Srinidhi Shetty: ಯಶ್ ರೀತಿ ಹೆಚ್ಚು ಕಾಯಿಸಲಿಲ್ಲ ಶ್ರೀನಿಧಿ ಶೆಟ್ಟಿ; ಕೆಜಿಎಫ್ ಬೆಡಗಿಯಿಂದ ಬಂತು ಸಿಹಿ ಸುದ್ದಿ
Oct 16, 2023 05:53 PM IST
Srinidhi Shetty: ಯಶ್ ರೀತಿ ಹೆಚ್ಚು ಕಾಯಿಸಲಿಲ್ಲ ಶ್ರೀನಿಧಿ ಶೆಟ್ಟಿ; ಕೆಜಿಎಫ್ ಬೆಡಗಿಯಿಂದ ಬಂತು ಸಿಹಿ ಸುದ್ದಿ
- Srinidhi Shetty: ಕೆಜಿಎಫ್ ಸಿನಿಮಾ ಬಳಿಕ ಆ ಸಿನಿಮಾದ ಭಾಗವಾದ ಪ್ರತಿಯೊಬ್ಬರೂ ಹೊಸ ಹೊಸ ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾದರು. ಆದರೆ, ನಟಿ ಶ್ರೀನಿಧಿ ಮಾತ್ರ ಯಾವುದೇ ಸಿನಿಮಾ ಘೋಷಣೆ ಮಾಡಿರಲಿಲ್ಲ. ಇದೀಗ ತುಂಬ ದಿನಗಳ ಬಳಿಕ ಸಿಹಿ ಸುದ್ದಿ ನೀಡಿದ್ದಾರೆ ಈ ಕರಾವಳಿ ಬೆಡಗಿ.
Srinidhi Shetty: ಸ್ಯಾಂಡಲ್‌ವುಡ್‌ನಿಂದ ಸಿನಿಮಾ ಕೆರಿಯರ್ ಆರಂಭಿಸಿ, ಅದಾದ ಬಳಿಕ ಕನ್ನಡಕ್ಕಿಂತ ಪರಭಾಷೆಗಳಲ್ಲಿ ಹೆಚ್ಚು ಮಿಂಚುತ್ತಿದ್ದಾರೆ ಕನ್ನಡದ ನಟಿಯರು. ಆ ಪೈಕಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನದಲ್ಲಿದ್ದರೆ, ಶ್ರೀಲೀಲಾ, ನಭಾ ನಟೇಶ್ ಇವರೆಲ್ಲರೂ ಪರಭಾಷೆಯಲ್ಲಿಯೇ ನೆಲೆಕಂಡುಕೊಂಡಿದ್ದಾರೆ. ಸದ್ಯಕ್ಕೆ ಕನ್ನಡಕ್ಕೆ ಇವರ ಆಗಮನ ಸದ್ಯಕ್ಕಿಲ್ಲ. ಆ ಪೈಕಿ ರಶ್ಮಿಕಾ ಮತ್ತು ಶ್ರೀಲೀಲಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳ ಆಫರ್‌ಗಳಿವೆ. ಸ್ಟಾರ್ ನಟರ ಸಿನಿಮಾಗಳಲ್ಲಿಯೇ ನಟಿಸುತ್ತ ಬಿಜಿಯಾಗಿದ್ದಾರೆ. ಇದೀಗ ಇದೇ ಸಾಲಿಗೆ ಕೆಜಿಎಫ್ ನಟಿ ಶ್ರೀನಿಧಿ ಸಹ ಹೊಸ ಸೇರ್ಪಡೆ!
ತೆಲುಗಿಗೆ ಹೊರಟ ಶ್ರೀನಿಧಿ
ಹೌದು, ಕೆಜಿಎಫ್ ಸಿನಿಮಾ ಬಳಿಕ ತಮಿಳಿನ ಕೋಬ್ರಾ ಚಿತ್ರದಲ್ಲಿಯೂ ಶ್ರೀನಿಧಿ ನಟಿಸಿದ್ದರು. ವಿಕ್ರಂ ಜತೆಗಿನ ಕೋಬ್ರಾ ಸಿನಿಮಾ ಕಳೆದ ವರ್ಷ ತೆರೆಕಂಡಿತ್ತು. ಇದೀಗ ಅಲ್ಲಿಂದ ತಮ್ಮ ಮುಂದಿನ ಸಿನಿಮಾ ಯಾವುದೆಂಬ ಸಣ್ಣ ಸುಳಿವನ್ನೂ ನೀಡಿರಲಿಲ್ಲ ಶ್ರೀನಿಧಿ. ಇದೀಗ ಅದಕ್ಕೂ ಉತ್ತರ ನೀಡಿದ್ದಾರೆ. ಡಿಜೆ ಟಿಲ್ಲು ಚಿತ್ರದ ಮೂಲಕ ಸಿದ್ದು ಜೊನ್ನಲಗಡ್ಡ ಟಾಲಿವುಡ್‌ನಲ್ಲಿ ಸ್ಟಾರ್ ನಟನಾಗಿ ಬೆಳೆದು ನಿಂತಿದ್ದಾರೆ. ಇದೀಗ ಇದೇ ಹೀರೋನ ಮುಂದಿನ ಸಿನಿಮಾ ತೆಲುಸು ಕದಾ ಚಿತ್ರಕ್ಕೆ ಶ್ರೀನಿಧಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ತೆಲುಸು ಕದಾ ಚಿತ್ರದ ಮೂಲಕ ಟಾಲಿವುಡ್‌ಗೆ
ತೆಲುಸು ಕದಾ ಸಿನಿಮಾವನ್ನು ನಿರ್ದೇಶಿಸುತ್ತಿರುವುದು ನೀರಜಾ ಕೋನಾ. ಈ ಹಿಂದೆ ವಸ್ತ್ರ ವಿನ್ಯಾಸಕಿಯಾಗಿ ಗುರುತಿಸಿಕೊಂಡಿದ್ದ ಇವರು ಇದೀಗ ನಿರ್ದೇಶಕಿಯಾಗಿದ್ದಾರೆ. ತಮ್ಮ ಈ ಮೊದಲ ಚಿತ್ರದ ಸಣ್ಣ ವಿಡಿಯೋ ಝಲಕ್‌ನಲ್ಲೂ ತಮ್ಮ ಕ್ರಿಯೇಟಿವಿಟಿ ತೋರಿಸಿದ್ದಾರೆ. ತಂಡದ ಪ್ರತಿಯೊಬ್ಬರ ಹೆಸರನ್ನು ಅಷ್ಟೇ ಕ್ರಿಯೇಟಿವ್ ಆಗಿಯೇ ಘೋಷಿಸಿದ್ದಾರೆ. ವಿಡಿಯೋದ ಕೊನೆಗೆ ಸಿದ್ದು ಜೊನ್ನಲಗಡ್ಡ ಎಂಟ್ರಿಯಾಗಿ, ತೆಲುಸು ಕದಾ ಎಂದು ಸಿನಿಮಾ ಶೀರ್ಷಿಕೆಯನ್ನು ಮಗದೊಮ್ಮೆ ಉಚ್ಚರಿಸಿದರು.
ಶ್ರೀನಿಧಿ ಶೆಟ್ಟಿಗೆ ಕೆಜಿಎಫ್‌ನಂತಹ ಬ್ಲಾಕ್‌ಬಸ್ಟರ್ ಸಿನಿಮಾ ಸಿಕ್ಕರೂ, ಅದರ ಹೈಪ್‌ಗೆ ತಕ್ಕಂತಹ ಸಿನಿಮಾ ಆಫರ್‌ಗಳು ಶ್ರೀನಿಧಿ ಬಳಿ ಬಂದಿರಲಿಲ್ಲ. ಚಿತ್ರದ ಮೊದಲ ಭಾಗದಲ್ಲಿ ಶ್ರೀನಿಧಿ ಪಾತ್ರಕ್ಕೆ ಕೊಂಚ ಸ್ಕೋಪ್ ಇದ್ದರೂ, ಎರಡನೇ ಭಾಗದಲ್ಲಿ ಅದು ಕಡಿಮೆಯಾಗಿತ್ತು. ಇದೀಗ ಕೊನೆಗೂ ತೆಲುಗು ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಇತ್ತ ನಟ ಯಶ್ ತಮ್ಮ ಮುಂದಿನ ಸಿನಿಮಾವನ್ನು ಆಗ ಘೋಷಣೆ ಮಾಡಲಿದ್ದಾರೆ, ಈಗ ಮಾಡಲಿದ್ದಾರೆ ಎನ್ನುತ್ತಿರುವಾಗಲೇ ತಮ್ಮ ಮುಂದಿನ ಸಿನಿಮಾ ಬಗ್ಗೆ ಶ್ರೀನಿಧಿ ಮಾಹಿತಿ ನೀಡಿದ್ದಾರೆ.
ಅಂದಹಾಗೆ, ತೆಲುಸು ಕದಾ ಸಿನಿಮಾದಲ್ಲಿ ಸಿದ್ದ ಜೊನ್ನಲಗಡ್ಡ ನಾಯಕನಾಗಿ ನಟಿಸುತ್ತಿದ್ದರೆ, ಶ್ರೀನಿಧಿ ಶೆಟ್ಟಿ, ರಾಶಿ ಖನ್ನಾ ನಾಯಕಿಯರಾಗಿದ್ದಾರೆ. ತಮನ್ ಸಂಗೀತ ನೀಡುತ್ತಿದ್ದಾರೆ. ಪೀಪಲ್ಸ್ ಮೀಡಿಯಾ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುತ್ತಿದೆ. ಇನ್ನೇನು ಸಿನಿಮಾದ ಇನ್ನಷ್ಟು ಅಪ್‌ಡೇಟ್‌ಗಳನ್ನು ಮುಂದಿನ ದಿನಗಳಲ್ಲಿ ನೀಡಲಿದೆ ಚಿತ್ರತಂಡ.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ