Samantha on Divorce: ‘ಮನೆಯಲ್ಲೇ ಇರು, ಐಟಂ ಸಾಂಗ್ ಮಾಡೋದು ಬೇಕಿಲ್ಲ..’; ಡಿವೋರ್ಸ್ ಘೋಷಣೆ ಕ್ಷಣದ ಬಗ್ಗೆ ಮೌನ ಮುರಿದ ಸಮಂತಾ..
Mar 29, 2023 12:50 PM IST
‘ಮನೆಯಲ್ಲೇ ಇರು, ಐಟಂ ಸಾಂಗ್ ಮಾಡೋದು ಬೇಕಿಲ್ಲ..’; ಡಿವೋರ್ಸ್ ಘೋಷಣೆ ಕ್ಷಣದ ಬಗ್ಗೆ ಮೌನ ಮುರಿದ ಸಮಂತಾ..
ವಿಚ್ಛೇದನ ಘೋಷಣೆ ಬಳಿಕ ಸಮಂತಾ ಮನಸ್ಥಿತಿ ಹೇಗಿತ್ತು? ಮನೆಯವರು, ಸ್ನೇಹಿತರ ಮಾತೇನಾಗಿತ್ತು? ಇದೆಲ್ಲದರ ಬಗ್ಗೆ ಸ್ವತಃ ಸಮಂತಾ ಹೇಳಿಕೊಂಡಿದ್ದಾರೆ.
Samantha on Divorce: ನಾಗಚೈತನ್ಯ ಮತ್ತು ಸಮಂತಾ ಅವರದ್ದು ಟಾಲಿವುಡ್‌ನ ಸುಂದರ ಜೋಡಿ. ಆದರೆ, ಮದುವೆಯಾದ ಕೆಲವೇ ವರ್ಷ ಮಾತ್ರ ಈ ಜೋಡಿ ಜೊತೆಗಿತ್ತು. 2021ರಲ್ಲಿ ದಿಢೀರ್ ಎಂದು ವಿಚ್ಛೇದನದ ನಿರ್ಧಾರ ಘೋಷಣೆ ಮಾಡಿದ್ದರು. ಅಭಿಮಾನಿ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದ್ದ ಈ ಸುದ್ದಿ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯ್ತು. ಆದರೆ, ಈ ವಿಚ್ಛೇದನಕ್ಕೆ ಕಾರಣ ಏನಿರಬಹುದು ಎಂಬುದು ಅಸ್ಪಷ್ಟವಾಗಿತ್ತು. ಇದೀಗ ಆ ಕ್ಷಣದ ಬಗ್ಗೆ ಸ್ವತಃ ಸಮಂತಾ ಮಾತನಾಡಿದ್ದಾರೆ.
ಸಮಂತಾ ಮತ್ತು ನಾಗಚೈತನ್ಯ ಇಬ್ಬರದ್ದು ಪ್ರೇಮ ವಿವಾಹ. ಏ ಮಾಯೇ ಚೇಸಾವೆ ಸಿನಿಮಾ ಮೂಲಕ ಒಂದಾಗಿದ್ದ ಈ ಜೋಡಿ, ಆ ಸಿನಿಮಾದ ಜತೆಜತೆಗೇ ಪ್ರೀತಿಯಲ್ಲಿ ಬಿದ್ದಿತ್ತು. ಹೀಗೆ ಮುಂದುವರಿದ ಈ ಜೋಡಿಯ ಪ್ರೀತಿ, ಗೀತಿ ಇತ್ಯಾದಿ 2017ರ ಅಕ್ಟೋಬರ್ 6ರಂದು ಮದುವೆ ಬಂಧನಕ್ಕೆ ಒಳಗಾಯಿತು. ಎಲ್ಲವೂ ಚೆನ್ನಾಗಿಯೇ ನಡೆಯುತ್ತದ್ದಂತೆ, 2021ರಲ್ಲಿ ಡಿವೋರ್ಸ್ ನಿರ್ಧಾರಕ್ಕೆ ಈ ಜೋಡಿ ಬಂದು ನಿಂತಿತು.
ಐಟಂ ಸಾಂಗ್ ಮಾಡಬಾರದಂತೆ...
"ವಿಚ್ಛೇದನದ ಸಮಯದಲ್ಲಿ ಮನಸ್ತಾಪಗಳಿಂದ ಮನೆಯಲ್ಲಿ ಕುಳಿತುಕೊಳ್ಳುವುದಕ್ಕೂ ಆಗದ ಸಂದರ್ಭವದು. ಕೊನೆಗೂ ನಾನು ಡಿವೋರ್ಸ್ ಘೋಷಿಸಿದೆ. ಆ ಸಮಯದಲ್ಲಿ ಪುಷ್ಪ ಚಿತ್ರದ ಹೂಂ ಅಂಟಾವಾ.. ಐಟಂ ಹಾಡಿನ ಆಫರ್ ಬಂತು. ಆಗ ನನ್ನ ಆಪ್ತರು, ಸ್ನೇಹಿತರು, ಕುಟುಂಬದವರೆಲ್ಲ ಈ ಸಮಯದಲ್ಲಿ ಐಟಂ ಸಾಂಗ್ ಮಾಡುವುದು ಬೇಡ ಎಂದು ಒತ್ತಡ ಹೇರುತ್ತಿದ್ದರು. ಮನೆಯಲ್ಲಿಯೇ ಕುಳಿತುಕೊಳ್ಳುವಂತೆ ಸಲಹೆ ನೀಡಿದ್ದರು. ಅವರ ಉದ್ದೇಶ ಒಳ್ಳೆಯದೇ ಇತ್ತು. ಆದರೆ, ನಾನು ಅದ್ಯಾವುದಕ್ಕೂ ಒಪ್ಪಿರಲಿಲ್ಲ. ನಾನು ಆ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ನಿರ್ಧರಿಸಿದೆ.
ನಾನೇಕೆ ಬಚ್ಚಿಟ್ಟುಕೊಳ್ಳಲಿ..
ನಾನೇಕೆ ಬಚ್ಚಿಟ್ಟುಕೊಳ್ಳಲಿ? ಬಚ್ಚಿಟ್ಟುಕೊಳ್ಳುವುದಕ್ಕೆ ನಾನೇನು ಮಾಡಿದ್ದೇನೆ? ನಾನೇನಾದರೂ ಯಾವುದಾದರೂ ಕ್ರೈಂ ಮಾಡಿದ್ದೇನಾ? ಅಪರಾಧ ಮಾಡಿದ ವ್ಯಕ್ತಿಯಂತೆ ನಾನೇಕೆ ಅವಿತುಕೊಳ್ಳಲಿ? ನನ್ನ ಮದುವೆ ಮತ್ತು ದಾಂಪತ್ಯ ಜೀವನಕ್ಕೆ ಶೇ.100 ನೀಡಿದ್ದೇನೆ. ಆದರೆ, ಕೊನೆಗೆ ಅದ್ಯಾವುದೂ ಕೆಲಸಕ್ಕೆ ಬರಲಿಲ್ಲ. ನಾನು ಮಾಡದ ತಪ್ಪಿಗೆ ನನಗೇಕೆ ಶಿಕ್ಷೆ? ಇದಕ್ಕಾಗಿ ನಾನು ಪಶ್ಚಾತ್ತಾಪವನ್ನೂ ಪಡುವುದಿಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಸಮಂತಾ.