ಅಬ್ಬರದಲ್ಲಿಯೇ ‘ಮಾರ್ಟಿನ್’ ಸಿನಿಮಾವನ್ನು ಕಟುವಾಗಿ ಟೀಕಿಸಿ, ಬಳಿಕ ನಯವಾಗಿ ಕ್ಷಮೆ ಕೇಳಿದ ಕನ್ನಡದ ಯೂಟ್ಯೂಬರ್
Oct 13, 2024 08:33 AM IST
ಅಬ್ಬರದಲ್ಲಿಯೇ ‘ಮಾರ್ಟಿನ್’ ಸಿನಿಮಾವನ್ನು ಕಟುವಾಗಿ ಟೀಕಿಸಿದ ಯೂಟ್ಯೂಬರ್ ಸುಧಾಕರ್ ಗೌಡ
- ದಸರಾ ಹಬ್ಬದ ಪ್ರಯುಕ್ತ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡ ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಇದೇ ಚಿತ್ರದ ಬಗ್ಗೆ ಕಟುವಾಗಿ ಟೀಕೆ ಮಾಡಿದ ಯೂಟ್ಯೂಬರ್, ಇದೀಗ ಧ್ರುವ ಸರ್ಜಾ ಫ್ಯಾನ್ಸ್ ಬಳಿ ಕ್ಷಮೆ ಕೇಳಿದ್ದಾರೆ.
Martin Movie: ಧ್ರುವ ಸರ್ಜಾ ಮಾರ್ಟಿನ್ ಸಿನಿಮಾ ಅಕ್ಟೋಬರ್ 11ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ಅಭಿಮಾನಿಗಳ ಅಬ್ಬರ ಆರ್ಭಟದ ನಡುವೆ ತೆರೆಕಂಡ ಈ ಸಿನಿಮಾವನ್ನು ಅದ್ಧೂರಿ ನಿರ್ದೇಶಕ ಎ.ಪಿ ಅರ್ಜುನ್ ನಿರ್ದೇಶನ ಮಾಡಿದ್ದಾರೆ. ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ಎಂಬಂತೆ ಚಿತ್ರದ ತುಂಬೆಲ್ಲ ಧ್ರುವ ಸರ್ಜಾ ಅಬ್ಬರಿಸಿದ್ದಾರೆ. ಮೆಚ್ಚುಗೆಯ ವಿಮರ್ಶೆಗಳೂ ಸಿಕ್ಕಿವೆ. ಇನ್ನು ಕೆಲವರು ಸಿನಿಮಾವನ್ನು ಕಟುವಾಗಿ ಟೀಕೆ ಮಾಡಿದವರೂ ಇದ್ದಾರೆ. ಒಟ್ಟಾರೆಯಾಗಿ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗಿಂತ ನೆಗೆಟಿವ್ ವಿಚಾರಗಳೇ ಹೆಚ್ಚು ಹೈಲೈಟ್ ಆಗಿವೆ. ತೆಲುಗಿನಿಂದ ಹಿಡಿದು, ಹಿಂದಿವರೆಗೂ ಬಹುತೇಕ ಯೂಟ್ಯೂಬರ್ಗಳು ಈ ಸಿನಿಮಾವನ್ನು ಚೆನ್ನಾಗಿಲ್ಲ ಎಂದೇ ವಿಮರ್ಶೆ ಮಾಡಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಸದ್ದು ಮಾಡುತ್ತಿರುವ ಯೂಟ್ಯೂಬರ್ ಸುಧಾಕರ್ ಗೌಡ ಸಹ ಮಾರ್ಟಿನ್ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಿಬಿಟ್ಟಿದ್ದರು. ಜಾಲತಾಣದಲ್ಲಿ ಸುದೀರ್ಘ ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗ್ತಿದ್ದಂತೆ, ಈಗ ಇದೇ ಸುಧಾಕರ್ ಧ್ರುವ ಸರ್ಜಾ ಅಭಿಮಾನಿಗಳ ಬಳಿ ಕ್ಷಮೆ ಸಹ ಕೇಳಿದ್ದಾರೆ.
ಏನಿದೆ ಸಿನಿಮಾದಲ್ಲಿ?
ಮಾರ್ಟಿನ್ ಸಿನಿಮಾದಲ್ಲಿ ನಟ ಧ್ರುವ ಸರ್ಜಾ ಡಬಲ್ ರೋಲ್ ಪ್ಲೇ ಮಾಡಿದ್ದಾರೆ. ಕಸ್ಟಮ್ಸ್ ಆಫೀಸರ್ ಆಗಿರುವ ಅರ್ಜುನ್ ಸಕ್ಸೇನಾ (ಧ್ರುವ ಸರ್ಜಾ), ಪಾಕಿಸ್ತಾನಿಯರಿಗೆ ಸೆರೆಸಿಕ್ಕ ಭಾರತೀಯನಾಗಿರುತ್ತಾನೆ. ತನ್ನ ನೆನಪಿನಶಕ್ತಿಯನ್ನೂ ಕಳೆದುಕೊಂಡು, ನಿಜವಾದ ಐಡೆಂಟಿಟಿ ಕಂಡುಕೊಳ್ಳುವ ಸಲುವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿಳಿಯುತ್ತಾನೆ. ಆತನ ಈ ಸಮಸ್ಯೆಗೆ ಮಾರ್ಟಿನ್ ಕಾರಣ ಎಂಬ ಸತ್ಯವೂ ತಿಳಿಯುತ್ತದೆ. ಆ ಮಾರ್ಟಿನ್ ಯಾರು? ಅವನ ಹಿನ್ನೆಲೆ ಏನು? ಅರ್ಜುನ್ಗೂ ಮಾರ್ಟಿನ್ಗೂ ಏನು ಸಂಬಂಧ? ಈ ಹಾದಿಯಲ್ಲಿ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ.
ಸಿನಿಮಾ ಬಗ್ಗೆ ಕಟು ವಿಮರ್ಶೆ
ಈಗ ಇದೇ ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾ ಇನ್ಪ್ಲುಯೆನ್ಸರ್ ಸುಧಾಕರ್ ಗೌಡ ವಿಡಿಯೋ ಹಂಚಿಕೊಂಡಿದ್ದರು. "ಧ್ರುವ ಸರ್ಜಾ ಅವರ ನಟನೆ ನೋಡಿ ಕೆಲವು ಆಡಿಯೆನ್ಸ್ ನಗ್ತಾಯಿದ್ದಾರೆ. ಇಂಥ ಸಿನಿಮಾನೂ ಮಾಡ್ತಾರಾ ಅಂತ ತಲೆ ನೋವು ಬಂದು ಬಿಡುತ್ತದೆ. ಜನಗಳಿಗೆ ಮೋಸ ಮಾಡುವುದನ್ನು ಮೊದಲು ನಿಲ್ಲಿಸಿ. ಟಿಕೆಟ್ ಬುಕ್ ಆಗದಿದ್ದರೂ, ಟೀಮ್ನವವರೇ 200 ಶೋಗಳನ್ನು ಬುಕ್ ಮಾಡಿಸ್ತಿದ್ದಾರೆ ಎಂದು ಥಿಯೇಟರ್ನವ್ರು ಹೇಳಿದ್ರು. ಹೊರ ರಾಜ್ಯಗಳಲ್ಲಿ ಕನ್ನಡದ ಮಾನ ಮರ್ಯಾದೆ ಕಳೀತಿದ್ದೀರಿ. ಅವರೇನೋ ಕೆಜಿಎಫ್, ಕಾಂತಾರ ಸಿನಿಮಾ ಮಾಡಿದ್ದಾರೆ. ನೀವು ಈ ಥರ ಪಾತ್ರ ಮಾಡಿದ್ರೆ ಯಾರು ನೋಡ್ತಾರೆ?" ಎಂದು ಬೇಸರ ಹೊರಹಾಕಿದ್ದಾರೆ.
ಹೀಗೆ ಹೇಳಬಾರದಿತ್ತು ಕ್ಷಮಿಸಿ ಎಂದ ಸುಧಾಕರ್..
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ, ಧ್ರುವ ಸರ್ಕಾ ಅವರ ಅಭಿಮಾನಿಗಳ ಕಣ್ಣು ಕೆಂಪಾಗಿದೆ. ಬಳಿಕ ಇದೇ ಸುಧಾಕರ್ ಕಡೆಯಿಂದ ಮತ್ತೊಂದು ವಿಡಿಯೋ ಹೊರಬಿದ್ದಿದೆ. "ಬೆಳಗ್ಗೆ ನಾನೊಂದು ವಿಡಿಯೋ ಮಾಡಿದ್ದೆ. ಅದರಲ್ಲಿ ಕೆಲವೊಂದು ವಿಚಾರಗಳನ್ನು ಹೇಳಬಾರದಿತ್ತು. ಹೇಳಿದ್ದೇನೆ. ಅದು ಧ್ರುವ ಸರ್ಜಾ ಸರ್ ಫ್ಯಾನ್ಸ್ಗೆ ಹರ್ಟ್ ಆಗಿದೆ. ಹಾಗಾಗಿ ಅವರ ಫ್ಯಾನ್ಸ್ಗೆ ಮತ್ತು ಧ್ರುವ ಸರ್ಜಾ ಅವರಿಗೆ ನನ್ನ ಕಡೆಯಿಂದ ಸಾರಿ. ರಿವ್ಯೂವ್ ಹೇಳೋ ರೈಟ್ಸ್ ಇದೆ. ಆದರೆ, ಕೆಲವೊಂದಿಷ್ಟು ವಿಚಾರ ಹೇಳಬಾರದಿತ್ತು" ಎಂದಿದ್ದಾರೆ ಸುಧಾಕರ್ ಗೌಡ.