‘ಸುದೀಪ್ ಜತೆಗಿದ್ದಿದ್ರೆ ದರ್ಶನ್‌ಗೆ ಇಂಥ ಗತಿ ಬರುತ್ತಿರಲಿಲ್ಲ, ದರ್ಶನ್‌ನ ಸರ್ಕಲ್ಲೇ ಅವನನ್ನ ಹಾಳು ಮಾಡ್ತು!’; ಹಿರಿಯ ಪತ್ರಕರ್ತ
ಸರಿಯಾಗಿ 8 ವರ್ಷಗಳ ಹಿಂದೆ ದರ್ಶನ್ ಮತ್ತು ಸುದೀಪ್ ಜೋಡಿಯ ನಡುವಿನ ಸ್ನೇಹ ಬಿರುಕುಬಿಟ್ಟಿತ್ತು. ಅಲ್ಲಿಂದ ಇಲ್ಲಿಯವರೆಗೂ ಅದು ಸರಿಯಾಗುವ ಯಾವ ಲಕ್ಷಣಗಳೂ ಗೋಚರಿಸಿಲ್ಲ. ಇದೀಗ ಇದೇ ಕಿಚ್ಚ ಮತ್ತು ದರ್ಶನ್ ಸ್ನೇಹ ಹೇಗಿತ್ತು, ಹೇಗಾಯ್ತು ಎಂಬ ಬಗ್ಗೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
Darshan Kichcha Sudeep Friendship: ಸ್ಯಾಂಡಲ್‌ವುಡ್‌ನಲ್ಲಿ ಕುಚಿಕು ಗೆಳೆಯರ ಪಟ್ಟಿಯನ್ನು ನೋಡುತ್ತ ಹೋದರೆ, ಆ ಪಟ್ಟಿಯಲ್ಲಿ ಸಾಕಷ್ಟು ಸಿನಿಮಾ ಸ್ನೇಹಿತರ ಹೆಸರು ಇಂದಿಗೂ ಅಚ್ಚಳಿಯದೇ ಉಳಿದುಕೊಂಡಿದೆ. ಚಿತ್ರೋದ್ಯಮದಲ್ಲಿ ಬೆಸ್ಟ್ ಸ್ನೇಹಿತರು ಇವರೇ ಎಂದು ಸಾಕಷ್ಟು ಜನರ ಉದಾಹರಣೆಗಳನ್ನೂ ಕೊಡಬಹುದು. ಆ ಸಾಲಿನಲ್ಲಿ ಕೆಲ ವರ್ಷಗಳ ಹಿಂದೆ ಮುಂಚೂಣಿಯಲ್ಲಿದ್ದ ಹೆಸರು ಸುದೀಪ್ ಮತ್ತು ದರ್ಶನ್ ಅವರದ್ದು. ಎಲ್ಲೇ ಹೋದರೂ ಒಟ್ಟಿಗೇ ಹೋಗುವುದು, ಒಟ್ಟಿಗೆ ತಮ್ಮ ತಮ್ಮ ಸಿನಿಮಾಗಳನ್ನು ಪ್ರಮೋಷನ್ ಮಾಡುತ್ತ, ಏಳು ಬೀಳುಗಳಿಗೆ ಹೆಗಲಾಗುತ್ತ, ಸ್ನೇಹ ಅಂದ್ರೆ ಈ ಜೋಡಿಯದ್ದು ಅನ್ನೋ ರೀತಿಯಲ್ಲಿದ್ದರು. ಆದರೆ, ಅದ್ಯಾವ ಗಳಿಗೆಯೋ, ಆ ಸ್ನೇಹ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ!
ಸರಿಯಾಗಿ 8 ವರ್ಷಗಳ ಹಿಂದೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಎನಿಸಿಕೊಂಡಿದ್ದ ದರ್ಶನ್ ಮತ್ತು ಸುದೀಪ್ ಜೋಡಿಯ ನಡುವಿನ ಸ್ನೇಹ ಬಿರುಕುಬಿಟ್ಟಿತ್ತು. ಅಲ್ಲಿಂದ ಇಲ್ಲಿಯವರೆಗೂ ಅದು ಸರಿಯಾಗುವ ಯಾವ ಲಕ್ಷಣಗಳೂ ಗೋಚರಿಸಿಲ್ಲ. ಅಭಿಮಾನಿ ಬಳಗ ಈ ಜೋಡಿ ಒಂದಾಗಲಿ ಎಂದು ಬಯಸಿದರೂ, ಅವರ ಪ್ರಾರ್ಥನೆಯೂ ಕೈಗೂಡಲಿಲ್ಲ. ಇದೀಗ ಇದೇ ಕಿಚ್ಚ ಸುದೀಪ್ ಮತ್ತು ದರ್ಶನ್ ತೂಗುದೀಪ ಸ್ನೇಹ ಹೇಗಿತ್ತು, ಹೇಗಾಯ್ತು ಎಂಬ ಬಗ್ಗೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ತಮ್ಮ ಅಭಿಪ್ರಾಯವನ್ನು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
"ಆವತ್ತೊಂದು ದಿನ ಸುದೀಪ್ ಮೈಸೂರಿನಲ್ಲಿದ್ದರು. ಅಚಾನಕ್ ಆಗಿ ನನಗೆ ಕಾಲ್ ಮಾಡಿ, ಅಣ್ಣ ಎಲ್ಲಿದ್ದೀರಾ ಎಂದು ಕೇಳಿದರು. ನಾನೂ ಸಹ ಕೆಲಸದ ಮೇಲೆ ಮೈಸೂರಿಗೆ ಹೋಗಿದ್ದೆ. ಬನ್ನಿ ಅಂದ್ರು, ಸೀದಾ ಅವರ ಬಳಿ ಹೋದೆ. ಕಾರ್‌ನಲ್ಲಿ ಕುಳಿತುಕೊಂಡೆ, ಎಲ್ಲಿಗೆ ಹೋಗ್ತಿದ್ದೀವಿ ಅಂತ ನಾನು ಕೇಳಲೂ ಇಲ್ಲ, ಅವರೂ ಹೇಳಲಿಲ್ಲ. ಒಂದು ಗಂಟೆ ಪ್ರಯಾಣ ಮಾಡಿದ ಬಳಿಕ, ಆ ಗಾಡಿ ನಿಂತಿದ್ದು ಆಡಿಟೋರಿಯಂನಲ್ಲಿ. ಅದು ಇದ್ದದ್ದು ಹಾಸನದಲ್ಲಿ. ನಿಗ್ರೋ ಜಾನಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಅವರಿಗೆ ಆರ್ಥಿಕ ಸಹಾಯದ ಸಲುವಾಗಿ ಈ ಕಾರ್ಯಕ್ರಮ"
ಇಬ್ಬರ ಡಾನ್ಸ್ ನೋಡಿ, ಅದೇನ್ ಸ್ನೇಹ ಎಂದಿದ್ದೆ..
"ನಾನೂ ವೇದಿಕೆ ಮೇಲೆ ಇದ್ದೆ. ಅತ್ತ ಕಡೆಯಿಂದ ದರ್ಶನ್ ಸಹ ಬಂದ್ರು. ನಾನು ಅವರನ್ನು ನೋಡಿ, ಇದೆಲ್ಲ ಪ್ಲಾನಾ? ನನಗೆ ಹೇಳದೇ ಇಷ್ಟೆಲ್ಲ ಆಟಾ ಆಡ್ತಿದ್ದಾರಲ್ಲ? ಎಂದುಕೊಂಡೆ. ಅಷ್ಟೊತ್ತಿಗೆ ಸುದೀಪ್‌ನ ನೋಡಿ ಅಪ್ಪಿಕೊಂಡು, ಒಟ್ಟಿಗೆ ವೇದಿಕೆ ಮೇಲೆ ಸಖತ್ ಡಾನ್ಸ್ ಮಾಡಿದರು. ಕುಚಿಕು ಕುಚಿಕು ಡಾನ್ಸ್ ಮಾಡಿದ್ದು ಆ ಕಾರ್ಯಕ್ರಮದಲ್ಲಿನದ್ದು. ಇಂದಿಗೂ ಎಲ್ಲ ಕಡೆ ಅದೇ ವಿಡಿಯೋ ಓಡಾಡ್ತಿರುತ್ತೆ. ಅಯ್ಯೋ ಅದೇನ್ ಸ್ನೇಹ, ತುಂಬ ಅದ್ಬುತವಾದ ಸ್ನೇಹ. ಅದ್ಯಾರ ಕಣ್ಣು ಬಿತ್ತೋ ಈಗಲೂ ನನಗೆ ಗೊತ್ತಿಲ್ಲ. ಅಷ್ಟೊಳ್ಳೆಯ ಸ್ನೇಹ ಅದ್ಹೇಗೆ ಮುರಿದುಬಿತ್ತೋ? ಬಿಡುವಿದ್ದರೆ ಸಾಕು ಇಬ್ಬರೂ ಒಟ್ಟಿಗೆ ಇರುತ್ತಾರೆ"
ಇವರಿಬ್ಬರ ಜಗಳದ ಲಾಭ ಪಡೆಯುವವರಿದ್ದಾರೆ..
ಒಂದು ದಿನ ಸಂದರ್ಶನಕ್ಕೆಂದು ಸುದೀಪ್ ಅವರನ್ನು ನಾನು ಕರೆದುಕೊಂಡು ಹೊರಟಿದ್ದೆ. ಆಗ, ಇಬ್ಬರೂ ದೂರ ದೂರ ಆಗಿದ್ದರ ಬಗ್ಗೆ ಸುದೀಪ್ ಬಳಿ ಕೇಳಿದೆ. ನೀವಿಬ್ಬರೂ ದೂರ ಆದರೆ, ಲಾಭ ಪಡೆಯುವವರು ಬೇರೆಯವರಿದ್ದಾರೆ. ಹಾಗಾಗಿ ನೀವಿಬ್ಬರೂ ಒಂದಾಗಬೇಕು ಎಂದೆ. ಇದರಿಂದ ಇಂಡಸ್ಟ್ರಿಗೆ ನಷ್ಟ ಆಗಿದೆ ಎಂದೆ. ಅದಕ್ಕೆ ಉತ್ತರಿಸಿದ ಸುದೀಪ್, ಅಣ್ಣ ದಯವಿಟ್ಟು ಸುಮ್ಮನಿದ್ದುಬಿಡಿ, ಈ ವಿಚಾರಕ್ಕೆ ಬರಬೇಡಿ. ಅಲ್ಲಿಗೆ ನಾನು ಸೈಲೆಂಟ್ ಆದೆ. ಆ ಬಗ್ಗೆ ಮಾತನಾಡಲು ಹೋಗಲಿಲ್ಲ.
ಸುದೀಪ್ ಜತೆ ಇದ್ದಿದ್ದರೆ..
"ಸದ್ಯ ದರ್ಶನ್ ಜತೆಗೆ ಸುದೀಪ್ ಇದ್ದಿದ್ದರೆ, ದರ್ಶನ್‌ಗೆ ಈ ರೀತಿ ಇರುತ್ತಿರಲಿಲ್ಲ. ಅಂದಿನ ಸ್ನೇಹ ಮುಂದುವರಿದಿದ್ದರೆ, ದರ್ಶನ್‌ಗೆ ಈ ಸ್ಥಿತಿ ಬರುತ್ತಿರಲಿಲ್ಲ. ಅವರಿಬ್ಬರ ಸ್ನೇಹವನ್ನು ನಾನು ಕಣ್ಣಾರೆ ನೋಡಿರೋದ್ರಿಂದ ಹೇಳ್ತಿದ್ದೀನಿ. ದರ್ಶನ್ ಅವರ ಸರ್ಕಲ್ ಇದೆಯಲ್ಲ. ಅದೇ ಅವನನ್ನು ಹಾಳು ಮಾಡ್ತು. ಈ ದುರಂತಕ್ಕೆ ಅವನ ಜತೆಗಿನವರೇ ಕಾರಣ" ಎಂದು ಗಣೇಶ್ ಕಾಸರಗೋಡು ಕಲಾಮಾಧ್ಯಮ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ವಿಭಾಗ