logo
ಕನ್ನಡ ಸುದ್ದಿ  /  ಮನರಂಜನೆ  /  ರಕ್ಷಿತ್‌ ಶೆಟ್ಟಿಯ ರಿಚರ್ಡ್ ಆಂಟನಿ ಸಿನಿಮಾ ಸದ್ಯಕ್ಕೆ ಶುರುವಾಗುವ ಲಕ್ಷಣಗಳಿಲ್ಲ! ಪಾತ್ರದ ಅಧ್ಯಯನವೇ ಇನ್ನೂ ಮುಗಿದಿಲ್ಲ

ರಕ್ಷಿತ್‌ ಶೆಟ್ಟಿಯ ರಿಚರ್ಡ್ ಆಂಟನಿ ಸಿನಿಮಾ ಸದ್ಯಕ್ಕೆ ಶುರುವಾಗುವ ಲಕ್ಷಣಗಳಿಲ್ಲ! ಪಾತ್ರದ ಅಧ್ಯಯನವೇ ಇನ್ನೂ ಮುಗಿದಿಲ್ಲ

Dec 15, 2024 10:55 AM IST

google News

ರಕ್ಷಿತ್‌ ಶೆಟ್ಟಿಯ ರಿಚರ್ಡ್ ಆಂಟನಿ ಸಿನಿಮಾ

    • Rakshit Shetty: ರಕ್ಷಿತ್‌ ಶೆಟ್ಟಿಯ ರಿಚರ್ಡ್‌ ಆಂಟನಿ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಮುಗಿದಿರಬೇಕಿತ್ತು. ಆದರೆ, ಅಚ್ಚರಿಯ ವಿಚಾರ ಏನೆಂದರೆ ಈ ಸಿನಿಮಾ ಘೋಷಣೆಯಾಗಿಯೇ ಮೂರು ವರ್ಷ ಕಳೆದರೂ ಇನ್ನೂ ಸೆಟ್ಟೇರಿಲ್ಲ. 
ರಕ್ಷಿತ್‌ ಶೆಟ್ಟಿಯ ರಿಚರ್ಡ್ ಆಂಟನಿ ಸಿನಿಮಾ
ರಕ್ಷಿತ್‌ ಶೆಟ್ಟಿಯ ರಿಚರ್ಡ್ ಆಂಟನಿ ಸಿನಿಮಾ

Rakshit Shetty on Richard Anthony: ‘ಉಳಿದವರು ಕಂಡಂತೆ’ ಚಿತ್ರದ ಪ್ರೀಕ್ವೆಲ್‍ ಆದ ರಿಚರ್ಡ್ ಆಂಟನಿ ಘೋಷಣೆಯಾಗಿ ಮೂರೂವರೆ ವರ್ಷಗಳಾಗಿವೆ. 2021ರ ಜುಲೈನಲ್ಲಿ ವಿಜಯ್‍ ಕಿರಗಂದೂರು ನಿರ್ಮಾಣದಲ್ಲಿ, ರಕ್ಷಿತ್‍ ಶೆಟ್ಟಿ ನಿರ್ದೇಶನದಲ್ಲಿ ರಿಚರ್ಡ್ ಆಂಟನಿ ಚಿತ್ರದ ಬಗ್ಗೆ ಮೊದಲ ಸುದ್ದಿ ಕೇಳಿಬಂದಿತ್ತು. ಅಲ್ಲಿಂದ ಇಲ್ಲಿಯವರೆಗೂ ಮೂರೂವರೆ ವರ್ಷಗಳಾಗಿವೆ. ಆದರೆ, ಚಿತ್ರ ಇನ್ನೂ ಪ್ರಾರಂಭವಾಗಿಲ್ಲ. ಸದ್ಯ ಶುರುವಾಗುವ ಹಾಗೆಯೇ ಕಾಣುತ್ತಿಲ್ಲ. ಏಕೆಂದರೆ, ಇನ್ನೂ ಅಧ್ಯಯನದಲ್ಲೇ ಬ್ಯುಸಿಯಾಗಿದ್ದಾರಂತೆ ರಕ್ಷಿತ್‍ ಶೆಟ್ಟಿ.

ಇತ್ತೀಚೆಗೆ ಟೊರೊಂಟೋದ ಕನ್ನಡ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ರಕ್ಷಿತ್‍, ಚಿತ್ರ ಸ್ವಲ್ಪ ತಡವಾಗಬಹುದು ಎಂಬ ಹಿಂಟ್‍ ಕೊಟ್ಟಿದ್ದಾರೆ. ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ.

ಪಾತ್ರದ ಸ್ಟಡಿ ಮಾಡಬೇಕಿದೆ..

ಈ ಕುರಿತು ಮಾತನಾಡಿರುವ ರಕ್ಷಿತ್‍, ರಿಚರ್ಡ್ ಆಂಟನಿ ಚಿತ್ರದ ಬರವಣಿಗೆ ಇನ್ನೂ ಪೂರ್ತಿ ಆಗಿಲ್ಲ. ಆ ಪಾತ್ರದ ಬಗ್ಗೆ ಹೆಚ್ಚು ಅಧ್ಯಯನ ಮಾಡುವ ನಿಟ್ಟಿನಲ್ಲಿ ಊರೂರು ಸುತ್ತುತ್ತಿದ್ದೀನಿ. ಇಲ್ಲಿ ನಾಯಕ ರಿಚ್ಚಿ ಬೇರೆಬೇರೆ ಜಾಗಗಳಿಗೆ ಹೋಗುತ್ತಾನೆ. ಅಲ್ಲಿ ಬೇರೆಬೇರೆ ಜನರನ್ನು ಭೇಟಿಯಾಗುತ್ತಾನೆ. ಆ ಪಾತ್ರಗಳು ಹೇಗಿರುತ್ತವೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಬೇಕು. ನಾನು ಕಳೆದ 10 ವರ್ಷಗಳಲ್ಲಿ ಯಾವುದೇ ಪಾತ್ರಗಳನ್ನು ಸ್ಟಡಿ ಮಾಡಿಲ್ಲ. ಹಾಗಾಗಿ, ಬೇರೆಬೇರೆ ಜನರನ್ನು ಭೇಟಿ ಮಾಡಿ ಆ ಬಗ್ಗೆ ತಿಳಿದುಕೊಳ್ತಿದ್ದೀನಿ’ ಎಂದು ರಕ್ಷಿತ್‍ ಶೆಟ್ಟಿ ಹೇಳಿಕೊಂಡಿದ್ದಾರೆ.

ಈ ಕುರಿತು ಇನ್ನಷ್ಟು ವಿವರವಾಗಿ ಮಾತನಾಡಿರುವ ಅವರು, ‘ಉದಾಹರಣೆಗೆ ಮಾಫಿಯಾ ಡಾನ್‌ಗಳ ಕಥೆ ಏನು? ಅವರ ಹಿನ್ನೆಲೆ ಹೇಗಿರುತ್ತದೆ? ಎಂಬುದು ನನಗೆ ಗೊತ್ತಿಲ್ಲ. ಒಂದು ಹಂತದಲ್ಲಿ ರಿಚ್ಚಿ ಇವರನ್ನೆಲ್ಲಾ ಭೇಟಿ ಆದರೆ ಹೇಗಿರುತ್ತದೆ ಎನ್ನುವುದನ್ನು ಬರೆಯಬೇಕಿದೆ. ನನಗೆ ಡಾನ್‍ಗಳನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಆದರೆ, ಅಧ್ಯಯನ ಮಾಡಬಹುದು. ಒಂದಿಷ್ಟು ಕಡೆ ಸುತ್ತಾಡಿದರೆ, ಜನರನ್ನು ನೋಡಿ ಏನಾದರೂ ವಿಷಯ ಸಿಗಬಹುದು ಎನ್ನುವ ಕಾರಣಕ್ಕೆ ಈ ಸುತ್ತಾಟ ನಡೆಸಿದ್ದೇನೆ’ ಎನ್ನುತ್ತಾರೆ ರಕ್ಷಿತ್‍.

ರಿಚರ್ಡ್ ಆಂಟನಿ ಚಿತ್ರದ ಚಿತ್ರೀಕರಣ ಈ ವರ್ಷದ ಮೇ ತಿಂಗಳಲ್ಲಿ ಪ್ರಾರಂಭವಾಗಬೇಕಿತ್ತು. ಹಾಗಂತ ಖುದ್ದು ರಕ್ಷಿತ್‍ ಹೇಳಿಕೊಂಡಿದ್ದರು. ಈ ವರ್ಷ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮತ ಚಲಾಯಿಸಿ ಮಾತನಾಡಿದ್ದ ಅವರು, ‘ಮೇ ಒಂದರಿಂದ ನಾವು ಪೂರ್ಣಪ್ರಮಾಣವಾಗಿ ಕೆಲಸ ಶುರು ಮಾಡುತ್ತೇವೆ. ಸ್ಕ್ರಿಪ್ಟ್ ಕೆಲಸ ಬಹುತೇಕ ಮುಗಿದಿದೆ. ಶೇ.60ರಷ್ಟು ಚಿತ್ರೀಕರಣ, ಪಶ್ಚಿಮ ಕರಾವಳಿಯಲ್ಲಿ ನಡೆಯುತ್ತದೆ. ಚಿತ್ರದಲ್ಲಿ ಬಹಳಷ್ಟು ಜನ ಸ್ಥಳೀಯ ಪ್ರತಿಭೆಗಳಿರುತ್ತಾರೆ’ ಎಂದೆಲ್ಲಾ ಹೇಳಿದ್ದರು. ಆದರೆ, ಈಗ ನೋಡಿದರೆ, ಚಿತ್ರ ಪ್ರಾರಂಭವಾಗುವುದಕ್ಕೆ ಇನ್ನಷ್ಟು ಸಮಯವಾಗಲಿದೆ ಎನ್ನುವಂತಿದೆ.

ಈ ಚಿತ್ರವನ್ನು ಮೊದಲು ಹೊಂಬಾಳೆ ಫಿಲಂಸ್‍ನ ವಿಜಯ್‍ ಕಿರಗಂದೂರು ನಿರ್ಮಾಣ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಚಿತ್ರ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಆದರೆ, ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.

ವರದಿ: ಚೇತನ್‌ ನಾಡಿಗೇರ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ