ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಸುದೀಪ್ ನಿರೂಪಣೆ ಅನುಮಾನ; ರಮೇಶ್ ಅರವಿಂದ್ ಅಥವಾ ರಿಷಬ್ ಶೆಟ್ಟಿಗೆ ಮಣೆ ಹಾಕುವ ಸಾಧ್ಯತೆ!?
Aug 07, 2024 10:07 AM IST
ಬಿಗ್ ಬಾಸ್ ಕನ್ನಡ 11ಕ್ಕೆ ಸುದೀಪ್ ನಿರೂಪಣೆ ಅನುಮಾನ; ರಮೇಶ್ ಅರವಿಂದ್ ಅಥವಾ ರಿಷಬ್ ಶೆಟ್ಟಿಗೆ ಮಣೆ ಹಾಕುವ ಸಾಧ್ಯತೆ!?
- ಕೆಲ ಮೂಲಗಳ ಮಾಹಿತಿ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 11ಅನ್ನು, ಕಿಚ್ಚ ಸುದೀಪ್ ನಿರೂಪಣೆ ಮಾಡುವುದು ಅನುಮಾನ ಎಂಬ ಮಾತು ಕಿರುತೆರೆ ವಲಯದಲ್ಲಿ ಕೇಳಿಬರುತ್ತಿದೆ. ಒಂದು ವೇಳೆ ಈ ಶೋನಿಂದ ಹಿಂದೆ ಸರಿದರೆ, ಅವರ ಸ್ಥಾನವನ್ನು ತುಂಬಲು ಕನ್ನಡದ ಈ ಇಬ್ಬರು ನಟರ ಹೆಸರುಗಳು ಕೇಳಿಬರುತ್ತಿವೆ.
Bigg Boss Kannada Season 11: ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ಕನ್ನಡ ಸೀಸನ್ 11ರ ಆಗಮನಕ್ಕೆ ಇನ್ನೇನು ಹೆಚ್ಚು ದಿನ ಉಳಿದಿಲ್ಲ. ಕಳೆದ ವರ್ಷದ ಬಿಗ್‌ಬಾಸ್ ಸೀಸನ್ 10 ದೊಡ್ಡ ಮಟ್ಟದಲ್ಲಿ ಯಶಸ್ವಿಯಾದ ಬೆನ್ನಲ್ಲೇ, ಸೀಸನ್ 11ರ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಶುರುವಾಗಿದೆ. ಈಗಾಗಲೇ ಅಲ್ಲೊಂದು ಇಲ್ಲೊಂದು ಸ್ಪರ್ಧಿಗಳ ಹೆಸರುಗಳೂ ಓಡಾಡುತ್ತಿವೆ. ಈ ನಡುವೆ, ಈ ಸಲದ ಬಿಗ್‌ಬಾಸ್‌ನಿಂದ ಕಿಚ್ಚ ಸುದೀಪ್ ಹೊರನಡೆಯಲಿದ್ದಾರೆ. ಅವರ ಜಾಗಕ್ಕೆ ಬೇರೆ ನಿರೂಪಕರ ಆಗಮನವೂ ಆಗಲಿದೆ ಎಂಬ ಮಾತೊಂದು ಕಿರುತೆರೆ ವಲಯದಲ್ಲಿ ಕೇಳಿಬರುತ್ತಿದೆ.
ಇನ್ನೇನು ಅಕ್ಟೋಬರ್‌ನಲ್ಲಿ ಬಿಗ್‌ಬಾಸ್ ಸೀಸನ್ 11 ಶುರುವಾಗಲಿದೆ. ತೆರೆಹಿಂದಿನ ಕೆಲಸಗಳಿಗೆ ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಚಾಲನೆ ನೀಡಿದ್ದು, ಮನೆ ಅಂದಗಾಣಿಸುವ ಕೆಲಸವನ್ನು ಆರಂಭಿಸಿದೆ. ಹೀಗಿರುವಾಗಲೇ ಸುದೀಪ್ ಈ ಸಲದ ಹೋಸ್ಟ್‌ನಿಂದ ಹಿಂದೆ ಸರಿಯಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಬಿಗ್‌ಬಾಸ್ ಆರಂಭದಿಂದ ಇಲ್ಲಿಯವರೆಗೂ ಅಂದರೆ 10 ಸೀಸನ್‌ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದವರು ಕಿಚ್ಚ ಸುದೀಪ್. ತಮ್ಮ ಸ್ಟೈಲಿಷ್ ಮಾತುಗಾರಿಕೆಯಿಂದಲೇ ಆ ವೇದಿಕೆಯ ಘನತೆ ಹೆಚ್ಚಿಸಿದ್ದರು.
ಬದಲಾವಣೆ ಹಾದಿಯತ್ತ..
ಇದೀಗ ಕೆಲ ಮೂಲಗಳ ಪ್ರಕಾರ ವಾಹಿನಿ ಕಡೆಯಿಂದಲೇ ಇಂಥದ್ದೊಂದು ಪ್ಲಾನ್ ನಡೆಯುತ್ತಿದೆಯಂತೆ. ಬೇರೆ ಬೇರೆ ಭಾಷೆಗಳ ಬಿಗ್‌ಬಾಸ್‌ಗಳಲ್ಲಿ ನಿರೂಪಕರ ಬದಲಾವಣೆ ಆಗಿದೆ. ಕನ್ನಡದಲ್ಲಿಯೂ ಏಕೆ ಆ ಬದಲಾವಣೆ ತರಬಾರದು ಎನ್ನಲಾಗುತ್ತಿದೆ. ತೆಲುಗು ಬಿಗ್‌ಬಾಸ್‌ನಲ್ಲಿ ಈ ವರೆಗೂ ಮೂವರು ನಟರಾದ ಜೂನಿಯರ್ ಎನ್‌ಟಿಆರ್, ನಾನಿ ಮತ್ತು ನಾಗಾರ್ಜುನ್ ಶೋ ಮುನ್ನಡೆಸಿದ್ದಾರೆ. ಅದರಲ್ಲೂ ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರ ಬದಲು ಇದೀಗ ಅನಿಲ್ ಕಪೂರ್ ಅವರ ಆಗಮನವಾಗಿದೆ.
ಹಿಂದಿಯ ಬಿಗ್‌ಬಾಸ್ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿದೆ. ಆ ಶೋನ ನಿರೂಪಣೆಯನ್ನು ಹಲವು ಸ್ಟಾರ್‌ಗಳು ಮಾಡಿದ್ದರಾದರೂ, ಹೆಚ್ಚು ಬಾರಿ ಕಾಣಿಸಿಕೊಂಡಿದ್ದು ಮಾತ್ರ ಸಲ್ಮಾನ್ ಖಾನ್. ಅದಕ್ಕೂ ಮೊದಲು ಸಂಜಯ್ ದತ್, ಶಿಲ್ಪಾ ಶೆಟ್ಟಿ, ಅರ್ಷದ್ ವಾರ್ಸಿ ಶೋ ನಿರೂಪಣೆ ಮಾಡಿದ್ದರು. ಇದೀಗ ಹಿಂದಿಯ ಬಿಗ್ ಬಾಸ್ ಒಟಿಟಿ ಸೀಸನ್ 3ಅನ್ನು ಅನಿಲ್ ಕಪೂರ್ ನಿರೂಪಣೆ ಮಾಡುತ್ತಿದ್ದಾರೆ. ಎರಡನೇ ಒಟಿಟಿ ಸೀಸನ್‌ಗಿಂತ ಶೇ 21ಪ್ರತಿಷತ ಹೆಚ್ಚು ವೀಕ್ಷಣೆ ಕಂಡಿದೆ ಅನಿಲ್ ಕಪೂರ್ ನಡೆಸಿಕೊಡುತ್ತಿರುವ ಶೋ.
ಸುದೀಪ್ ಬದಲಾವಣೆ ಚರ್ಚೆ ಏಕೆ?
ಈ ಗಾಸಿಪ್ ಬಗ್ಗೆ ನೋಡುವುದಾದರೆ, ನಿರೂಪಕರ ಬದಲಾವಣೆಯೊಂದೇ ಮೇಲ್ನೋಟಕ್ಕೆ ಕಾಣಿಸದು. ಜತೆಗೆ ನಿರೂಪಣೆಗೆ ಸುದೀಪ್ ಪಡೆಯುವ ದೊಡ್ಡ ಮೊತ್ತದ ಸಂಭಾವನೆ ಸೇರಿ ಇನ್ನೂ ಹಲವು ಕಾರಣಗಳಿವೆ ಎನ್ನಲಾಗುತ್ತಿದೆ. ಆದರೆ, ಸದ್ಯಕ್ಕೆ ಈ ಬಗ್ಗೆ ವಾಹಿನಿಯಾಗಲಿ, ಸ್ವತಃ ಸುದೀಪ್ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಹಾಗಾಗಿ ಸೀಸನ್ 11ರ ಸಾರಥ್ಯವನ್ನು ಸುದೀಪ್ ವಹಿಸಿಕೊಳ್ಳುವುದಿಲ್ಲ ಎಂಬದನ್ನೂ ಹೇಳಲು ಸಾಧ್ಯವಿಲ್ಲ. ಈ ನಡುವೆ ಈ ಬದಲಾವಣೆ ಚರ್ಚೆಯೂ ನಡೆದಿಲ್ಲ ಎಂಬುದನ್ನೂ ಅಲ್ಲಗೆಳೆಯುವಂತಿಲ್ಲ. ಹಾಗಾದರೆ, ಸುದೀಪ್ ಬಿಟ್ಟರೆ, ಮತ್ಯಾರು ಆ ಸ್ಥಾನಕ್ಕೆ ಬರಬಹುದು?
ಲಿಸ್ಟ್‌ನಲ್ಲಿ ಎರಡು ಹೆಸರುಗಳು..
ಸದ್ಯದ ಕೆಲ ಮೂಲಗಳ ಮಾಹಿತಿ ಪ್ರಕಾರ, ಸುದೀಪ್ ಒಂದು ವೇಳೆ ಈ ಶೋನಿಂದ ಹಿಂದೆ ಸರಿದರೆ, ಅವರ ಸ್ಥಾನವನ್ನು ತುಂಬಲು ಕನ್ನಡದ ಇಬ್ಬರು ನಟರ ಹೆಸರುಗಳು ಕೇಳಿಬರುತ್ತಿವೆ. ಆ ಪೈಕಿ ಈಗಾಗಲೇ ಹಲವು ಶೋಗಳನ್ನು ನಡೆಸಿಕೊಟ್ಟ ನಟ, ನಿರೂಪಕ ರಮೇಶ್ ಅರವಿಂದ್ ಬಿಗ್ ಬಾಸ್ ಶೋ ನಿರೂಪಣೆ ಮಾಡಿದರೂ ಅಚ್ಚರಿಯಿಲ್ಲ. ಇನ್ನೊಂದೆಡೆ ರಿಷಬ್ ಶೆಟ್ಟಿ ಹೆಸರು ಕೇಳಿಬಂದಿದೆಯಾದರೂ, ಈ ವರೆಗೂ ಅವರ ನಿರೂಪಣೆ ಹೇಗಿರಲಿದೆ ಎಂಬುದಕ್ಕೆ ಉತ್ತರವಿಲ್ಲ. ಒಟ್ಟಾರೆ, ಸೀಸನ್ 11 ಒಂದಷ್ಟು ಹೊಸತನದ ಜತೆಗೆ ಆಗಮಿಸುವುದಂತೂ ಪಕ್ಕ!