಾರು ಸಾವಿರಾರು ಕಾಡುಕೋಣಗಳು ಆ ಕಂದಕದಲ್ಲಿ ಓಡುತ್ತ ಬರುತ್ತವೆ. ಆ ಕಾಡುಕೋಣಗಳ ಕಾಲಿನೆಡೆಗೆ ಸಿಗದಂತೆ ಸಿಂಬಾ ಓಡುತ್ತದೆ. ಥೇಟ್‌ ದರ್ಶನ್‌ ಸಾರಥಿ ಸಿನಿಮಾದಲ್ಲಿ ಬಾಲಕನಾಗಿದ್ದಾಗ ದನ, ಕೋಣಗಳ ನಡುವೆ ಓಡಿದಂತೆ ಸಿಂಬಾ ಓಡುತ್ತಾನೆ.. ಓಡುತ್ತಾನೆ.... ಬಳಿಕ ನಡೆದ ಒಂದಿಷ್ಟು ಘಟನೆಗಳಲ್ಲಿ ರಾಜ ಸಿಂಹ ಮುಫಾಸಾ ಸಾಯುತ್ತದೆ. ಆ ಸಾವಿಗೆ ಮಗು ಸಿಂಬಾ ಕಾರಣ ಎಂದು ಸ್ಕಾರ್‌ ಹೇಳುತ್ತದೆ. ಇದೇ ರೀತಿಯ ಕಥೆ ದರ್ಶನ್‌ ಸಾರಥಿ ಸಿನಿಮಾದಲ್ಲಿಯೂ ಇದೆ ಅಲ್ವೆ.

ಸ್ಯಾಂಡಲ್‌ವುಡ್‌ ಕಥೆ ಕದಿಯೇತೇ ವಾಲ್ಟ್‌ ಡಿಸ್ನಿ

ದರ್ಶನ್‌ ಸಾರಥಿ ಸಿನಿಮಾ ಬಿಡುಗಡೆಯಾದದ್ದು 2011ರ ಸೆಪ್ಟೆಂಬರ್‌ನಲ್ಲಿ. ದಿ ಲಯನ್‌ ಕಿಂಗ್‌ ಸಿನಿಮಾ ಬಿಡುಗಡೆಯಾದದ್ದು 2019ರಲ್ಲಿ. ನಮ್ಮ ಡಿಬಾಸ್‌ ಸಿನಿಮಾವೇ ಮೊದಲು ಬಂದಿರುವುದು. ಹಾಗಾಗಿ, ಡಿಸ್ನಿಯವರೇ ದರ್ಶನ್‌ ಸಾರಥಿ ಸಿನಿಮಾದ ಕಥೆ ಕದ್ದಿದ್ದಾರೆ ಎಂದುಕೊಳ್ಳಬೇಡಿ. 2019ರಲ್ಲಿ ಬಿಡುಗಡೆಯಾದ ದಿ ಲಯನ್‌ ಕಿಂಗ್‌ ಸಿನಿಮಾವು 1994ರ ದಿ ಲಯನ್‌ ಕಿಂಗ್‌ ಎಂಬ ಅನಿಮೇಷನ್‌ ಸಿನಿಮಾದ ಹೊಸರೂಪವಾಗಿದೆ. ಹೀಗಾಗಿ, ಲಯನ್‌ ಕಿಂಗ್‌ ಕಥೆ ಒರಿಜಿನಲ್.‌ ಸಾರಥಿ ಸಿನಿಮಾದ ಕಾಡುಕೋಣಗಳು ಮತ್ತು ಸಾರಥಿಯ ಬಾಲ್ಯದ ಕಥೆಯು ಲಯನ್‌ ಕಿಂಗ್‌ ಸಿನಿಮಾದಿಂದ ಸ್ಪೂರ್ತಿ ಪಡೆದಿರುವುದು.

ಸಾರಥಿ ಸಿನಿಮಾದ ಕಥೆಯೇನು?

ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಟಮಟ್ಟದ ಯಶಸ್ಸು ಪಡೆದ ಸಾರಥಿ ಸಿನಿಮಾ ರಾಜಾ ಎಂಬ ಆಟೋ ಚಾಲಕನ ಕಥೆ ಹೊಂದಿದೆ. ಆದರೆ, ಈತ ಸೂರ್ಯನಾರಾಯಣ ಎಂಬ ಗ್ರಾಮವೊಂದರ ಮುಖ್ಯಸ್ಥನ ಮಗ ಆಗಿರುತ್ತಾನೆ. ಬಾಲಕನಾಗಿರುವಾಗ ಕಮರಿಯಲ್ಲಿ ಕೋಣಗಳ ನಡುವೆ ತಂದೆಯ ಸಾವಿಗೆ ಕಾರಣನಾದೆ ಎಂಬ ತಪ್ಪುಕಲ್ಪನೆಯೊಂದಿಗೆ ಊರು ಬಿಟ್ಟಿರುತ್ತಾನೆ. ಬಳಿಕ ಲಯನ್‌ ಕಿಂಗ್‌ನ ಸಿಂಬಾನಂತೆ ಮತ್ತೆ ತನ್ನ ಊರಿಗೆ/ಕಾಡಿಗೆ ಹಿಂತುರುಗಿ ತನ್ನ ಪಟ್ಟ ವಾಪಸ್‌ ಪಡೆಯುತ್ತಾನೆ.

ಮೊದಲೆಲ್ಲ ಹಾಲಿವುಡ್‌ ಅಥವಾ ಇತರೆ ದೇಶಗಳ ಸಿನಿಮಾಗಳ ಕಥೆಯಿಂದ ಸ್ಪೂರ್ತಿ ಪಡೆದು ಸಿನಿಮಾ ಮಾಡಿದರೆ ದೊಡ್ಡ ಗೆಲುವು ದೊರಕುತ್ತಿತ್ತು. ಈ ಒಟಿಟಿ ಕಾಲದಲ್ಲಿ ಈ ರೀತಿ ಇತರೆ ಸಿನಿಮಾಗಳಿಂದ ಸ್ಪೂರ್ತಿ ಪಡೆದ ಕಥೆಗಳನ್ನು ಪ್ರೇಕ್ಷಕರು ಬೇಗ ಗುರುತಿಸುತ್ತಾರೆ. ಕೊರಿಯನ್‌ ಡ್ರಾಮಾಗಳಿಂದ ಸ್ಪೂರ್ತಿ ಪಡೆದ ಸೀರಿಯಲ್‌ಗಳ ಕಥೆಯೂ ಇದೇ ಎನ್ನಬಹುದು.

“ಸಾರಥಿ”  ಸಿನಿಮಾ ಇಲ್ಲಿದೆ ನೋಡಿ

ದಿ ಲಯನ್‌ ಕಿಂಗ್‌ ಸಿನಿಮಾ ಎಲ್ಲಿ ನೋಡಬಹುದು?

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ದಿ ಲಯನ್‌ ಕಿಂಗ್‌ (2019) ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ. ಆಸಕ್ತರು ನೋಡಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ