logo
ಕನ್ನಡ ಸುದ್ದಿ  /  ಕರ್ನಾಟಕ  /  River Indie: ಬೆಂಗಳೂರು ಕಂಪನಿಯ ಸಖತ್‌ ಎಲೆಕ್ಟ್ರಿಕ್‌ ಸ್ಕೂಟರ್‌, ರಿವರ್‌ ಇಂಡೀಗೆ ಈಗ ಚೈನ್‌ ಡ್ರೈವ್‌ ಬೆಂಬಲ, ದರ 1.43 ಲಕ್ಷ

River Indie: ಬೆಂಗಳೂರು ಕಂಪನಿಯ ಸಖತ್‌ ಎಲೆಕ್ಟ್ರಿಕ್‌ ಸ್ಕೂಟರ್‌, ರಿವರ್‌ ಇಂಡೀಗೆ ಈಗ ಚೈನ್‌ ಡ್ರೈವ್‌ ಬೆಂಬಲ, ದರ 1.43 ಲಕ್ಷ

Praveen Chandra B HT Kannada

Nov 27, 2024 03:03 PM IST

google News

ರಿವರ್‌ ಇಂಡೀ ಸ್ಕೂಟರ್‌

    • 2024 River Indie: ಬೆಂಗಳೂರು ಮೂಲದ ಎಲೆಕ್ಟ್ರಿಕ್‌ ಸ್ಕೂಟರ್‌ ಕಂಪನಿ ರೈಡ್‌ ರಿವರ್‌ ಇದೀಗ ತನ್ನ ರಿವರ್‌ ಇಂಡೀ ಸ್ಕೂಟರ್‌ನ ಪರಿಷ್ಕೃತ ಮಾದರಿ ಪರಿಚಯಿಸಿದೆ. ಈ ಸ್ಕೂಟರ್‌ಗೆ ಬೆಲ್ಟ್‌ ಬದಲು ಚೈನ್‌ ಜೋಡಿಸಲಾಗಿದೆ. ಇದರೊಂದಿಗೆ ಸಿಂಗಲ್‌ ಸ್ಪೀಡ್‌ ಗಿಯರ್‌ ಬಾಕ್ಸ್‌ ನೀಡಿದೆ.
ರಿವರ್‌ ಇಂಡೀ ಸ್ಕೂಟರ್‌
ರಿವರ್‌ ಇಂಡೀ ಸ್ಕೂಟರ್‌

2024 River Indie: ಬೆಂಗಳೂರು ಮೂಲದ ಎಲೆಕ್ಟ್ರಿಕ್‌ ಸ್ಕೂಟರ್‌ ತಯಾರಿಕಾ ಕಂಪನಿ ರಿವರ್‌ ಇದೀಗ ಹೊಸ ಇಂಡೀ ಸ್ಕೂಟರ್‌ ಪರಿಚಯಿಸಿದೆ. ಇದು ನೋಡಲು ಹಳೆಯ ಇಂಡೀ ರೀತಿ ಕಂಡರೂ ಪ್ರಮುಖ ಟೆಕ್ನಿಕಲ್‌ ಅಪ್‌ಗ್ರೇಡ್‌ ಗುರುತಿಸಬಹುದು. ಎರಡು ದೊಡ್ಡ ಕಣ್ಣಿನಂತೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿರುವ ಈ ಸ್ಕೂಟರ್‌ ನೋಡಲು ಆಕರ್ಷಕವಾಗಿದೆ.

2024 ರಿವರ್ ಇಂಡೀ ಎಕ್ಸ್ ಶೋ ರೂಂ ದರ 1.43 ಲಕ್ಷ ರೂಪಾಯಿ ಇದೆ. ರಿವರ್ ಇಂಡೀ ಮೊದಲ ಬಾರಿಗೆ 2023ರಲ್ಲಿ 1.25 ಲಕ್ಷ ದರದಲ್ಲಿ ಲಾಂಚ್‌ ಆಗಿತ್ತು. ಬಳಿಕ ಇದರ ದರ 1.38 ರೂಗೆ ತಲುಪಿತ್ತು. ಇದೀಗ ಸಾಕಷ್ಟು ಹೊಸತನದೊಂದಿಗೆ ಪರಿಷ್ಕೃತ ಇಂಡೀ ಆಗಮಿಸಿದೆ. ಇದೀಗ ಇದರ ದರ 1.43 ರೂಗೆ ತಲುಪಿದೆ.

ಹೊಸ ಅಪ್‌ಡೇಟ್‌ ಏನು?

ಈ ಸ್ಕೂಟರ್‌ನಲ್ಲಿ ಗುರುತಿಸಬಹುದಾದ ಪ್ರಮುಖ ಅಪ್‌ಡೇಟ್‌ ಎಂದರೆ ಹೊಸ ಸಿಂಗಲ್‌ ಸ್ಪೀಡ್‌ ಗಿಯರ್‌ ಬಾಕ್ಸ್‌ ಮತ್ತು ಚೈನ್‌ ಡ್ರೈವ್‌ ಸಿಸ್ಟಮ್‌ ಆಗಿದೆ. ಕಂಪನಿಯ ಪ್ರಕಾರ ದೇಶದ ಈ ಸೆಗ್ಮೆಂಟ್‌ನ ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿಯೇ ಈ ರೀತಿ ಚೈನ್‌ ಡ್ರೈವ್‌ ಇರುವ ಮೊದಲ ಸ್ಕೂಟರ್‌ ಇದಾಗಿದೆ. ಈ ಹಿಂದೆ ಬೆಲ್ಟ್‌ ಡ್ರೈವ್‌ ಹೊಂದಿತ್ತು. ಹೊಸ ಚೈನ್‌ ಡ್ರೈವ್‌ನಿಂದ ಮಾಲೀಕತ್ವ ಖರ್ಚು ಕಡಿಮೆಯಾಗಲಿದೆ ಮತ್ತು ಸ್ಕೂಟರ್‌ ಬಾಳ್ವಿಕೆ ಹೆಚ್ಚಲಿದೆ ಎಂದು ಕಂಪನಿ ತಿಳಿಸಿದೆ.

"ಸಿಂಗಲ್-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸಂಯೋಜಿಸಲ್ಪಟ್ಟ ಚೈನ್ ಡ್ರೈವ್ ಸ್ಕೂಟರ್‌ನ ಜೋಡಣೆ ಪ್ರಕ್ರಿಯೆ ಮತ್ತು ದುರಸ್ತಿ ಕಾರ್ಯ ಎರಡನ್ನೂ ಸರಳಗೊಳಿಸುತ್ತದೆ. ಹೆಚ್ಚುವರಿಯಾಗಿ, ರಿವರ್ ಇಂಡೀ ಈಗ ಎರಡು ಹೊಸ ಬಣ್ಣಗಳನ್ನು ಪಡೆಯುತ್ತದೆ - ವಿಂಟರ್ ವೈಟ್ ಮತ್ತು 2024 ರ ನವೀಕರಣದೊಂದಿಗೆ ಸ್ಟಾರ್ಮ್ ಗ್ರೇ ಬಣ್ಣಗಳಲ್ಲಿ ದೊರಕುತ್ತದೆ" ಎಂದು ರಿವರ್‌ನ ಮೆಕ್ಯಾನಿಕಲ್ ಡಿಸೈನ್‌ನ ಮುಖ್ಯಸ್ಥ ಮಜೆರ್ ಅಲಿ ಬೇಗ್ ಮಿರ್ಜಾ ಮಾಹಿತಿ ನೀಡಿದ್ದಾರೆ.

ಹೊಸ ಸ್ಕೂಟರ್‌ನ ಡಿಸೈನ್‌ ಹೇಗಿದೆ?

ಇಂಡೀ ರಿವರ್‌ ಅದೇ ವಿನ್ಯಾಸದೊಂದಿಗೆ ಆಗಮಿಸಿದೆ. ಅಂದರೆ, ಅದರ ಬೃಹತ್ ಬಾಡಿವರ್ಕ್, ಟ್ವಿನ್-ಬೀಮ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಬದಿಗಳಲ್ಲಿ ಸಂಯೋಜಿಸಲಾದ ಪ್ಯಾನಿಯರ್‌ ಮುಂತಾದವುಗಳು ಹಳೆಯ ಸ್ಕೂಟರ್‌ನಂತೆ ಇದೆ. ದಪ್ಪವಾಗಿರುವ ಸೀಟು, ಫ್ಲಾಟ್‌ ಮತ್ತು ಅಗಲವಾದ ಫ್ಲೋರ್‌ಬೋರ್ಡ್‌, ಗ್ರಾಬ್ರೇಲ್, ಕ್ರ್ಯಾಶ್ ಗಾರ್ಡ್‌ಗಳು ಮತ್ತು ದಪ್ಪ ಟೈರ್‌, ಅಲಾಯ್‌ ವೀಲ್‌ ಇತ್ಯಾದಿಗಳು ಇವೆ. ಇದು ಸಾಂಪ್ರದಾಯಿಕ ಸ್ಕೂಟರ್‌ಗಳಿಗೆ ಹೋಲಿಸಿದರೆ ಒಂದಿಷ್ಟು ಒರಟು ನೋಟ ನೀಡುತ್ತದೆ.

ಇಂಡೀ ರಿವರ್‌ ಸ್ಕೂಟರ್‌ನಲ್ಲಿ 55 ಲೀಟರ್‌ಗಳ ಲಾಕ್ ಮಾಡಬಹುದಾದ ಸ್ಟೋರೇಜ್‌ ಇದೆ. ಗ್ಲೋವ್‌ಬಾಕ್ಸ್‌ನಲ್ಲಿ 12 ಲೀಟರ್ ಸ್ಥಳಾವಕಾಶ ಮತ್ತು ಸೀಟಿನ ಕೆಳಗೆ 43 ಲೀಟರ್ ಸ್ಥಳಾವಕಾಶವಿದೆ. ಇದು ಫ್ರಂಟ್-ಫುಟ್‌ಪೆಗ್‌ಗಳು ಮತ್ತು 14 ಇಂಚಿನ ಚಕ್ರಗಳನ್ನು ಹೊಂದಿದ್ದು, ಯಾವುದೇ ರೀತಿಯ ರಸ್ತೆಗಳಿಗೂ ಸೂಕ್ತವಾಗಿದೆ ಎಂದು ಕಂಪನಿ ತಿಳಿಸಿದೆ.

ಇಂಡೀ ರಿವರ್‌ ಸ್ಕೂಟರ್‌ಗೆ 6.7 kW (8.9 bhp) ಎಲೆಕ್ಟ್ರಿಕ್ ಮೋಟಾರ್‌ನಿಂದ ಪವರ್‌ ದೊರಕುತ್ತದೆ. ಇದು 26 Nm ಪೀಕ್ ಟಾರ್ಕ್ ನೀಡುತ್ತದೆ. ಗಂಟೆಗೆ 90 ಕಿಮೀ ಗರಿಷ್ಠ ವೇಗದಲ್ಲಿ ಹೋಗಬಹುದು. 4 kWh ಬ್ಯಾಟರಿ ಪ್ಯಾಕ್ ಒಂದೇ ಚಾರ್ಜ್‌ನಲ್ಲಿ 120 ಕಿಮೀ ರೇಂಜ್‌ ನೀಡುತ್ತದೆ. ಸ್ಟ್ಯಾಂಡರ್ಡ್ ಚಾರ್ಜರ್‌ನಲ್ಲಿ ಐದು ಗಂಟೆಯಲ್ಲಿ ಶೇಕಡ 80ರಷ್ಟು ಚಾರ್ಜ್ ಮಾಡಬಹುದು. ಇಕೋ, ರೈಡ್ ಮತ್ತು ರಶ್ ಎಂಬ ಮೂರು ರೈಡಿಂಗ್‌ ಮೋಡ್‌ಗಳನ್ನು ಹೊಂದಿದೆ.

ಕಂಪನಿಯು ಅಕ್ಟೋಬರ್ 2023ರಿಂದ ಇಂಡೀ ಎಲೆಕ್ಟ್ರಿಕ್ ಸ್ಕೂಟರ್‌ನ 3,000 ಯೂನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ರಿವರ್‌ನ ಸಹ-ಸಂಸ್ಥಾಪಕ ಅರವಿಂದ್ ಮಣಿ ಹೇಳಿದ್ದಾರೆ. ರಿವರ್ ಈಗ ಕೊಯಮತ್ತೂರು, ವೈಜಾಗ್, ಹುಬ್ಬಳ್ಳಿ, ಕೊಚ್ಚಿನ್, ಬೆಳಗಾವಿ, ವೆಲ್ಲೂರುಗಳಲ್ಲಿ ತನ್ನ ವ್ಯವಹಾರ ವಿಸ್ತರಿಸಲು ಯೋಜಿಸಿದೆ. ಮಾರ್ಚ್ 2025ರ ವೇಳೆಗೆ ಭಾರತದಾದ್ಯಂತ 25 ರಿವರ್ ಸ್ಟೋರ್‌ಗಳನ್ನು ಹೊಂದುವ ಗುರಿಯನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ