Tomato Price: ಟೊಮೆಟೊ ಬೆಲೆ ಏರಿಕೆಗೆ ಎಲೆ ಚುಕ್ಕೆ ವೈರಸ್ ಕಾರಣ; ಕೋಲಾರ ಮಾರುಕಟ್ಟೆಯಲ್ಲಿ ದಾಖಲೆ ಮಟ್ಟದಲ್ಲಿ ಪೂರೈಕೆ ಕುಸಿತ
Jul 04, 2023 09:50 AM IST
ಕೋಲಾರದ ಟೊಮೆಟೊ ಮಾರುಕಟ್ಟೆಯಲ್ಲಿ ಭಾರಿ ಟೊಮೆಟೊ ಪೂರೈಕೆ ಭಾರಿ ಕಡಿಮೆಯಾಗಿದೆ
ಕೋಲಾರ ಜಿಲ್ಲೆಯಲ್ಲಿನ ಶೇಕಡಾ 50 ರಷ್ಟು ಟೊಮೆಟೊ ಬೆಳೆ ಎಲೆ ಸುರುಳಿ ವೈರಸ್‌ನಿಂದಾಗಿ ಫಸಲು ಕಡಿಮೆಯಾಗಿದೆ. ಬೆಲೆ ಏರಿಕೆಗೆ ಇದು ಪ್ರಮುಖ ಕಾರಣವಾಗಿದೆ.
ಬೆಂಗಳೂರು: ಭಾರತದಾದ್ಯಂತ ಟೊಮೆಟೊ ಬೆಲೆ (Tomato Price) ದಿಢೀರ್ ಏರಿಕೆಯಾಗಿದ್ದು, ಕೆಜಿ ಟೊಮೆಟೊ ಬೆಲೆ 100ರ ಗಡಿ ದಾಟಿದೆ. ಇತ್ತು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕೆಂಪು ಹಣ್ಣಿನ ಬೆಲೆ 100 ರೂಪಾಯಿಯ ಅಸುಪಾಸಿನಲ್ಲೇ ಇದೆ.
ಟೊಮೆಟೊ ಬೆಲೆ ಏರಿಕೆ ಕಾರಣವೇನು ಎನ್ನುವುದು ಸೇರಿದಂತೆ ರಾಷ್ಟ್ರ ಮಟ್ಟದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಟೊಮೆಟೊ ಬೆಲೆ ಏರಿಕೆಗೆ ಬೆಂಗಳೂರು ಸಮೀಪದಲ್ಲೇ ಇರುವ ಕೋಲಾರ ಜಿಲ್ಲೆ ಕಾರಣವಾಗಿದೆ.
ಏಷ್ಯಾದಲ್ಲೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯನ್ನು ಹೊಂದಿರುವುದು ಕೋಲಾರ. ಮಾತ್ರವಲ್ಲದೆ, ಇದೇ ಜಿಲ್ಲೆಯಲ್ಲೇ ಅತಿ ಹೆಚ್ಚು ಟೊಮೆಟೊವನ್ನು ಬೆಳೆಯಲಾಗುತ್ತದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ಎಲೆ ಸುರುಳಿ ವೈರಸ್‌ನಿಂದಾಗಿ ಬೆಳೆ ಸರಿಯಾಗಿ ಆಗಿಲ್ಲ.
ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಇಡೀ ದೇಶಕ್ಕೆ ಟೊಮೆಟೊ ಪೂರೈಕೆಯ ಪ್ರಮುಖ ಮಾರುಕಟ್ಟೆ ಕೋಲಾರ. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಂಪಿಎಂಸಿ)ಗೆ ಈ ವರ್ಷ ಟೊಮೆಟೊ ಪೂರೈಕೆ ತೀವ್ರವಾಗಿ ಕುಸಿತವಾಗಿದೆ.
2021ರ ಜೂನ್‌ನಲ್ಲಿ 9.37 ಲಕ್ಷ ಕ್ವಿಂಟಲ್, 2022ರ ಜೂನ್‌ನಲ್ಲಿ 5.45 ಲಕ್ಷ ಕ್ವಿಂಟಾಲ್ ಟೊಮೆಟೊ ಕೋಲಾರದ ಎಂಪಿಎಂಸಿಗೆ ಪೂರೈಕೆಯಾಗಿತ್ತು. ಆದರೆ 2023ರ ಜೂನ್‌ನಲ್ಲಿ ಕೇವಲ 3.2 ಲಕ್ಷ ಕ್ವಿಂಟಾಲ್ ಟೊಮೆಟೊ ಬಂದಿದೆ. ವರ್ಷದಿಂದ ವರ್ಷಕ್ಕೆ ಟೊಮೆಟೊ ಪೂರೈಕೆ ಇಳಿಮುಖದ ಹಾದಿಯಲ್ಲೇ ಇದೆ.
ಇಳುವರಿ ಕುಸಿತಕ್ಕೆ ಪ್ರಮುಖ ಕಾರಣ ಎಲೆ ಸುರುಳಿ ರೋಗ ಎಂದು ರೈತರು ಹೇಳುತ್ತಾರೆ. ಕೋಲಾರ ಮಾತ್ರವಲ್ಲದೆ, ನೆರೆಯ ಜಿಲ್ಲೆಗಳಲ್ಲೂ ಈ ವೈರಸ್ ಟೊಮೆಟೊ ಬೆಳೆಯನ್ನು ಹಾನಿ ಮಾಡಿದೆ.
ಇಳುವರಿ ಕುಸಿತಕ್ಕೆ ಟೊಮೇಟೊ ಲೀಫ್ ಕರ್ಲ್ ವೈರಸ್ ರೋಗ ಕಾರಣ ಎಂದು ರೈತರು ಹೇಳುತ್ತಾರೆ, ಈ ಬಾರಿ ಸಾಮಾನ್ಯವಾಗಿ 15 ಸುತ್ತುಗಳ ಫಸಲು ಪಡೆಯುತ್ತೇವೆ. ಆದರೆ ಈ ಬಾರಿ ರೋಗ ಭಾದೆಯಿಂದ ಗಿಡಗಳು ಒಣಗುತ್ತಿರುವ ಕಾರಣ ಕೇವಲ ಮೂರರಿಂದ 5 ಸುತ್ತ ಮಾತ್ರ ಫಸಲು ಸಿಗುತ್ತಿದೆ ಎಂದು ರೈತರೊಬ್ಬರು ವಿವರಿಸಿದ್ದಾರೆ. ಇದು ಕೋಲಾರ ಮತ್ತು ನೆರೆಯ ಟೊಮೆಟೊ ಬೆಳೆಯುವ ಜಿಲ್ಲೆಗಳಲ್ಲಿ ಬೆಳೆಗೆ ಹಾನಿಯಾಗಿದೆ.
ಕೋಲಾರದ ಹಳ್ಳಿಗಳಲ್ಲಿ ಟೊಮೆಟೊ ಬೆಳೆಗೆ ಎಲೆ ಸುರುಳಿ ವೈರಸ್ ಶೇಕಡಾ 50 ಕ್ಕಿಂತ ಹೆಚ್ಚು ಬೆಳೆಗಳ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಐಸಿಎಆರ್-ಐಐಹೆಚ್‌ಆರ್ ವಿಜ್ಞಾನಿಗಳ ತಂಡ ಕ್ಷೇತ್ರ ಭೇಟಿ ಆಧಾರಿತ ವರದಿಯಲ್ಲಿ ಖಚಿತಪಡಿಸಿದೆ.
72 ಗಂಟೆಗಳ ಕಾಲ ಹಣ್ಣು ಗಟ್ಟಿಯಾಗಿ ನಿಂತರೆ ಮಾತ್ರ ಎಂಪಿಎಸಿ ಮಾರುಕಟ್ಟೆಯಿಂದ ದೆಹಲಿಯಂತಹ ದೂರದ ಸ್ಥಳಗಳಿಗೆ ಹಣ್ಣನ್ನು ಸರಬರಾಜು ಮಾಡಬಹುದಾಗಿದೆ. ಆದರೆ ಪ್ರಮುಖ ಮಾರುಕಟ್ಟೆಗೆ ಬರುತ್ತಿರುವ ಟೊಮೆಟೊ ಹಣ್ಣು 52 ಗಂಟೆಗಳ ನಂತರ ಬಿಗಿತನವನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಲಾಗಿದೆ.
ಪ್ರತಿ ವರ್ಷದ ಜೂನ್‌ನಲ್ಲಿ ಟೊಮೆಟೊ ಬೆಲೆ ಸಾಮಾನ್ಯವಾಗಿ 300 ರಿಂದ 1,250 ರೂಪಾಯಿಗಳ ವರೆಗೆ ಇರುತ್ತದೆ. ಆದರೆ ಈ ವರ್ಷ 300 ರೂಪಾಯಿಯಿಂದ 1,500 ರೂಪಾಯಿ ವರೆಗೆ ತಲುಪಿದೆ. ಬೆಂಗಳೂರಿನ ಕೆಲವು ಕಡೆಗಳಲ್ಲಿ ಕೆಜಿ ಟೊಮೆಟೊ 100 ಗಡಿಯನ್ನೂ ದಾಟಿದೆ.
ಉತ್ತರ ಭಾರತದಲ್ಲಿ ಭಾರಿ ಮಳೆ ಹಾಗೂ ಇತರೆ ಕಾರಣಗಳಿಂದಾಗಿ ಜೂನ್, ಜುಲೈ ಅವಧಿಯಲ್ಲಿ ಟೊಮೆಟೊ ಸೇರಿದಂತೆ ಪ್ರಮುಖ ಬೆಳೆಗಳು ಕೈಕೊಡುತ್ತವೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇದೇ ಸಂದರ್ಭದಲ್ಲಿ ಕರ್ನಾಟಕದ ಬಹುತೇಕ ತರಕಾರಿಗಳ ಬೆಲೆಗಳು ಗಗನಕ್ಕೇರುತ್ತವೆ.
ವಿಭಾಗ