ಸೈನೈಡ್ ಪ್ರೀಕ್ವೆಲ್: 30 ವರ್ಷದ ಸಂಶೋಧನೆಯ ನಂತರ ಸಿದ್ಧವಾಗಿದೆ ಚಿತ್ರಕಥೆ, ಏಕಕಾಲಕ್ಕೆ ವೆಬ್‌ಸರಣಿ, ಸಿನಿಮಾ ಕನಸು ಹೊತ್ತ ನಿರ್ದೇಶಕ
Cyanide Movie Prequel: ಸೈನೈಡ್ ಸಿನಿಮಾ ಮೂಲಕ ಎಲ್‌ಟಿಟಿಇ ಹೋರಾಟಗಾರರ ಕಥೆಯನ್ನು ಕನ್ನಡಕ್ಕೆ ತಂದಿದ್ದ ನಿರ್ದೇಶಕ ಎಎಂಆರ್ ರಮೇಶ್ ಇದೀಗ ಅದೇ ಸಿನಿಮಾದ ಪ್ರಿಕ್ವೆಲ್ (ಹಿಂದಿನ ಭಾಗ) ಕೆಲಸ ಶುರು ಮಾಡಿದ್ದಾರೆ. 30 ವರ್ಷಗಳ ಅವಿರತ ಶ್ರಮದಿಂದ ರೂಪುಗೊಂಡ ಕಥೆಯನ್ನು ಅವರು' ಎಚ್‌ಟಿ ಕನ್ನಡ' ಜೊತೆಗೆ ಹಂಚಿಕೊಂಡಿದ್ದಾರೆ.
ಸೈನೈಡ್ ಸಿನಿಮಾ ಪ್ರಿಕ್ವೇಲ್: ಕನ್ನಡ ಸಿನಿಪ್ರಿಯರು ಎಂದಿಗೂ ಮರೆಯಲು ಸಾಧ್ಯವಿಲ್ಲದ ಸಿನಿಮಾ 'ಸೈನೈಡ್'. 2006 ರಲ್ಲಿ ತೆರೆಕಂಡ ಸಿನಿಮಾದಲ್ಲಿ ಮಾಳವಿಕ, ತಾರಾ, ಅವಿನಾಶ್, ರವಿ ಕಾಳೆ ಸೇರಿ ಹಲವರ ಅಭಿನಯವನ್ನು ಇಂದಿಗೂ ಚಿತ್ರರಸಿಕರು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ರಾಜೀವ್ ಗಾಂಧಿ ಅವರನ್ನು ಕೊಂದು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಎಲ್‌ಟಿಟಿಇ ಹೋರಾಟಗಾರರ ಕೊನೆಗಾಲದ ಬದುಕು ಕಟ್ಟಿಕೊಟ್ಟಿದ್ದ ಸಿನಿಮಾ ಅದು. ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುವ ಚಿತ್ರಕಥೆ, ಭಯೋತ್ಪಾದಕರ ಹಿಡಿತದಲ್ಲಿ ನಲುಗುವ ಸಾಮಾನ್ಯರು, ಹಣದಾಸೆಗೆ ಅಕ್ರಮ ಎಸಗುವ ಆಸೆಬುರುಕರು, ಹೀಗೆ ಒಂದು ಹೋರಾಟದ ಸುತ್ತ ಹೆಣೆದುಕೊಂಡು ಹಲವು ಬದುಕುಗಳನ್ನು ಸಿನಿಮಾ ಭಾಷೆಯಲ್ಲಿ ಎಎಂಆರ್ ರಮೇಶ್ ಯಶಸ್ವಿಯಾಗಿ ಬಿಂಬಿಸಿದ್ದರು.
ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದ ಈ ಸಿನಿಮಾ ವಿದೇಶಗಳಲ್ಲೂ ಸದ್ದು ಮಾಡಿತ್ತು. ರಾಜೀವ್ ಹತ್ಯೆಗೆ ಮೊದಲು ಏನೆಲ್ಲಾ ಆಯಿತು ಎನ್ನುವುದನ್ನು ನಿರ್ದೇಶಕ ಎಎಂಆರ್ ರಮೇಶ್ 'ಸೈನೈಡ್' ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದರು. ಇದೀಗ ಅದೇ ಸಿನಿಮಾದ ಪ್ರಿಕ್ವೇಲ್ ತೆರೆಗೆ ತರಲು ನಿರ್ದೇಶಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ರಾಜೀವ್ ಗಾಂಧಿ ಹತ್ಯೆಗೆ ಮೊದಲಿನ ಬೆಳವಣಿಗೆಗಳು, ಎಲ್‌ಟಿಟಿಇ ಉಗ್ರರ ಹೋರಾಟ, ಶ್ರೀಲಂಕಾದಲ್ಲಿ ಬೆಳವಣಿಗೆಗಳು ಮತ್ತು ಆ ಕಾಲದ ಜಾಗತಿಕ ವಿದ್ಯಮಾನಗಳ ಬಗ್ಗೆ ಸುದೀರ್ಘ 30 ವರ್ಷಗಳ ಅಧ್ಯಯನ ಮಾಡಿದ್ದಾರೆ. ಸೈನೈಡ್ ಸಿನಿಮಾದ ಪ್ರಿಕ್ವೆಲ್‌ಗಾಗಿ ಮಾಡಿದ ಸಿದ್ಧತೆ ಕುರಿತು ನಿರ್ದೇಶಕರು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣಕ್ಕೆ ನೀಡಿದ ಎಕ್ಸ್‌ಕ್ಲೂಸಿವ್ ವಿವರ ಇಲ್ಲಿದೆ.
ಪ್ರಶ್ನೆ: ಸೈನೈಡ್ ಪ್ರಿಕ್ವೆಲ್ ಸಿನಿಮಾದ ಮಹತ್ವ ಏನು?
ಉತ್ತರ: ಸೈನೈಡ್ ಸಿನಿಮಾ ಬಿಡುಗಡೆ ಆಗಿ ಹದಿನೆಂಟು ವರ್ಷ ಆಯಿತು. ಮುಂಗಾರು ಮಳೆ, ದುನಿಯಾ ಹಾಗೂ ಸೈನೈಡ್ ಆ ವರ್ಷ ಹಿಟ್ ಆದ ಹಾಗೂ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡ ಚಿತ್ರಗಳು. ಹದಿನೆಂಟು ವರ್ಷಗಳ ನಂತರ ಗಣೇಶ್ ಅವರು ಕೃಷ್ಣಂ ಪ್ರಣಯ ಸಖಿ, ದುನಿಯಾ ವಿಜಿ ಅವರು ಭೀಮ ಸಿನಿಮಾ ಮೂಲಕ ಹಿಟ್ ಕೊಟ್ಟಿದ್ದಾರೆ. ಈಗ ನನ್ನ ಕಡೆಯಿಂದ ಮಾತ್ರ ಬಾಕಿ ಇದೆ, ಅದು ಸೈನೈಡ್ ಪ್ರೀಕ್ವೆಲ್ ಮೂಲಕ ಸಾಧ್ಯವಾಗಲಿದೆ. ಅದಕ್ಕೂ ಮುಂಚೆ ಸೈನೈಡ್ ಸಿನಿಮಾದ ರೀ ರಿಲೀಸ್ ಆಗುತ್ತದೆ. ಇವತ್ತಿನ ತಂತ್ರಜ್ಞಾನಕ್ಕೆ ಅಪ್ ಗ್ರೇಡ್ ಆಗಿ, ಆ ಸಿನಿಮಾದ ಬಿಡುಗಡೆ ಮಾಡುತ್ತಿದ್ದೇನೆ. ಆ ನಂತರ ಬರುವುದೇ ಸೈನೈಡ್ ಪ್ರೀಕ್ವೆಲ್.
ಈ ಹಿಂದಿನ ಸಿನಿಮಾದಲ್ಲಿ ರಾಜೀವ್ ಗಾಂಧಿ ಹತ್ಯೆ ನಂತರದ 90 ದಿನಗಳ ವಿವರಗಳು ಇದ್ದವು. ಶಿವರಾಸನ್ ಮತ್ತು ಕೆಲ ಎಲ್‌ಟಿಟಿಇ ಸಂಗಡಿಗರು ಬೆಂಗಳೂರಿನ ಕೋಣನಕುಂಟೆಯಲ್ಲಿ ಸಾಯ್ತಾರೆ. ಆದರೆ ಈ ಹಂತಕರು ಭಾರತಕ್ಕೆ ಬರುವುದು ಮೇ ತಿಂಗಳ ಒಂದನೇ ತಾರೀಖು. ಅವರು ಎಲ್ಲಿಂದ, ಹೇಗೆ ಬಂದರು? ಎಲ್ಲಿದ್ದರು? ಅವರ ತಯಾರಿ ಹೇಗಿತ್ತು? ಇವೆಲ್ಲದರ ಜೊತೆಗೆ ಪೊಲೀಸರು, ಸಿಬಿಐ ಹೀಗೆ ಯಾವುದೇ ತನಿಖಾ ಸಂಸ್ಥೆ ಬಳಿ ಇಲ್ಲದ ಎಕ್ಸ್ ಕ್ಲೂಸಿವ್ ವಿವರಗಳನ್ನು ಜನರ ಮುಂದೆ ತರಲಿದ್ದೇನೆ.
ಪ್ರಶ್ನೆ: ನಿಮ್ಮ ಸಿದ್ಧತೆಯ ವೇಳೆ ತಿಳಿದು ಬಂದ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಳ್ಳಲು ಸಾಧ್ಯವೇ?
ಉತ್ತರ: ಒಂದು ಸಣ್ಣ ಉದಾಹರಣೆ ಹೇಳ್ತೀನಿ. ಹರಿಬಾಬು ಅನ್ನೋ ಕ್ಯಾಮೆರಾಮ್ಯಾನ್ ಧನು ಹಾಗೂ ಇತರ ಹಂತಕರ ಫೋಟೋಗಳನ್ನು ಹಿಡಿದಿರುತ್ತಾನೆ. ರಾಜೀವ್ ಗಾಂಧಿ ಹತ್ಯೆಯ ವೇಳೆ ಅವನೂ ಸತ್ತುಹೋಗುತ್ತಾನೆ. ಅವನ ಕ್ಯಾಮೆರಾದಲ್ಲಿ ಕಂಡುಬಂದಿರುವಂತೆ ಧನು ಹಣೆಯಲ್ಲಿ ಏನೂ ಹಚ್ಚಿರುವುದಿಲ್ಲ. ಆದರೆ ಹತ್ಯೆಯ ನಂತರದಲ್ಲಿ ಆಕೆಯ ಶವದ ಹಣೆಯಲ್ಲಿ ಬೊಟ್ಟಿರುತ್ತದೆ. ಅದನ್ನು ಇಟ್ಟವರು ಯಾರು? ಅಷ್ಟೇ ಅಲ್ಲ, ಬಾಂಬ್ ಬ್ಲಾಸ್ಟ್ ಆದ ನಂತರವೂ ಆ ವ್ಯಕ್ತಿ ರಾಜೀವ್ ಗಾಂಧಿ ತೀರಿಕೊಂಡರೋ ಇಲ್ಲವೋ ಎಂದು ಹತ್ಯೆಯ ಸ್ಥಳಕ್ಕೆ ತೆರಳಿ ಖಾತ್ರಿ ಮಾಡಿಕೊಂಡು ಹಿಂತಿರುಗುತ್ತಾನೆ. ಆ ವ್ಯಕ್ತಿಯ ಪ್ರಸ್ತಾವ ನಿಮಗೆ ಯಾವ ತನಿಖೆ ವರದಿಯಲ್ಲೂ ಸಿಗಲ್ಲ. ಅಂಥ ಹೇರಳವಾದ ಎಕ್ಸ್ ಕ್ಲೂಸಿವ್ ಡೀಟೇಲ್ಸ್ ಸೈನೈಡ್ ಪ್ರೀಕ್ವೆಲ್‌ನಲ್ಲಿ ಇರಲಿದೆ.
ಪ್ರಶ್ನೆ: ಈ ಸಿನಿಮಾ ಸಿದ್ಧತೆಗಾಗಿ ಎಷ್ಟು ವರ್ಷ ಬೇಕಾಯಿತು? ಎಷ್ಟು ಖರ್ಚಾಯಿತು?
ಉತ್ತರ: ಈ ವೆಬ್ ಸರಣಿ- ಸಿನಿಮಾಗಾಗಿ ನಾನು ಮೂವತ್ತು ವರ್ಷ ಎತ್ತಿಟ್ಟಿದ್ದೇನೆ. ಕೋಟಿಗಟ್ಟಲೆ ಹಣ ಸುರಿದು, ಮಾಹಿತಿ- ವಿವರ ಕಲೆ ಹಾಕಿ, ವಿವಿಧ ಭಾಷೆಗಳಲ್ಲಿ ಚಿತ್ರಕಥೆ (ಸ್ಕ್ರಿಪ್ಟ್), ಸಂಭಾಷಣೆ (ಡೈಲಾಗ್) ಸಿದ್ಧಪಡಿಸಿದ್ದೇನೆ. ಇದು ಒಬ್ಬ ವ್ಯಕ್ತಿ ತನ್ನ ಜೀವತಾವಧಿಯ ಬಹು ದೊಡ್ಡ ಸಮಯ ಮುಡಿಪಿಟ್ಟು ಮಾಡಿರುವ ಸಂಶೋಧನೆ ಆಧಾರಿತ ಸಿನಿಮಾ- ವೆಬ್ ಸರಣಿ ಆಗಲಿದೆ. ಇದುವರೆಗೆ ಯಾವ ಲೈಬ್ರರಿಯಲ್ಲೂ ನೋಡಲಿಕ್ಕೆ, ಓದಲಿಕ್ಕೆ ಸಿಗದ ಎಲ್‌ಟಿಟಿಇ ಪ್ರಭಾಕರನ್ ಮಾಹಿತಿಗಳು ನನ್ನ ಬಳಿ ಇವೆ. ಮಾಹಿತಿ ಸಂಗ್ರಹಕ್ಕಾಗಿ 6 ಬಾರಿ ಶ್ರೀಲಂಕಾಗೆ ಹೋಗಿದ್ದೀನಿ. ಚದುರಿ ಹೋಗಿರುವ ಎಲ್‌ಟಿಟಿ ಸದಸ್ಯರ ಸಂದರ್ಶನ ಮಾಡಲೆಂದು ಬ್ರಿಟನ್, ಕೆನಡ, ಅಮೆರಿಕ, ಸಿಂಗಾಪೂರ, ಮಲೇಷಿಯಾ, ಡೆನ್ಮಾರ್ಕ್, ಜರ್ಮನಿ, ನಾರ್ವೆ ಹೀಗೆ ನಾನಾ ದೇಶಗಳಿಗೆ ಭೇಟಿ ನೀಡಿದ್ದೆ. ಎಲ್‌ಟಿಟಿಇ ಸರ್ವೋಚ್ಛ ನಾಯಕನಾಗಿದ್ದ ಪ್ರಭಾಕರನ್ ಅವರ ಅಣ್ಣ ಮನೋಹರನ್ ಅವರನ್ನು ಮಾತನಾಡಿಸಿದ್ದೇನೆ.
ಪ್ರಶ್ನೆ: ನಿಮ್ಮ ಸಂಶೋಧನೆಯಲ್ಲಿ ತಿಳಿದು ಬಂದ ಮುಖ್ಯ ಅಂಶಗಳೇನು?
ಉತ್ತರ: ರಾಜೀವ್ ಗಾಂಧಿ ಹತ್ಯೆಯ ತನಿಖೆಯಲ್ಲಿ ಇದ್ದ ಕಾರ್ತಿಕೇಯನ್ ಸೇರಿದಂತೆ ಹಲವು ತನಿಖಾಧಿಕಾರಿಗಳು, ಆರೋಪಿಗಳು ಹಾಗೂ ಅಪರಾಧಿಗಳನ್ನೂ ಸಂದರ್ಶನ ಮಾಡಿದ್ದೇನೆ. ಮಾನವ ಇತಿಹಾಸದಲ್ಲಿಯೇ ರಾಜೀವ್ ಗಾಂಧೀ ಹತ್ಯೆ ಪ್ರಕರಣ ಒಂದು ಮಾದರಿಯಾಗಿ ಉಳಿಯುತ್ತದೆ. ಏಕೆಂದರೆ, ಅದು ಮಾನವ ಬಾಂಬ್ ಮೂಲಕ ಆದ ಮೊದಲ ಹತ್ಯೆ. ಆ ಘಟನೆ ನಡೆದ ದಿನ ಪೊಲೀಸರು ಕಾರ್ಪೆಟ್ ಕೆಳಗೆ, ಅಲ್ಲಿ- ಇಲ್ಲಿ ಹೀಗೆ ಬಾಂಬ್ ಎಲ್ಲಿ ಇಡಲಾಗಿತ್ತು ಎಂಬುದನ್ನು ಹುಡುಕಾಡಿದ್ದರು. ಮಾನವ ಬಾಂಬ್ ಎಂಬ ಪರಿಕಲ್ಪನೆಯೇ ಅಲ್ಲಿ ತನಕ ಇರಲಿಲ್ಲ. ಆ ನಂತರದಲ್ಲಿ ಅದೇ ಮಾದರಿ (ಮೋಡಸ್ ಆಫ್ ಅಪರೆಂಡಿ) ಬಳಸಿಕೊಂಡು ವಿಶ್ವದಾದ್ಯಂತ ವಿವಿಧ ಭಯೋತ್ಪಾದನಾ ಸಂಘಟನೆಗಳು ದಾಳಿ ಮಾಡಿದವು.
ಎಲ್‌ಟಿಟಿಇ ಸಂಘಟನೆ ಹೇಗೆ ಕೆಲಸ ಮಾಡುತ್ತಿತ್ತು. ಅವರ ಯೋಜನೆಗಳು ಹೇಗಿರುತ್ತಿದ್ದವು, ಅದನ್ನು ಹೇಗೆ ಜಾರಿಗೆ ತರುತ್ತಿದ್ದರು, ಎಲ್‌ಟಿಟಿಇ ಮಾಡಿದ ಪ್ರಮುಖ ದಾಳಿಗಳು, ಅಲ್ಲಿನ ಸಂಘಟನೆ ಹೇಗೆ ರೂಪುಗೊಂಡಿತ್ತು, ಪ್ರಭಾಕರನ್ ಬೆಳೆದು ಬಂದ ಪರಿ, ಆತನ ತಂಡದ ಪ್ರಮುಖ ಸದಸ್ಯರು ಹೀಗೆ ಅನೇಕ ವಿವರಗಳು ಇರಲಿವೆ. ಈ ಎಲ್ಲವೂ 33 ವರ್ಷಗಳ ಹಿಂದೆ ನಡೆದಂಥವು. ಒಂದು ತಲೆಮಾರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಅಷ್ಟೇ ಅಲ್ಲ, ಅಂದಿನ ತಲೆಮಾರಿಗೇ ಈ ಮಾಹಿತಿಗಳು ಗೊತ್ತಿಲ್ಲ. ಅದರ ಇಂಚಿಂಚು ಮಾಹಿತಿಯನ್ನು ದೃಶ್ಯ ರೂಪದಲ್ಲಿ ತೆರೆಯ ಮೇಲೆ ತರಬೇಕು ಎಂಬುದು ನನ್ನ ಮಹತ್ವಾಕಾಂಕ್ಷೆ. ಇದಕ್ಕಾಗಿ ನಾನು ಹಣ, ಶ್ರಮ ಎಲ್ಲವನ್ನೂ ಹಾಕಿದ್ದೇನೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕೆಂದರೆ, ಎಷ್ಟೋ ಸಲ ನನ್ನ ಪ್ರಾಣವನ್ನೂ ಲೆಕ್ಕಿಸದೆ ಮಾಹಿತಿ ಹೆಕ್ಕಿ ತೆಗೆದಿದ್ದೇನೆ.
ಪ್ರಶ್ನೆ: ಹೊಸ ಸಿನಿಮಾ, ವೆಬ್ ಸರಣಿಗೆ ತಂಡ ಆಯ್ಕೆಯಾಗಿದೆಯೇ?
ಉತ್ತರ: ಇದು ಭಾರತದ ವಿವಿಧ ಭಾಷೆಗಳು ಸೇರಿ ವಿದೇಶೀ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ. ಸಿನಿಮಾ-ವೆಬ್ ಸೀರೀಸ್‌ಗೆ ಭಾಷೆಯ ಹಂಗಿಲ್ಲ. ಇದಕ್ಕಾಗಿ ವಿಜಯ್ ಮಿಲ್ಟೋನ್ ಅವರನ್ನು ಛಾಯಾಗ್ರಾಹಕರಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ಅವರ ಜೊತೆಗೆ ಮಾತನಾಡಬೇಕಿದೆ. ಶಿವರಾಸನ್ ಪಾತ್ರಕ್ಕೆ ನವಾಜುದ್ದೀನ್ ಸಿದ್ದಿಕಿ ಸೂಕ್ತರಾಗುತ್ತಾರೆ ಅನ್ನೋದು ನನ್ನ ಅಭಿಪ್ರಾಯ. ರಾಜೀವ್ ಗಾಂಧಿ ಹಾಗೂ ಕಾರ್ತಿಕೇಯನ್ ಪಾತ್ರಕ್ಕೆ ಅದ್ಭುತ ಕಲಾವಿದರನ್ನು ಗುರುತು ಮಾಡಿಕೊಂಡಿದ್ದೇನೆ. ಮೊದಲಿಗೆ ಸಿನಿಮಾ ಬಂದುಬಿಡುತ್ತದೆ. ಆ ನಂತರ ವೆಬ್ ಸರಣಿಯನ್ನು ತರುವ ಆಲೋಚನೆ ಇದೆ. ಸುಮ್ಮನೆ ಊಹಿಸಿಕೊಂಡು ನೋಡಿ, ಇಷ್ಟು ದೊಡ್ಡ ಕ್ಯಾನ್ವಾಸಿನ ಚಲನಚಿತ್ರಕ್ಕೆ ಖಂಡಿತಾ ಬಜೆಟ್ ಕೂಡ ಬೇಕು. ಉದಯ್ ಮೆಹ್ತಾರಂಥ ನಿರ್ಮಾಪಕರು ಕೈ ಜೋಡಿಸಿದರೆ ಇದರ ರೀಚ್ ಹಿರಿದಾಗುತ್ತದೆ. ಸೈನೈಡ್ ಪ್ರೀಕ್ವೆಲ್ ಟ್ರೇಲರ್‌ಅನ್ನು ನವೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಾಡಿಸುವ ಉದ್ದೇಶ ಇದೆ.
ಪ್ರಶ್ನೆ: ನೀವು ಸಂಗ್ರಹಿಸಿರುವ ಅಪರೂಪದ ಮಾಹಿತಿ ಯಾವುದಾದರೂ ಇದ್ದರೆ ಹಂಚಿಕೊಳ್ಳಬಹುದೇ?
ಉತ್ತರ: ಎಲ್‌ಟಿಟಿಇ ಹೋರಾಟಗಾರ ಶಿವರಾಸನ್ ಬೆಲ್ಟ್ ಬಾಂಬ್ ಎಕ್ಸ್‌ಪರ್ಟ್ ಅಲ್ಲ. ಇನ್ನು ಅವನೊಬ್ಬನನ್ನು ಬಿಟ್ಟು ಉಳಿದವರಲ್ಲಿ ಯಾರಿಗೂ ತಾವು ಯಾರನ್ನು ಕೊಲ್ಲಲು ಬಂದಿದ್ದೇವೆ ಎಂಬುದೇ ಗೊತ್ತಿರಲಿಲ್ಲ. ಈ ಬೆಲ್ಟ್ ಬಾಂಬ್ ಎಕ್ಸ್‌ಪರ್ಟ್ ಬೇರೆಯವನೇ ಇದ್ದ. ಅವನು ರಾಜೀವ್ ಗಾಂಧಿ ಹತ್ಯೆಯ ಬಳಿಕವೂ ಅಷ್ಟೇ ಯಾಕೆ, ಶಿವರಾಸನ್ ಸಾವಿನ ನಂತರವೂ ಭಾರತದಲ್ಲೇ ಇದ್ದ. ಆ ನಂತರದಲ್ಲಿ ಶ್ರೀಲಂಕಾಗೆ ತೆರಳಿದೆ. ಬಾಂಬ್ ಸ್ಫೋಟದ ನಂತರ ಧನುವಿನ ಹಣೆಯ ಮೇಲಿನ ಬೊಟ್ಟಿಗೂ ಅವನಿಗೂ ಸಂಬಂಧ ಇದೆ. ಅದರ ಬಗ್ಗೆ ಯಾವುದೇ ಆರೋಪ ಪಟ್ಟಿಯಲ್ಲಿಯೂ (ಚಾರ್ಜ್‌ಶೀಟ್) ಮಾಹಿತಿ ಇಲ್ಲ. ನಾನು ಹಲವು ಅಪರೂಪದ ಮಾಹಿತಿ ಸಂಗ್ರಹಿಸಿರುವ ಬಗ್ಗೆ ಸ್ವತಃ ಕಾರ್ತಿಕೇಯನ್ ಖುಷಿಪಟ್ಟಿದ್ದರು. ಇಡೀ ಜಗತ್ತಿಗೆ ಆ ಸಿನಿಮಾ ತೋರಿಸಬೇಕಿದೆ. ಎಎಂಆರ್ ಪ್ರೊಡಕ್ಷನ್ ಜೊತೆಗೆ ಒಳ್ಳೆ ಅಭಿರುಚಿಯ, ಗಟ್ಟಿ ಗುಂಡಿಗೆಯ, ಹೆಸರು ಇರುವಂಥ ಮತ್ತೊಂದು ನಿರ್ಮಾಣ ಸಂಸ್ಥೆ ಇದ್ದಲ್ಲಿ ಈ ಸಿನಿಮಾ ಹಾಗೂ ವೆಬ್ ಸೀರೀಸ್ ತುಂಬ ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಬಲ್ಲದು. ಸಾಕಷ್ಟು ಹಣವನ್ನೂ ಮಾಡುತ್ತದೆ.
ಪ್ರಶ್ನೆ: ನಿಮಗೆ ಎಲ್‌ಟಿಟಿಇ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?
ಉತ್ತರ: ರಾಜೀವ್ ಗಾಂಧಿ ಹತ್ಯೆಯಾದಾಗ ನಾನು ಚೆನ್ನೈ ನಗರದ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಓದುತ್ತಿದ್ದೆ. ಗಾಂಧಿ ಹತ್ಯೆಯ ನಂತರ ಆ ಸ್ಥಳಕ್ಕೆ ಹೋಗಿ ಕಳೇಬರ ನೋಡಿ ಬಂದಿದ್ದೆ. ರಾಜೀವ್ ಗಾಂಧಿಯನ್ನು ನೋಡಲೆಂದು ಹೋಗುವಾಗ ಪತ್ರಕರ್ತ ಎಂದು ಸುಳ್ಳು ಹೇಳಿದ್ದೆ. ಇದೇ ಸುಳ್ಳನ್ನು ಎಲ್‌ಟಿಟಿಇ ಹೋರಾಟಗಾರ ಶಿವರಾಸನ್ ಸಹ ಹೇಳಿದ್ದ ಎನ್ನುವುದು ನಂತರ ತಿಳಿದುಬಂತು. ರಾಜೀವ್ ಹತ್ಯೆ ಮಾಡಿದವರು ಸುಳ್ಳು ಹೇಳಿ ಬೆಂಗಳೂರಿನಲ್ಲಿ ಅಡಗಿಕೊಡಿದ್ದದು ರಂಗನಾಥ್-ಮೃದುಲ ಅವರ ಮನೆಗಳಲ್ಲಿ. ಇವರಿಬ್ಬರೂ ನನ್ನ ಪರಿಚಿತರೇ. ಕೆಂಪಯ್ಯ ಅವರ ಒಡನಾಟದಿಂದ ಹಲವು ಮಾಹಿತಿ ತಿಳಿಯಿತು. ಮುಂದಿನ ದಿನಗಳಲ್ಲಿ ಇದು ನನಗೆ ಆಸಕ್ತಿಯಾಗಿ ಬೆಳೆಯಿತು. ಅಧ್ಯಯನ ಮುಂದುವರಿಸಿದೆ.
ಪ್ರಶ್ನೆ: ‘ಫ್ಯಾಮಿಲಿ ಮ್ಯಾನ್’ ವೆಬ್ ಸರಣಿ ನೋಡಿದ್ದೀರಾ? ಅದರಲ್ಲಿಯೂ ಎಲ್‌ಟಿಟಿಇ ಬಗ್ಗೆ ಸಾಕಷ್ಟು ಬಂದಿದೆ
ಉತ್ತರ: ಇದು ಒಳ್ಳೆಯ ಪ್ರಶ್ನೆ. ನಾನು 'ಪ್ಯಾಮಿಲಿ ಮ್ಯಾನ್" ನೋಡಿದ್ದೇನೆ. ಅದರಲ್ಲಿ ಕಲ್ಪನೆ ಮತ್ತು ಉತ್ಪ್ರೇಕ್ಷೆಯೇ ಹೆಚ್ಚು. ಶೇಕಡ ಒಂದರಷ್ಟು ಸಹ ವಾಸ್ತವ ಸಂಗತಿಗಳು ಬಂದಿಲ್ಲ. ನನ್ನ ಬಳಿ ಮೂರ್ನಾಲ್ಕು ಸಿನಿಮಾಗಳಿಗೆ ಆಗುವಷ್ಟು ಚಿತ್ರಕಥೆ-ಸಂಭಾಷಣೆ ಸಿದ್ಧವಾಗಿದೆ. ಇದಕ್ಕಾಗಿ ಎಲ್‌ಟಿಟಿಇ ನಾಯಕರು, ಭಾರತೀಯ ಶಾಂತಿಪಾಲನಾ ಪಡೆಯಲ್ಲಿ (ಐಪಿಕೆಎಫ್ - Indian Army Peace Keeping Force - IPKF) ಕೆಲಸ ಮಾಡಿದ್ದ ಸೇನಾಧಿಕಾರಿಗಳನ್ನು, ತನಿಖಾಧಿಕಾರಿಗಳನ್ನು ಸಂದರ್ಶಿಸಿದ್ದೇನೆ. ಸಿನಿ ವೃತ್ತಿಪರನಾಗಿ ಅಷ್ಟೇ ಅಲ್ಲ; ಪತ್ರಕರ್ತನ ಪ್ರವೃತ್ತಿಯಿಂದ ಮಾಹಿತಿ ಸಂಗ್ರಹಿಸಿದ್ದೇನೆ. ಇದೊಂದು ಅಪರೂಪದ ದಾಖಲೆ ಆಗಲಿದೆ.
ಎಎಂಆರ್ ರಮೇಶ್ ಪರಿಚಯ
ನಿರ್ದೇಶಕ ಎಎಂಆರ್ ರಮೇಶ್ ಸಿನಿಮಾಗಳು ಅಂದರೆ ಸಿಗ್ನೇಚರ್ ಹಾಕಿದಂತೆ ಇರುವಂಥವು. ಸೈನೈಡ್, ಮಿಂಚಿನ ಓಟ, ಅಟ್ಟಹಾಸ, ಗೇಮ್ ಈ ಸಿನಿಮಾಗಳನ್ನು ನೋಡಿದವರಿಗೆ ಈ ಮೇಲಿನ ಮಾತುಗಳು ಹೆಚ್ಚು ಅರ್ಥವಾಗುತ್ತವೆ. ಅವರ ಸಿನಿಮಾಗಳು ತಮಿಳಿನಲ್ಲೂ ಹೆಚ್ಚು ಸದ್ದು- ಸುದ್ದಿ ಮಾಡಿವೆ. ಅಟ್ಟಹಾಸ ಸಿನಿಮಾದಲ್ಲಿ ರಮೇಶ್ ಪಾತ್ರವೊಂದನ್ನು ಮಾಡಿದ್ದಾರೆ. ಎಲ್‌ಟಿಟಿಇ ಬಗ್ಗೆ ಅವರದು ತಲಸ್ಪರ್ಶಿ ಅಧ್ಯಯನ. ಆ ವಿಷಯದ ಬಗ್ಗೆ 10 ಸಿನಿಮಾ ಮಾಡುವಷ್ಟು ಕಂಟೆಂಟ್, ಐದಾರು ಸೀಸನ್ ವೆಬ್ ಸೀರೀಸ್ ಮಾಡುವಷ್ಟು ವಿಷಯ ಸಂಗ್ರಹವಾಗಿದೆ. ಹಲವು ಸಿನಿಮಾಗಳ ಪ್ರೊಡಕ್ಷನ್ ಸಹ ಅವರದೇ ಬ್ಯಾನರಿನಲ್ಲಿ ಮಾಡಿದ್ದರಿಂದ ಆರ್ಥಿಕವಾಗಿ ಹಲವು ಬಾರಿ ಪೆಟ್ಟು ತಿಂದು, ಚೇತರಿಸಿಕೊಂಡು ಈಗ ಮತ್ತೆ ಸಿನಿಮಾ- ವೆಬ್ ಸೀರೀಸ್ ನಿರ್ಮಾಣಕ್ಕೆ ಸಜ್ಜಾಗುತ್ತಿದ್ದಾರೆ. ಅವರಿಗೆ ಈಗ ಹೆಗಲಾಗಿ ನಿಲ್ಲಬಲ್ಲ ನಿರ್ಮಾಪಕರ ಅಗತ್ಯವಿದೆ. ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ.