ವಿನೋದ್ ಪ್ರಭಾಕರ್ ಫೈಟರ್ ಚಿತ್ರದ ಹಾಡು ಬಿಡುಗಡೆ ಮಾಡಿದ ಅನುಷ್ಕಾ ಶೆಟ್ಟಿ ಸಹೋದರ
Sep 16, 2023 08:00 PM IST
ವಿನೋದ್ ಪ್ರಭಾಕರ್ ಫೈಟರ್ ಚಿತ್ರದ ಹಾಡು ಬಿಡುಗಡೆ ಮಾಡಿದ ಅನುಷ್ಕಾ ಶೆಟ್ಟಿ ಸಹೋದರ
- ವಿನೋದ್ ಪ್ರಭಾಕರ್, ಲೇಖಾ ಚಂದ್ರ ನಾಯಕ ನಾಯಕಿಯಾಗಿ ನಟಿಸಿರುವ ಫೈಟರ್ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ.
Fighter Song Released: ಸ್ಯಾಂಡಲ್‌ವುಡ್ ನಟ ವಿನೋದ್ ಪ್ರಭಾಕರ್ ಇದೀಗ ಫೈಟರ್ ಸಿನಿಮಾ ಮೂಲಕ ಆಗಮಿಸಲು ಸಜ್ಜಾಗಿದ್ದಾರೆ. ನೂತನ್ ಉಮೇಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಶೀರ್ಷಿಕೆಗೆ ತಕ್ಕಂತೆ ಫೈಟರ್ ಆಗಿಯೇ ವಿನೋದ್ ಕಾಣಿಸಿಕೊಂಡಿದ್ದಾರೆ. ಇದೀಗ ಕಮರ್ಷಿಯಲ್ ಆಕ್ಷನ್ ಶೈಲಿಯ ಈ ಸಿನಿಮಾದ ಹಾಡೊಂದು ಬಿಡುಗಡೆ ಆಗಿದೆ. ವಿಶೇಷ ಏನೆಂದರೆ, ಆ ಹಾಡನ್ನು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಅನುಷ್ಕಾ ಶೆಟ್ಟಿ ಅವರ ಸಹೋದರ ಗುಣರಂಜನ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ.
ಐ ವಾನ ಫಾಲೋ ಯು ಹಾಡನ್ನು ಗೀತ ಸಾಹಿತಿ ಕವಿರಾಜ್ ಬರೆದಿದ್ದಾರೆ. ಗುರುಕಿರಣ್ ಸಂಗೀತ ನೀಡಿರುವ ಈ ಹಾಡಿಗೆ ಚೈತ್ರ ಹೆಚ್. ಜಿ ಧ್ವನಿಯಾಗಿದ್ದಾರೆ. ಹಾಡಿನ ಬಗ್ಗೆ ಮಾಹಿತಿ ನೀಡುವ ಗುರುಕಿರಣ್, ಈ ಹಾಡಿನ ಮೊದಲ ಪದ ಐ ವಾನ ಫಾಲೋ ಎಂಬುದನ್ನು ನಿರ್ದೇಶಕರು ಹೇಳಿದಾಗ ಫಾಲೋ ಎಂಬ ಪದದಿಂದಲೇ ಈ ಹಾಡು ಆರಂಭವಾಯಿತು. ವಿಶೇಷವೆಂದರೆ, ಈ ಹಾಡಿನಲ್ಲಿ ಬರುವ ಪದಗಳಿಗೆ ಎರಡು ಅರ್ಥಗಳಿವೆ. ಕವಿರಾಜ್ ಅದ್ಭುತವಾಗಿ ಹಾಡು ಬರೆದಿದ್ದಾರೆ. ಚೈತ್ರ ಸೊಗಸಾಗಿ ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ಹಾಡಿನ ಬಗ್ಗೆ ಮಾಹಿತಿ ನೀಡಿದರು.
ಈ ಹಾಡನ್ನು ಪಾಂಡಿಚೇರಿಯಲ್ಲಿ ಚಿತ್ರಿಸಲಾಗಿದೆ. ಗುರುಕಿರಣ್ ಅವರ ಸಂಗೀತ, ಕವಿರಾಜ್ ಅವರ ಸಾಹಿತ್ಯ, ಮೋಹನ್ ನೃತ್ಯ ನಿರ್ದೇಶನ ಹಾಗೂ ವಿನೋದ್ ಪ್ರಭಾಕರ್, ಲೇಖಾ ಚಂದ್ರ ಅವರ ಅಭಿನಯ ಎಲ್ಲವೂ ಸೇರಿ ಈ ಫಾಲೋ ಯು ಹಾಡು ಅದ್ಭುತವಾಗಿ ಹಾಗೂ ಅದ್ದೂರಿಯಾಗಿ ಮೂಡಿಬಂದಿದೆ. ಸದ್ಯದಲ್ಲೇ ಟ್ರೇಲರ್ ಬರಲಿದ್ದು, ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ದೇಶಕ ನೂತನ್ ಉಮೇಶ್.
"ಈ ಫೈಟರ್ ಅನ್ಯಾಯದ ವಿರುದ್ಧ ಹಾಗೂ ರೈತರ ಪರವಾಗಿ ಹೋರಾಡುವ ಫೈಟರ್. ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರು ಅಷ್ಟೇ ಚೆನ್ನಾಗಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಬಿಡುಗಡೆಯಾದ ಹಾಡಿನ ಚಿತ್ರೀಕರಣ ಮಾರ್ಚ್‌ನಲ್ಲಿ ಪಾಂಡಿಚೇರಿಯಲ್ಲಿ ಚಿತ್ರೀಕರಣವಾಗಿದ್ದು, ಅಲ್ಲಿನ ಬಿಸಿಲು ತಡೆಯುವುದು ಕಷ್ಟ. ಎಲ್ಲರ ಶ್ರಮದಿಂದ ಈ ಹಾಡು ಚೆನ್ನಾಗಿ ಬಂದಿದೆ" ಎಂದರು ಚಿತ್ರದ ನಾಯಕ ವಿನೋದ್ ಪ್ರಭಾಕರ್.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ