ಪೊಲೀಸ್ ಇಲಾಖೆಗೆ ಸೇರುವುದು ನನ್ನ ಕನಸಾಗಿತ್ತು; 30 ವರ್ಷಗಳ ನಂತರ ಕ್ಯಾಮರಾ ಮುಂದೆ ಬಂದ ಎಸ್‌ಪಿ ಸಾಂಗ್ಲಿಯಾನ ನಟಿ, ಕರಾಟೆ ಕ್ವೀನ್ ಶಿವರಂಜನಿ
ಎಸ್‌ಪಿ ಸಾಂಗ್ಲಿಯಾನ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ನಟಿ ಶಿವರಂಜನಿ ಸದ್ಯಕ್ಕೆ ಪತಿ ಮಕ್ಕಳೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ. ಬಹಳ ದಿನಗಳ ನಂತರ ಶಿವರಂಜನಿ ಕ್ಯಾಮರಾ ಮುಂದೆ ಬಂದಿದ್ದಾರೆ. ಸ್ಯಾಂಡಲ್‌ವುಡ್ ನಿರ್ದೇಶಕ ರಘುರಾಮ್ ತಮ್ಮ ಕನಸುಗಳ ಕಾರ್ಖಾನೆ ಯೂಟ್ಯೂಬ್ ಚಾನೆಲ್‌ನಲ್ಲಿ ಶಿವರಂಜನಿ ಅವರ ಸಂದರ್ಶನ ಮಾಡಿದ್ದಾರೆ.
ಒಂದು ಮುತ್ತಿನಂಥ ಮುತ್ತು.. ಕಪ್ಪೆ ಚಿಪ್ಪಿನಲ್ಲಿ ಇತ್ತು..ಎಸ್‌ಪಿ ಸಾಂಗ್ಲಿಯಾನ ಚಿತ್ರದ ಈ ಹಾಡನ್ನು ಯಾರು ಮರೆಯೋಕೆ ಸಾಧ್ಯ? 1988ರಲ್ಲಿ ತೆರೆ ಕಂಡ ಈ ಸಿನಿಮಾ ಹಾಡು ಇಂದಿಗೂ ಫೇಮಸ್. ಅಂದ ಹಾಗೆ ಈ ಹಾಡಿನಲ್ಲಿ ನಟಿಸಿದ್ದು ಕರಾಟೆ ಕಿಂಗ್ ಶಂಕರ್ ನಾಗ್ ಹಾಗೇ ಕರಾಟೆ ಕ್ವೀನ್ ಶಿವರಂಜನಿ. ಶಂಕರ್‌ನಾಗ್ ಇಂದು ನಮ್ಮೊಂದಿಗೆ ಇಲ್ಲ. ಶಿವರಂಜನಿ ಚಿತ್ರರಂಗದಲ್ಲಿ 2 ವರ್ಷಗಳ ಕಾಲ ಮಾತ್ರ ಮಿಂಚಿ ಮರೆಯಾದರು. ಇದೀಗ ಬಹಳ ವರ್ಷಗಳ ನಂತರ ಶಿವರಂಜನಿ ಮತ್ತೆ ಕ್ಯಾಮರಾ ಮುಂದೆ ಬಂದಿದ್ದಾರೆ.
ಸ್ಯಾಂಡಲ್‌ವುಡ್ ನಿರ್ದೇಶಕ ರಘುರಾಮ್ ತಮ್ಮ ಕನಸುಗಳ ಕಾರ್ಖಾನೆ ಯೂಟ್ಯೂಬ್ ಚಾನೆಲ್‌ನ ನೂರೊಂದು ನೆನಪು ಕಾರ್ಯಕ್ರಮದ ಮೂಲಕ ಶಿವರಂಜನಿ ಅವರನ್ನು ಬಹಳ ವರ್ಷಗಳ ಬಳಿಕ ಮತ್ತೆ ಕ್ಯಾಮರಾ ಮುಂದೆ ಕರೆತಂದಿದ್ದಾರೆ. ಶಿವರಂಜನಿ ಯಾವ ಊರಿನವರು? ಚಿತ್ರರಂಗಕ್ಕೆ ಬಂದಿದ್ದು ಹೇಗೆ? ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ? ಚಿತ್ರರಂಗದಿಂದ ದೂರಾಗಿದ್ದು ಏಕೆ? ಈಗ ಆಕೆ ಎಲ್ಲಿ ನೆಲೆಸಿದ್ದಾರೆ? ಎಲ್ಲಾ ವಿವರ ಇಲ್ಲಿದೆ.
ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದ ಕಿರಣ್‌ಮಯಿ
ಶಿವರಂಜನಿ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ವಿಷ್ಣುಮೂರ್ತಿ ಹಾಗೂ ಸುಮಿತ್ರಾ ದಂಪತಿಯ ನಾಲ್ವರು ಹೆಣ್ಣು ಮಕ್ಕಳಲ್ಲಿ ಮೂರನೆಯವರು ಶಿವರಂಜನಿ. ಇವರ ಮೊದಲ ಹೆಸರು ಕಿರಣ್‌ಮಯಿ. ಎಲ್ಲಾ ಹೆಣ್ಣು ಮಕ್ಕಳನ್ನು ವಿಷ್ಣುಮೂರ್ತಿಯವರು ಗಂಡು ಮಕ್ಕಳಂತೆ ಬೆಳೆಸಿದರು. ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದ ನಂತರ ಪದವಿಗಾಗಿ ಮಂಗಳೂರಿಗೆ ಹೋದ ಕಿರಣ್ ಮಯಿ ಕರಾಟೆ ಸೇರಿದರು. ಸ್ಕೂಲ್‌ನಲ್ಲಿರುವಾಗಲೇ ಡ್ರಾಮಾ, ಸ್ಪೋರ್ಟ್ಸ್‌ನಲ್ಲಿದ್ದ ಕಿರಣ್, ಕಾಲೇಜಿನಲ್ಲಿ ಕೂಡಾ ವಾಲಿಬಾಲ್, ಸಾಫ್ಟ್‌ಬಾಲ್, ಕಬಡ್ಡಿಯಲ್ಲಿ ಸಕ್ರಿಯರಾಗಿದ್ದರು. ಕರಾಟೆ ಕಲಿತು ಬ್ಲಾಕ್ ಬೆಲ್ಟ್ ಪಡೆದರು. ಎನ್‌ಸಿಸಿಗೆ ಸೇರಿಸಿ ಆರ್‌ಡಿ ಕ್ಯಾಂಪ್‌ನಲ್ಲಿ ಇಡೀ ತಂಡವನ್ನು ಮುನ್ನಡೆಸಿದ್ದರು.
ಮಂಗಳೂರಿನಲ್ಲಿ ಬಿಕಾಂ ಪದವಿ ಪಡೆದು ಬೆಂಗಳೂರಿಗೆ ವಾಪಸ್ ಆಗಿ ನ್ಯಾಷನಲ್ ಕಾಲೇಜು ಬಳಿ ಕರಾಟೆ ಅಭ್ಯಾಸ ಮಾಡುತ್ತಿದ್ದ ಶಿವರಂಜನಿಗೆ ಅವರ ಟ್ರೈನರ್ ಸಿನಿಮಾಗೆ ಸೇರಲು ಸಹಾಯ ಮಾಡಿದರು. ಸಿನಿಮಾವೊಂದಕ್ಕೆ ಕರಾಟೆ ಕಲಿತಿರುವ ಹುಡುಗಿಯನ್ನು ಹುಡುಕುತ್ತಿದ್ದಾರೆ ನೀನು ಪ್ರಯತ್ನಿಸಬಹುದು ಎಂದು ಟ್ರೈನರ್ ಹೇಳಿದಾಗ ಏಕೆ ಪ್ರಯತ್ನ ಮಾಡಬಾರದು ಎಂದುಕೊಂಡ ಕಿರಣ್‌ಮಯಿ, ಅಕ್ಕನೊಂದಿಗೆ ಹೋಟೆಲ್‌ವೊಂದಕ್ಕೆ ತೆರಳಿ ಅಲ್ಲಿದ್ದ ಸಿನಿಮಾತಂಡಕ್ಕೆ ಫೋಟೋ ಕೊಟ್ಟು ಬಂದಿದ್ದಾರೆ. ಅದುವರೆಗೂ ಸಿನಿಮಾ ಗಂಧ ಗಾಳಿ ಗೊತ್ತಿಲ್ಲದ ಆಕೆ ತಾನೊಬ್ಬ ದೊಡ್ಡ ನಟಿಯಾಗಿ ಬೆಳೆಯುತ್ತೇನೆ ಎಂಬ ಊಹೆ ಕೂಡಾ ಮಾಡಿರಲಿಲ್ಲವಂತೆ. ನಾನು ಸಿನಿಮಾಗೆ ಆಯ್ಕೆಯಾಗಿದ್ದೇನೆ ಎಂದರೆ ಮನೆಯವರು ಕೂಡಾ ನಂಬಲಿಲ್ಲವಂತೆ. ಕ್ರೀಡಾಪಟುವಾಗಿದ್ದ ಶಿವರಂಜನಿಗೆ ಆರ್ಮಿ ಅಥವಾ ಪೊಲೀಸ್ ಇಲಾಖೆ ಸೇರಬೇಕೆಂಬ ಆಸೆ ಇತ್ತಂತೆ.
ಪೊಲೀಸ್ ಇಲಾಖೆ, ಆರ್ಮಿಗೆ ಸೇರಬೇಕೆಂಬ ಕನಸ್ಸು ಕಂಡಿದ್ದ ಶಿವರಂಜನಿ
ಅಂತೂ ಮೇಕಪ್ ಟೆಸ್ಟ್‌ನಲ್ಲೂ ಪಾಸ್ ಆದ ಕಿರಣ್‌ಮಯಿಗೆ ಚಿತ್ರೀಕರಣಕ್ಕಾಗಿ ಕರೆ ಬಂದಿದೆ. ಯಾವ ಸಿನಿಮಾ? ಕಥೆ ಏನು? ನಾಯಕ ಯಾರು? ಯಾವ ಮಾಹಿತಿಯೂ ಇಲ್ಲದೆ ಕಿರಣ್‌ಮಯಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಮೊದಲ ದಿನವೇ ಆಕೆಗೆ ಜೈಲು ಸೇರುವ ಪಾತ್ರ. ನಟನೆ ಗೊತ್ತಿಲ್ಲದಿದ್ದರೂ ಒಂದೇ ಟೇಕ್‌ನಲ್ಲಿ ಶಾಟ್ ಓಕೆ ಮಾಡಿದ್ದಾರೆ. ನಂತರಷ್ಟೇ ಆಕೆಗೆ ತಾನು ಶಂಕರ್‌ನಾಗ್ ಅವರ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಗೊತ್ತಾಗಿದೆ. ಸಿನಿಮಾ ನಿರ್ದೇಶಕ ಕಿರಣ್‌ಮಯಿ ಎಂಬ ಹೆಸರನ್ನು ಶಿವರಂಜನಿ ಎಂದು ಬದಲಿಸಿದ್ದಾರೆ. ನಿಜ ಜೀವನದಲ್ಲೂ ಆಕೆ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದರಿಂದ ಸಿನಿಮಾದಲ್ಲಿ ನಟಿಸಲು ಕಷ್ಟವಾಗಲಿಲ್ಲ. ಎಲ್ಲಾ ದೃಶ್ಯಗಳು ನೈಜವಾಗಿ ಬಂದಿದೆ. ಸಿನಿಮಾ ಬಿಡುಗಡೆ ಆದಾಗಲಂತೂ ಆಕೆಯ ಆಕ್ಟಿಂಗ್‌ಗೆ ಎಲ್ಲರಿಂದ ಮೆಚ್ಚುಗೆ ದೊರೆತಿದೆ. ಅವರಲ್ಲಕ್ಕಿಂತ ಆಕೆಯ ಹೇರ್‌ಸ್ಟೈಲ್‌ಗೆ ಫಿದಾ ಆಗದವರೇ ಇಲ್ಲ.
ಇದಾದ ನಂತರ ಸುಂದರಕಾಂಡ, ಕೆರಳಿದ ಕೇಸರಿ, ಸಂಘರ್ಷ, ಬೆಳದಿಂಗಳ ಬಾಲೆ ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ಶಿವರಂಜನಿ ನಟಿಸಿದ್ದಾರೆ. ಜೊತೆಗೆ ಒಂದು ತಮಿಳು ಸಿನಿಮಾ ಎರಡು ತೆಲುಗು ಸಿನಿಮಾದಲ್ಲಿ ಆಕೆ ಅಭಿನಯಿಸಿದ್ದಾರೆ. ಶಿವರಂಜನಿ ಚಿತ್ರರಂಗದಲ್ಲಿ ಇದ್ದದ್ದು 2 ವರ್ಷಗಳ ಮಾತ್ರ. ಅಷ್ಟು ಸಮಯದಲ್ಲಿ ಅವರು ಒಟ್ಟು 17 ಸಿನಿಮಾಗಳಲ್ಲಿ ನಟಿಸಿದ್ದಾರೆ. ನಂತರ ಮದುವೆ ಫಿಕ್ಸ್ ಆಗಿದ್ದರಿಂದ ಶಿವರಂಜನಿ ಚಿತ್ರರಂಗ ಬಿಡಬೇಕಾಯ್ತು. ದುಬೈನಲ್ಲಿ ಬಿಸ್ನೆಸ್ ಮಾಡುತ್ತಿದ್ದ ಉಮಾನಾಥ್ ರೈ ಎಂಬುವರನ್ನು ಶಿವರಂಜನಿ ಮದುವೆ ಆಗಿದ್ದಾರೆ. ಈ ದಂಪತಿಗೆ ಆದಿತ್ಯ ಹಾಗೂ ಶಿವಾಂಗಿ ಎಂಬ ಇಬ್ಬರು ಮಕ್ಕಳಿದ್ದಾರೆ. ಸದ್ಯಕ್ಕೆ ಶಿವರಂಜನಿ ಪತಿ, ಮಕ್ಕಳೊಂದಿಗೆ ದುಬೈನಲ್ಲಿ ನೆಲೆಸಿದ್ದಾರೆ. ಆಗ್ಗಾಗ್ಗೆ ಬೆಂಗಳೂರಿಗೆ ಬಂದು ಹೋಗುತ್ತಾರೆ.
ಬಹಳ ದಿನಗಳ ನಂತರ ಶಿವರಂಜನಿ ಅವರನ್ನು ನೋಡಿ, ಸಿನಿಮಾಭಿಮಾನಿಗಳು ಖುಷಿಯಾಗಿದ್ದಾರೆ. ಅವರನ್ನು ಮತ್ತೆ ಕ್ಯಾಮರಾ ಮುಂದೆ ಕರೆ ತಂದ ನಿರ್ದೇಶಕ ರಘುರಾಮ್ ಅವರಿಗೆ ಧನ್ಯವಾದ ಹೇಳುತ್ತಿದ್ದಾರೆ. ಮತ್ತೆ ಶಿವರಂಜನಿ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ.