ಪುಷ್ಪ 2 ಚಿತ್ರಕ್ಕೆ ರೆಡ್ ಕಾರ್ಪೆಟ್, ಮಲ್ಟಿಫ್ಲೆಕ್ಸ್‌ನಲ್ಲಿನ ‘ನಾ ನಿನ್ನ ಬಿಡಲಾರೆ’ ಚಿತ್ರದ ಸ್ಟ್ಯಾಂಡಿಗಳು ಮಾಯ, ಚಿತ್ರತಂಡದ ಆಕ್ರೋಶ
Dec 01, 2024 10:50 AM IST
ಮಲ್ಟಿಫ್ಲೆಕ್ಸ್‌ನಲ್ಲಿನ ‘ನಾ ನಿನ್ನ ಬಿಡಲಾರೆ’ ಚಿತ್ರದ ಸ್ಯಾಂಡಿಗಳು ಮಾಯ, ಚಿತ್ರತಂಡದ ಆಕ್ರೋಶ
- Naa Ninna Bidalaare: ನಾ ನಿನ್ನ ಬಿಡಲಾರೆ ಸಿನಿಮಾಕ್ಕೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಅನ್ಯಾಯವಾಗಿದೆ. ಸಿನಿಮಾ ಬಿಡುಗಡೆಯಾಗಿದ್ದರೂ, ಆ ಚಿತ್ರದ ಸ್ಟ್ಯಾಂಡಿಗಳನ್ನು ಬಚ್ಚಿಟ್ಟು, ಕಳ್ಳಾಟವಾಡಿ, ಚಿತ್ರತಂಡದ ಕೈಯಲ್ಲಿ ಸಿಕ್ಕಿಹಾಕಿಕೊಂಡಿದೆ. ಬಳಿಕ ಕ್ಷಮೆ ಕೇಳಿ, ಸ್ಟ್ಯಾಂಡಿಗಳನ್ನು ಎಲ್ಲರಿಗೂ ಕಾಣುವಂತೆ ಇರಿಸಿದ್ದಾರೆ.
Naa Ninna Bidalare: ಪಂಚಿ ಮತ್ತು ಭಾರತಿ ಅಂಬಾಲಿ ನಾಯಕ-ನಾಯಕಿಯಾಗಿ ನಟಿಸಿರುವ ‘ನಾ ನಿನ್ನ ಬಿಡಲಾರೆ’ ಚಿತ್ರವು ಶುಕ್ರವಾರ (ನ.29) ಬಿಡುಗಡೆಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ, ಚಿತ್ರಕ್ಕೆ ಮಲ್ಟಿಪ್ಲೆಕ್ಸ್‌ಗಳಿಂದ ದೊಡ್ಡ ಮಟ್ಟದಲ್ಲಿ ಅನ್ಯಾಯ ಆಗುತ್ತಿದೆ ಎಂದು ನಾಯಕಿ ಮತ್ತು ಕಾರ್ಯಕಾರಿ ನಿರ್ಮಾಪಕಿ ಭಾರತಿ ಅಂಬಾಲಿ ಸಿಡಿದೆದ್ದಿದ್ದಾರೆ.
ಶನಿವಾರ ಚಿತ್ರತಂಡದವರು ಕೆಲವು ಮೈಸೂರು ಮತ್ತು ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್‌ಗಳಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ಪ್ರಚಾರಕ್ಕೆಂದು ಕಳಿಸಿಕೊಟ್ಟ ಸ್ಟಾಂಡಿಗಳು ಪತ್ತೆಯೇ ಇಲ್ಲ. ಮುಂದಿನ ವಾರ ಬಿಡುಗಡೆಯಾಗುತ್ತಿರುವ ತೆಲುಗು ಚಿತ್ರ ‘ಪುಷ್ಪ 2’ದ ಸ್ಟಾಂಡಿಗಳನ್ನು ಮುಂದಿಟ್ಟು ಪ್ರಚಾರಕ್ಕೆ ಅನುವು ಮಾಡಿಕೊಟ್ಟರೆ, ಕನ್ನಡ ಚಿತ್ರಗಳ ಪ್ರಚಾರವೇ ಆಗುತ್ತಿಲ್ಲ. ಇದರಿಂದ ಚಿತ್ರದ ಬಗ್ಗೆ ಮಾಹಿತಿ ಇಲ್ಲದವರು, ಬೇರೆ ಚಿತ್ರಗಳಿಗೆ ಟಿಕೆಟ್ ಖರೀದಿಸಿ ನೋಡಿದ್ದಾರಂತೆ. ಇದರಿಂದ ಕನ್ನಡ ಚಿತ್ರಗಳಿಗೆ ದೊಡ್ಡ ಅನ್ಯಾಯವಾಗುತ್ತಿದೆ ಎಂದು ಭಾರತಿ ಅಂಬಾಲಿ ಆರೋಪಿಸಿದ್ದಾರೆ.
ಪುಷ್ಪ 2 ಚಿತ್ರಕ್ಕೆ ರೆಡ್ ಕಾರ್ಪೆಟ್
ಈ ಕುರಿತು ಮಾತನಾಡಿರುವ ಅವರು, ‘ಕನ್ನಡ ನೆಲದಲ್ಲೇ ಕನ್ನಡಕ್ಕೆ ಅನ್ಯಾಯವಾಗುತ್ತಿದೆ. ಮೈಸೂರಿನಲ್ಲಿ ‘ಪುಷ್ಪ-2’ಗಾಗಿ ಈಗಿನಿಂದಲೇ ರೆಡ್ ಕಾರ್ಪೆಟ್ ಹಾಕಲಾಗುತ್ತಿದೆ. ಕನ್ನಡ ಚಿತ್ರದ ಜಾಹೀರಾತು ಸ್ಟ್ಯಾಂಡಿ ಮಾಲ್ ನಿಂದ ಎತ್ತಂಗಡಿಯಾಗಿದೆ. ನಾವ ಸ್ಟಾಂಡಿಗಳನ್ನು ಚಿತ್ರಮಂದಿರಗಳಲ್ಲಿ ಕಳುಹಿಸುವುದು ಪ್ರದರ್ಶನಕ್ಕಾಗಿ. ಅದನ್ನು ನೋಡಿ ಜನ ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಲಿ ಎಂಬ ಕಾರಣಕ್ಕಾಗಿ. ಆದರೆ, ನಾವು ಕಳುಹಿಸಿದ ಸ್ಟಾಂಡಿಗಳನ್ನು ಒಳಗೆ ಎತ್ತಿಟ್ಟು, ಮುಂದಿನ ವಾರ ಬಿಡುಡೆಯಾಗುವ ಪರಭಾಷಾ ಚಿತ್ರಗಳನ್ನು ದೊಡ್ಡದಾಗಿ ಪ್ರದರ್ಶನ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
ನಮ್ಮ ನೆಲದಲ್ಲೇ ಕನ್ನಡ ಚಿತ್ರಗಳಿಗೆ ಅನ್ಯಾಯ
ಯಾವುದೇ ಕನ್ನಡ ಚಿತ್ರಗಳಿಲ್ಲದಿದ್ದರೆ, ಬೇರೆ ಭಾಷೆಯ ಚಿತ್ರಗಳಿಗೆ ಪ್ರಚಾರ ಕೊಡಲಿ ಎನ್ನುವ ಅವರು, ‘ಕನ್ನಡ ಚಿತ್ರಗಳಿದ್ದೂ, ಈ ರೀತಿ ತಾರತಮ್ಯ ಮಾಡಿದರೆ ಹೇಗೆ? ಅದೇ ಕಾರಣಕ್ಕೆ ಬೇರೆ ಭಾಷೆಯ ಚಿತ್ರಗಳು ಬೆಳೆಯುತ್ತಿವೆ ಮತ್ತು ಕನ್ನಡ ಚಿತ್ರಗಳು ಬೆಳೆಯುತ್ತಿಲ್ಲ. ನಮ್ಮ ನೆಲದಲ್ಲೇ ನಮಗೆ ಅನ್ಯಾಯವಾಗುತ್ತಿದ್ದು, ಕೇಳೋರು ಯಾರೂ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಚಿತ್ರಕ್ಕೆ ಮಾಲ್‍ನಲ್ಲಿ ಒಂದು ಅಂಗುಲದ ಜಾಗ ಎಂದರೆ ಹೇಗೆ?’ ಎಂದು ಪ್ರಶ್ನಿಸಿದ್ದಾರೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರತಿಭಟನೆ
ಯಾವಾಗ ಭಾರತಿ ಅಂಬಾಲಿ ಮತ್ತು ‘ನಾ ನಿನ್ನ ಬಿಡಲಾರೆ’ ಚಿತ್ರತಂಡದವರು ಹೋಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರತಿಭಟನೆ ನಡೆಸಿದರೋ, ಆಗ ಮಲ್ಟಿಫ್ಲೆಕ್ಸ್‌ನವರು ಒಳಗಿಟ್ಟಿದ್ದ ಸ್ಟಾಂಡಿಗಳನ್ನು ತಂದು ಮತ್ತೆ ಮುಂದೆ ಪ್ರದರ್ಶನಕ್ಕೆ ಇಟ್ಟಿದ್ದಾರೆ.
‘ನಾ ನಿನ್ನ ಬಿಡಲಾರೆ’ ಒಂದು ಹಾರರ್ ಚಿತ್ರವಾಗಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ನವೀನ್. ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ, ಅಂಬಾಲಿ ಭಾರತಿ ನಾಯಕಿಯಾಗಿ ನಟಿಸುವ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಚಿತ್ರದಲ್ಲಿ ಭಾರತಿ ಅಂಬಾಲಿ ಮತ್ತು ಪಂಚಾಕ್ಷರಿ ಜೊತೆಗೆ ‘ಸಿದ್ಲಿಂಗು’ ಶ್ರೀಧರ್, ಮಹಾಂತೇಶ್, ಸೀರುಂಡೆ ರಘು ಮುಂತಾದವರು ನಟಿಸಿದ್ದಾರೆ. ಎಂ.ಎಸ್. ತ್ಯಾಗರಾಜ್ ಸಂಗೀತ ಈ ಚಿತ್ರಕ್ಕಿದೆ.
ಅಂಬಾಲಿ ಭಾರತಿಗೆ ಜೊತೆಯಾಗಿ ಪಂಚಿ, ಸೀರುಂಡೆ ರಘು, ಕೆ.ಸ್. ಶ್ರೀಧರ್, ಮಹಂತೇಶ್, ಶ್ರೀನಿವಾಸ್ ಪ್ರಭು, ಹರಿಣಿ, ಲಕ್ಷ್ಮೀ ಸಿದ್ದಯ್ಯ, ಮಂಜುಳಾರೆಡ್ಡಿ ಮುಖ್ಯಭೂಮಿಕೆಯಲ್ಲಿದ್ದಾರೆ. ವೀರೇಶ್ ಎಸ್. ಛಾಯಾಗ್ರಹಣ, ಎಮ್.ಎಸ್.ತ್ಯಾಗರಾಜು ಸಂಗೀತವಿರೋ ಈ ಚಿತ್ರಕ್ಕೆ ದೀಪಕ್ ಜಿ.ಎಸ್ ಸಂಕಲನವಿದೆ. ಹೊಸ ನಿರ್ದೇಶಕ, ಹೊಸ ನಿರ್ಮಾಪಕಿ, ಹೊಸ ನಾಯಕಿ ಹೀಗೆ ಬಹುತೇಕ ಹೊಸಬರೇ ಕೂಡಿ ಹಳೇ ತಂತ್ರಜ್ಞರ ಜೊತೆಗೆ ಮಾಡಿರೋ ಈ ಸಿನಿಮಾ ನ. 29ರಂದು ರಾಜ್ಯಾದ್ಯಂತ ಬಿಡುಗಡೆ ಆಗಿತ್ತು.
ವರದಿ: ಚೇತನ್ ನಾಡಿಗೇರ್