Pushpa 2 The Rule Trailer: ಈ ಪುಷ್ಪರಾಜ್ ನ್ಯಾಶನಲ್ ಅಲ್ಲ, ಇಂಟರ್‌ನ್ಯಾಶನಲ್! ಪುಷ್ಪ 2 ಚಿತ್ರದ ಟ್ರೇಲರ್ ಬಿಡುಗಡೆ
Nov 17, 2024 06:38 PM IST
ಪುಷ್ಪ 2 ಚಿತ್ರದ ಟ್ರೇಲರ್ ಬಿಡುಗಡೆ
- Pushpa 2 the Rule Trailer: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಬಹು ನಿರೀಕ್ಷಿತ ಪುಷ್ಪ 2; ದಿ ರೂಲ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದೇ ಡಿಸೆಂಬರ್ 5ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.
Pushpa 2 The Rule Trailer: ಕೇವಲ ಟಾಲಿವುಡ್ ಮಾತ್ರವಲ್ಲದೆ, ಇಡೀ ಭಾರತ ಪುಷ್ಪ 2 ಚಿತ್ರದ ಬಗ್ಗೆ ಎದುರು ನೋಡುತ್ತಿದೆ. ಮೊದಲ ಭಾಗದ ಯಶಸ್ಸಿನ ಬಳಿಕ ಈ ಸಿನಿಮಾ ಮೇಲೆ ಎಲ್ಲರಿಗೂ ಎಲ್ಲಿಲ್ಲದ ಕುತೂಹಲ. ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ಅವರ ಬಗೆ ಬಗೆ ಲುಕ್‌ಗಳು ಈಗಾಗಲೇ ಮೋಡಿ ಮಾಡಿವೆ. ಅದರಂತೆ, ಇದೀಗ ಪುಷ್ಪ 2; ದಿ ರೂಲ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಸಿನಿಮಾ ಮೇಲಿನ ಕುತೂಹಲಕ್ಕೆ ಒಗ್ಗರಣೆ ಹಾಕಿದಂತಿದೆ ಟ್ರೇಲರ್.
ಹೇಗಿದೆ ಟ್ರೇಲರ್?
ಕಾಡಾನೆಯ ಘೀಳಿನೊಂದಿಗೆ ಟ್ರೇಲರ್ ತೆರೆದುಕೊಳ್ಳುತ್ತದೆ. ಅವನು ಯಾರು? ಹಣ ಎಂದರೆ ಲೆಕ್ಕಕ್ಕಿಲ್ಲ. ಅಧಿಕಾರ ಎಂದರೆ ಭಯವಿಲ್ಲ" ಎಂದು ಜಗಪತಿ ಬಾಬು ಡೈಲಾಗ್ ಹೇಳುತ್ತಾರೆ. ಅಲ್ಲಿಂದ ಶುರುವಾಗುವ ಟ್ರೇಲರ್‌ನಲ್ಲಿ ತನ್ನದೇ ಆದ ದೊಡ್ಡ ಸಾಮ್ರಾಜ್ಯವನ್ನೇ ಸೃಷ್ಟಿಸಿಕೊಂಡ ಪುಷ್ಪರಾಜ್‌ನ ಇನ್ನೊಂದು ಮುಖದ ಅನಾವರಣ ಮಾಡಿದ್ದಾರೆ ನಿರ್ದೇಶಕರು. ಪೊಲೀಸ್ ಇಲಾಖೆ ಮಾತ್ರವಲ್ಲದೆ, ರಾಜಕಾರಣಿಗಳಿಗೂ ಈ ಪುಷ್ಪರಾಜ್ ನಡುಕ ಹುಟ್ಟಿಸಿದ್ದಾನೆ. ಹೇಳಿ ಕೇಳಿ ಅಲ್ಲು ಅರ್ಜುನ್ ಮಾಸ್ ಹೀರೋ. ಆ ಪ್ರಭಾವಳಿಗೆ ತಕ್ಕಂತೆಯೇ ಅವರನ್ನೇ ಟ್ರೇಲರ್‌ನಲ್ಲಿ ಎತ್ತಿ ಮೆರೆಸಲಾಗಿದೆ.
ಪುಷ್ಪರಾಜ್‌ನ ಬಾಲ್ಯದ ಕಹಿ ಅನುಭವಗಳನ್ನು ಸೀಕ್ವೆಲ್‌ನಲ್ಲಿ ಮತ್ತೆ ಮುಂದುವರೆಸಿದಂತಿದೆ ನಿರ್ದೇಶಕ ಸುಕುಮಾರ್. ಅದಕ್ಕೆ ತಕ್ಕಂತೆ, ‘ನಾಮ್ ಚೋಟಾ ಹೈ.. ಲೇಕಿನ್ ಸೌಂಡ್ ಬಡಾ ಹೈ’ ಎಂದು ಪುಷ್ಪರಾಜ್ ಹೇಳುವ ಎಲಿವೇಶನ್ ದೃಶ್ಯಗಳೂ ಟ್ರೇಲರ್‌ನಲ್ಲಿವೆ. ಇದೆಲ್ಲದರ ಜತೆಗೆ ಶ್ರೀವಲ್ಲಿ ಜತೆಗಿನ ದೃಶ್ಯಗಳು ಟ್ರೇಲರ್‌ನಲ್ಲಿವೆ. ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಫಹಾದ್ ಫಾಸಿಲ್ ಕ್ರೇಜಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿದ್ದ ಅದೇ ಗತ್ತು ಎರಡನೇ ಭಾಗದಲ್ಲಿಯೂ ಮುಂದುವರಿದಿದೆ.
ಮೊದಲ ಭಾಗಕ್ಕಿಂತ ದೊಡ್ಡ ಕ್ಯಾನ್ವಾಸ್‌ನಲ್ಲಿ ಪುಷ್ಪ 2 ಮೂಡಿಬಂದಿದೆ. ಅದಕ್ಕೆ ತಕ್ಕಂತೆ ಪುಷ್ಪರಾಜ್ ಬಾಯಿಂದ ಡೈಲಾಗ್‌ವೊಂದು ಹೊರಡಿದೆ. "ಈ ಪುಷ್ಪರಾಜ್ ನ್ಯಾಶನಲ್ ಅಲ್ಲ, ಇಂಟರ್‌ನ್ಯಾಶನಲ್" ಎಂದಿದ್ದಾನೆ. ಅಲ್ಲಿಗೆ ಅದೇ ಇಂಟರ್‌ನ್ಯಾಶನಲ್ ಮಟ್ಟದಲ್ಲಿಯೇ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸುಕುಮಾರ್. ಇಡೀ ಟ್ರೇಲರ್‌ನಲ್ಲಿ ಸಾಹಸ ದೃಶ್ಯಗಳು ಮೇಳೈಸಿವೆ. ಮೈಚಳಿ ಬಿಟ್ಟು ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಅಲ್ಲು ಅರ್ಜುನ್.
ಸುಕುಮಾರ್ ನಿರ್ದೇಶನ
ಪುಷ್ಪ ಚಿತ್ರವನ್ನು ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶನ ಮಾಡಿದ್ದಾರೆ. 2021ರ ಡಿಸೆಂಬರ್ 17ರಂದು ಪುಷ್ಪ; ದಿ ರೈಸ್ ಸಿನಿಮಾ ತೆರೆಕಂಡಿತ್ತು. 200 ಕೋಟಿ ಬಜೆಟ್‌ನಲ್ಲಿ ಮೂಡಿಬಂದಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 400 ಪ್ಲಸ್ ಕೋಟಿ ಗಳಿಕೆ ಕಂಡಿತ್ತು. ಅಷ್ಟೇ ಅಲ್ಲ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ತೆಲುಗು ಜತೆಗೆ ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿಯೂ ಬಿಡುಗಡೆ ಆಗಿ, ಉತ್ತರ ಭಾರತದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು.
ಬಹುತಾರಾಗಣದ ಸಿನಿಮಾ
ಮೈತ್ರಿ ಮೂವಿ ಮೇಕರ್ಸ್ ಈ ಮಾಸ್ ಆಕ್ಷನ್ ಸಿನಿಮಾವನ್ನು ನಿರ್ಮಾಣ ಮಾಡಿದೆ. ಅಲ್ಲು ಅರ್ಜುನ್ ಜತೆಗೆ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗದೀಶ್ ಪ್ರತಾಪ್ ಬಂಡಾರಿ, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್, ಅನಸುಯಾ ಭಾರದ್ವಾಜ್, ರಾವ್ ರಮೇಶ್ ಸೇರಿ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ಹಾಡುಗಳಿಗೆ ದೇವಿ ಶ್ರೀ ಪ್ರಸಾದ್ ಟ್ಯೂನ್ ಹಾಕಿದರೆ, ಥಮನ್, ಕನ್ನಡದ ಅಜನೀಶ್ ಲೋಕನಾಥ್ ಮತ್ತು ಸ್ಯಾಮ್ ಸಿಎಸ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.