Jio Star OTT: ಒಟಿಟಿಯಲ್ಲಿ ಹೊಸ ಸೆನ್ಸೇಷನ್; ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ಗೆ ಟಕ್ಕರ್‌ ಕೊಡಲು ವಿಲೀನದ ಮೊರೆ ಹೋದ ಅಂಬಾನಿ
ಕನ್ನಡ ಸುದ್ದಿ  /  ಮನರಂಜನೆ  /  Jio Star Ott: ಒಟಿಟಿಯಲ್ಲಿ ಹೊಸ ಸೆನ್ಸೇಷನ್; ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ಗೆ ಟಕ್ಕರ್‌ ಕೊಡಲು ವಿಲೀನದ ಮೊರೆ ಹೋದ ಅಂಬಾನಿ

Jio Star OTT: ಒಟಿಟಿಯಲ್ಲಿ ಹೊಸ ಸೆನ್ಸೇಷನ್; ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ಗೆ ಟಕ್ಕರ್‌ ಕೊಡಲು ವಿಲೀನದ ಮೊರೆ ಹೋದ ಅಂಬಾನಿ

JioCinema Disney+ Hotstar Merge: ಒಟಿಟಿ ಹಕ್ಕುಗಳನ್ನು ಪಡೆಯುವಲ್ಲಿ ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್ ಪ್ರೈಮ್ ನಡುವೆ ದೊಡ್ಡ ಸ್ಪರ್ಧೆ ಇದೆ. ಈ ವಿಚಾರದಲ್ಲಿ ಅದ್ಯಾಕೋ ಜಿಯೋ ಸಿನಿಮಾ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಕೊಂಚ ಹಿಂದುಳಿದಿವೆ. ಈಗ ಪುಟಿದೆದ್ದು ಬರುವ ಸಲುವಾಗಿ ರಿಲಯನ್ಸ್‌ ಮತ್ತು ಡಿಸ್ನಿ ಕೈ ಜೋಡಿಸಿ, ವಿಲೀನವಾಗುತ್ತಿವೆ.


ರಿಲಯನ್ಸ್‌ ಮತ್ತು ಡಿಸ್ನಿ ವಿಲೀನ
ರಿಲಯನ್ಸ್‌ ಮತ್ತು ಡಿಸ್ನಿ ವಿಲೀನ

Jio Star OTT: ಒಟಿಟಿ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಪ್ಲಾಟ್‌ಫಾರ್ಮ್‌ಗಳು ಮಾತ್ರ ಮುನ್ನೆಲೆಯಲ್ಲಿವೆ. ಅವುಗಳಲ್ಲಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಪ್ರಮುಖ ಒಟಿಟಿಗಳು. ಈ ಒಟಿಟಿಗಳು ಸಾವಿರಾರು ಮಿಲಿಯನ್‌ ಡೌನ್‌ಲೋಡ್ಸ್‌ ಹೊಂದಿವೆ. ಆ ಪೈಕಿ ನೆಟ್‌ಫ್ಲಿಕ್ಸ್‌ ಮತ್ತು ಪ್ರೈಂ ಅಗ್ರಸ್ಥಾನದಲ್ಲಿವೆ. ಈ ಎರಡು ಒಟಿಟಿಗಳಿಗೆ ಟಕ್ಕರ್‌ ಕೊಡಲು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮತ್ತು ಜಿಯೋ ಸಿನಿಮಾ ಒಂದಾಗಿವೆ. ಅಂದರೆ, ಈ ಎರಡು ಒಟಿಟಿಗಳು ವಿಲೀನಗೊಂಡಿವೆ. ಜಿಯೋ ಸ್ಟಾರ್‌ ಎಂಬ ಹೊಸ ಹೆಸರಿನೊಂದಿಗೆ ಇದೇ ನವೆಂಬರ್‌ 14ರಿಂದ ಹೊಸ ವರ್ಷನ್‌ ಒಟಿಟಿ ಬಳಕೆದಾರರಿಗೆ ಲಭ್ಯವಾಗಲಿದೆ.

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮತ್ತು ಜಿಯೋ ಸಿನಿಮಾ ವಿಲೀನದ ಸುದ್ದಿ ಈ ವರ್ಷದ ಆರಂಭದಿಂದಲೂ ಹರಿದಾಡುತ್ತಲೇ ಇದೆ. ಆ ಪೈಕಿ ದೊಡ್ಡ ವೀಕ್ಷಕ ಬಳಗ ಮತ್ತು ಅತ್ಯುತ್ತಮ ತಂತ್ರಜ್ಞಾನ ಅಳವಡಿಸಿಕೊಂಡಿರುವ ಹಾಟ್‌ಸ್ಟಾರ್‌, ಈಗ ಜಿಯೋ ಜತೆಗೆ ಒಂದಾಗುತ್ತಿದೆ. ಇತ್ತ ಜಿಯೋ ಸಿನಿಮಾ ಸಹ ಒಟಿಟಿ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ದೊಡ್ಡ ವೀಕ್ಷಕ ಬಳಗವನ್ನು ಸಂಪಾದಿಸಿದೆ. ಭಾರತದ ಎಲ್ಲ ಭಾಷೆಗಳಲ್ಲಿ ತನ್ನದೇ ಆದ ಹಿಡಿತ ಸಾಧಿಸಿದೆ. ಈ ಮೂಲಕ ಈ ಎರಡು ನೆಟ್‌ವರ್ಕ್‌ಗಳು ವಿಲೀನವಾಗುವ ಮೂಲಕ, ಒಟಿಟಿ ಕ್ಷೇತ್ರದಲ್ಲಿ ಹೊಸ ದಾಪುಗಾಲಿಡಲು ಸಜ್ಜಾಗಿವೆ.

ಪ್ರೈಮ್, ನೆಟ್‌ಫ್ಲಿಕ್ಸ್‌ಗೆ ಟಕ್ಕರ್‌

ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್ ಪ್ರೈಮ್ ಒಟಿಟಿ ಕಂಪನಿಗಳು, ಕೋಟಿ ಕೋಟಿ ನೀಡಿ ಸಿನಿಮಾಗಳ ಡಿಜಿಟಲ್‌ ಹಕ್ಕುಗಳನ್ನು ಪಡೆದುಕೊಳ್ಳುತ್ತಿದ್ದವು. ಅದರಂತೆ, ಬಹುತೇಕ ಸಿನಿಮಾ, ಶೋ, ಸೇರಿ ಒರಿಜಿನಲ್‌ಗಳು ಈ ಒಟಿಟಿಯಲ್ಲಿಯೇ ಹೆಚ್ಚು ಸಿಗುತ್ತಿದ್ದವು. ಈಗ ಈ ಎರಡೂ ಕಂಪನಿಗಳಿಗೆ ಪೈಪೋಟಿಯಾಗಿ ಜಿಯೋ ಸ್ಟಾರ್‌ ಸೃಷ್ಟಿಯಾಗಿದೆ. ಈ ಮೂಲಕ ಸ್ಪರ್ಧೆ ಮತ್ತಷ್ಟು ಬಿರುಸಾಗಲಿದೆ. ಡಿಜಿಟಲ್ ಎಂಟರ್‌ಟೈನ್‌ಮೆಂಟ್‌ ಉದ್ಯಮದಲ್ಲಿ ಛಾಪು ಮೂಡಿಸಲು ಹೊಸ ಹೊಸ ಆವಿಷ್ಕಾರಕ್ಕೆ ಮುಂದಾಗುತ್ತಿರುವ ಮುಖೇಶ್ ಅಂಬಾನಿ, ಈ ಒಪ್ಪಂದದ ಹಿಂದೆ ದೊಡ್ಡ ಪ್ಲಾನ್‌ವೊಂದನ್ನು ರೂಪಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ನವೆಂಬರ್ 14 ರಿಂದ Jio Star

ಜಿಯೋ ಸ್ಟಾರ್‌ ಹೊಸ ಒಟಿಟಿ ನವೆಂಬರ್ 14ರಿಂದ ಲಭ್ಯವಿರಲಿದೆ. ಪ್ರಸ್ತುತ ಜಿಯೋ ಸಿನಿಮಾ ಪ್ಲೇ ಸ್ಟೋರ್‌ನಲ್ಲಿ 100 ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿದ್ದರೆ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ 500 ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿದೆ. ಸ್ಟಾರ್ ಇಂಡಿಯಾ ಡಿಸ್ನಿ ಜೊತೆಗೆ ಹಾಟ್‌ಸ್ಟಾರ್ ಒಟಿಟಿ ಸೇರಿ ಹಲವು ಟಿವಿ ಚಾನೆಲ್‌ಗಳನ್ನು ಹೊಂದಿದ್ದರೆ, ರಿಲಯನ್ಸ್‌ ಕಂಪನಿ ವಯಾಕಾಮ್, ಜಿಯೋ ಸಿನಿಮಾ ಒಟಿಟಿ ಸೇರಿ ಪ್ರಾದೇಶಿಕ ಭಾಷೆಯಲ್ಲಿಯೂ ಹತ್ತಾರು ಚಾನೆಲ್‌ಗಳನ್ನು ಹೊಂದಿದೆ. ಸದ್ಯ ಇವೆರಡರ ವಿಲೀನ ಬಹುತೇಕ ಪೂರ್ಣಗೊಂಡಿದ್ದು, ನವೆಂಬರ್ 14ರಿಂದ ಲಭ್ಯವಿರುತ್ತದೆ.

ಕೇವಲ ಸಿನಿಮಾ ಸಲುವಾಗಿ ಮಾತ್ರ..

ಕ್ರಿಕೆಟ್‌ ಲೈವ್‌ ಸ್ಟ್ರೀಮಿಂಗ್‌ನಲ್ಲಿ ಜಿಯೋ ಸಿನಿಮಾ ಈಗಾಗಲೇ ಮುಂದಡಿ ಇರಿಸಿದೆ. ಹಾಗಂತ ಈ ಹೊಸ ಜಿಯೋ ಸ್ಟಾರ್‌ನಲ್ಲಿ ಕ್ರಿಕೆಟ್‌ ವೀಕ್ಷಣೆ ಸಾಧ್ಯವಿಲ್ಲ. ಮನರಂಜನೆಯ ಉದ್ದೇಶದಿಂದ ಸಿನಿಮಾ, ಶೋಗಳಿಗಷ್ಟೇ ಈ ವೇದಿಕೆ ಇರಲಿದೆ.

ಎಷ್ಟು ಹಣ ಪಾವತಿಸಬೇಕು?

ಜಿಯೋ ಸ್ಟಾರ್ ಒಟಿಟಿಯ ಸಬ್‌ಸ್ಕ್ರಿಪ್ಷನ್‌ಗೆ ಎಷ್ಟು ಮೊತ್ತ ಪಾವತಿಸಬೇಕು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಜಿಯೋ ಸಿನಿಮಾ ಉಚಿತವಾಗಿದ್ದರೆ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಕಂಟೆಂಟ್‌ ವೀಕ್ಷಿಸಲು ಹಣ ಪಾವತಿಸಬೇಕು. ಇದೀಗ ಇವೆರಡೂ ವಿಲೀನಗೊಂಡಿದ್ದು, ದರ ಹೇಗಿರಲಿದೆ?‌ ಈ ಒಟಿಟಿಯ ವಿಶೇಷತೆಗಳು ಹೇಗಿರಲಿವೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ. ಇನ್ನೇನು ನವೆಂಬರ್‌ 14ರಂದು ತಿಳಿಯಲಿದೆ.

Whats_app_banner