Akka Anu: ಸೋಷಿಯಲ್ ಮೀಡಿಯಾದಲ್ಲಿ ಅಕ್ಕ ಅನು ಟಾರ್ಗೇಟ್! ಸಮಾಜ ಸೇವಕಿಗೆ ಎಂಟು ತಿಂಗಳಿಂದ ಟ್ರೋಲರ್ ಕೊಟ್ಟ ಕಾಟ ಎಂಥದ್ದು?
Oct 28, 2024 02:50 PM IST
ಮಾಜ ಸೇವಕಿಗೆ ಎಂಟು ತಿಂಗಳಿಂದ ಟ್ರೋಲರ್ ಕೊಟ್ಟ ಕಾಟ ಎಂಥದ್ದು?
- Akka Anu: ಸರ್ಕಾರಿ ಶಾಲೆಗಳನ್ನು ಅಂದಗಾಣಿಸುವ ಅಕ್ಕ ಅನು, ತಮ್ಮ ಸಮಾಜ ಸೇವೆಯ ಮೂಲಕ ನಾಡಿನಾದ್ಯಂತ ಚಿರಪರಿತರು. ತಮ್ಮದೇ ಆದ ಒಂದು ತಂಡ ಕಟ್ಟಿಕೊಂಡು, ಹುಟ್ಟಿದ ಊರನ್ನು ಬಿಟ್ಟು, ರಾಜ್ಯದ ಆಯ್ದ ಸರ್ಕಾರಿ ಶಾಲೆಗಳನ್ನು ಗುರುತಿಸಿ ಅವುಗಳಿಗೆ ಮರು ಜೀವ ತುಂಬುತ್ತಿದ್ದಾರೆ. ಹೀಗಿರುವಾಗ ಇದೇ ಯುವತಿಗೂ ಇದೀಗ ಸೋಷಿಯಲ್ ಮೀಡಿಯಾದಲ್ಲಿ ದುರುಳರು ಕಾಟ ಕೊಟ್ಟಿದ್ದಾರೆ.
Akka Anu: ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕು ಎಂಬ ಕಾರಣಕ್ಕೋ, ಅಥವಾ ಅಲ್ಲಿ ಏನೇ ಮಾಡಿದರೂ ಹೇಳುವವರಿಲ್ಲ, ಕೇಳುವವರಿಲ್ಲ ಎಂಬ ಕಾರಣಕ್ಕೂ, ಲಂಗು ಲಗಾಮಿಲ್ಲ ಅನ್ನೋ ರೀಸನ್‌ಗೋ ಅದರ ದುರ್ಬಳಕೆ ಹೆಚ್ಚಾಗುತ್ತಿದೆ. ತಮ್ಮ ನಿಜ ಮುಖ ಮುಚ್ಚಿಟ್ಟು, ಕೆಟ್ಟ ಕಾಮೆಂಟ್‌ಗಳನ್ನೇ ಹಾಕುತ್ತ ಸೋಷಿಯಲ್ ಮೀಡಿಯಾದಲ್ಲಿ ರಾಜಾರೋಷವಾಗಿದ್ದಾರೆ ಕೆಲವರು. ಇತ್ತೀಚೆಗಷ್ಟೇ ಪವಿತ್ರಾ ಗೌಡ ಅವರಿಗೂ ಇನ್‌ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಮೆಸೆಜ್ ಮಾಡಿದ್ದ ರೇಣುಕಾಸ್ವಾಮಿ ಇದೇ ಕಾರಣಕ್ಕೆ ಹತ್ಯೆಗೊಳಗಾಗಿದ್ದ. ಈಗ ಇದೇ ಪ್ರಕರಣ ಹಸಿಯಾಗಿರುವಾಗಲೇ, ಸಮಾಜ ಸೇವಕಿ ಅಕ್ಕ ಅನು ಅವರಿಗೂ ಇಂಥದ್ದೇ ಸ್ಥಿತಿ ಬಂದಿದೆ!
ಸರ್ಕಾರಿ ಶಾಲೆಗಳನ್ನು ಅಂದಗಾಣಿಸುವ ಅಕ್ಕ ಅನು, ತಮ್ಮ ಸಮಾಜ ಸೇವೆಯ ಮೂಲಕ ನಾಡಿನಾದ್ಯಂತ ಚಿರಪರಿತರು. ತಮ್ಮದೇ ಆದ ಒಂದು ತಂಡ ಕಟ್ಟಿಕೊಂಡು, ಹುಟ್ಟಿದ ಊರನ್ನು ಬಿಟ್ಟು, ರಾಜ್ಯದ ಆಯ್ದ ಸರ್ಕಾರಿ ಶಾಲೆಗಳನ್ನು, ವ್ಯವಸ್ಥೆ ಸರಿಯಲ್ಲ ಶಾಲೆಗಳನ್ನು ಗುರುತಿಸಿ ಅವುಗಳಿಗೆ ಮರು ಜೀವ ತುಂಬುತ್ತಿದ್ದಾರೆ. ತಮ್ಮದೇ ಖರ್ಚಿನಲ್ಲಿ ಬಣ್ಣ ಖರೀದಿಸಿ, ದಾನಿಗಳು ಮುಂದೆ ಬಂದರೆ ಅವರಿಂದಲೂ ಸಹಾಯ ಪಡೆದು, ಭವಿಷ್ಯದ ಪೀಳಿಗೆ ಉದಯಿಸುವ ಶಾಲೆಗಳನ್ನು ಚೆಂದಗಾಣಿಸುತ್ತಿದ್ದಾರೆ.
ಇಂಥ ಈ ಯುವತಿ ಮತ್ತವರ ತಂಡದ ಈ ಕಾರ್ಯವನ್ನು ಸಾಕಷ್ಟು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಟಿವಿ ವಾಹಿನಿಗಳಲ್ಲೂ ಇವರ ಸಾಧನೆಯನ್ನು ರಾಜ್ಯದ ಮಂದಿಗೆ ತೋರಿಸಲಾಗಿದೆ. ಹೀಗಿರುವಾಗಲೇ ಇದೇ ಯುವತಿಗೂ ಇದೀಗ ಸೋಷಿಯಲ್ ಮೀಡಿಯಾದಲ್ಲಿ ದುರುಳರು ಕೆಟ್ಟ ಸಂದೇಶಗಳನ್ನು ಕಳಿಸುವ ಮೂಲಕ ಅವರನ್ನು ಮಾನಸಿಕವಾಗಿ ಕುಗ್ಗಿಸಿದ್ದಾರೆ. ಈಗಾಗಲೇ ತಮ್ಮ ಸೋಷಿಯಲ್ ಮೀಡಿಯಾ ಪುಟಗಳಲ್ಲಿಯೂ ಈ ಬಗ್ಗೆ ನೋವನ್ನು ಹೇಳಿಕೊಂಡಿದ್ದಾರೆ. ಇಷ್ಟಾದರೂ, ಕೆಟ್ಟದಾಗಿ ಟೀಕೆ ಮಾಡುವವರು, ಸುಮ್ಮನಾಗುತ್ತಿಲ್ಲ. ಇದೆಲ್ಲದರಿಂದ ರೋಸಿ ಹೋದ ಅನು, ದೂರನ್ನೂ ನೀಡಿದ್ದಾರೆ. ಕಾಮೆಂಟ್ ಮಾಡಿದವನ ಹುಡುಕಾಟವೂ ಮುಂದುವರಿದಿದೆ.
ಅಷ್ಟಕ್ಕೂ ಆಗಿದ್ದೇನು?
ಈ ಬಗ್ಗೆ ಶಶಿ (@Imshashi) ಎಂಬುವವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. "ಇಲ್ಲೇನು ಫೋಟೋದಲ್ಲಿ ನೋಡ್ತಿದ್ದೀರೋ ಇವನು ವಾಸುದೇವ ಅಂತ. ಕಳೆದ ಏಳರಿಂದ ಎಂಟು ತಿಂಗಳು ಅಕ್ಕ ಅನು ಅವರಿಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ. ಅವರ ವಿಡಿಯೋ ಮತ್ತು ಫೋಟೋಕ್ಕೆ ಏನೆನೋ ಸಾಲುಗಳನ್ನು ಬರೆದು ಅವಮಾನ ಮಾಡೋದು, ಜನರಿಗೆ ನೆಗೆಟಿವಿಟಿ ಬರುವಂತೆ ಮಾಡೋದು ಮಾಡುತ್ತಿದ್ದಾನೆ. ಈ ಬಗ್ಗೆ ಸ್ವತಃ ವಿಡಿಯೋದಲ್ಲಿಯೂ ಅಕ್ಕ ಅನು ಈ ವಿಚಾರ ಪ್ರಸ್ತಾಪಿಸಿದ್ದರು. ನನಗೇನಾದರೂ ಆದ್ರೆ ಇವರೇ ಕಾರಣ ಎಂದೂ ಹೇಳಿದ್ದರು"
"ಕಳೆದ ಐದಾರು ತಿಂಗಳಿಂದ ಆ ವ್ಯಕ್ತಿಗೆ ಅಕ್ಕ ಅನು ಹೇಳುತ್ತಲೇ ಬಂದಿದ್ದಾರೆ. ಆದರೆ ಅವನು ಏನನ್ನೂ ಹೇಳಿರಲಿಲ್ಲ. ಕೊನೆಗೆ ನೋಡೋವಷ್ಟು ನೋಡಿ ಸೈಬರ್ ಕಂಪ್ಲೇಂಟ್ ಮಾಡಿದ್ದಾರೆ. ಕಂಪ್ಲೇಟ್ ಆಗಿದೆ. ನೋಟೀಸ್ ಸಹ ಇಶ್ಯೂ ಆಗಿದೆ. ಎರಡು ಮೂರು ದಿನದಲ್ಲಿ ಬಂದು ಆತ ಅರೆಸ್ಟ್ ಆಗಬೇಕು. ಆದರೆ ಅವನೀಗ ತಲೆ ಮರೆಸಿಕೊಂಡು ಓಡಾಡ್ತಿದ್ದಾನೆ. ನಾನು ಇಲ್ಲಿ ಅವನ ಫೋಟೋ ಹಾಕಿದ್ದೇನೆ ಅಂತ ನೀವು ಏನೂ ಮಾಡಬೇಡಿ, ಕಾನೂನಿನ ಮೂಲಕವೇ ಅವನನ್ನು ಒಪ್ಪಿಸಿ. ಅವನು ತಾನು ಫೇಮಸ್ ಆಗೋ ಸಲುವಾಗಿ, ಈ ಥರದ ಕೆಟ್ಟ ಕೆಲಸಕ್ಕೆ ಇಳಿದಿದ್ದಾನೆ" ಎಂದು ಶಶಿ ಎಂಬುವವರು ವಿಡಿಯೋ ಮೂಲಕ ಆರೋಪಿಸಿದ್ದಾರೆ.
ಪೋಸ್ಟ್ ಮೂಲಕ ಕ್ಷಮೆ ಕೇಳಿದ ವ್ಯಕ್ತಿ,
ಈ ಬಗ್ಗೆ KA_33.troll.shorapura ಪೇಜ್ ಮೂಲಕ ಅಕ್ಕ ಅನು ಅವರಿಗೆ ಕ್ಷಮೆ ಕೇಳಿದ್ದಾನೆ. ಪೋಸ್ಟ್ ಹಂಚಿಕೊಂಡು, ʼಅಕ್ಕ ನಿಮ್ಮ ಬಗೆ ತಿಳಿಯದೇ ಮಾತನಾಡಿದ್ದೀನಿ. ನನ್ನನ್ನು ಕ್ಷಮಿಸಿ ಅಕ್ಕ. ಆದರೆ ನೀವು ಇಷ್ಟು ಒಳ್ಳೆಯವರು ಅಂತ ಗೊತ್ತಿರಲಿಲ್ಲ. ಅಕ್ಕ ನಿಮ್ಮ ಬಗ್ಗೆ ಮಾತನಾಡಿದ್ದು, ನನಗೆ ಈಗ ಗೊತ್ತಾಗುತ್ತಿದೆ. ನಿಮ್ಮ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿದರೂ, ನೀವು ನನ್ನ ಜೊತೆ ಯಾವುದೇ ಸಿಟ್ಟು ಕೋಪ ಇಲ್ಲದೆ, ಮಾತನಾಡಿದಿರಿ. ನನ್ನ ತಪ್ಪು ಇವತ್ತು ಗೊತ್ತಾಗುತ್ತಿದೆ ಅಕ್ಕ" ಎಂದು ಆ ಟ್ರೋಲ್ ಪೇಜ್ ಅಡ್ಮಿನ್ ಕ್ಷಮೆ ಕೇಳಿದ್ದಾನೆ.