logo
ಕನ್ನಡ ಸುದ್ದಿ  /  ಮನರಂಜನೆ  /  ಅದೊಂದು ದೃಶ್ಯ ಚಿತ್ರೀಕರಣ ಮಾಡಿದ್ರೆ ಶಂಕರ್‌ನಾಗ್‌ ಸಾಯುತ್ತಿರಲಿಲ್ವಾ? ಸುಂದರಕಾಂಡ ಸಿನಿಮಾ ಘಟನೆ ನೆನೆದು ಭಾವುಕರಾದ ನಟಿ ಶಿವರಂಜನಿ

ಅದೊಂದು ದೃಶ್ಯ ಚಿತ್ರೀಕರಣ ಮಾಡಿದ್ರೆ ಶಂಕರ್‌ನಾಗ್‌ ಸಾಯುತ್ತಿರಲಿಲ್ವಾ? ಸುಂದರಕಾಂಡ ಸಿನಿಮಾ ಘಟನೆ ನೆನೆದು ಭಾವುಕರಾದ ನಟಿ ಶಿವರಂಜನಿ

Rakshitha Sowmya HT Kannada

Oct 23, 2024 08:32 PM IST

google News

ಶಂಕರ್‌ನಾಗ್‌ ಜೊತೆ ತಾವು ನಟಿಸಿದ್ದ ಸುಂದರಕಾಂಡ ಸಿನಿಮಾ ಕ್ಲೈಮಾಕ್ಸ್‌ ಘಟನೆ ನೆನೆದು ಭಾವುಕರಾದ ನಟಿ ಶಿವರಂಜನಿ

  • ಹಿರಿಯ ನಟಿ ಶಿವರಂಜನಿ, ನಿರ್ದೇಶಕ ರಘುರಾಮ್‌ ಜೊತೆಗಿನ ಸಂದರ್ಶನದಲ್ಲಿ ಶಂಕರ್‌ನಾಗ್‌ ಅವರನ್ನು ನೆನೆದು ಭಾವುಕರಾಗಿದ್ದಾರೆ. ಸುಂದರಕಾಂಡ ಸಿನಿಮಾ ಕ್ಲೈಮಾಕ್ಸ್‌ನಲ್ಲಿ ಅವರು ಸಾಯುವ ದೃಶ್ಯವಿದೆ. ಅದೇ ಅವರ ಜೀವನದ ಕೊನೆಯ ಸೀನ್.‌ ಅದರ ಮರುದಿನವೇ ಶಂಕರ್‌ನಾಗ್‌ ನಿಧನದ ಸುದ್ದಿಯನ್ನು ನಾವು ಕೇಳಿದೆವು ಎಂದು ಅಂದಿನ ಘಟನೆಯನ್ನು ಹಂಚಿಕೊಂಡಿದ್ದಾರೆ.  

ಶಂಕರ್‌ನಾಗ್‌ ಜೊತೆ ತಾವು ನಟಿಸಿದ್ದ ಸುಂದರಕಾಂಡ ಸಿನಿಮಾ ಕ್ಲೈಮಾಕ್ಸ್‌ ಘಟನೆ ನೆನೆದು ಭಾವುಕರಾದ ನಟಿ ಶಿವರಂಜನಿ
ಶಂಕರ್‌ನಾಗ್‌ ಜೊತೆ ತಾವು ನಟಿಸಿದ್ದ ಸುಂದರಕಾಂಡ ಸಿನಿಮಾ ಕ್ಲೈಮಾಕ್ಸ್‌ ಘಟನೆ ನೆನೆದು ಭಾವುಕರಾದ ನಟಿ ಶಿವರಂಜನಿ (PC: Raghuram YouTube Channel)

ಎಸ್‌ಪಿ ಸಾಂಗ್ಲಿಯಾನ ಚಿತ್ರದಲ್ಲಿ ಆಕ್ಷನ್‌, ಹೇರ್‌ಸ್ಟೈಲ್‌ನಿಂದಲೇ ಗಮನ ಸೆಳೆದಿದ್ದ ನಟಿ ಶಿವರಂಜನಿ ಬಹಳ ವರ್ಷಗಳ ನಂತರ ಮತ್ತೆ ಕ್ಯಾಮರಾ ಮುಂದೆ ಬಂದಿದ್ದಾರೆ. ಸ್ಯಾಂಡಲ್‌ವುಡ್‌ ನಿರ್ದೇಶಕ ರಘುರಾಮ್‌ ತಮ್ಮ ಕನಸುಗಳ ಕಾರ್ಖಾನೆ ಯೂಟ್ಯೂಬ್‌ ಚಾನೆಲ್‌ ನೂರೊಂದು ನೆನಪು ಕಾರ್ಯಕ್ರಮದಲ್ಲಿ ಶಿವರಂಜನಿ ಅವರನ್ನು ಇಂಟರ್‌ವ್ಯೂ ಮಾಡಿದ್ದಾರೆ.

ಶಂಕರ್‌ನಾಗ್‌ ಸಾವನ್ನಪ್ಪುವ ಹಿಂದಿನ ದಿನದ ಘಟನೆ ನೆನೆದ ಶಿವರಂಜನಿ

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶಿವರಂಜನಿ, ಮಂಗಳೂರಿನಲ್ಲಿ ಪದವಿ ಪಡೆದರು. ಸ್ಕೂಲ್‌, ಕಾಲೇಜಿನಲ್ಲಿರುವಾಗಲೇ ನಾಟಕ, ಸ್ಪೋರ್ಟ್ಸ್‌ನಲ್ಲಿದ್ದವರು. ವಾಲಿಬಾಲ್‌, ಸಾಫ್ಟ್‌ಬಾಲ್‌, ಕಬಡ್ಡಿಯಲ್ಲಿ ಸಕ್ರಿಯರಾಗಿದ್ದರು. ಸಿನಿಮಾ ಬಗ್ಗೆ ಗಂಧಗಾಳಿ ಗೊತ್ತಿಲ್ಲದಿದ್ದರೂ ಶಿವರಂಜನಿಗೆ ಎಸ್‌ಪಿ ಸಾಂಗ್ಲಿಯಾನ ಚಿತ್ರದಲ್ಲಿ ನಟಿಸುವ ಅವಕಾಶ ದೊರೆಯಿತು. ಅದು ಯಾವ ಸಿನಿಮಾ? ಕಥೆ ಏನು? ಸಂಭಾವನೆ ಎಷ್ಟು ಎಂದು ತಿಳಿಯದೆ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರೆ. ಕೊನೆಗೆ ಅದು ಶಂಕರ್‌ನಾಗ್‌ ಸಿನಿಮಾ ಎಂದು ತಿಳಿದು ಖುಷಿಯಾಗಿದ್ದಾರೆ. ಚಿತ್ರರಂಗದಲ್ಲಿ 2 ವರ್ಷಗಳು ಮಾತ್ರ ಇದ್ದ ಶಿವರಂಜನಿ ಅಷ್ಟು ಕಡಿಮೆ ಸಮಯದಲ್ಲಿ ಸುಮಾರು 17 ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಸಿನಿಜರ್ನಿ ಬಗ್ಗೆ ಹೇಳಿಕೊಂಡ ಶಿವರಂಜನಿ ಶಂಕರ್‌ನಾಗ್‌ ಸಾವನ್ನಪ್ಪಿದ ಹಿಂದಿನ ದಿನ ನಡೆದ ಘಟನೆಯನ್ನು ನೆನೆದು ಭಾವುಕರಾಗಿದ್ದಾರೆ.

ನನಗೆ ಚಿತ್ರರಂಗದ ಬಗ್ಗೆ ಏನೂ ಗೊತ್ತಿರಲಿಲ್ಲ. ಸಿನಿಮಾ ಯಾವುದು? ಯಾವ ದೃಶ್ಯದಲ್ಲಿ ನಟಿಸುತ್ತಿದ್ದೇನೆ? ಕಲಾವಿದರು ಯಾರು ಎಂದು ತಿಳಿಯದೆ ನಾನು ಸಾಂಗ್ಲಿಯಾನ ಚಿತ್ರದಲ್ಲಿ ನಟಿಸಲು ಒಪ್ಪಿದೆ. ನಂತರವಷ್ಟೇ ನಾನು ಶಂಕರ್‌ನಾಗ್‌ ಅವರ ವಿರುದ್ಧ ನಟಿಸುತ್ತಿದ್ದೇನೆ ಎಂದು ತಿಳಿದದ್ದು. ಒಮ್ಮೆ ಶೂಟಿಂಗ್‌ ಬಿಡುವಿನ ನಡುವೆ ನನ್ನನ್ನು ಮಾತನಾಡಿಸಿದ ಶಂಕರ್‌ನಾಗ್‌ ಈ ಸಿನಿಮಾ ಕಥೆ ಏನು ಗೊತ್ತಾ ಎಂದು ಕೇಳಿದರು. ನಾನು ಗೊತ್ತಿಲ್ಲ ಎಂದೆ. ಹಾಗಾದರೂ ಇನ್ಮುಂದೆ ಯಾವುದೇ ಸಿನಿಮಾಗೆ ಆಫರ್‌ ಬಂದರೂ ಸಿನಿಮಾ ಕಥೆ ಕೇಳಬೇಕು, ಕಲಾವಿದರ ಬಗ್ಗೆ ಕೇಳಬೇಕು, ಸಂಭಾವನೆ ಮಾತನಾಡಬೇಕು ಎಂದು ತಿಳಿಸಿಕೊಟ್ಟರು.

ಕ್ಲೈಮಾಕ್ಸ್‌ನಲ್ಲಿ ಆ ದೃಶ್ಯ ಚಿತ್ರೀಕರಿಸಲು ಶಂಕರ್‌ನಾಗ್‌ ಒಪ್ಪಲಿಲ್ಲ

ಎಸ್‌ಪಿ ಸಾಂಗ್ಲಿಯಾನ ನನ್ನ ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲೇ ಜನರು ನನ್ನನ್ನು ಬಹಳ ಇಷ್ಟಪಟ್ಟರು. ಮತ್ತೆ ಶಂಕರ್‌ನಾಗ್‌ ಸರ್‌ ಜೊತೆ ಸುಂದರಕಾಂಡ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆಯಿತು. ಶಂಕರ್‌ನಾಗ್‌ ಕನ್ನಡ ಚಿತ್ರರಂಗದ ದೊಡ್ಡ ಆಸ್ತಿ, ಅವರನ್ನು ಕಳೆದುಕೊಂಡಿರುವುದು ನಿಜಕ್ಕೂ ನಮಗೆ ದೊಡ್ಡ ನಷ್ಟ. ಸುಂದರಕಾಂಡ ಸಿನಿಮಾ ಚಿತ್ರೀಕರಣದ ಕೊನೆಯ ದಿನ, ಆ ಚಿತ್ರದ ಕ್ಲೈಮಾಕ್ಸ್‌ನಲ್ಲಿ ಶಂಕರ್‌ನಾಗ್‌ ಸಾಯುತ್ತಾರೆ. ಆ ದೃಶ್ಯವೇ ಅವರ ಜೀವನದ ಕೊನೆಯ ಶಾಟ್‌ ಆಗಿತ್ತು. ಅದರ ಮರುದಿನವೇ ಶಂಕರ್‌ನಾಗ್‌, ಅಪಘಾತದಲ್ಲಿ ನಿಧನರಾದ ಸುದ್ದಿಯನ್ನು ನಾವು ಕೇಳಿದೆವು. ಅದು ನಿಜಕ್ಕೂ ನಮಗೆಲ್ಲಾ ಇಂದಿಗೂ ಅರಗಿಸಿಕೊಳ್ಳಲಾಗದ ವಿಚಾರ.

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಒಂದು ನಂಬಿಕೆ ಇದೆ. ಯಾವುದೇ ಕಲಾವಿದರ ಸಾವಿನ ದೃಶ್ಯವನ್ನು ಚಿತ್ರೀಕರಿಸಿದ ನಂತರ ಮತ್ತೆ ಆ ವ್ಯಕ್ತಿ ಎದ್ದು ಕುಳಿತು ಸ್ಮೈಲ್‌ ಮಾಡುವ ದೃಶ್ಯವನ್ನು ಚಿತ್ರೀಕರಿಸಲಾಗುತ್ತದೆ. ಹಾಗೇ ಅವರಿಗೆ ದೃಷ್ಟಿ ತೆಗೆಯಲಾಗುತ್ತದೆ. (ಇದನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾವುದಿಲ್ಲ) ಆದರೆ ಸುಂದರಕಾಂಡ ಸಿನಿಮಾದದಲ್ಲಿ ಶಂಕರ್‌ನಾಗ್‌ ಸಾಯುವ ದೃಶ್ಯವನ್ನು ಚಿತ್ರೀಕರಿಸಿದ ನಂತರ ಅವರು ಎದ್ದು ಕುಳಿತು ಸ್ಮೈಲ್‌ ಮಾಡುವ ದೃಶ್ಯ ಚಿತ್ರೀಕರೀಸಲು ಅವರು ಒಪ್ಪಲಿಲ್ಲ. ಏನೋ ಆಗೊಲ್ಲ ಬಿಡಿ , ನನಗೆ ತಡವಾಗುತ್ತಿದೆ ಎಂದು ಅಲ್ಲಿಂದ ಹೊರಟುಹೋದರು. ಅದೇ ಅವರನ್ನು ನಾವು ಕೊನೆಯ ಬಾರಿಗೆ ನೋಡಿದ್ದು ಎಂದು ಶಿವರಂಜನಿ ಅಂದಿನ ಘಟನೆ ನೆನೆದು ಭಾವುಕರಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ