Akka Anu Interview: ಅಕ್ಕ ಅನು ಯಂಗ್‌ ಆರ್ಮಿ ಮತ್ತು ಸೋಷಿಯಲ್‌ ವರ್ಕ್‌; ಶಾಲೆಗೆ ಬಣ್ಣ ಬಳಿಯೋ ಈ ಯುವತಿಯ ಇಂಟ್ರೆಸ್ಟಿಂಗ್‌ ಜರ್ನಿ ಇಲ್ಲಿದೆ
ಕನ್ನಡ ಸುದ್ದಿ  /  ಮನರಂಜನೆ  /  Akka Anu Interview: ಅಕ್ಕ ಅನು ಯಂಗ್‌ ಆರ್ಮಿ ಮತ್ತು ಸೋಷಿಯಲ್‌ ವರ್ಕ್‌; ಶಾಲೆಗೆ ಬಣ್ಣ ಬಳಿಯೋ ಈ ಯುವತಿಯ ಇಂಟ್ರೆಸ್ಟಿಂಗ್‌ ಜರ್ನಿ ಇಲ್ಲಿದೆ

Akka Anu Interview: ಅಕ್ಕ ಅನು ಯಂಗ್‌ ಆರ್ಮಿ ಮತ್ತು ಸೋಷಿಯಲ್‌ ವರ್ಕ್‌; ಶಾಲೆಗೆ ಬಣ್ಣ ಬಳಿಯೋ ಈ ಯುವತಿಯ ಇಂಟ್ರೆಸ್ಟಿಂಗ್‌ ಜರ್ನಿ ಇಲ್ಲಿದೆ

ಇಲ್ಲೊಬ್ಬ ಹೆಣ್ಣು ಮಗಳು ಮನೆಯಿಂದ ಆಚೆ ಬಂದು ತನ್ನದೇ ಆದ ಒಂದು ಆರ್ಮಿ ಕಟ್ಟಿಕೊಂಡು ರಾಜ್ಯದ ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದಾಳೆ. ತಂಡದ ಯುವಕರನ್ನು ಯೋಧರೆಂದೇ ಸಂಬೋಧಿಸುವ ಈ ಹುಡುಗಿಯ ಹೆಸರು ಅನು. ಇವರನ್ನು ಎಲ್ಲರೂ ಅಕ್ಕ ಅನು (Akka Anu) ಎಂದೇ ಕರೀತಾರೆ.

<p>Akka Anu Interview: ಅಕ್ಕ ಅನು ಯಂಗ್‌ ಆರ್ಮಿ ಮತ್ತು ಸೋಷಿಯಲ್‌ ವರ್ಕ್‌; ಶಾಲೆಗೆ ಬಣ್ಣ ಬಳಿಯೋ ಈ ಯುವತಿಯ ಇಂಟ್ರೆಸ್ಟಿಂಗ್‌ ಜರ್ನಿ ಇಲ್ಲಿದೆ..</p>
Akka Anu Interview: ಅಕ್ಕ ಅನು ಯಂಗ್‌ ಆರ್ಮಿ ಮತ್ತು ಸೋಷಿಯಲ್‌ ವರ್ಕ್‌; ಶಾಲೆಗೆ ಬಣ್ಣ ಬಳಿಯೋ ಈ ಯುವತಿಯ ಇಂಟ್ರೆಸ್ಟಿಂಗ್‌ ಜರ್ನಿ ಇಲ್ಲಿದೆ.. (Instagram/ akka anu)

ಒಬ್ಬ ಯುವತಿ ಮನೆಯಿಂದ ಹೊರ ಹೋದರೆ, ಮನೆಯವರಿಗೆ ಚಿಂತೆ.. ಮಗಳು ಅದ್ಯಾವಾಗ ಮನೆಗೆ ಮರಳುತ್ತಾಳೋ ಎಂದು. ಆದರೆ, ಇದೀಗ ಕಾಲ ಬದಲಾಗಿದೆ. ಪುರುಷನಷ್ಟೇ ಮಹಿಳೆಯೂ ಧೈರ್ಯಶಾಲಿ. ಸಾಧನೆ ವಿಚಾರದಲ್ಲಿ ಪುರುಷನನ್ನೂ ಮೀರಿ ನಿಂತಿದ್ದಾಳೆ. ಇಲ್ಲೊಬ್ಬ ಹೆಣ್ಣು ಮಗಳೂ ಮನೆಯಿಂದ ಆಚೆ ಬಂದು ತನ್ನದೇ ಆದ ಒಂದು ಆರ್ಮಿ ಕಟ್ಟಿಕೊಂಡು ರಾಜ್ಯದ ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದಾಳೆ. ತಂಡದ ಯುವಕರನ್ನು ಯೋಧರೆಂದೇ ಸಂಬೋಧಿಸುವ ಈ ಹುಡುಗಿಯ ಹೆಸರು ಅನು. ಇವರನ್ನು ಎಲ್ಲರೂ ಅಕ್ಕ ಅನು (Akka Anu) ಎಂದೇ ಕರೀತಾರೆ.

ಸಮಾಜ ಸೇವೆ ವಿಚಾರದಲ್ಲಿ ತನ್ನ ಕೈಲಾದ ಕೆಲಸವನ್ನು ಈ ತಂಡದೊಟ್ಟಿಗೆ ಮಾಡುತ್ತಿದ್ದಾರೆ. ಈವರೆಗೂ ರಾಜ್ಯದ ಉದ್ದಗಲಕ್ಕೂ ಸಂಚರಿಸಿ 109 ಶಾಲೆಗಳಿಗೆ ಬಣ್ಣ ಬಳಿದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಅಪಾರ ಜನಮನ್ನಣೆ ಗಳಿಸಿರುವ ಅಕ್ಕ ಅನು, ಫೇಸ್ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಯಾವ ಸೆಲೆಬ್ರಿಟಿಗೂ ಕಡಿಮೆ ಇಲ್ಲ! ಇದೇ ಹುಡುಗಿ ಇದೀಗ Hindustan Times Kannada ದ ಜತೆಗೆ ಮಾತನಾಡಿದ್ದಾರೆ. ತಮ್ಮ ಕಥೆ ಹೇಳಿಕೊಂಡಿದ್ದಾರೆ.. ಮುಂದೇನು ಮಾಡಬೇಕು? ಹಿಂದೇನಾಗಿದೆ? ಸದ್ಯ ಏನೆಲ್ಲ ಮಾಡುತ್ತಿದ್ದೇನೆ? ಇದೆಲ್ಲವನ್ನು ಅವರ ಮಾತಿನಲ್ಲಿ ನಿಮ್ಮ ಮುಂದಿದೆ.

ಚಿಕ್ಕಂದಿನಿಂದಲೂ ಹೋರಾಟದ ಸ್ವಭಾವ..

"ನಮ್ಮ ಊರು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಚಿಕ್ಕಬೇರಗಿ ಅನ್ನೋ ಒಂದು ಗ್ರಾಮ. ನನ್ನ ಆರಂಭಿಕ ಪ್ರಾಥಮಿಕ ವಿದ್ಯಾಭ್ಯಾಸ ನಮ್ಮೂರಿನಲ್ಲಿಯೇ ಆಗಿದೆ. ಅದಾದ ಬಳಿಕ ಮಸ್ಕಿಯಲ್ಲಿ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಹೈಸ್ಕೂಲ್‌ ಮುಗಿಸಿದೆ. ಸಂಕೇತ ಕಾಲೇಜಲ್ಲಿ ಪಿಯುಸಿ ಓದಿ, ಬೆಂಗಳೂರಿನ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಈ ವರ್ಷ ಡಿಗ್ರಿ ಮುಗಿಸಿದೆ. ನಾನು ಚಿಕ್ಕಂದಿನಲ್ಲಿ ಹೋರಾಟದ ಸ್ವಭಾವದವಳು. ಹುಡುಗ್ರ ರೀತಿ ಬಟ್ಟೆ ಹಾಕಿಕೊಂಡು ಓಡಾಡ್ತಿದ್ದರಿಂದ ಹಳ್ಳಿಯಲ್ಲೂ ಜನ ಮಾತನಾಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿಯೇ ಏನಾದ್ರೂ ಮಾಡಬೇಕು? ಸೇವೆಯಲ್ಲಿ ಮುಂದುವರಿಯಬೇಕು ಎಂದುಕೊಂಡಿದ್ದೆ. ಆಗ ಕನ್ನಡ ಶಾಲೆಗಳು ಮುಚ್ಚುತ್ತಿದ್ವು. ಅದನ್ನು ನೋಡುತ್ತ ಬಂದಿದ್ದ ನನಗೆ, ಕನ್ನಡ ಶಾಲೆ ಮುಚ್ಚುವುದನ್ನು ವಿರೋಧಿಸಿ ನಡೆದ ಹೋರಾಟಗಳಲ್ಲಿಯೂ ಭಾಗವಹಿಸಿದ್ದೆ. ಹಾಗೆ ಹೋರಾಟದಲ್ಲಿ ಭಾಗವಹಿಸಿದವ್ರು ಕಾಟಾಚಾರಕ್ಕೆ ಮನವಿ ಸಲ್ಲಿಸಿ, ಫೈವ್‌ ಸ್ಟಾರ್‌ ಹೊಟೇಲ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡಿ ಸುಮ್ಮನಾಗುತ್ತಿದ್ದರು. ಮುಂದುವರಿಯುತ್ತಿರಲಿಲ್ಲ"

ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳೇ ಹೆಚ್ಚು..

"ಇದೆಲ್ಲದರಿಂದ ಬೇಸತ್ತು ನಾನೇ ಸರ್ಕಾರಿ ಕನ್ನಡ ಶಾಲೆಗಳಿಗೆ ಹೋಗಿ, ಶಿಕ್ಷಕರನ್ನು ಭೇಟಿ ಮಾಡಿ ಶಾಲೆಯಲ್ಲಿನ ಸಮಸ್ಯೆಗಳನ್ನು ಪಟ್ಟಿಮಾಡಿಕೊಂಡು ಬರುತ್ತಿದ್ದೆ. ಸರ್ಕಾರಿ ಶಾಲೆ ಮುಚ್ಚಲು ಕಾರಣ ಏನು? ಸಮಸ್ಯೆ ಏನಿವೆ? ಎಂಬುದರ ಮಾಹಿತಿ ಪಡೆಯುತ್ತಿದ್ದೆ. ಆಗ ಅನುದಾನ ಸಿಗ್ತಿಲ್ಲ ಅನ್ನೋ ಮಾತು ಬರ್ತಿತ್ತು. ಖಾಸಗಿ ಶಾಲೆಗಳ ಪ್ರಭಾವದಿಂದ ಹೀಗಾಗುತ್ತಿದೆ ಎನ್ನುತ್ತಿದ್ದರು. ಶಿಕ್ಷಕರ ಸಂಖ್ಯೆಯೂ ಇದಕ್ಕೆ ಕಾರಣ ಎಂದು ಕೆಲವರು ಹೇಳಿಕೊಂಡರು. ಶಾಲೆಯ ಸ್ವಚ್ಛತೆಯ ಸಮಸ್ಯೆ ಬಗ್ಗೆಯೂ ಶಿಕ್ಷಕರು ಮಾಹಿತಿ ನೀಡಿದ್ರು. ಇದೆಲ್ಲವನ್ನು ಗಮನಿಸಿ ಸ್ವಚ್ಛತೆಯಿಂದಲೇ ನಾನು ಕೆಲಸ ಶುರು ಮಾಡಿದೆ"

60 ಸಾವಿರ ಸಾಲ ಪಡೆದು ಕೆಲಸ ಆರಂಭ..

"ಅದು 2018ರ ವರ್ಷಾಂತ್ಯ. ಶಾಲೆಗಳನ್ನು ಗುರುತಿಸುವ ಕೆಲಸ ಆಯ್ತು. ಆ ಶಾಲೆಯಲ್ಲಿ ಏನು ಮಾಡಬೇಕು ಎಂಬುದು ಗೊತ್ತಾಯ್ತು. ಆದರೆ, ಅದಕ್ಕೆ ಹಣಕಾಸಿನ ನೆರವು ಪಡೆಯೋದು ಹೇಗೆ ಎಂಬುದಕ್ಕೆ ನನ್ನ ಬಳಿ ಉತ್ತರ ಇರಲಿಲ್ಲ. ಕೊನೆಗೆ ಬಡ್ಡಿಯಂತೆ 60 ಸಾವಿರ ರೂ ಸಾಲ ಪಡೆದುಕೊಂಡೆ. ಮೊದಲಿಗೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗ್ರಾಮವೊಂದರ ಶಾಲೆಯನ್ನು ಆಯ್ದುಕೊಂಡೆ. ಕೂಲಿ ಕೆಲಸಗಾರರನ್ನು ಕರೆದೊಯ್ದು ಶಾಲೆಯ ಪೇಂಟಿಂಗ್‌ ಮಾಡಿಸಿದೆ. ನನಗೂ ಈ ಕಟ್ಟಡಗಳಿಗೆ ಹೇಗೆ ಪೇಂಟ್‌ ಮಾಡ್ತಾರೆ ಎಂಬುದು ಗೊತ್ತಿರಲಿಲ್ಲ. ಹಾಗೆ ನಮ್ಮ ಕೆಲಸದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ವೈರಲ್‌ ಆಯ್ತು."

ಇಲ್ಲಿಯವರೆಗೂ 109 ಶಾಲೆಗಳ ಕೆಲಸ..

"ಕೊರಟಗೆರೆಯಿಂದ ಶುರುವಾದ ನನ್ನ ಕೆಲಸ ನಿಧಾನಕ್ಕೆ ಉತ್ತರ ಕರ್ನಾಟಕ ಭಾಗಕ್ಕೆ ಬಂದೆ. ಬಳ್ಳಾರಿ, ಕೊಪ್ಪಳ, ಗಂಗಾವತಿಗಳಲ್ಲಿನ ಸರ್ಕಾರಿ ಕನ್ನಡ ಶಾಲೆಗಳ ಕೆಲಸ ನಡೆಯಿತು. ಸಾಲ ಮಾಡಿಕೊಂಡಿದ್ದ ಹಣದಲ್ಲಿಯೇ 10 ಶಾಲೆಗಳಿಗೆ ಪೇಂಟಿಂಗ್‌ ಆಯ್ತು. ಫೇಸ್‌ಬುಕ್‌ನಲ್ಲಿ ನಮ್ಮ ಈ ಕೆಲಸದ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಬಂದೆ. ಅದನ್ನು ನೋಡಿ ನಮ್ಮ ಶಾಲೆಗೂ ಬನ್ನಿ ಎಂಬ ಆಹ್ವಾನವೂ ಎಲ್ಲಕಡೆಯಿಂದ ಸಿಕ್ತು. ಆಗ ಸಂಬಂಧಪಟ್ಟ ಗ್ರಾಮಸ್ಥರನ್ನು ಭೇಟಿಯಾಗಿ ಬಣ್ಣ ಕೊಡಿಸಿದರೆ ನಾವೇ ಫ್ರೀಯಾಗಿ ಹಚ್ಚಿಕೊಡುವುದಾಗಿ ಹೇಳಿಕೊಂಡಾಗ ಅವ್ರಿಂದಲೂ ಒಪ್ಪಿಗೆ ಸಿಕ್ತು. ಯಾರೆಲ್ಲ ಕರೆಯುತ್ತಾರೋ ಅಲ್ಲಿಗೆ ಹೋಗುವ ಖರ್ಚು ಮಾತ್ರ ನಮ್ಮದು. ಹಾಗೆ ಮಾಡುತ್ತಲೇ ಅಲ್ಲಿಂದ ಇಲ್ಲಿಯವರೆಗೂ 109 ಶಾಲೆಗಳಿಗೆ ಬಣ್ಣ ಹಚ್ಚಿದ್ದೇವೆ."

ನಮ್ಮದು ಸಾಮಾನ್ಯ ತಂಡವಲ್ಲ... ಒಬ್ಬೊಬ್ಬರೂ ಯೋಧರಂತೆ..

"ತಂಡದ ಬಗ್ಗೆ ಹೇಳುತ್ತ ಕೂತರೆ ಅದು ಮುಗಿಯದ ಕಥೆ. ಏಕೆಂದರೆ, ಅಕ್ಕ ಅನು ಏನಾಗಿದ್ದಾಳೆ ಅದೆಲ್ಲದಕ್ಕೂ ಇಡೀ ತಂಡವೇ ಕಾರಣ. ದುಡ್ಡು ಕೊಟ್ಟರೂ ಅಂಥ ತಂಡ ಸಿಗಲ್ಲ. ನಾನು ಕಷ್ಟದಲ್ಲಿದ್ದಾಗ ನನ್ನ ಜತೆಗೆ ನಿಂತಿದ್ದೇ ಇದೇ ತಂಡ. ಅವರೇ ನನ್ನ ಬೆನ್ನೆಲುಬು. ಅಂಥ ತಂಡವನ್ನು ಪಡೆಯುವುದಕ್ಕೆ ನಾನು ನಿಜಕ್ಕೂ ಪುಣ್ಯ ಮಾಡಿದ್ದೆ. ಆರಂಭದಲ್ಲಿ ಕೂಲಿ ಕೆಲಸಗಾರರನ್ನು ಪೇಂಟ್‌ ಮಾಡಲು ಕರೆದೊಯ್ಯುತ್ತಿದ್ದೆ. ನಮ್ಮ ಕೆಲಸ ಮುಂದುವರಿದಂತೆ ನಮ್ಮನ್ನೂ ನಿಮ್ಮ ಜೊತೆ ಸೇರಿಸಿಕೊಳ್ಳಿ ಎಂದು ಸಾಕಷ್ಟು ಹುಡುಗ್ರು ಬಂದ್ರು. ಆಗ ನಾನು "ನಿಮ್ಮ ಮನೆಯವ್ರ ಒಪ್ಪಿಗೆ ಪಡೆದು ಬನ್ನಿ" ಎಂದು ಹೇಳಿದ್ದೆ. ನಾನೇ ಅವರ ಮನೆವ್ರ ಜೊತೆಗೆ ಮಾತನಾಡಿ, "ನಾವು ಹಣಕ್ಕಾಗಿ ಕೆಲಸ ಮಾಡುತ್ತಿಲ್ಲ. ನಮ್ಮ ಕಡೆ ಬಂದರೆ ಒಂದೇ ಒಂದು ರೂಪಾಯಿ ಸಿಗಲ್ಲ. ನಾವು ಸರ್ಕಾರಿ ಶಾಲೆಗಳಿಗಾಗಿ ಮಾಡುತ್ತಿದ್ದೇವೆ" ಎಂದಿದ್ದೆ. ಬರು ಬರುತ್ತ ಅದ್ಯಾವ ಹಂತಕ್ಕೆ ಹೋಯಿತು ಎಂದರೆ, ಹಾಗೆ ಬರುವ ಹುಡುಗ್ರಗೆ ಮನೆಯವ್ರೇ ಬಸ್‌ ಚಾರ್ಜ್‌ಗೆ ಹಣ ಕೊಟ್ಟು ಕಳಿಸೋಕೆ ಶುರುಮಾಡಿದ್ರು. ದುಡ್ಡಿಲ್ಲ ಅಂದರೂ ಮನೆಯಿಂದ ಅವರಿಗೆ ಹಣ ಹಾಕ್ತಿದ್ದಾರೆ."

13 ಜನರ ಬಲಿಷ್ಠ ತಂಡ ನಮ್ಮದು..

"ನಮ್ಮದು 13 ಜನರ ತಂಡ. ಈ 13ರಲ್ಲಿ 10 ಜನ ಸದಾ ಈ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತೇವೆ. ಇನ್ನು ಮೂವರು ಕೆಲಸ ಇದ್ದಾಗ ಬರುತ್ತಾರೆ. ಈ ಕೆಲಸ ಮಾಡುವ ನಮ್ಮೆಲ್ಲರಿಗೂ ಜೀವನ ಹೇಗೆ ಎಂಬುದು ಚೆನ್ನಾಗಿ ಅರಿವಾಗಿದೆ. ಏಕೆಂದರೆ ಕಳೆದ ಮೂರು ವರ್ಷದಿಂದ ನಾವೆಲ್ಲರೂ ಒಟ್ಟಿಗಿದ್ದೇವೆ. ಏನೇ ಸಮಸ್ಯೆ ಬಂದರೂ ಎಲ್ಲರೂ ಬಗೆಹರಿಸಿಕೊಳ್ಳುತ್ತೇವೆ. ನಮ್ಮ ನಮ್ಮ ಮನೆ ಸಮಸ್ಯೆಗಳನ್ನೂ ಎಲ್ಲರೂ ಸೇರಿ ಕ್ಲೀಯರ್‌ ಮಾಡಿಕೊಂಡಿದ್ದೇವೆ. 3-4 ತಿಂಗಳಿಗೊಮ್ಮೆ ನಾವು ಮನೆಗೆ ಹೋಗುತ್ತೇವೆ. ಹೋಗುವ ಮುನ್ನ ನಮ್ಮ ತಂಡದಲ್ಲಿ ಯಾರ ಮನೆಯಲ್ಲಿ ಏನೆಲ್ಲ ಕೆಲಸ ಇದೆ ಎಂಬುದನ್ನು ನೋಡಿಕೊಳ್ಳುತ್ತೇವೆ. ಅದು ಮನೆಗೆ ಸುಣ್ಣ ಬಣ್ಣ ಬಳಿಯೋದೆ ಇರಬಹುದು, ಗದ್ದೆ ಕೆಲಸವೇ ಆಗಿರಬಹುದು. ಒಂದಷ್ಟು ದಿನಗಳ ಕಾಲ ಅಲ್ಲಿದ್ದು, ಎಲ್ಲ ಕೆಲಸ ಮುಗಿಸಿಕೊಂಡು, ಇನ್ನೊಬ್ಬರ ಮನೆಗೆ ಹೋಗುತ್ತೇವೆ. ಹೀಗೆ ಮಾಡುವುದರಿಂದ ನಮ್ಮಲ್ಲಿ ಕೀಳರಿಮೆ ಕಾಣಿಸುವುದಿಲ್ಲ."

10 ಲಕ್ಷ ಸಾಲಕ್ಕೆ ಹೆದರಿ ಆತ್ಮಹತ್ಯೆಗೂ ಮುಂದಾಗಿದ್ದೆ.. ನಾವಿದ್ದೇವೆ ಎಂದಿತ್ತು ನನ್ನ ತಂಡ

ಹಣಕಾಸಿನ ಸಮಸ್ಯೆ ಇದ್ದರೆ ಎಲ್ಲರೂ ನಾವು ನಾವೇ ಬಗೆಹರಿಸಿಕೊಳ್ಳುತ್ತೇವೆ. ಆ ಪೈಕಿ ಸೋಷಿಯಲ್‌ ವರ್ಕ್‌ ಸಲುವಾಗಿ ಬಡ್ಡಿಯಂಥೆ ಸಾಲ ಮಾಡಿದ್ದೆ. ನನ್ನ ಸಾಲವೇ 10 ಲಕ್ಷ ಇದೆ. ಆರಂಭದಲ್ಲಿ ಸಾಲಗಾರರು ಮನೆಗೇ ಬಂದಿದ್ದರು. ಬಡ್ಡಿಯಂತೆ ತೆಗೆಸಿದ್ದ ಎರಡು ಲಕ್ಷ ಸಾಲವನ್ನು ಆವತ್ತು ಮನೆಯವ್ರೇ ತೀರಿಸಿದ್ರು. ಇದೀಗ ಮತ್ತೆ ಅದು ಬೆಳೆದು ನಿಂತಿದೆ. ಸಾಲ ಹೆಚ್ಚಾಗುತ್ತಿದ್ದಂತೆ, ಚಿಂತೆಯೂ ಹೆಚ್ಚಾಗಿತ್ತು. ಅದ್ಯಾವ ಮಟ್ಟಿಗೆ ಎಂದರೆ ಎರಡು ವರ್ಷದ ಹಿಂದೆ ಆತ್ಮಹತ್ಯೆಗೂ ಯತ್ನಿಸಿದ್ದೆ. ಆಗ ನನ್ನ ತಂಡವೇ ನನ್ನನ್ನು ತಡೆದಿತ್ತು. ನಾವಿದ್ದೇವೆ. ಎಲ್ಲರೂ ಸೇರಿ ಸಾಲ ತೀರೀಸ್ತಿವಿ ಅನ್ನೋ ಮಾತು ಕೊಟ್ಟಿತ್ತು.

22 ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇವೆ..

"ದಾವಣಗೆರೆ, ಶಿವಮೊಗ್ಗ ಸೇರಿ ಇನ್ನು ಕೆಲವು ಜಿಲ್ಲೆಗಳನ್ನು ಬಿಟ್ಟು ಇನ್ನುಳಿದ 22 ಜಿಲ್ಲೆಗಳಲ್ಲಿ ನಮ್ಮ ತಂಡದಿಂದ ಕೆಲಸವಾಗಿದೆ. ಕೇವಲ ಶಾಲೆ ಮಾತ್ರವಲ್ಲ. ಗೋಶಾಲೆ, ದೇವಸ್ಥಾನ, ಸರ್ಕಾರಿ ಆಸ್ಪತ್ರೆ, ಪುಷ್ಕರಣಿಗಳನ್ನೂ ಸ್ವಚ್ಛ ಮಾಡುವ ಮತ್ತು ಬಣ್ಣ ಬಳಿಯುವ ಕೆಲಸವಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಕನಕಗಿರಿ ಬಳಿಯ ಹೀರೆ ಮದ್ನಾಳ ಗ್ರಾಮದಲ್ಲಿ ಅಜ್ಜಿಯೊಬ್ಬರಿಗೆ 3 ತಿಂಗಳಲ್ಲಿ ಮನೆ ಕಟ್ಟಿಕೊಟ್ಟಿದ್ದೇವೆ. ನಮ್ಮ ಈ ಪಾಸಿಟಿವ್‌ ಕೆಲಸದಲ್ಲಿ ನೆಗೆಟಿವ್‌ ಕಮೆಂಟ್‌ಗಳೂ ಬಂದಿವೆ. ದುಡ್ಡಿಗಾಗಿ, ಪ್ರಚಾರಕ್ಕಾಗಿ ಮಾಡ್ತಿದ್ದಾರೆ ಎಂಬ ಮಾತುಗಳನ್ನು ಕೇಳಿದ್ದೇವೆ. ಆದರೆ, ಅದ್ಯಾವುದಕ್ಕೂ ನಾವು ತಲೆ ಕೆಡಿಸಿಕೊಂಡಿಲ್ಲ. ಮುಂದೆ ಈ ಮಾತು ಬರಬಹುದು ಅನ್ನೋ ಕಾರಣಕ್ಕೆ ನಾನು ಸಾಲ ಮಾಡಿಯೇ ಈ ಕೆಲಸ ಶುರುಮಾಡಿದ್ದು."

ಈ ಕೆಲಸ ಸಾಕು ಅನಿಸಿದ್ದೂ ಉಂಟು..

"ಇದೀಗ ಡಿಗ್ರಿ ಮುಗಿದಿದೆ. ಸಿವಿಲ್‌ ಸರ್ವಿಸ್‌ನಲ್ಲಿಯೇ ಸಾಧನೆ ಮಾಡಬೇಕೆಂಬ ಆಸೆ ಇದೆ. ಡಿವೈಎಸ್‌ಪಿ ಆಗುವ ಕನಸಿದೆ. ಸದ್ಯದ ಸ್ಥಿತಿ ನೋಡಿದ್ರೆ, ಓದಲು ಸಾಧ್ಯವಾಗ್ತಿಲ್ಲ. ಪಿಎಸ್‌ಐ ಆದ್ರೂ ಆಗಬೇಕೆಂದುಕೊಂಡಿದ್ದೇನೆ. ಇದೆಲ್ಲದರ ಜತೆಗೆ ಹೈನುಗಾರಿಕೆ ಬಗ್ಗೆ ತುಂಬ ಆಸಕ್ತಿ ಇದೆ. ಮುಂದಿನ ದಿನಗಳಲ್ಲಿ ಅದನ್ನಾದರೂ ಮಾಡುತ್ತೇನೆ. ಸದ್ಯಕ್ಕೆ ಯಾವುದೇ ಆದಾಯದ ಮೂಲ ನಮಗಿಲ್ಲ."

ಸೋಷಿಯಲ್‌ ಮೀಡಿಯಾ ಮೇಲೆ ನಾನು ಡಿಪೆಂಡ್‌ ಆಗಿಲ್ಲ..

"ಸಹಜವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್‌ ಹೊಂದಿದ್ದರೆ ಅವರಿಗೆ ಅಷ್ಟೇ ಹಣ ಬರುತ್ತೆ ಎನ್ನುತ್ತಾರೆ ನಿಜ. ಆದರೆ, ನನಗೆ ಅದ್ಯಾವುದೂ ಇಲ್ಲ. ನನ್ನ ಫೇಸ್‌ಬುಕ್‌ನಲ್ಲಿ ( ಕೆಚ್ಚೆದೆಯ ಕನ್ನಡತಿ ಅಕ್ಕ ಅನು) 5 ಲಕ್ಷ ಸನಿಹ ಫಾಲೋವರ್ಸ್‌ ಇದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 9 ಲಕ್ಷ ಸನಿಹ ಬಂದಿದೆ. ಆದರೆ, ಇದರಿಂದ ನನಗೆ ಯಾವುದೇ ಆದಾಯವಿಲ್ಲ. ನಾನು ಅದರ ಮೇಲೆ ಡಿಪೆಂಡ್‌ ಸಹ ಆಗಿಲ್ಲ. ವಾಮಾಚಾರ, ರಮ್ಮಿ, ಮೇಕಪ್‌ ಪ್ರಾಡಕ್ಟ್‌ ಬಗ್ಗೆ ಸಾಕಷ್ಟು ಜನ ಜಾಹೀರಾತು ನೀಡಲು ಬರುತ್ತಾರೆ. ಆದರೆ, ಅದನ್ನು ಹಾಕಿಕೊಂಡರೆ ನಮ್ಮ ಉದ್ದೇಶವೇ ಹಾಳಾಗುತ್ತದೆ. ನಾವು ಮಾಡುತ್ತಿರುವ ಕೆಲಸಕ್ಕೂ ಆ ಜಾಹೀರಾತುಗಳಿಗೂ ಅಜಗಜಾಂತರ ವ್ಯತ್ಯಾಸ. ಹಾಗಾಗಿ ಇಲ್ಲಿಯವರೆಗೂ ಮಾಡಿಕೊಂಡು ಬಂದ ಒಳ್ಳೆ ಕೆಲಸಕ್ಕೆ ಈ ರೀತಿಯ ಚ್ಯುತಿ ಬಾರದಂತೆ ಮುಂದುವರಿಸುತ್ತೇವೆ."

Whats_app_banner