logo
ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌ ತೂಗುದೀಪ್‌ಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಮುಂದಾದ ಕರ್ನಾಟಕ ಪೊಲೀಸರು

ದರ್ಶನ್‌ ತೂಗುದೀಪ್‌ಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಮುಂದಾದ ಕರ್ನಾಟಕ ಪೊಲೀಸರು

Rakshitha Sowmya HT Kannada

Nov 16, 2024 09:37 AM IST

google News

ದರ್ಶನ್‌ ತೂಗುದೀಪ್‌ಗೆ ಜಾಮೀನು; ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಮುಂದಾದ ಪೊಲೀಸರು

  • ನಟ ದರ್ಶನ್‌ ತೂಗುದೀಪ್‌ಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಪೊಲೀಸರ ಪ್ರಸ್ತಾವನೆಗೆ ರಾಜ್ಯ ಗೃಹ ಇಲಾಖೆ ಕೂಡಾ ಸಮ್ಮತಿ ಸೂಚಿಸಿದೆ. ಮುಂದಿನ ವಾರ ಅರ್ಜಿ ಸಲ್ಲಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಶುಕ್ರವಾರ ತಿಳಿಸಿದ್ದಾರೆ.

ದರ್ಶನ್‌ ತೂಗುದೀಪ್‌ಗೆ ಜಾಮೀನು; ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಮುಂದಾದ ಪೊಲೀಸರು
ದರ್ಶನ್‌ ತೂಗುದೀಪ್‌ಗೆ ಜಾಮೀನು; ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಮುಂದಾದ ಪೊಲೀಸರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ ತೂಗುದೀಪ್‌ 6 ವಾರಗಳ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. ಬೆಂಗಳೂರಿನ ಬಿಜಿಎಸ್‌ ಅಪೋಲೋ ಆಸ್ಪತ್ರೆಯಲ್ಲಿ ದರ್ಶನ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ದರ್ಶನ್‌ಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಪೋಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸುತ್ತಿರುವುದಾಗಿ ತಿಳಿದುಬಂದಿದೆ.

ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ

ದರ್ಶನ್ ಜಾಮೀನು ರದ್ದು ಕೋರಿ ಮೇಲ್ಮನವಿ ಸಲ್ಲಿಸುವ ಪೊಲೀಸರ ಪ್ರಸ್ತಾವನೆಗೆ ರಾಜ್ಯ ಗೃಹ ಇಲಾಖೆ ಕೂಡಾ ಸಮ್ಮತಿ ಸೂಚಿಸಿದ್ದು, ಮುಂದಿನ ವಾರ ಅರ್ಜಿ ಸಲ್ಲಿಸಲಾಗುವುದು. ಹಿರಿಯ ವಕೀಲ ವಿಎನ್ ರಘುಪತಿ ಅವರನ್ನು ರಾಜ್ಯ ಪೊಲೀಸರ ಪರ ವಾದ ಮಂಡಿಸಲು ನೇಮಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಶುಕ್ರವಾರ ತಿಳಿಸಿದ್ದಾರೆ. ನಟ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್, 6 ವಾರಗಳ ಕಾಲ ವೈದ್ಯಕೀಯ ಕಾರಣಗಳಿಗಾಗಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. 131 ದಿನಗಳ ಜೈಲುವಾಸದ ನಂತ್ ದರ್ಶನ್‌ ಅಕ್ಟೋಬರ್‌ 30 ರಂದು ಬಳ್ಳಾರಿ ಜೈಲಿನಿಂದ ರಿಲೀಸ್‌ ಆಗಿ ಹೊರಬಂದಿದ್ದರು. ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್‌ ಅವರನ್ನು ಬೆಂಗಳೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ದರ್ಶನ್‌ ಇನ್ನೂ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಜರಿ ಮಾಡದಿದ್ದರೆ ಪಾರ್ಶ್ವವಾಯು ಬರುವ ಸಾಧ್ಯತೆ ಇದೆ ಎಂದು ವಾದ ಮಂಡಿಸಿದ್ದ ವಕೀಲರು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಪೊಲೀಸರಿಗೆ ಒಪ್ಪಿಗೆ ಸೂಚಿಸಿರುವುದಾಗಿ ಗೃಹ ಸಚಿವ ಜಿ ಪರಮೇಶ್ವರ ಬುಧವಾರ ತಿಳಿಸಿದ್ದಾರೆ. ದರ್ಶನ್ ಅರೆಸ್ಟ್‌ ಆದಾಗಿನಿಂದ ಅವರು ಸಲ್ಲಿಸುತ್ತಿದ್ದ ಬೇಲ್‌ ಅರ್ಜಿಯನ್ನು ಅನೇಕ ಬಾರಿ ವಜಾ ಮಾಡಲಾಗಿತ್ತು. ಆದರೆ ಕ್ರಮೇಣ ಅವರಿಗೆ ಬೆನ್ನು ನೋವು ಹೆಚ್ಚಾದ ಕಾರಣ ಅವರು ಚಿಕಿತ್ಸೆ ಪಡೆಯುತ್ತಿದ್ದ ಎಲ್ಲಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬೇಲ್‌ಗೆ ಮನವಿ ಮಾಡಲಾಗಿತ್ತು. ಹೈಕೋರ್ಟ್‌ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯಲ್ಲಿ ದರ್ಶನ್‌ಗೆ ಕೂಡಲೇ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಪಾರ್ಶ್ವವಾಯು ಬರುವ ಸಾಧ್ಯತೆ ಇದೆ ಎಂದು ದರ್ಶನ್ ಪರ ವಕೀಲರು ವಾದ ಮಾಡಿದ್ದರು.

ಜಾಮೀನು ದೊರೆತು 15 ದಿನಗಳಾದರೂ ಶಸ್ತ್ರಚಿಕಿತ್ಸೆಗೆ ಒಳಗಾಗದ ದರ್ಶನ್‌

ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದ ನಂತರ ನ್ಯಾಯಾಲಯ ದರ್ಶನ್ ಅವರು ಬಯಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡಿತ್ತು. ಅವರಿಗೆ ನೀಡುತ್ತಿರುವ ವೈದ್ಯಕೀಯ ಚಿಕಿತ್ಸೆಯ ವಿವರಗಳು ಮತ್ತು ವರದಿಯನ್ನು 7 ದಿನಗಳೊಳಗೆ ಸಲ್ಲಿಸುವಂತೆ ಸೂಚಿಸಿತ್ತು. ಆದರೆ ಜಾಮೀನು ಪಡೆದು ಹೊರ ಬಂದು 15 ದಿನಗಳಾದರೂ ದರ್ಶನ್‌ ಇನ್ನೂ ಶಸ್ತ್ರಚಿಕಿತ್ಸೆಗೆ ಒಳಗಾಗದ ಕಾರಣ ಪೊಲೀಸರು ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ