4 ಮಕ್ಕಳು, 40 ದಿನ, ದಟ್ಟ ಮಳೆಕಾಡಿನಲ್ಲಿ ತಮ್ಮತಂಗಿಯರ ಜತನದಿಂದ ಕಾಪಾಡಿದ ಪುಟ್ಟಕ್ಕನ ಕಥೆ; ದಿ ಲಾಸ್ಟ್ ಚಿಲ್ಡನ್ ವಿಮರ್ಶೆ
Nov 17, 2024 02:58 PM IST
ದಿ ಲಾಸ್ಟ್ ಚಿಲ್ಡನ್ ವಿಮರ್ಶೆ
- The Lost Children: ವಿಮಾನವೊಂದು ಅಪಘಾತಗೊಂಡ ಬಳಿಕ ಅಮೆಜಾನ್ ಕಾಡಿನಲ್ಲಿ ಕಾಣೆಯಾದ 13, 9, 4 ವರ್ಷ ವಯಸ್ಸಿನ ಮಕ್ಕಳು ಮತ್ತು 12 ತಿಂಗಳ ಮಗುವನ್ನು ಹುಡುಕುವಂತಹ "ಆಪರೇಷನ್ ಹೋಪ್" ಎಂಬ ಸತ್ಯಘಟನೆಯ ಸಾಕ್ಷ್ಯಚಿತ್ರ ಈಗ ನೆಟ್‌ಫ್ಲಿಕ್ಸ್‌ನಲ್ಲಿದೆ.
The Lost Children: ವಿಮಾನವೊಂದು ಅಪಘಾತಗೊಂಡ ಬಳಿಕ ಅಮೆಜಾನ್ ಕಾಡಿನಲ್ಲಿ ಕಾಣೆಯಾದ 13, 9, 4 ವರ್ಷ ವಯಸ್ಸಿನ ಮಕ್ಕಳು ಮತ್ತು 12 ತಿಂಗಳ ಮಗುವನ್ನು ಹುಡುಕುವಂತಹ "ಆಪರೇಷನ್ ಹೋಪ್" ಎಂಬ ಸತ್ಯಘಟನೆಯ ಸಾಕ್ಷ್ಯಚಿತ್ರ ಈಗ ನೆಟ್‌ಫ್ಲಿಕ್ಸ್‌ನಲ್ಲಿದೆ. ಮಕ್ಕಳ ದಿನಾಚರಣೆಯಂದು ಬಿಡುಗಡೆಯಾದ ಈ ಡಾಕ್ಯುಮೆಂಟರಿಯಲ್ಲಿ ಅಂದು ನಡೆದ ನೈಜ ಘಟನೆಯನ್ನು ಮರುರಚಿಸುವಂತಹ ಪ್ರಯತ್ನ ಮಾಡಲಾಗಿದೆ.
ಹೇಗಿದೆ ದಿ ಲಾಸ್ಟ್ ಚಿಲ್ಡನ್?
ಇದು ಡಾಕ್ಯುಮೆಂಟರಿ. ಹೀಗಾಗಿ, ಸಿನಿಮಾದ ರೋಚಕತೆಯನ್ನು ನಿರೀಕ್ಷಿಸಬೇಡಿ. ಇಲ್ಲಿ ಮಕ್ಕಳ ಹುಡುಕಾಟವನ್ನು ಅತ್ಯಂತ ಸಾವಧಾನವಾಗಿ ಹೇಳುತ್ತಾ ಹೋಗಲಾಗಿದೆ. ಇದರಿಂದ ನೋಡುಗರಿಗೆ "ಒಮ್ಮೆ ಮಕ್ಕಳು ಸಿಗಲಿ" "ಎಲ್ಲಿದ್ದಾರೋ, ಪಾಪ" ಎಂಬ ಭಾವ ಮೂಡುತ್ತದೆ. ಜತೆಗೆ, ಕೊಲಂಬಿಯನ್ ದಟ್ಟ ಮಳೆಕಾಡಿನ ಪರಿಚಯವೂ ಆಗುತ್ತದೆ.
ಕಳೆದ ವರ್ಷ ಕೊಲಂಬಿಯಾದ ಮಳೆಕಾಡಿನಲ್ಲಿ ನಡೆದ ನೈಜ ಘಟನೆಯಿದು. ವಿಮಾನ ಅಪಘಾತದಲ್ಲಿ ದೊಡ್ಡವರು ಮೃತಪಟ್ಟಿದ್ದರು. ಒಬ್ಬಳು ಅಕ್ಕ, ತನ್ನ ತಂಗಿಯರನ್ನು (ಪುಟ್ಟ 11-12 ತಿಂಗಳ) ಜತನದಿಂದ ಆ ದಟ್ಟ ಕಾಡಿನಲ್ಲಿ 40 ದಿನಗಳ ಕಾಲ ಕಾಪಾಡಿದ ಕಥೆ ಇದಾಗಿದೆ. ಅಷ್ಟು ದಿನ ಆ ಮಕ್ಕಳಿಗೆ ತಿನ್ನಲು ಏನಿತ್ತು. ಆ ಮಕ್ಕಳು ಅಷ್ಟು ದಿನ ಬದುಕಿದ್ದು ಹೇಗೆ? ಇಡೀ ಜಗತ್ತಿನ ಗಮನ ಸೆಳೆದ ಈ ಹೃದಯಸ್ಪರ್ಷಿ ಘಟನೆಯ ಡಾಕ್ಯುಮೆಂಟರಿ ಇದಾಗಿದೆ.
11 ತಿಂಗಳಿನಿಂದ 13 ವರ್ಷ ವಯಸ್ಸಿನ ನಾಲ್ವರು ಸಹೋದರ ಸಹೋದರಿಯರು ತಮ್ಮ ಹೆತ್ತವರೊಂದಿಗೆ ಲಘು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅಮೆಜಾನ್ ಕಾಡಿನ ಒಂದು ಭಾಗದಲ್ಲಿ ವಿಮಾನ ಕ್ರ್ಯಾಶ್ ಆಗಿತ್ತು. ಘಟನೆಯಲ್ಲಿ ಆ ನಾಲ್ವರು ಮಕ್ಕಳ ತಾಯಿ ಸೇರಿದಂತೆ ಮೂವರು ವಯಸ್ಕರು ಮೃತಪಟ್ಟಿದ್ದರು.
ಆಪರೇಷನ್ ಹೋಪ್
ಎಲ್ಲರೂ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದುಕೊಳ್ಳುವಾಗ ದೂರದಲ್ಲಿ ಮಗುವಿನ ಹಾಲಿನ ಬಾಟಲಿ ಸೇರಿದಂತೆ ಕೆಲವು ಸಾಕ್ಷ್ಯಗಳು ದೊರಕುತ್ತವೆ. ಈ ಮಕ್ಕಳು ಬದುಕಿರಬಹುದು ಎಂಬ ಒಂದು ಭರವಸೆ ಮೂಡುತ್ತದೆ. ಆಪರೇಷನ್ ಹೋಪ್ ಹೆಸರಿನಲ್ಲಿ ಮಿಲಿಟರಿ ಮತ್ತು ಸ್ಥಳೀಯ ತಂಡ ಆ ಮಕ್ಕಳ ಹುಡುಕಾಟವನ್ನು ದೊಡ್ಡ ಮಟ್ಟದಲ್ಲಿ ನಡೆಸಿತು. ಮಕ್ಕಳನ್ನು ಹುಡುಕಲು ಮೆಗಾಫೋನ್‌ನೊಂದಿಗೆ ಹೆಲಿಕಾಪ್ಟರ್‌ಗಳು ಕಾಡಿನಲ್ಲಿ ಸುತ್ತಾಟ ನಡೆಸಿದವು. ಸಾಕಷ್ಟು ಸೈನಿಕರು ಕಣ್ಣಲ್ಲಿ ಕಣ್ಣಿಟ್ಟು ಹುಡುಕಿದರು. ಸ್ಥಳೀಯ ಊರಿನ ಜನರು, ಹುಯಿಟೊಟೊ ಜನರು, ಸ್ಥಳೀಯ ಸ್ವಯಂಸೇವಕರೂ ಹುಡುಕಾಟದಲ್ಲಿ ಪಾಲ್ಗೊಂಡರು.
ನೆಟ್‌ಫ್ಲಿಕ್ಸ್‌ನಲ್ಲಿರುವ ಡಾಕ್ಯುಮೆಂಟರಿಯಲ್ಲಿ ಸಿನಿಮಾ ಶೂಟಿಂಗ್ ತಂಡ ಕೂಡ ಈ ತಂಡದ ಜತೆ ಹುಡುಕಾಟ ನಡೆಸುತ್ತದೆ. ಈ ಮೂಲಕ ಡಾಕ್ಯುಮೆಂಟರಿಯಲ್ಲಿ ನೈಜ ಘಟನೆಯನ್ನು, ನೈಜ್ಯವಾಗಿ ಶೂಟಿಂಗ್ ಮಾಡಿದಂತೆ ಚಿತ್ರೀಕರಿಸಲಾಗಿದೆ. ಆದರೆ, ಕಳೆದ ವರ್ಷದ ಘಟನೆಯಲ್ಲಿ ಈ ರೀತಿ ಸಿನಿಮಾ (ಡಾಕ್ಯುಮೆಂಟರಿ) ತಂಡ ಜತೆಗೆ ಇರಲಿಲ್ಲ. ಡಾಕ್ಯುಮೆಂಟರಿಯನ್ನು ತುಸು ರೋಚಕವಾಗಿಸುವ ಸಲುವಾಗಿ ಈ ರೀತಿ ಮಾಡಲಾಗಿದೆ.
ಕ್ರ್ಯಾಶ್ ಆಗಿ ಬಿದ್ದ ವಿಮಾನವನ್ನು ಹುಡುಕಲು ರಕ್ಷಣಾ ತಂಡಕ್ಕೆ ಒಂದು ವಾರ ಬೇಕಾಯಿತು. ಮತ್ತೆ ಹಲವು ದಿನಗಳ ಕಾಲ ಮಕ್ಕಳನ್ನು ಹುಡುಕಾಟ ನಡೆಸಲಾಗುತ್ತದೆ. ಮಕ್ಕಳು ದೊರಕದೆ ಇರುವಾಗ ಒಂದಿಷ್ಟು ನಾಟಕೀಯ ಟ್ವಿಸ್ಟ್‌ಗಳು, ಬೆಳವಣಿಗೆಗಳು ನಡೆಯುತ್ತವೆ. ನಿಜಕ್ಕೂ ಮಕ್ಕಳು ತಪ್ಪಿಕೊಂಡಿದ್ದಾರೆಯೇ? ಆ ಕಾಡಿನ ಜನರನ್ನು ಟಾರ್ಗೆಟ್ ಮಾಡಲಾಯಿತೇ, ಕೊಲಂಬಿಯಾದ ನಾಗರಿಕ ಯುದ್ಧಕ್ಕೆ ಇಲ್ಲಿನ ಜನರನ್ನು ಮಿಲಿಟರಿ ಟಾರ್ಗೆಟ್ ಮಾಡುತ್ತಿದೆಯೇ? ಇತ್ಯಾದಿ ನಂಬಿಕೆ, ಅಪನಂಬಿಕೆಯ ಪ್ರಶ್ನೆಗಳು ಉಂಟಾಗುತ್ತವೆ.
ಈ ಸಮಯದಲ್ಲಿ ಕೊನೆಗೆ ಮಕ್ಕಳು ಪತ್ತೆಯಾಗುತ್ತಾರೆ. ಈ ಡಾಕ್ಯುಮೆಂಟರಿಯ ಹೀರೋ, ಈ ಮಕ್ಕಳಲ್ಲಿಯೇ ಹಿರಿಯವಳಾದ ಲೆಸ್ಲಿ ತನ್ನ ಗಾಯಗೊಂಡ ಕಾಲುಗಳ ನಡುವೆ ಸುಮಾರು 40 ದಿನಗಳ ಕಾಲ ತನಗಿಂತ ಕಿರಿಯ ತಂಗಿಯರು, ತಮ್ಮನನ್ನು ಅಮ್ಮನಂತೆ ಜತನದಿಂದ ಆ ಕಾಡಿನಲ್ಲಿ ಕಾಪಾಡಿದ ಕಥೆ ತಿಳಿಯುತ್ತದೆ. ಅಲ್ಲಿ ದಿನದ ಹದಿನಾರು ಗಂಟೆ ಮಳೆ ಇರುತ್ತದೆ. ಆ ಸಮಯ ಹಣ್ಣು ಬಿಡುವ ಸುಗ್ಗಿ ಸಮಯವಾಗಿತ್ತು. ಇದು ಮಕ್ಕಳು ಹೆಚ್ಚು ದಿನ ಬದುಕಿ ಉಳಿಯಲು ಸಹಾಯವಾಗಿತ್ತು. ಜತೆಗೆ, ಈ ಮಕ್ಕಳಿಗೆ ಕಾಡಿನ ಬದುಕು ಗೊತ್ತಿತ್ತು. ಆ ಮಕ್ಕಳು ಮಕ್ಕಳು ಸ್ಥಳೀಯ ಹುಯಿಟೊಟೊ ಗುಂಪಿನ ಸದಸ್ಯರಾಗಿದ್ದರು. ಇದು ಕೂಡ ಇವರು ಹೆಚ್ಚು ದಿನ ಬದುಕಿ ಉಳಿಯಲು ಸಹಾಯವಾಗಿತ್ತು. ಈ ಕಾಡು ಎಷ್ಟು ದಟ್ಟವಾಗಿತ್ತು ಎಂದರೆ ರಕ್ಷಣಾ ಹೆಲಿಕಾಪ್ಟರ್‌ಗಳಿಗೆ ಇಳಿಯಲು ಎಲ್ಲೂ ಸ್ಥಳ ಇರಲಿಲ್ಲ. ಮಕ್ಕಳನ್ನು ಹೆಲಿಕಾಪ್ಟರ್‌ಗೆ ಹಗ್ಗದ ಮೂಲಕವೇ ಎಳೆದುಕೊಳ್ಳಬೇಕಾಯಿತು. ನೆಟ್‌ಫ್ಲಿಕ್ಸ್‌ನಲ್ಲಿರುವ ಈ ಭಾವುಕ ಡಾಕ್ಯುಮೆಂಟರಿಯನ್ನು ಆಸಕ್ತರು ವೀಕ್ಷಿಸಬಹುದು.
ವಿಭಾಗ