logo
ಕನ್ನಡ ಸುದ್ದಿ  /  ಮನರಂಜನೆ  /  ಟಾಕ್ಸಿಕ್ ಚಿತ್ರತಂಡದಿಂದ ಅರಣ್ಯ ನಾಶ ವಿವಾದ; ಮತ್ತೆ ಮುನ್ನೆಲೆಗೆ ಬಂತು ಕರ್ನಾಟಕಕ್ಕೊಂದು ಫಿಲಂ ಸಿಟಿ ಬೇಕೆಂಬ ಬೇಡಿಕೆ

ಟಾಕ್ಸಿಕ್ ಚಿತ್ರತಂಡದಿಂದ ಅರಣ್ಯ ನಾಶ ವಿವಾದ; ಮತ್ತೆ ಮುನ್ನೆಲೆಗೆ ಬಂತು ಕರ್ನಾಟಕಕ್ಕೊಂದು ಫಿಲಂ ಸಿಟಿ ಬೇಕೆಂಬ ಬೇಡಿಕೆ

Oct 29, 2024 07:47 PM IST

google News

ಮತ್ತೆ ಮುನ್ನೆಲೆಗೆ ಬಂತು ಕರ್ನಾಟಕಕ್ಕೊಂದು ಫಿಲಂ ಸಿಟಿ ಬೇಕೆಂಬ ಬೇಡಿಕೆ

    • ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಟಾಕ್ಸಿಕ್‌ ಚಿತ್ರತಂಡದ ವಿರುದ್ಧ ಕೇಸ್‌ ದಾಖಲಿಸುವಂತೆ ಆದೇಶಿಸಿದ್ದಾರೆ. ಈ ನಡುವೆ ಸ್ಯಾಟಲೈಟ್‌ ಪೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ, ಪರಿಸರ ಪ್ರೇಮಿಗಳು ಚಿತ್ರತಂಡದ ನಡೆಯ ಬಗ್ಗೆ ಕಿಡಿ ಕಾರುತ್ತಿದ್ದಾರೆ. ಜತೆಗೆ ಚಿತ್ರನಗರಿ ನಿರ್ಮಾಣಕ್ಕೂ ಒತ್ತಾಯಿಸುತ್ತಿದ್ದಾರೆ. 
ಮತ್ತೆ ಮುನ್ನೆಲೆಗೆ ಬಂತು ಕರ್ನಾಟಕಕ್ಕೊಂದು ಫಿಲಂ ಸಿಟಿ ಬೇಕೆಂಬ ಬೇಡಿಕೆ
ಮತ್ತೆ ಮುನ್ನೆಲೆಗೆ ಬಂತು ಕರ್ನಾಟಕಕ್ಕೊಂದು ಫಿಲಂ ಸಿಟಿ ಬೇಕೆಂಬ ಬೇಡಿಕೆ

ಬೆಂಗಳೂರು: ಟಾಕ್ಸಿಕ್ ಚಿತ್ರತಂಡದಿಂದ ಆಗಿರುವ ಅನಾಹುತದ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಡ್ರೆ ಹಾಕಿರುವ ಪೋಸ್ಟ್‌ಗೆ ನೆಟ್ಟಿಗರು ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕದಲ್ಲಿ ವ್ಯವಸ್ಥಿತವಾದ ಫಿಲಂ ಸಿಟಿ ಇದ್ದಿದ್ದರೆ ಇಂಥ ಸಂದರ್ಭವೇ ಬರುತ್ತಿರಲಿಲ್ಲ ಎನ್ನುವುದು ಹಲವರ ಅಭಿಪ್ರಾಯವಾಗಿದೆ. 'ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ' ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಉಪಗ್ರಹ ಚಿತ್ರಗಳೊಂದಿಗೆ ಟ್ವೀಟ್ ಮಾಡಿದ್ದರು.

ಈ ಟ್ವೀಟ್‌ಗೆ ಬಗೆಬಗೆ ಪ್ರತಿಕ್ರಿಯೆಗಳು ಬಂದಿವೆ. 'ಎಷ್ಟು ವರ್ಷದಿಂದ ಒಂದು ಫಿಲಂ ಸಿಟಿ ಬೇಕು ಅಂತ ಕೇಳ್ತಾ ಇದಾರೆ. ನೀವು ಅದರ ಬಗ್ಗೆ ಗಮನ ಕೊಟ್ಟಿಲ್ಲ, ಈ ತರ ಸೆಟ್ ತುಂಬಾ ಕಡೆ ಹಾಕಿ ಮರ ಕಡಿಯೋದು ನಡೀತಾನೆ ಇದೆ, ಸಿನಿಮಾದಲ್ಲಿ ಬಂದ ಟ್ಯಾಕ್ಸ್ ದುಡ್ಡಲ್ಲಿ ಆದ್ರೂ ಒಂದು ಫಿಲಂ ಸಿಟಿ ಮಾಡಿ ಕೊಟ್ರೆ ಮುಂದೆ ಈ ರೀತಿ ಆಗೋದು ತಪ್ಪುತ್ತೆ' ಎಂದು ಪುನೀತ್ ರಾಜ್ ಎನ್ನುವವರು ಮುಖ್ಯಮಂತ್ರಿ ಕಚೇರಿಗೆ ಟ್ಯಾಗ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

'ರಾಮೋಜಿ ಫಿಲಂ ಸಿಟಿ, ಅದು ಇದು ಅಂತ ಇವೆ. ಅದೆಲ್ಲ ಬಿಟ್ಟು ಮರ ಕಡಿದು ಸಿನಿಮಾ ಸೆಟ್ ಹಾಕಿರುವುದು ದುರದೃಷ್ಟದ ಸಂಗತಿ' ಎಂದು ದರ್ಶನ್ ಚಕ್ರವರ್ತಿ ಎನ್ನುವ ಟ್ವಿಟರ್‌ ಹ್ಯಾಂಡ್ಲ್‌ ಪ್ರತಿಕ್ರಿಯಿಸಿದೆ. ರಮ್ಯಾ ಎನ್ನುವವರು ಪ್ರತಿಕ್ರಿಯಿಸಿದ್ದು, 'ಕೇವಲ ಒಂದು ಸಿನಿಮಾ ತೆಗಿಯೊಕೆಲ್ಲ ಕಾಡನ್ನ ನಾಶ ಮಾಡೊಕೆ ಬಿಡುತ್ತೀರಿ. ಯಾರಾದರೂ ಬಡವರು ಹೊಟ್ಟೆ ಪಾಡಿಗಾಗಿ ಕೃಷಿಗೆ ಬಳಸಿದರೆ ಅಲ್ಲಿಂದ ಓಡಿಸುತ್ತಿರಾ?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವರು ಏನೂ ಮಾಡಲ್ಲ, ಇದೊಂದು ನಾಟಕ

ಈಶ್ವರ್ ಖಂಡ್ರೆ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕೆಲವರು, 'ಇದು ಜನರನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಅಷ್ಟೇ' ಎಂದು ಹೇಳಿದ್ದಾರೆ. ರಾಜೇಂದ್ರ ಪೈ ಎನ್ನುವವರು, 'ಇಲಾಖೆ ಕೈಗೊಂಡಿರುವ ಕ್ರಮ ಏನೆಂದು ಪ್ರಕಟಿಸಬಹುದೇ' ಎಂದು ಸವಾಲು ಹಾಕಿದ್ದಾರೆ. 'ದಯಮಾಡಿ ಕಠಿಣ ಕ್ರಮ ತೆಗೆದುಕೊಳ್ಳಿರಿ.. ಬೆಂಗಳೂರಿನಲ್ಲಿ ಮೊದಲೇ ವಿಷಪೂರಿತ ಗಾಳಿ ಸೇವನೆಯಿಂದ ಜನರು ಅರ್ಧ ಸತ್ತಿದ್ದಾರೆ. ಈಗ ಇಂತಹ #Toxic ಸಿನಿಮಾಗಾಗಿ ಮರಗಳನ್ನ ನಾಶ ಮಾಡಿ ಮತ್ತಷ್ಟು Toxic ಗಾಳಿಯನ್ನ ಕೊಡುಗೆಯಾಗಿ ಕೊಡಲು ಮುಂದಾಗಿರುವವರಿಗೆ ಪರಿಸರ ಪಾಠ ಕಲಿಸಿ' ಎಂದು ನಾಗೇಶ್ ಕುಮಾರ್ ಸಿ ಎನ್ನುವವರು ಆಗ್ರಹಿಸಿದ್ದಾರೆ.

ಚಿತ್ರತಂಡ ಅರಣ್ಯ ಹಾಳು ಮಾಡಿಲ್ಲ

ಇದೇ ಸ್ಥಳದ 2012ರಿಂದ 2024ರ ಅವಧಿಯ ಉಪಗ್ರಹ ಚಿತ್ರಗಳನ್ನು ವಿಡಿಯೊ ರೂಪದಲ್ಲಿ ಹಂಚಿಕೊಂಡಿರುವ ಎಂಎನ್‌ವಿ ಗೌಡ, 'ಎಚ್‌ಎಂಟಿ ಲೇಔಟ್‌ನಲ್ಲಿ ಮರಗಳನ್ನು ಕಡಿಯಲಾಗಿದೆ ಎನ್ನುವ ಪೋಸ್ಟ್ ನೋಡಿದೆ. ಗೂಗಲ್ ಅರ್ತ್‌ನಲ್ಲಿ ಗಮನಿಸಿದಾಗ ಈ ಸ್ಥಳವು 2012 ರಿಂದ ಖಾಲಿ ಇರುವುದು ಕಂಡು ಬಂತು. ಇಲ್ಲಿ ಆಗಾಗ ಹಸಿರು ಮೇಲ್ಮೈ ಇತ್ತು. ಆದರೆ ಅದೆಂದೂ ದಟ್ಟವಾಗಿರಲಿಲ್ಲ' ಎಂದು ಹೇಳಿದ್ದಾರೆ.

ಎಚ್‌ಎಂಟಿ ಕಾರ್ಖಾನೆ ವಶದಲ್ಲಿರುವ ಭೂಮಿಯ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜಟಾಪಟಿಯನ್ನೂ ಹಲವರು ಪ್ರಸ್ತಾಪಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಕೇಂದ್ರ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ರಾಜ್ಯ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ನಡುವೆ ಈ ಕುರಿತು ಮಾತಿನ ಜಟಾಪಟಿ ನಡೆಯುತ್ತಿರುವುದನ್ನೂ 'ಎಚ್‌ಟಿ ಕನ್ನಡ' ಓದುಗರು ನೆನಪಿಸಿಕೊಳ್ಳಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ