logo
ಕನ್ನಡ ಸುದ್ದಿ  /  ಕರ್ನಾಟಕ  /  Amit Shah: ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲಕ್ಕೆ ಆಗಮಿಸಿದ ಕೇಂದ್ರಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಬೆಂಬಲಿಗರಲ್ಲಿ ಅಮಿತೋತ್ಸವ

Amit Shah: ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲಕ್ಕೆ ಆಗಮಿಸಿದ ಕೇಂದ್ರಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಬೆಂಬಲಿಗರಲ್ಲಿ ಅಮಿತೋತ್ಸವ

Praveen Chandra B HT Kannada

Feb 11, 2023 03:14 PM IST

Amit Shah visit Karnataka: ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲಕ್ಕೆ ಆಗಮಿಸಿದ ಅಮಿತ್‌ ಶಾ

    • ಅಮಿತ್‌ ಶಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದ ಹನುಮಗಿರಿಗೆ ಆಗಮಿಸಿದ್ದಾರೆ. ವಿಶೇಷ ಹೆಲಿಕಾಪ್ಟರ್‌ ಮೂಲಕ ಅಮಿತ್‌ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಶ್ವರಮಂಗಲದ ಗಜಾನನ ಶಾಲೆಯ ಮೈದಾನದಲ್ಲಿ ಇಳಿದಿದ್ದಾರೆ.
Amit Shah visit Karnataka: ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲಕ್ಕೆ ಆಗಮಿಸಿದ ಅಮಿತ್‌ ಶಾ
Amit Shah visit Karnataka: ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲಕ್ಕೆ ಆಗಮಿಸಿದ ಅಮಿತ್‌ ಶಾ

ಪುತ್ತೂರು: ಅಮಿತ್‌ ಶಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದ ಹನುಮಗಿರಿಗೆ ಆಗಮಿಸಿದ್ದಾರೆ. ವಿಶೇಷ ಹೆಲಿಕಾಪ್ಟರ್‌ ಮೂಲಕ ಅಮಿತ್‌ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಶ್ವರಮಂಗಲದ ಗಜಾನನ ಶಾಲೆಯ ಮೈದಾನದಲ್ಲಿ ಇಳಿದಿದ್ದಾರೆ. ಈ ಸಮಯದಲ್ಲಿ ಬಿಜೆಪಿಯ ಪ್ರಮುಖರು ಅಲ್ಲಿದ್ದು, ಅಮಿತ್‌ ಶಾ ಅವರನ್ನು ಬರಮಾಡಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bagalkot News: ಚುನಾವಣೆಗೆ ಹೊರಟ ಸಿಬ್ಬಂದಿ ಮುಧೋಳದಲ್ಲಿ ಕುಸಿದು ಬಿದ್ದು ಸಾವು

Mysuru News: ಬಿಸಿಲಬೇಗೆ ನಾಗರಹೊಳೆಯಿಂದ ಹೊರ ಬಂದು ತೋಟದ ಮನೆಯಲ್ಲಿ ಗಡದ್ದಾಗಿ ಮಲಗಿದ ಹುಲಿರಾಯ

ಬೆಂಗಳೂರು: ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ಗೆ 1.4 ಲಕ್ಷ ರೂಪಾಯಿ ದಂಡ, ವಿದ್ಯಾರ್ಥಿ ಕೇಳದ ಕೋರ್ಸ್‌ಗೆ ಸೇರಿಸಿದ ಪ್ರಕರಣ

ಲೋಕಸಭಾ ಚುನಾವಣೆ ನಾಳೆ ಮತದಾನ, ಬೆಂಗಳೂರಲ್ಲಿ ಇಂದು ಸಂಚಾರ ದಟ್ಟಣೆ, ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗ ಸಲಹೆ ನೀಡಿದ ಪೊಲೀಸರು

ಅಮರಗಿರಿಯಲ್ಲಿ ಮಧ್ಯಾಹ್ನದಿಂದಲೇ ಕಾರ್ಯಕ್ರಮಗಳು ಆರಂಭವಾಗಿದ್ದು, ಅಲ್ಲಿ ರಾರಾಜಿಸುತ್ತಿರುವ ಯೋಧರ ಪರಿಚಯ ಕಾರ್ಯಕ್ರಮ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತಿದೆ.

ಪೂರ್ವನಿಗದಿಯಂತೆ ಅಮಿತ್‌ ಶಾ ಅವರು ಇಂದು ಮಧ್ಯಾಹ್ನ 1.50 ಗಂಟೆಗೆ ಈಶ್ವರಮಂಗಲ ತಲುಪಬೇಕಿತ್ತು. ಆದರೆ, ಅವರು 2.30 ಗಂಟೆಯ ಬಳಿಕ ಕಣ್ಣೂರಿನಿಂದ ಹೊರಟಿದ್ದಾರೆ. ಹೈದರಾಬಾದ್‌ ಕಾರ್ಯಕ್ರಮ ಮುಗಿಸಿ ವಿಶೇಷ ವಿಮಾನದ ಮೂಲಕ ಇವರು ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇದೀಗ ಅಪರಾಹ್ನ 3 ಗಂಟೆಗೆ ಈಶ್ವರಮಂಗಲಕ್ಕೆ ಅಮಿತ್‌ ಶಾ ಆಗಮಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಬಿಜೆಪಿಯ ರಾಜ್ಯಾಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಬಿಜೆಪಿಯ ಪ್ರಮುಖರು ಅಮಿತ್‌ ಶಾ ಅವರೊಂದಿಗಿದ್ದಾರೆ.

hಹನುಮಗಿರಿಯ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಅಮಿತ್‌ ಶಾ ಅವರು ಅಲ್ಲೇ ಹತ್ತಿರದಲ್ಲಿರುವ ಅಮರಗಿರಿಗೆ ಭೇಟಿ ನೀಡಿದ್ದಾರೆ. ಇಲ್ಲಿ ಧರ್ಮಶ್ರೀ ಪ್ರತಿಷ್ಠಾನವು ಭಾರತ ಮಾತಾ ಮಂದಿರ ನಿರ್ಮಿಸಿದ್ದು, ಅಲ್ಲಿ ಭಾರತ ಮಾತೆ ಪ್ರತಿಮೆ, ಅಮರ ಜವಾನ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಿದ್ದಾರೆ.

ಕೆಲವೇ ಕ್ಷಣದಲ್ಲಿ ಪುತ್ತೂರಿನ ಈಶ್ಚರಮಂಗಲದಲ್ಲಿರುವ ಹನುಮಗಿರಿ ಕ್ಷೇತ್ರದಲ್ಲಿರುವ ಅಮರಜ್ಯೋತಿ ಮಂದಿರವನ್ನು ಅಮಿತ್ ಶಾ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಸದ್ಯ ಈಶ್ವರಮಂಗಲದ ಎಲ್ಲೆಡೆ ಪೊಲೀಸರೇ ಕಾಣಿಸುತ್ತಿದ್ದು, ಬಿಗಿಭದ್ರತೆ ಎದ್ದುಕಾಣುತ್ತಿದೆ. ಪುತ್ತೂರು ಪಟ್ಟಣದಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರು ನೆರೆದಿದ್ದಾರೆ. ಈಶ್ವರಮಂಗಲದಿಂದ ನೇರವಾಗಿ ಪುತ್ತೂರಿಗೆ ಹೆಲಿಕಾಪ್ಟರ್‌ ಮೂಲಕವೇ ಅಮಿತ್‌ ಶಾ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ರೋಡ್‌ಶೋ ಇರುವುದಿಲ್ಲ.

ಅಮಿತ್‌ ಶಾ ಅವರ ಜತೆಗೆ ಎಸ್‌ಪಿಜಿ ಭದ್ರತಾ ಸಿಬ್ಬಂದಿಗಳು ಇದ್ದಾರೆ. ದಕ್ಷಿಣ ಕನ್ನಡಕ್ಕೆ ಅಮಿತ್‌ ಶಾ ಭೇಟಿ ಹಿನ್ನಲೆಯಲ್ಲಿ ರಾಜ್ಯದ ನಾನಾ ಭಾಗದ 1,600 ಪೊಲೀಸ್‌ರನ್ನು ಈಗಾಗಲೇ ದಕ್ಷಿಣ ಕನ್ನಡ ಡ್ಯೂಟಿಗೆ ಹಾಕಲಾಗಿದೆ. 7 ಮಂದಿ ಎಸ್‌ಪಿ, 22 ಮಂದಿ ಡಿವೈಎಸ್‌ಪಿ, 38 ಮಂದಿ ಇನ್‌ಸ್ಪೆಕ್ಟರ್‌, 80ಕ್ಕೂ ಅಧಿಕ ಪಿಎಸ್‌ಐಗಳನ್ನು ನಿಯೋಜಿಸಲಾಗಿದೆ. ಹನುಮಗಿರಿ, ಮೊಟ್ಟೆತ್ತಡ್ಕ ಹೆಲಿಪ್ಯಾಡ್‌, ತೆಂಕಿಲ ಸಮಾವೇಶ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಅಮಿತ್‌ ಶಾ ಆಗಮನದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 275 ರ ಮಾಣಿ- ಮೈಸೂರು ಹೆದ್ದಾರಿಯಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5.30 ವರೆಗೆ ವಾಹನ ಸಂಚಾರ ನಿಷೇಧ ಹಾಕಲಾಗಿದೆ. ಬೊಳುವಾರಿನ ಲಿನೆಟ್ ವೃತ್ತದಿಂದ ಮುಕ್ರಂಪಾಡಿವರೆಗಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ವಿಧಿಸಿ ಪುತ್ತೂರು ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಮಂಗಳೂರಿನಿಂದ ಮಡಿಕೇರಿ ಹೋಗುವ ವಾಹನಗಳು ಲಿನೆಟ್ ವೃತ್ತ- ಬೊಳುವಾರು ವೃತ್ತ-ದರ್ಬೆ- ಪುರುಷರಕಟ್ಟೆ-ಪಂಜಳ ಮಾರ್ಗವಾಗಿ ಪರ್ಪುಂಜ ತಲುಪಬೇಕೆಂದು ಸೂಚಿಸಲಾಗಿದೆ. ಮಡಿಕೇರಿ ಕಡೆಯಿಂದ ಬರುವ ವಾಹನಗಳು ಪರ್ಪುಂಜ ಮೂಲಕ ಪಂಜಳ-ಪುರುಷರಕಟ್ಟೆ-ದರ್ಬೆ-ಬೊಳುವಾರು ಜಂಕ್ಷನ್ ಮೂಲಕ ಲಿನೆಟ್ ವೃತ್ತ ತಲುಪಬೇಕೆಂದು ಸೂಚಿಸಲಾಗಿದೆ.

ಕ್ಯಾಂಪ್ಕೊ ಸಂಸ್ಥೆಯು ದರ್ಬೆ ಬೆದ್ರಾಳ ರಸ್ತೆಯಲ್ಲಿದ್ದರೂ ಅಪಾರ ಜನ ಸೇರುವ ನಿರೀಕ್ಷೆಯಿಂದ ಸಹಕಾರಿ ಸಮಾವೇಶವನ್ನು ತೆಂಕಿಲದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಆಯೋಜಿಸಲಾಗಿದೆ. ಇಂದು ಸಂಜೆ ಪುತ್ತೂರಿನ ತೆಂಕಿಲದಲ್ಲಿ ಬೃಹತ್‌ ಕಾರ್ಯಕ್ರಮ ನಡೆಯಲಿದೆ.

ತೆಂಕಿಲದಲ್ಲಿ ಸಮಾವೇಶ ಮುಗಿದ ಬಳಿಕ ರಸ್ತೆ ಮಾರ್ಗದ ಮೂಲಕ ಕ್ಯಾಂಪ್ಕೊ ಫ್ಯಾಕ್ಟರಿಗೆ ಭೇಟಿ ನೀಡಲಿದ್ದಾರೆ. ಪುತ್ತೂರು ಕಾರ್ಯಕ್ರಮ ಮುಗಿದ ಬಳಿಕ ಮಂಗಳೂರಿನಲ್ಲಿ ರೋಡ್‌ ಶೋದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಆದರೆ, ಕೊನೆಕ್ಷಣದಲ್ಲಿ ಈ ರೋಡ್‌ ಶೋ ರದ್ದುಗೊಳಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ರೋಡ್‌ ಶೋ ನಡೆಸಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ರೋಡ್ ಶೋ ನಡೆಯುವ ಮಾರ್ಗಮಧ್ಯೆ ಪದವಿನಂಗಡಿ ಬಳಿ ಕೊರಗಜ್ಜನ ಕೋಲ ನಡೆಯುತ್ತಿದೆ. ಈ ಕಾರಣಕ್ಕೆ ಅಮಿತ್ ಶಾ ರೋಡ್ ಶೋ ಕಾರ್ಯಕ್ರಮ ರದ್ದು ಮಾಡಲಾಗಿದೆ ಎನ್ನಲಾಗಿದೆ.

ಇಂದು ರಾತ್ರಿ ಆರೂವರೆಯಿಂದ ಎಂಟು ಗಂಟೆಯವರೆಗೆ ಬಿಜೆಪಿ ಮುಖಂಡರ ಜತೆ ಮಂಗಳೂರಿನಲ್ಲಿ ಅಮಿತ್‌ ಶಾ ಚರ್ಚೆ ನಡೆಸಲಿದ್ದಾರೆ. ಬಳಿಕ ಮಂಗಳೂರು ವಿಮಾನನಿಲ್ದಾಣದ ಮೂಲಕ ದೆಹಲಿಗೆ ವಾಪಸ್ಸಾಗಲಿದ್ದಾರೆ. ಅಂದಹಾಗೆ, ಸೋಮವಾರ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು, ಏರೋ ಇಂಡಿಯಾ ಏರ್‌ಶೋ ಉದ್ಘಾಟಿಸಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು