Darshan: ದರ್ಶನ್‌ ಒಬ್ಬ ಕಾಮನ್‌ ಸೆನ್ಸ್‌ ಇಲ್ಲದಿರೋ ದುರಹಂಕಾರಿ, ದುಡ್ಡಿನ ಧಿಮಾಕಿನಿಂದ ಅವನಿಗೆ ಈ ಸ್ಥಿತಿ ಬಂದಿದೆ; ಮುಖ್ಯಮಂತ್ರಿ ಚಂದ್ರು
ಕನ್ನಡ ಸುದ್ದಿ  /  ಮನರಂಜನೆ  /  Darshan: ದರ್ಶನ್‌ ಒಬ್ಬ ಕಾಮನ್‌ ಸೆನ್ಸ್‌ ಇಲ್ಲದಿರೋ ದುರಹಂಕಾರಿ, ದುಡ್ಡಿನ ಧಿಮಾಕಿನಿಂದ ಅವನಿಗೆ ಈ ಸ್ಥಿತಿ ಬಂದಿದೆ; ಮುಖ್ಯಮಂತ್ರಿ ಚಂದ್ರು

Darshan: ದರ್ಶನ್‌ ಒಬ್ಬ ಕಾಮನ್‌ ಸೆನ್ಸ್‌ ಇಲ್ಲದಿರೋ ದುರಹಂಕಾರಿ, ದುಡ್ಡಿನ ಧಿಮಾಕಿನಿಂದ ಅವನಿಗೆ ಈ ಸ್ಥಿತಿ ಬಂದಿದೆ; ಮುಖ್ಯಮಂತ್ರಿ ಚಂದ್ರು

ಹಣ ಸಿಗ್ತಿದ್ದಂತೆ, ಮೂಲ ದರ್ಶನ್‌ ಕಳೆದುಹೋಗಿಬಿಟ್ಟ. ನೇಮು ಫೇಮು ಸಿಕ್ತಿದ್ದಂತೆ, ಫ್ಯಾನ್ಸ್‌ ಜಾಸ್ತಿಯಾಗಿದ್ದಂತೆ, ಮೊದಲಿನ ದರ್ಶನ್‌ ಈಗಿಲ್ಲ. ಸಹವಾಸ ದೋಷವೂ ಇದಕ್ಕೆ ಕಾರಣ. ಮನುಷ್ಯತ್ವವನ್ನು ಕಳೆದುಕೊಳ್ಳುತ್ತ ಹೋದ. ನಡವಳಿಕೆಯಲ್ಲಿ ವ್ಯತ್ಯಾಸ ಆಗ್ತಾ ಹೋಯ್ತು. ಮನುಷ್ಯನಾಗಿ ಇದ್ದಿದ್ದರೆ, ಇಂಥ ಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ ಮುಖ್ಯಮಂತ್ರಿ ಚಂದ್ರು.

Darshan: ದರ್ಶನ್‌ ಒಬ್ಬ ಕಾಮನ್‌ ಸೆನ್ಸ್‌ ಇಲ್ಲದಿರೋ ದುರಹಂಕಾರಿ, ದುಡ್ಡಿನ ಧಿಮಾಕಿನಿಂದ ಈ ಸ್ಥಿತಿ ಬಂದಿದೆ; ಮುಖ್ಯಮಂತ್ರಿ ಚಂದ್ರು
Darshan: ದರ್ಶನ್‌ ಒಬ್ಬ ಕಾಮನ್‌ ಸೆನ್ಸ್‌ ಇಲ್ಲದಿರೋ ದುರಹಂಕಾರಿ, ದುಡ್ಡಿನ ಧಿಮಾಕಿನಿಂದ ಈ ಸ್ಥಿತಿ ಬಂದಿದೆ; ಮುಖ್ಯಮಂತ್ರಿ ಚಂದ್ರು

Mukhyamantri Chandru on Darshan: ಸ್ಯಾಂಡಲ್‌ವುಡ್‌ನ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಸಿನಿಮಾಗಳ ಜತೆಗೆ ಕಿರುತೆರೆ ಮತ್ತು ರಾಜಕೀಯದಲ್ಲಿಯೂ ಸಕ್ರಿಯರು. ನೂರಾರು ಸಿನಿಮಾಗಳನ್ನು ನೀಡಿದ ಕನ್ನಡದ ಮೇರು ನಟ. ಇದೀಗ ಇದೇ ಮುಖ್ಯಮಂತ್ರಿ ಚಂದ್ರು, ದರ್ಶನ್‌ ಪ್ರಕರಣದ ಬಗ್ಗೆ ಮತ್ತೆ ಮಾತನಾಡಿದ್ದಾರೆ. ದರ್ಶನ್‌ ಮಾಡಿದ್ದು ತಪ್ಪು ಎಂದು ನೇರವಾಗಿ ಹೇಳಿದ್ದಾರೆ. ಜತೆಗೆ ದರ್ಶನ್‌ಗೆ ಈ ಸ್ಥಿತಿ ಏಕೆ ಬಂತು, ಇಂಥ ಕೃತ್ಯವೆಸಗಲು ಏನು ಕಾರಣ? ಎಂಬುದನ್ನೂ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಆಪ್ತೆ ಪವಿತ್ರ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ, ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕರೆತಂದು, ಹತ್ಯೆ ಮಾಡಿದ ಆರೋಪ ದರ್ಶನ್‌ ಮೇಲಿದೆ. ಸದ್ಯ ದರ್ಶನ್‌ ಅಂಡ್‌ ಗ್ಯಾಂಗ್‌ ಇದೇ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿದೆ. ಹೀಗಿರುವಾಗಲೇ, ಇದೇ ಕೇಸ್‌ ಬಗ್ಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. "ದರ್ಶನ್‌ಗೆ ಕಾಮನ್‌ಸೆನ್ಸ್‌ ಇದ್ದಿದ್ದರೆ ಹೀಗಾಗ್ತಿತ್ತಾ. ದುಡ್ಡಿದೆ ಅಷ್ಟೇ ಅವನ ಹತ್ರ, ಬೌದ್ಧಿಕ ಪ್ರಜ್ಞೆ ಇಲ್ಲ. ಕಾಮನ್‌ ಸೆನ್ಸ್‌ ಇಲ್ಲ. ಹೋಗ್ಲಿ ಅವನು ಕೊಲೆಪಾತಕಿಯಾ? ಪ್ರೊಫೆಷನಲ್‌ ಮರ್ಡರರ್‌? ಆದರೆ, ಕೊಲೆ ಮಾಡಿದ್ದಾನೆ ಎಂದರೆ ಕ್ರೌರತ್ವ ಹೇಗೆ ಬಂತು? ಧಿಮಾಕು ದುರಹಂಕಾರ, ಅನುಭವದ ಕೊರತೆಯಿಂದ ಇಷ್ಟೆಲ್ಲ ಆಗಿದೆ" ಎಂದಿದ್ದಾರೆ.

ಅಣ್ಣಾವ್ರಿಗೂ ಕೋಪ ಬಂದಿತ್ತು, ಆದ್ರೆ, ಹೀಗೆ ಮಾಡಲಿಲ್ಲ..

"ರಾಜ್‌ಕುಮಾರ್‌ಗೂ ಕೋಪ ಬಂದಿಲ್ವಾ? ಅಮರಶಿಲ್ಪಿ ಜಕಣಾಚಾರಿ ಸಿನಿಮಾ ಶೂಟಿಂಗ್‌ ವೇಳೆ ಮೇಕಪ್‌ ಮಾಡಿಕೊಂಡು ರೆಡಿಯಾಗಿದ್ದ ರಾಜ್‌ಕುಮಾರ್‌ಗೆ, ಅದನ್ನು ಅಳಿಸಿಬಿಟ್ಟು, ಕಲ್ಯಾಣ್‌ ಕುಮಾರ್‌ಗೆ ಆ ಪಾತ್ರ ಕೊಟ್ಟಾಗ, ರಾಜ್‌ಕುಮಾರ್‌ ಅವರಿಗೆ ಹೇಗಾಗಿರಬೇಡ. ಇನ್ನೇನು ಪಾತ್ರ ಮಾಡಬೇಕು ಅಂಥ ಸಮಯದಲ್ಲಿ ಬೇಡ ಅಂದ್ರೆ ಅವರ ಮನಸ್ಥಿತಿ ಹೇಗಿರಬೇಡ. ಅದನ್ನೇ ಅವರು ತಾಳ್ಮೆಯಿಂದ ಪರಿಹರಿಸಿಕೊಂಡರು. ಒಳ್ಳೆಯ ನಟನಾಗಿ, ಒಳ್ಳೆಯ ನಡವಳಿಕೆಯಿಂದ ಅವರನ್ನು ಮೀರಿಸಿ ದೊಡ್ಡ ನಟನಾದರು. ನಮ್ಮ ಎದುರಿನ ಪ್ರತ್ಯಕ್ಷ ಉದಾಹರಣೆ ಇದು" ಎಂದಿದ್ದಾರೆ.

ಅಪರಾಧದ ಸರಮಾಲೆ ಕಾಣಿಸುತ್ತದೆ..

"ದರ್ಶನ್‌ ಅನ್ನೋದಕ್ಕಿಂತ ಈ ಥರದ ಘಟನೆಗಳು ನಡೆಯಬಾರದು. ಇದು ಬರೀ ಕೊಲೆ ಅಲ್ಲ. ಇವರು ಮೂಲತಃ ಕೊಲೆಗಾರರಲ್ಲ. ಸೈಕಿಕ್‌ ಅಲ್ಲ. ಆ ಟೀಮ್‌ ಕೊಲೆಗಾರರಲ್ಲ. ಆ ಕೊಲೆ ಆಗಿಹೋಗಿದೆ. ಅದೇ ರೀತಿ ಕೊಲೆಯಾದ ವ್ಯಕ್ತಿ ಮಾಡಿದ್ದೂ ಮಹಾಪರಾಧವೇ. ಅದೇ ರೀತಿ ಇಲ್ಲಿ ಪವಿತ್ರಾ ಗೌಡ ಬಗ್ಗೆಯೇ ಹೇಳಲು ಸಾಧ್ಯವಿಲ್ಲ. ಅದು ಅವರ ವೈಯಕ್ತಿಕ ವಿಚಾರ. ಆದರೆ, ಇಲ್ಲಿ ಅವಳದ್ದೂ ತಪ್ಪಿದೆ. ಮದುವೆಯಾದ ವ್ಯಕ್ತಿ ಜತೆಗೆ, ಡಿವೋರ್ಸ್‌ ಆಗದ ವ್ಯಕ್ತಿಯನ್ನು ಲವ್‌ ಮಾಡುವುದು ಇನ್ನೊಂದು ಅಪರಾಧ. ಇದೆಲ್ಲವನ್ನು ನೋಡಿದರೆ, ಸಾಮಾಜಿಕ ದೃಷ್ಟಿಯನ್ನಿಟ್ಟುಕೊಂಡು ಕಾನೂನು ಒಂದು ನಿರ್ಧಾರಕ್ಕೆ ಬರಬೇಕು" ಎಂದು ಹೇಳಿಕೊಂಡಿದ್ದಾರೆ.

ತೂಗುದೀಪ ಶ್ರೀನಿವಾಸ್‌ಗೂ ಸಿಟ್ಟು..

"ತೂಗುದೀಪ ಶ್ರೀನಿವಾಸ್‌ ಕೌಟುಂಬಿಕ ವಿಚಾರದಲ್ಲಿ ತುಂಬ ಎಚ್ಚರಿಕೆ ವಹಿಸ್ತಿದ್ರು. ಆಚೆ ಕಡೆ ಚಟ ಚಪಲ ಇದ್ದರೂ ತಮ್ಮ ತನವನ್ನು ಉಳಿಸಿಕೊಂಡಿದ್ರು. ಒಂದು ವೇಳೆ ಇದೀಗ ಅವರು ಬದುಕಿದ್ದಿದ್ರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು, ಇಲ್ಲ ಮಗ ಅನ್ನೋ ಮಮಕಾರಕ್ಕೆ ಯಾರನ್ನಾದರೂ ಹಿಡ್ಕೊಂಡು, ಅವನನ್ನು ಉಳಿಸಿಕೊಳ್ಳಲು ಹೋರಾಡ್ತಿದ್ದರು. ನಾನು ನೋಡಿದಂತೆ, ತೂಗುದೀಪ ಶ್ರೀನಿವಾಸ ಅವರ ಜತೆ 25ಕ್ಕೂ ಅಧಿಕ ಸಿನಿಮಾ ಮಾಡಿದ್ದೇನೆ. ಅವರು ನನಗಿಂತ 10 ವರ್ಷ ದೊಡ್ಡವರಾದರೂ, ನೋಡುಗರಿಗೆ ಸಮಕಾಲೀನರು ಅನಿಸುತ್ತಿತ್ತು. ಶೂಟಿಂಗ್‌ ಸಂದರ್ಭದಲ್ಲಿ ಶ್ರೀನಿವಾಸ್‌ ಅವರಿಗೂ ಸಿಟ್ಟು ಬರ್ತಿತ್ತು. ದರ್ಶನ್‌ಗೆ ಯಾವ ರೀತಿ ಇದೆಯೋ ಆ ರೀತಿ ಇತ್ತು. ಆದರೆ, ಅದು ನಕಾರಾತ್ಮಕ ಸಿಟ್ಟು ಆಗಿರುತ್ತಿರಲಿಲ್ಲ. ಊಟ ಸರಿಯಾಗಿ ಕೊಡದಿದ್ದರೆ, ಶೂಟಿಂಗ್‌ ಸಮಯ ಹಾಳು ಮಾಡಿದ್ರೆ, ಸಿಟ್ಟು ಮಾಡಿಕೊಳ್ತಿದ್ದರು. ಅದನ್ನು ಬಿಟ್ಟು ಬೇರೆ ಸಿಟ್ಟು ಕಾಣಿಸಿಲ್ಲ" ಎಂದಿದ್ದಾರೆ.

ಹಣ ಸಿಗ್ತಿದ್ದಂತೆ, ದರ್ಶನ್‌ ಕಳೆದುಹೋಗಿಬಿಟ್ಟ..

"ಹಣ ಸಿಗ್ತಿದ್ದಂತೆ, ಮೂಲ ದರ್ಶನ್‌ ಕಳೆದುಹೋಗಿಬಿಟ್ಟ. ನೇಮು ಫೇಮು ಸಿಕ್ತಿದ್ದಂತೆ, ಫ್ಯಾನ್ಸ್‌ ಜಾಸ್ತಿಯಾಗಿದ್ದಂತೆ, ಮೊದಲಿನ ದರ್ಶನ್‌ ಈಗಿಲ್ಲ. ಸಹವಾಸ ದೋಷವೂ ಇದಕ್ಕೆ ಕಾರಣ. ಮನುಷ್ಯತ್ವವನ್ನು ಕಳೆದುಕೊಳ್ಳುತ್ತ ಹೋದ. ನಡವಳಿಕೆಯಲ್ಲಿ ವ್ಯತ್ಯಾಸ ಆಗ್ತಾ ಹೋಯ್ತು. ಮನುಷ್ಯನಾಗಿ ಇದ್ದಿದ್ದರೆ, ಇಂಥ ಸ್ಥಿತಿ ಬರುತ್ತಿರಲಿಲ್ಲ. ಕಾನೂನಿನ ಮೊರೆ ಹೋಗಿ, ಪೊಲೀಸರ ಮುಂದಿಟ್ಟಿದ್ದರೆ, ಈ ಸಮಸ್ಯೆ ಬಗೆಹರೀತಿತ್ತು. ಸಿಟ್ಟಿನಲ್ಲಿ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಕೊಲೆ ನಡೆದಿಲ್ಲ. ಆದರೆ, ಕೊಲೆ ಕೊಲೆಯೇ" ಎಂದಿದ್ದಾರೆ ಮುಖ್ಯಮಂತ್ರಿ ಚಂದ್ರು.

Whats_app_banner