ಯಶ್ ಅಭಿನಯದ ಟಾಕ್ಸಿಕ್ ಚಿತ್ರಕ್ಕಾಗಿ ನೂರಾರು ಮರಗಳ ಕಡಿತ; ಕಾಡು ಕೆಡವಿದವರ ವಿರುದ್ಧ ಕಠಿಣ ಕ್ರಮಕ್ಕೆ ಅರಣ್ಯ ಸಚಿವ ಸೂಚನೆ
Toxic Film: ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸುತ್ತಿರುವ ಟಾಕ್ಸಿಕ್ ಸಿನಿಮಾ ತಂಡದ ಮೇಲೀಗ ಗಂಭೀರ ಆರೋಪ ಕೇಳಿಬಂದಿದೆ. ಚಿತ್ರೀಕರಣದ ಸಲುವಾಗಿ ಅರಣ್ಯಭೂಮಿಯಲ್ಲಿನ ಸಾವಿರಾರು ಮರಗಳನ್ನು ಕಡಿದಿದ್ದಾರೆ ಎನ್ನಲಾಗಿದೆ.
Toxic Movie: ಯಶ್ ನಾಯಕನಾಗಿ ನಟಿಸುತ್ತಿರುವ ಟಾಕ್ಸಿಕ್ ಸಿನಿಮಾ ಕೇವಲ, ಪ್ಯಾನ್ ಇಂಡಿಯಾ ಮಾತ್ರವಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಈಗಾಗಲೇ ಮುಹೂರ್ತ ಮುಗಿಸಿಕೊಂಡು, ಬೆಂಗಳೂರಿನಲ್ಲಿ ಶೂಟಿಂಗ್ ಸಹ ಆರಂಭಿಸಿದೆ. ಹೀಗಿರುವಾಗಲೇ ಇದೇ ಚಿತ್ರತಂಡದ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಬೆಂಗಳೂರಿನ ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ಶೂಟಿಂಗ್ ನೆಪದಲ್ಲಿ ಮರಗಳನ್ನು ಕಡಿದ ಆರೋಪ ಕೇಳಿಬಂದಿದೆ.
ಈ ವಿಚಾರದ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೊಂಚ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಟ್ವಿಟರ್‌ನಲ್ಲಿ ಸ್ಯಾಟಲೈಟ್ ಫೋಟೋಗಳನ್ನು ಹಂಚಿಕೊಂಡಿರುವ ಈಶ್ವರ್ ಖಂಡ್ರೆ, ಅರಣ್ಯ ನಾಶ ಆಗಿರುವ ಬಗ್ಗೆ ಸುಳಿವು ಸಿಕ್ಕಿದೆ. ಇದು ಗಮನಕ್ಕೆ ಬರುತ್ತಿದ್ದಂತೆ, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಕಠಿಣ ಕಾನೂನು ಕ್ರಮಕ್ಕೂ ಆಗ್ರಹಿಸಿದ್ದಾರೆ.
ಹಿಂದೂಸ್ಥಾನ್ ಮಷಿನ್ ಟೂಲ್ಸ್ (ಎಚ್‌ಎಂಟಿ)ಗೆ ಸಂಬಂಧಿಸಿದ ಜಾಗದಲ್ಲಿ ಕಳೆದ ಐದು ತಿಂಗಳಿಂದ ಟಾಕ್ಸಿಕ್ ಸಿನಿಮಾ, ಶೂಟಿಂಗ್ ಸಲುವಾಗಿ ಬೃಹತ್ ಸೆಟ್ ಹಾಕುತ್ತಿದೆ. ಈಗಾಗಲೇ ಸೆಟ್ ಕೆಲಸವೂ ಪೂರ್ಣಗೊಂಡಿದೆ. ಹೀಗಿರುವಾಗಲೇ ಸೆಟ್ ಸಲುವಾಗಿ, ಅಲ್ಲಿದ್ದ ಮರಗಳನ್ನು ನೆಲಸಮ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸೆಟ್ ನಿರ್ಮಾಣಕ್ಕೆ ಬೇಕಾಬಿಟ್ಟಿಯಾಗಿ ಮರಗಳನ್ನು ಸರ್ವನಾಶ ಮಾಡಿದ್ದು, ಸ್ಯಾಟಲೈಟ್ ದೃಶ್ಯದಲ್ಲಿ ಕಂಡುಬಂದಿದೆ.
ಚಿತ್ರತಂಡದಿಂದ ನಿಮಯ ಉಲ್ಲಂಘನೆ
ಸ್ಯಾಟಲೈಟ್‌ನ ಮೊದಲು ಮತ್ತು ನಂತರದ ದೃಶ್ಯಗಳನ್ನು ಸಚಿವ ಈಶವರ್ ಖಂಡ್ರೆ ಪರಿಶೀಲಿಸಿದ್ದು, ಸಿನಿಮಾ ಸೆಟ್ ಹಾಕುವ ಸಲುವಾಗಿ ಎಷ್ಟು ಮರಗಳನ್ನು ಕಡಿಯಲಾಗಿದೆ? ಮರ ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದಾರೆಯೇ? ಹೀಗೆ ತರಹೇವಾರಿ ಪ್ರಶ್ನೆಗಳನ್ನು ಅಧಿಕಾರಿಗಳಿಗೆ ಕೇಳಿದ್ದು, ಒಂದು ವೇಳೆ ನಿಯಮ ಉಲ್ಲಂಘಿಸಿದರೆ, ಯಾವ ಮುಲಾಜೂ ಇಟ್ಟುಕೊಳ್ಳದೇ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿ ಎಂದು ಸಚಿವ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅರಣ್ಯ ಇಲಾಖೆ ಕಾನೂನಿನ ಅನ್ವಯ ಕ್ರಮ
ಸ್ಥಳಕ್ಕೆ ಭೇಟಿ ನೀಡಿರುವ ಸಚಿವ ಈಶ್ವರ್ ಖಂಡ್ರೆ, ಎಚ್‌ಎಂಟಿ ಅರಣ್ಯ ಭೂಮಿಯಲ್ಲಿನ ಮರಗಳ ಮಾರಣಹೋಮ ಮಾಡಿದರ ವಿರುದ್ಧ ಅರಣ್ಯ ಇಲಾಖೆ ಕಾನೂನಿನ ಅನ್ವಯ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈಶ್ವರ್ ಖಂಡ್ರೆ ಹೇಳಿದ್ದೇನು?
ಈ ಬಗ್ಗೆ ಟ್ವಿಟ್ ಮಾಡಿರುವ ಈಶ್ವರ್ ಖಂಡ್ರೆ, “ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ನಮ್ಮ ಅರಣ್ಯ ಮತ್ತು ಪರಿಸರದ ರಕ್ಷಣೆ ನಮ್ಮೆಲ್ಲರ ಪ್ರಮುಖ ಹೊಣೆಗಾರಿಕೆ. ಅರಣ್ಯ ಭೂಮಿಯಲ್ಲಿ ಅಕ್ರಮ ಕೃತ್ಯಗಳು ಕಂಡುಬಂದಲ್ಲಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ” ಎಂದಿದ್ದಾರೆ.
ಬಹುಕೋಟಿ ಬಜೆಟ್‌ನ ಸಿನಿಮಾ
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೀರ್ಷಿಕೆ ಟೀಸರ್ ಮೂಲಕ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾದಲ್ಲಿ ಬಾಲಿವುಡ್ ಮತ್ತು ಸೌತ್‌ನ ಸಾಕಷ್ಟು ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ.