ಅಂಕಲ್‌ನ ಹೊಡೀತಿನಿ ಸುಬ್ಬಿ ಎನ್ನುತ್ತ ಆಸ್ಪತ್ರೆಗೆ ದಾಖಲಾದ ನಟ ಜಗ್ಗೇಶ್ ಕಿರಿ ಪುತ್ರ ಯತಿರಾಜ್
ನವರಸನಾಯಕ ಜಗ್ಗೇಶ್ ಕಿರಿ ಪುತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾದ ಬಗ್ಗೆ ಕಾರಣವನ್ನೂ ತಿಳಿಸಿರುವ ಯತಿರಾಜ್, ಸುರಕ್ಷಿತವಾಗಿರಿ ಎಂದೂ ಎಲ್ಲರಲ್ಲಿ ಮನವಿ ಮಾಡಿದ್ದಾರೆ.
Yathiraj Jaggesh: ಸ್ಯಾಂಡಲ್‌ವುಡ್ ನಟ, ನವರಸ ನಾಯಕ ಜಗ್ಗೇಶ್ ಕೆಲ ದಿನಗಳ ಹಿಂದೆ ಅನಾರೋಗ್ಯದ ನಿಮಿತ್ತ ದೆಹಲಿಯಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಸುದೀರ್ಘ ಪ್ರವಾಸದ ಹಿನ್ನೆಲೆಯಲ್ಲಿ ಬೆನ್ನುನೋವು ಕಾಣಿಸಿಕೊಂಡಿದೆ ಎಂದೂ ಹೇಳಿಕೊಂಡು, ಚಿಕಿತ್ಸೆಯ ಒಂದಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದೀಗ ಜಗ್ಗೇಶ್ ಕಿರಿ ಪುತ್ರ ಯತಿರಾಜ್ ಅನಾರೋಗ್ಯಕ್ಕೆ ಈಡಾಗಿದ್ದಾರೆ.
ಯತಿರಾಜ್ ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಕಿರು ವಿಡಿಯೋ ಪೋಸ್ಟ್ ಮಾಡಿರುವ ಯತಿ, ತಮಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಎಲ್ಲರೂ ಈ ಜ್ವರದಿಂದ ಸುರಕ್ಷಿತವಾಗಿರಿ ಎಂದೂ ಮನವಿ ಮಾಡಿದ್ದಾರೆ.
"ನಿಮಗೆ ಜ್ವರ ಇದ್ದರೆ, ದಯವಿಟ್ಟು ಪರೀಕ್ಷಿಸಿಕೊಳ್ಳಿ. ಸುರಕ್ಷಿತವಾಗಿಯೂ ಇರಿ" ಎಂಬ ಕ್ಯಾಪ್ಷನ್ ನೀಡಿ ವಿಡಿಯೋ ಪೋಸ್ಟ್ ಮಾಡಿದ್ದಾರೆ ಯತಿರಾಜ್. ವಿಡಿಯೋದಲ್ಲಿ ಸೊಳ್ಳೆ ಬ್ಯಾಟ್ ಹಿಡಿದು, ಮನೆಯಲ್ಲಿನ ಸೊಳ್ಳೆಗಳನ್ನು ಸಾಯಿಸುತ್ತ, ಅದಾದ ಬಳಿಕ ಟಗರು ಸಿನಿಮಾದ ಫೇಮಸ್ ಡೈಲಾಗ್‌ಗಳಲ್ಲಿ ಒಂದಾದ, ಅಂಕಲ್‌ನ ಹೊಡೀತಿನಿ ಸುಬ್ಬಿ ಎಂಬುದನ್ನೂ ಅದರಲ್ಲಿ ಸೇರಿಸಿದ್ದಾರೆ. ಬಳಿಕ ನೇರವಾಗಿ ಆಸ್ಪತ್ರೆ ಬೆಡ್ ಮೇಲೆ ಕೈಗೆ ಡ್ರಿಪ್ಸ್ ಹಚ್ಚಿಕೊಂಡು, ಬೆಡ್ ಮೇಲೆಯೇ ಮಲಗಿಕೊಂಡೇ ಮಂದಹಾಸ ಬೀರಿದ್ದಾರೆ. ವಿಡಿಯೋದ ಕೊನೆಗೆ ಡೆಂಗ್ಯೂದಿಂದ ದೂರವಿರಿ, ಸುರಕ್ಷಿತವಾಗಿರಿ" ಎಂದಿದ್ದಾರೆ.
ಯತಿರಾಜ್ ಅವರ ಪೋಸ್ಟ್ ನೋಡಿದ ನೆಟ್ಟಿಗರು, ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಬ್ರದರ್ ಎಂದು ಹರಸುತ್ತಿದ್ದಾರೆ. ಶೀಘ್ರ ಹುಷಾರಾಗಿ ಎಂದೂ ಸಾಕಷ್ಟು ಮಂದಿ ಕಾಮೆಂಟ್ ಮೂಲಕವೇ ಶುಭ ಕೋರುತ್ತಿದ್ದಾರೆ. ಈ ಹಿಂದೆ ಅಪ್ಪ ಜಗ್ಗೇಶ್ ಜತೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಯತಿರಾಜ್, ಇತ್ತೀಚಿನ ದಿನಗಳಲ್ಲಿ ನಟನೆ ಬದಿಗಿರಿಸಿ, ತಾಂತ್ರಿಕವಾಗಿ ಹೊಸ ಹೊಸ ಕಾರ್ಯಗಳತ್ತ ತೊಡಗಿಸಿಕೊಂಡಿದ್ದಾರೆ.