Tomato Price: ಕಳೆದ ವರ್ಷದಷ್ಟು ಟೊಮೆಟೊ ಬೆಲೆ ಹೆಚ್ಚಾಗಿಲ್ಲ, ಸದ್ಯದ ದರ ಹೆಚ್ಚಳಕ್ಕೆ ಕಾರಣಗಳೇನು, ಇಲ್ಲಿದೆ ಟೊಮೆಟೊ ಅವಲೋಕನ
Why Tomato Price Rise: ಜೂನ್ ತಿಂಗಳ ದ್ವಿತೀಯಾರ್ಧದಲ್ಲಿ ದೇಶದಲ್ಲಿ ಟೊಮೆಟೊ ದರ ದುಬಾರಿಯಾಗಲು ಆರಂಭವಾಗಿದೆ. ಆದರೆ, ಈ ಬಾರಿಯ ದರ ಹೆಚ್ಚಳವು ಕಳೆದ ವರ್ಷದ ಇದೇ ಅವಧಿಗಿಂತ ಕಡಿಮೆ. ದೇಶದಲ್ಲಿ ಟೊಮೆಟೊ ದರ ಹೆಚ್ಚಾಗಲು ಹಲವು ಅಂಶಗಳು ಕಾರಣವಾಗಿವೆ.
ಬೆಂಗಳೂರು: ದೇಶದಲ್ಲಿ ಟೊಮೆಟೊ ಬೆಲೆ (Tomato Price in India) ದುಬಾರಿಯಾಗಿದೆ. ಜೂನ್ ತಿಂಗಳ ಆರಂಭದಿಂದ ಟೊಮೆಟೊ ದರ ಶೇಕಡ 85-90ರಷ್ಟು ಹೆಚ್ಚಾಗಿದೆ. ಅಂದರೆ, ಟೊಮೆಟೊ ದರ ಎರಡು ಅಥವಾ ಮೂರು ಪಟ್ಟು ಹೆಚ್ಚಾಗಿದೆ. ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಕೆಜಿಗೆ 120 ರೂ. ಗೆ ತಲುಪಿದೆ. ಅಹಮದಾಬಾದ್‌ನಲ್ಲಿ ಜೂನ್ 1ರಂದು ಕೆಜಿ ಟೊಮೆಟೊಗೆ 22 ರೂಪಾಯಿ ಇತ್ತು. ಜೂನ್ 27ರಂದು 80 ರೂಗೆ ಏರಿಕೆ ಕಂಡಿತು. ಇದು ಶೇಕಡ 264ರಷ್ಟು ಏರಿಕೆಯಾಗಿದೆ. ಬೆಂಗಳೂರಿನಲ್ಲಿಯೂ ಟೊಮೆಟೊ ದರ ಹೆಚ್ಚಾಗಿದ್ದು, ಜನರು ಟೊಮೆಟೊ ಬದಲು ಬೇರೆ ಯಾವುದನ್ನು ಪರ್ಯಾಯವಾಗಿ ಬಳಸಬಹುದು ಎಂದು ಯೋಚಿಸುತ್ತಿದ್ದಾರೆ. ಒಟ್ಟಾರೆ, ದೇಶದ ವಿವಿಧೆಡೆ ಕೆಂಪು ಟೊಮೆಟೊ ದರವೂ ಕೆಂಪಾಗಿದೆ.
ಟೊಮೆಟೊ ದರ ಹೆಚ್ಚಲು ಕಾರಣವೇನು?
ಕರ್ನಾಟಕದಂತಹ ಟೊಮೆಟೊ ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಅಸಾಧಾರಣ ಬಿಸಿ ವಾತಾವರಣ, ನಿರಂತರ ಮಳೆ ಇತ್ಯಾದಿಗಳಿಂದ ಉಂಟಾದ ಬೆಳೆಹಾನಿ ಟೊಮೆಟೊ ಬೆಲೆ ಏರಿಕೆಗೆ ಪ್ರಮುಖ ಕಾರಣ. ಮಹಾರಾಷ್ಟ್ರದ ಮಂಡಿಗಳಲ್ಲಿ ಕೆಲವು ವಾರಗಳ ಹಿಂದೆ ರೈತರು ಕಡಿಮೆ ದರದಿಂದಾಗಿ ಟೊಮೆಟೊ ಸುರಿಯುತ್ತಿದ್ದರು. ಅಂದಿನಿಂದ ನಾಟಕೀಯವಾಗಿ ತಿರುವುಪಡೆದುಕೊಂಡಿದ್ದು, ಟೊಮೆಟೊ ದರ ಗಮನಾರ್ಹವಾಗಿ ಏರಿಕೆ ಕಂಡಿದೆ.
ಸರಕಾರದ ಅಂಕಿಅಂಶಗಳ ಪ್ರಕಾರ ಜೂನ್ ತಿಂಗಳಲ್ಲಿ 518 ಕೇಂದ್ರಗಳಲ್ಲಿ ಟೊಮೆಟೊಗಳ ಸರಾಸರಿ ಬೆಲೆ ಕೆಜಿಗೆ 25 ರೂ.ನಿಂದ 57 ರೂ.ಗೆ ಏರಿಕೆಂಡಿದೆ. ಈ ಬೆಲೆ ಏರಿಕೆಯನ್ನು ಇನ್ನೊಂದು ದೃಷ್ಟಿಕೋನದಲ್ಲಿ ನೋಡಬೇಕು. ಈ ಸಂದರ್ಭದಲ್ಲಿ ಬೆಲೆ ಏರಿಕೆ ಕಂಡರೂ, ಕಳೆದ ವರ್ಷ ಅಂದರೆ 2022ರಲ್ಲಿ ಟೊಮೆಟೊ ಬೆಲೆ ಎಷ್ಟಿತ್ತು ಎಂದು ನೋಡಬೇಕು. ಕಳೆದ ವರ್ಷ ಇದೇ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಬೆಲೆಗಿಂತ ಈಗಲೂ ಬೆಲೆ ಕಡಿಮೆ ಇದೆ.
ಪೂರೈಕೆ ಕಡಿಮೆ
ಬೆಲೆ ಹೆಚ್ಚಳಕ್ಕೆ ಮುಖ್ಯ ಕಾರಣ "ಆಗಮನ"ದ ಕುಸಿತ. ರೈತರು ದೇಶಾದ್ಯಂತ ಮಂಡಿಗಳಿಗೆ ಅಥವಾ ಸಗಟು ಮಾರುಕಟ್ಟೆಗೆ ತರುವ ಟೊಮೆಟೊ ಪ್ರಮಾಣ ಗಮನಾರ್ಹವಾಗಿ ಕುಸಿತಕಂಡಿದೆ. ಪ್ರತಿದಿನ ಮಂಡಿಗೆ ತರುವ ಟೊಮೆಟೊ ಪ್ರಮಾಣವು ಜೂನ್ ಮಧ್ಯದಲ್ಲಿ ಸರಾಸರಿ 12,500-13,000 ಟನ್ ಇತ್ತು. ಇದು ಜೂನ್ ಅಂತ್ಯದಲ್ಲಿ ಸುಮಾರು 9,300 ಟನ್‌ಗಳಿಗೆ ಕುಸಿದಿದೆ.
ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಪರಿಸ್ಥಿತಿ ಭಿನ್ನವಾಗಿದೆ. ಜೂನ್‌ನಲ್ಲಿ (ಜೂನ್ 28 ರವರೆಗೆ) ಟೊಮೆಟೊ ತಂದ ಪ್ರಮಾಣವು 2022ರ ಅವಧಿಯಲ್ಲಿ ತಂದ ಟೊಮೆಟೊಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಸರಕಾರದ ಅಂಕಿಅಂಶಗಳು ತೋರಿಸುತ್ತವೆ. ಜೂನ್ 1 ಮತ್ತು ಜೂನ್ 28 ರ ನಡುವೆ ಭಾರತಾದ್ಯಂತ ಒಟ್ಟು 346,100 ಟನ್ ಟೊಮೆಟೊಗಳು ಮಂಡಿಗಳಿಗೆ ಬಂದಿವೆ. 2022ರ ಇದೇ ಅವಧಿಯಲ್ಲಿ ರೈತರು ಸುಮಾರು 290,000 ಟನ್ ಟೊಮೆಟೊಗಳನ್ನು ಮಂಡಿಗಳಿಗೆ ತಂದಿದ್ದರು.
ರಾಜ್ಯಗಳ ಒತ್ತಡ
ಜೂನ್ ತಿಂಗಳಲ್ಲಿ ಕೇವಲ ಆರು ರಾಜ್ಯಗಳು ಭಾರತಕ್ಕೆ ಮುಕ್ಕಾಳು ಭಾಗದಷ್ಟು ಟೊಮೆಟೊ ಪೂರೈಸಿವೆ. ಟೊಮೆಟೊ ಪೂರೈಕೆಯಲ್ಲಿ ಮೂರು ದೊಡ್ಡ ರಾಜ್ಯಗಳೆಂದರೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ. ಕರ್ನಾಟಕದಿಂದ ಶೇಕಡ 18, ಮಹಾರಾಷ್ಟ್ರದಿಂದ ಶೇಕಡ 16 ಮತ್ತು ಆಂಧ್ರಪ್ರದೇಶದಿಂದ ಶೇಕಡ 15 ಟೊಮೆಟೊ ಆಗಮಿಸಿವೆ. ಈ ಮೂರು ರಾಜ್ಯಗಳಲ್ಲಿ ಟೊಮೆಟೊ ಪೂರೈಕೆಯು ವಿವಿಧ ಹಂತಗಳಲ್ಲಿ ಕುಸಿತಕಂಡಿದೆ. ಜೂನ್ 20 ಮತ್ತು ಜೂನ್ 29ರ ನಡುವೆ ದೈನಂದಿನ ಸರಾಸರಿ ಟೊಮೆಟೊ ಆಆಗಮನವು ತಿಂಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ಶೇಕಡ 46-47ರಷ್ಟು ಕಡಿಮೆಯಾಗಿದೆ.
ದೀರ್ಘಕಾಲದ ಅವಲೋಕನ
ಕಳೆದ ಎರಡು ವರ್ಷಗಳಲ್ಲಿನ ಟೊಮೆಟೊ ದರ ಚಿತ್ರಣವನ್ನು ನೋಡಿದರೆ ಈ ದರ ಏರಿಕೆಯು ಕಡಿಮೆ ತೀವ್ರತೆ ಹೊಂದಿದೆ. ನವೆಂಬರ್ 2021, ಜೂನ್ 2022 ಮತ್ತು ಅಕ್ಟೋಬರ್ 2022ರಲ್ಲಿ ಟೊಮೆಟೊ ದರ ಇದಕ್ಕಿಂತಲೂ ದುಬಾರಿಯಾಗಿತ್ತು. ನವೆಂಬರ್ 2021ರಲ್ಲಿ ಭಾರತಾದ್ಯಂತ ತಿಂಗಳ ಸರಾಸರಿ ದರವು ಕೆಜಿಗೆ 58 ರೂಪಾಯಿ ಇತ್ತು. ಈಗಿನ ಭಾರತಾದ್ಯಂತದ ಸರಾಸರಿ ದರ ಕೆ.ಜಿ.ಗೆ 32 ರೂಪಾಯಿ ಇದೆ.
ದೆಹಲಿಯಲ್ಲಿ ಸರಾಸರಿ ಟೊಮೆಟೊ ದರ ಕೆಜಿಗೆ 63 ರೂಪಾಯಿ ಇದೆ. ಒಟ್ಟಾರೆ ಜೂನ್ ತಿಂಗಳ ಸರಾಸರಿ ದರ ಕೆ.ಜಿ.ಗೆ 31 ರೂಪಾಯಿ ಇದೆ. ಬೆಂಗಳೂರು, ಕೊಲ್ಕತ್ತಾ ಮತ್ತು ಚೆನ್ನೈನಂತಹ ನಗರಗಳಲ್ಲಿ ಈ ಸಮಯದಲ್ಲಿ ಟೊಮೆಟೊ ದರ ಇನ್ನಷ್ಟು ಹೆಚ್ಚಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಕಡಿಮೆ ಮಳೆಯು ಟೊಮೆಟೊ ದರ ಗಗನಕ್ಕೆ ಏರಲು ಕಾರಣವಾಗಿದೆ. ದಕ್ಷಿಣದಲ್ಲಿ ಟೊಮೆಟೊ ಇಳುವರಿ ಕಡಿಮೆಯಾದ ಬಳಿಕ ಮುಂಬೈನಲ್ಲಿ ಸರಾಸರಿ ದರವು 2022ರ ಜೂನ್ ತಿಂಗಳಲ್ಲಿ ಕೆ.ಜಿ.ಗೆ ಸರಾಸರಿ 72 ರೂ.ಗೆ ತಲುಪಿತ್ತು. ಹೀಗಾಗಿ, ಈ ಬಾರಿಯ ಟೊಮೆಟೊ ದರ ಏರಿಕೆ ತಾತ್ಕಾಲಿಕ ಎನ್ನಲಾಗುತ್ತಿದ್ದು, ಟೊಮೆಟೊ ದರ ಶಾಂತವಾಗುವ ಎಲ್ಲಾ ಲಕ್ಷಣಗಳಿವೆ.