ಕಾಡಿನ ಕಥೆಗಳು: ಬಳ್ಳಾರಿ ಬಳಿ ಕಂಡ 2 ದೊರೆವಾಯನ ಹಕ್ಕಿ ಉಳಿವಿಗೆ ಕರ್ನಾಟಕ ಅರಣ್ಯ ಇಲಾಖೆ ಹರಸಾಹಸ, ಸಲೀಂ ಆಲಿ ಪ್ರೀತಿಯ ಪಕ್ಷಿಯ ದಯನೀಯ ಸ್ಥಿತಿ-forest tales karnataka forest department putting effort to restore great indian bustard found near bellary siruguppa kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಡಿನ ಕಥೆಗಳು: ಬಳ್ಳಾರಿ ಬಳಿ ಕಂಡ 2 ದೊರೆವಾಯನ ಹಕ್ಕಿ ಉಳಿವಿಗೆ ಕರ್ನಾಟಕ ಅರಣ್ಯ ಇಲಾಖೆ ಹರಸಾಹಸ, ಸಲೀಂ ಆಲಿ ಪ್ರೀತಿಯ ಪಕ್ಷಿಯ ದಯನೀಯ ಸ್ಥಿತಿ

ಕಾಡಿನ ಕಥೆಗಳು: ಬಳ್ಳಾರಿ ಬಳಿ ಕಂಡ 2 ದೊರೆವಾಯನ ಹಕ್ಕಿ ಉಳಿವಿಗೆ ಕರ್ನಾಟಕ ಅರಣ್ಯ ಇಲಾಖೆ ಹರಸಾಹಸ, ಸಲೀಂ ಆಲಿ ಪ್ರೀತಿಯ ಪಕ್ಷಿಯ ದಯನೀಯ ಸ್ಥಿತಿ

Bellary Forest ಕರ್ನಾಟಕದಲ್ಲಿ ಕಾಣೆಯಾಗುವ ಹಂತಕ್ಕೆ ಹೋಗಿರುವ ಈ ವಿಶಿಷ್ಟ ಹಕ್ಕಿಯ ಉಳಿವಿಗೆ ಅರಣ್ಯ ಇಲಾಖೆಯೂ ಪ್ರಯತ್ನ ನಡೆಸಿದೆ. ಇದರ ವಿಶೇಷ ಈ ವಾರದ ಕಾಡಿನ ಕಥೆಯಲ್ಲಿ..

ದೊರೆವಾಯನಹಕ್ಕಿ ಉಳಿವಿಗೆ ಇನ್ನಿಲ್ಲದ ಪ್ರಯತ್ನಗಳು ಕರ್ನಾಟಕದಲ್ಲಿ ಮುಂದುವರಿದಿವೆ.
ದೊರೆವಾಯನಹಕ್ಕಿ ಉಳಿವಿಗೆ ಇನ್ನಿಲ್ಲದ ಪ್ರಯತ್ನಗಳು ಕರ್ನಾಟಕದಲ್ಲಿ ಮುಂದುವರಿದಿವೆ.

ಗಣಿ ನಾಡು ಬಳ್ಳಾರಿಯ ಅರಣ್ಯದ ನಕ್ಷೆಯೇ ಈಗ ಬದಲಾಗಿ ಹೋಗಿರಬಹುದು. ಅರಣ್ಯ ಹಾಗೂ ಅರಣ್ಯದಂಚಿನ ಭೂಮಿಯನ್ನು ಅಗೆದು ಉತ್ಕೃಷ್ಟ ಅದಿರನ್ನು ಹಲವಾರು ದೇಶಗಳಿಗೆ ಸಾಗಿಸಿದ ಫಲವಿದು. ಒಂದು ಕಾಲಕ್ಕೆ ಬೆಟ್ಟ, ಗುಡ್ಡಗಳ ಸಾಲು, ಅರಣ್ಯದಿಂದಲೂ ಹೆಸರಾಗಿದ್ದ ಬಳ್ಳಾರಿ- ಸಂಡೂರನ್ನು ನೆನಪಿಸಿಕೊಳ್ಳಬೇಕು ಎಂದರೆ ಪುಟ್ಟಣ್ಣ ಕಣಗಾಲ್‌ ಅವರ ಮಾನಸ ಸರೋವರ ನೆನಪಿಸಿಕೊಳ್ಳಬೇಕು. ಒಂದು ಕಾಲಕ್ಕೆ ಸಾಕಷ್ಟು ವನ್ಯಜೀವಿಗಳು, ಬಗೆಬಗೆಯ ಹಕ್ಕಿಗಳ ತಾಣವಾಗಿತ್ತು ಬಳ್ಳಾರಿ ಅರಣ್ಯ. ಇಲ್ಲಿ ಅರಣ್ಯದ ಜತೆಗೆ ಹುಲ್ಲುಗಾವಲು ಪ್ರದೇಶವೂ ಇತ್ತು. ಬಳ್ಳಾರಿಯ ಸಿರಗುಪ್ಪ ಭಾಗದ ಆಂಧ್ರದೊಂದಿಗೆ ಗಡಿ ಹಂಚಿಕೊಂಡಿದ್ದು ಈ ಭಾಗದಲ್ಲಿ ಹುಲ್ಲುಗಾವಲೂ ಉಂಟು. ಇದು ಹಲವಾರು ಹಕ್ಕಿಗಳಿಗೆ ಆವಾಸಸ್ಥಾನವೂ ಹೌದು. ಇದರಲ್ಲಿ ದೊರೆವಾಯನ ಹಕ್ಕಿಯೂ ಕೂಡ ಒಂದು.

ಗ್ರೇಟ್ ಇಂಡಿಯನ್ ಬಸ್ಟರ್ಡ್(Great Indian bustard) ಎಂದು ಕರೆಯುವ ಈ ಹಕ್ಕಿಯೂ ಅಳಿವಿನಂಚಿಗೆ ಹೋಗಿ ದಶಕಗಳೇ ಕಳೆದು ಹೋಗಿದೆ. ಅರಣ್ಯ ನಾಶ, ಹುಲ್ಲುಗಾವಲುಗಳಿಗೂ ಅಳಿದ ನಂತರ ಈ ಹಕ್ಕಿಗಳ ಉಳಿವೂ ಕಷ್ಟವೇ ಆಗಿ ಹೋಗಿದೆ. ಇದು ನೋಡಲು ಸುಂದರ, ಎತ್ತರದ ನಿಲುವಿನ ಹಕ್ಕಿ. ಇದು ಒಂದು ಸಮಯದಲ್ಲಿ ಉಪಖಂಡದಲ್ಲಿ ವಿಪುಲವಾಗಿ ಕಾಣಬರುತ್ತಿದ್ದ ಈ ಸುಂದರಹಕ್ಕಿಗಳು ಮಹತ್ವವನ್ನೂ ಪಡೆದಿವೆ. ಬ್ರಿಟಿಷರು ಇವುಗಳನ್ನು GAME BIRD OF INDIA ಎಂದು ಕರೆಯುತ್ತಿದ್ದರು. ಅಷ್ಟರ ಮಟ್ಟಿಗೆ ಇದು ಬೇಟೆ ಹಾಗೂ ಆಹಾರದ ಹಕ್ಕಿಯಾಗಿ ಮಾರ್ಪಟ್ಟಿತ್ತು. ಇದರಿಂದ ಬೇಟೆ ಅವ್ಯಾಹತವಾಗಿ ನಡೆದು ಕಣ್ಣ ಮುಂದೆಯೇ ಇದು ಅಳವಿನಂಚಿನ ಪಟ್ಟಿಗೆ ಸೇರಿತು.

ಸಂಖ್ಯೆ ಇಳಿಮುಖ

ಭಾರತದ ಆಸ್ಟ್ರಿಚ್ ಎಂದು ಕರೆಯಬಹುದಾದ ಬಸ್ಟರ್ಡಗಳ ಸಂಖ್ಯೆ ದೇಶದಲ್ಲಿ 1969 ರಲ್ಲಿ 1260 ರಷ್ಟಿತ್ತು. ರಾಜ್ಯದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ರಕ್ಷಿತ ಅರಣ್ಯದಲ್ಲೂ ಇವುಗಳಿಗೆ ಒಂದು ಸಮಯದಲ್ಲಿ ಇದ್ದ ಯೋಗ್ಯ ಪರಿಸರವು ಅರಣ್ಯ ಇಲಾಖೆಯ ತಪ್ಪಿನಿಂದ ನಾಶವಾಗಿಯೇ ಹೋಯಿತು. ಹುಲ್ಲುಗಾವಲಿನಲ್ಲಿ ಮರಗಳನ್ನು ನೆಟ್ಟು ಕೃತಕ ಕಾಡನ್ನು ಬೆಳೆಸಿದ್ದರಿಂದ ಎರೆಭೂತಗಳು ನೆಲೆ ಕಳೆದುಕೊಳ್ಳುವಂತಾಗಿತ್ತು. ಸುಮಾರು 18 ರಿಂದ 20 ಕೀಲೊ ವರೆಗೂ ತೂಗುವ ಬಸ್ಟರ್ಡ ಆಗಸದಲ್ಲಿ ಹಾರುವ ದೊಡ್ಡ ಪಕ್ಷಿಪ್ರಭೇದ ಎನ್ನುವ ಖ್ಯಾತಿಯನ್ನು ಪಡೆದಿದೆ.

ಬೇಟೆಗಾರರಿಂದ ಪಾರುಮಾಡಲು ತಾಯಿ ಹಕ್ಕಿ ಮರಿಗಳನ್ನು ತನ್ನ ರೆಕ್ಕೆಗಳಲ್ಲಿ ಮುಚ್ಚಿ ರಕ್ಷಣೆ ಮಾಡಿರುವ ಉದಾಹರಣೆಗಳು ಇವೆ.ಭಾರತದಲ್ಲಿ ”ಗ್ರೇಟ್ ಇಂಡಿಯನ್ ಬಸ್ಟರ್ಡ”ಗಳ ಸಂಖ್ಯೆ ಎಷ್ಟಿರಬಹುದು. ಕೇವಲ 200. ಅತ್ಯಂತ ನಾಚಿಕೆ ಸ್ವಭಾವದ ಈ ಹಕ್ಕಿಗಳು ಈಗ ರಾಜಸ್ತಾನ, ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಕರ್ನಾಟಕಗಳಲ್ಲಿ ಅಲ್ಲಲ್ಲಿ ಕಾಣುತ್ತಿವೆ.

ಕರ್ನಾಟಕ ಅರಣ್ಯ ಇಲಾಖೆ ಪ್ರಯತ್ನ

ಕರ್ನಾಟಕವು ಸುಂದರ ಪಕ್ಷಿಗಳಾದ ಬಸ್ಟರ್ಡಗಳಿಗಾಗಿಯೇ ಪ್ರತ್ಯೇಕ ಭೂಮಿಯನ್ನು ಇದೀಗ ಗುರುತಿಸಿದೆ ಹಾಗೂ ಅನುದಾನವನ್ನು ತೆಗೆದಿರಿಸಿದೆ. ಸುಪ್ರೀಂಕೋರ್ಟ್ ಸಹ ಒಂದು ಹೆಜ್ಜೆ ಮುಂದೆ ಬಂದು ದೇಶದ ಬಸ್ಟರ್ಡ ಸಂರಕ್ಷಣೆಯಲ್ಲಿ ಹುಲಿ ಯೋಜನೆಗಳಂತೆ ಮುತುವರ್ಜಿಯನ್ನು ವಹಿಸಿಬೇಕೆಂದು ಸರಕಾರಗಳಿಗೆ ಸೂಚನೆ ನೀಡಿತು. ಅಲ್ಲದೆ ಬಸ್ಟರ್ಡ ಸಂರಕ್ಷಣೆಯ ಯೋಜನೆಗಳಿಗೆ ನೆರವಾಗಲು ಪಕ್ಷಿತಜ್ಞರ ಒಂದು ಸಮಿತಿಯನ್ನು ರಚಿಸಿದೆ ಹಾಗೂ ಸಮದ್ ಕೊಟ್ಟೂರು ಅವರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸಿತು. ಹೊಸಪೇಟೆ ಸಮೀಪ ತುಂಗಭದ್ರೆಯ ಆಸುಪಾಸಿನ ಶುಷ್ಕ ಹುಲ್ಲುಗಾವಲಿನಲ್ಲಿ ಬಹಳ ವರುಷಗಳ ಹಿಂದೆ ಸಂಡೂರಿನ ಪಕ್ಷಿತಜ್ಞ ಅಬ್ದುಲ್ ಸಮದ್ ಕೊಟ್ಟೂರು ಅವರು ಇವುಗಳನ್ನು ಗುರುತಿಸಿದ್ದರು.

ಬಸ್ಟರ್ಡನ ಕರುಣಾಜನಕ ಕಥೆ ಅರಿತಿದ್ದ ಕೊಟ್ಟೂರು ಅವರು ಸಿಕ್ಕ ಕಿರು ಅವಕಾಶವನ್ನು ವ್ಯರ್ಥಮಾಡದೆ ಹಕ್ಕಿಗಳ ಸಂರಕ್ಷಣೆಗೆ SWAN (Society for Wildlife and Nature) ಎನ್ನುವ ಪರಿಸರ ಅಭ್ಯುದಯ ಸಂಸ್ಥೆ ಪ್ರಾರಂಭಿಸಿದರು. ಸಂಸ್ಥೆಯ ಸದಸ್ಯರಾದ ಆನಂದ ಕುಂದರಗಿ ಹಾಗೂ ಸಂತೋಷ ಮಾರ್ಟಿನರೊಂದಿಗೆ 2017 ರಲ್ಲಿ ಬಳ್ಳಾರಿ ಜಿಲ್ಲೆಯ ”ಗ್ರೇಟ್ ಇಂಡಿಯನ್ ಬಸ್ಟರ್ಡ” ಕುಟುಂಬವನ್ನೇ ಕೊಟ್ಟುರ ಪತ್ತೆ ಮಾಡಿದ್ದರು. ಮುಂದೆ SWAN ಸಂಸ್ಥೆ ರಾಜ್ಯದಲ್ಲಿ ಬಸ್ಟರ್ಡಗಳಿಗೆ ನೆಲೆ ಒದಗಿಸುವಂತೆ ಅರಣ್ಯ ಇಲಾಖೆಯ ಮೇಲೆ ಒತ್ತಡ ಹಾಕಲು ಪ್ರಾರಂಭಿಸಿತು. ನಮ್ಮ ರಾಜ್ಯದಲ್ಲೂ ರಾಜಸ್ತಾನ ಹಾಗೂ ಮಹಾರಾಷ್ಟ್ರಗಳಂತೆ ಎರೆಭೂತಗಳ ಪ್ರತ್ಯೇಕ ಪಕ್ಷಿಧಾಮ ರಚನೆಯಾಗಬೇಕೆಂದು ಹೋರಾಡಲು ಸಂಸ್ಥೆಯು ಪ್ರಾರಂಭಿಸಿತು. ಪಕ್ಷಿಪ್ರೇಮಿಗಳ ಸತತ ಪ್ರಯತ್ನ ಇಂದು ಫಲಕಂಡಿದೆ.

ಆರು ತಿಂಗಳ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಎರಡು ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗಳು ಕಾಣಿಸಿಕೊಂಡಿವೆ. ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌ ಅಭಯಾರಣ್ಯವೆಂದು ಘೋಷಿಸಲ್ಪಟ್ಟಿರುವ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸುಮಾರು 14 ಚದರ ಕಿ.ಮೀ ಪ್ರದೇಶ ಈಗ ಈ ಪಕ್ಷಿಗಳ ಕರ್ನಾಟಕದಲ್ಲಿ ಉಳಿದಿರುವ ಕೊನೆಯ ಆವಾಸಸ್ಥಾನ ಎಂದೇ ಕರೆಯಲಾಗುತ್ತಿದೆ.

ಜಿಪಿಎಸ್‌ ಟ್ಯಾಗಿಂಗ್‌

ಅರಣ್ಯ ಇಲಾಖೆಯು ಯೋಜಿಸಿರುವ ಕ್ರಮಗಳು ಪಕ್ಷಿಗಳ ಜಿಪಿಎಸ್-ಟ್ಯಾಗ್ ಮಾಡುವುದು, ಕೃತಕ ಮೊಟ್ಟೆಯೊಡೆಯುವಿಕೆ, ಕಾಡಿನಲ್ಲಿಈ ಪಕ್ಷಿಗಳನ್ನು ಪರಿಚಯಿಸುವುದು, ಸ್ಥಳೀಯ ಸಮುದಾಯಗಳನ್ನು ಒಳಗೊಳ್ಳುವುದು ಮತ್ತು ಸಿರುಗುಪ್ಪದಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದು ಸೇರಿದೆ. ಇದಕ್ಕಾಗಿ 24 ಕೋಟಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಅದರಲ್ಲಿ ಸಿರುಗುಪ್ಪದಲ್ಲಿ ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌ ಸಂಶೋಧನಾ ಕೇಂದ್ರ ನಿರ್ಮಾಣ ಹಾಗೂ ಜಿಪಿಎಸ್‌ ಟ್ಯಾಗ್‌, ಅವುಗಳ ಕೃತಕ ತಳಿಯಂತಹ ಪ್ರಯೋಗಗಳನ್ನು ಕೈಗೊಳ್ಳಲು ಜಿಲ್ಲಾ ಖನಿಜ ನಿಧಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿಯಡಿ ಮೊದಲ ಹಂತದಲ್ಲಿ 6 ಕೋಟಿ ರೂ. ಒದಗಿಸಲಾಗಿದೆ.

ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ನೇತೃತ್ವದ ತಜ್ಞರ ತಂಡವು ಇತ್ತೀಚೆಗೆ ರಾಜಸ್ಥಾನದ ಡೆಸರ್ಟ್ ನ್ಯಾಷನಲ್ ಪಾರ್ಕ್‌ಗೆ ಭೇಟಿ ನೀಡಿ ಕರ್ನಾಟಕದಲ್ಲಿ ಕೊನೆಯ ಹಂತದಲ್ಲಿ ಬದುಕುಳಿರುವ ಈ ಹಕ್ಕಿಗಳನ್ನು ಉಳಿಸುವ ಸಾಧ್ಯತೆಯನ್ನು ಅಧ್ಯಯನ ಮಾಡಿದೆ. ಡೆಹ್ರಾಡೂನ್‌ನ ತಜ್ಞರು ಕರ್ನಾಟಕ ಅರಣ್ಯ ಇಲಾಖೆಯೊಂದಿಗೆ ನಿಕಟವಾಗಿ ಕೆಲಸ ಮಾಡುವುದಕ್ಕೂ ಸಹಮತ ವ್ಯಕ್ತಪಡಿಸಿದ್ದಾರೆ.

ಸಿರುಗುಪ್ಪಕ್ಕೆ ಸೀಮಿತ

ಸಿರುಗುಪ್ಪ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಎರಡು ಹಕ್ಕಿಗಳಿಗೆ ಜಿಪಿಎಸ್ ಟ್ಯಾಗ್ ಮಾಡಲು ಅವಕಾಶ ನೀಡುವಂತೆ ಅರಣ್ಯ ಇಲಾಖೆಯ ಬಳ್ಳಾರಿ ವಿಭಾಗವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಕೋರಿಕೊಂಡಿದೆ. ಕರ್ನಾಟಕ-ಆಂಧ್ರಪ್ರದೇಶದ ಗಡಿಯಲ್ಲಿ ಪಕ್ಷಿಗಳ ಚಲನವಲನದ ಮೇಲೆ ನಿರಂತರವಾಗಿ ನಿಗಾ ಇಡಲು ಅರಣ್ಯ ವಿಭಾಗವು ಈಗಾಗಲೇ ಸಿಸಿಟಿವಿ ಕ್ಯಾಮೆರಾಗಳನ್ನು ಅಲ್ಲಲ್ಲಿ ಅಳವಡಿಸಿದೆ. ಆರು ತಿಂಗಳ ಹಿಂದೆಯಷ್ಟೇ ಇಲ್ಲಿ ಆರು ಪಕ್ಷಿಗಳಿದ್ದವು. ಈಗ ಎರಡು ಉಳಿದಿವೆ. ಎರಡು ದಶಕಗಳ ಹಿಂದಿನವರೆಗೂ ಇವು ಕರ್ನಾಟಕದ ಐದಾರು ಜಿಲ್ಲೆಗಳಲ್ಲಿ ಕಂಡುಬರುತ್ತಿದ್ದವು. ಆದರೆ ಈಗ ಬಳ್ಳಾರಿ ಸಿರುಗುಪ್ಪಕ್ಕೆ ಮಾತ್ರ ಸೀಮಿತವಾಗಿದೆ. ಅವುಗಳನ್ನಾದರೂ ಉಳಿಸಿಕೊಂಡು ಮುಂದಿನ ಪೀಳಿಗೆಗೆ ಇವುಗಳ ಸಂತತಿ ವೃದ್ದಿಸುವ ಪ್ರಯತ್ನ ಅರಣ್ಯ ಇಲಾಖೆಯಿಂದ ನಡೆದಿದೆ.

ಬಹು ಹಿಂದೆಯೇ ಈ ಹಕ್ಕಿಯನ್ನು ಭಾರತದ ರಾಷ್ಟ್ರಪಕ್ಷಿಯನ್ನಾಗಿಸಲು ಪಕ್ಷಿಪಿತಾಮಹ ಸಲಿಂ ಅಲಿ ಬಹುವಾಗಿ ಪ್ರಯತ್ನಿಸಿದ್ದರು. ಆದರೆ, ಅವರ ಪ್ರಯತ್ನ ಕೈಗೂಡಿರಲಿಲ್ಲ. ಈಗ ಗುಜರಾತ್‌, ರಾಜಸ್ತಾನ, ಮಹಾರಾಷ್ಟ್ರದಂತೆಯೇ ಕರ್ನಾಟಕವೂ ದೊರೆವಾಯನ ಹಕ್ಕಿಯನ್ನು ಉಳಿಸಿಕೊಳ್ಳುವ ದೂರಗಾಮಿ ಯೋಜನೆನ್ನೇನೋ ಹಾಕಿದೆ. ಕರ್ನಾಟಕದ ಅರಣ್ಯ ಇಲಾಖೆಯು ಸಮುದಾಯದ ಸಹಭಾಗಿತ್ವ ಗಟ್ಟಿಗೊಳಿಸಿಕೊಂಡರೆ ಕರುನಾಡಲ್ಲಿ ಉಳಿದ ಎರಡು ಹಕ್ಕಿಗಳು ಪೀಳಿಗೆ ಸೃಷ್ಟಿಸಬಲ್ಲವು. ಇಲ್ಲದೇ ಇದ್ದರೆ ಚಿತ್ರಗಳಲ್ಲೇ ಈ ಹಕ್ಕಿ ನೋಡುವ ದಿನವೂ ಬರಬಹುದು.

-ಕುಂದೂರು ಉಮೇಶಭಟ್ಟ, ಮೈಸೂರು