Honda Activa EV: ಬರಲಿದೆ ಹೋಂಡಾ ಆಕ್ಟಿವಾ ಇವಿ.. ಈ ಪ್ರತಿಸ್ಪರ್ಧಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ದೊಡ್ಡ ಹೊಡೆತ
Honda Activa EV: ದೇಶದ ಸ್ಕೂಟರ್ ಪ್ರಿಯರ ನೆಚ್ಚಿನ ವಾಹನ ಹೋಂಡಾ ಆಕ್ಟಿವಾ. ಭಾರತದಲ್ಲಿ ಮಾರಾಟದಲ್ಲಿ ಆಕ್ಟಿವಾ ನಂಬರ್ ಒನ್. ಹೋಂಡಾ ಆಕ್ಟಿವಾದ ಎಲೆಕ್ಟ್ರಿಕ್ ವರ್ಷನ್ ಆಗಮಿಸಲಿದೆಯಂತೆ. ಮುಂದಿನ ವರ್ಷ ಆಕ್ಟಿವಾ ಇವಿ ಆಗಮಿಸುವ ಸೂಚನೆಯಿದೆ. ಆಕ್ಟಿವಾ ಇವಿ ಬಂದರೆ ಮಾರುಕಟ್ಟೆಯಲ್ಲಿರುವ ಇತರೆ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ದೊಡ್ಡ ಹೊಡೆತ ಖಾತ್ರಿ.
Honda Activa EV: ಭಾರತದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುವ ಸ್ಕೂಟರ್ ಆಕ್ಟಿವಾ. ಎರಡನೇ ಸ್ಥಾನ ಟಿವಿಎಸ್ ಜುಪಿಟರ್‌ಗೆ. ಬಹುತೇಕರು ಆಕ್ಟಿವಾ ಖರೀದಿಸಲು ಬಯಸುತ್ತಾರೆ. ಆದರೆ, ಈಗ ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಳಕೆ ಹೆಚ್ಚುತ್ತಿದೆ. ಬಹುತೇಕ ಎಲ್ಲಾ ಕಂಪನಿಗಳು ಇಸ್ಕೂಟರ್‌ಗಳನ್ನು ಪರಿಚಯಿಸುತ್ತಿವೆ. ಇಂತಹ ಸಂದರ್ಭದಲ್ಲಿ ಆಕ್ಟಿವಾ ಸ್ಕೂಟರ್ ಪ್ರಿಯರಿಗೂ ಒಂದು ಶುಭಸುದ್ದಿಯಿದೆ. ಹೋಂಡಾ ಆಕ್ಟಿವಾದ ಎಲೆಕ್ಟ್ರಿಕ್ ವರ್ಷನ್ ಕೂಡ ಬರಲಿದೆಯಂತೆ. ಮುಂದಿನ ದಿನಗಳಲ್ಲಿ ಬಹುತೇಕ ಎಲ್ಲಾ ಸ್ಕೂಟರ್‌ಗಳು ಎಲೆಕ್ಟ್ರಿಕ್ ಮಯವಾದರೂ ಅಚ್ಚರಿಯಿಲ್ಲ. ವಿದ್ಯುತ್ ಚಾರ್ಜ್ ಮಾಡಿ ಸ್ಕೂಟರ್ ಓಡಿಸಲು ಎಲ್ಲರೂ ಬಯಸುತ್ತಾರೆ. ಪೆಟ್ರೋಲ್‌ಗೆ ಹಣ ಸುರಿಯುವ ಬದಲು ಕೊಂಚ ಕರೆಂಟ್ ಬಿಲ್ ಹೆಚ್ಚು ಕಟ್ಟಿದರೆ ಪರವಾಗಿಲ್ಲ ಎನ್ನುವುದು ಬಹುತೇಕರ ಅಭಿಪ್ರಾಯ. ಒಳ್ಳೆಯ ರೇಂಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಸಿಕ್ಕರಂತೂ ಭರ್ಜರಿ ಲಾಭ. ಹೋಂಡಾ ಆಕ್ಟಿವಾ ಇವಿ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.
ಮುಂದಿನ ವರ್ಷ ಬಿಡುಗಡೆ
ಹೋಂಡಾ ದ್ವಿಚಕ್ರ ವಾಹನ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕ ಯೋಗೇಶ್ ಮಾಥುರ್ ಹೋಂಡಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಹೋಂಡಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2025 ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡುವ ಸೂಚನೆಯನ್ನು ಅವರು ನೀಡಿದ್ದಾರೆ. “ಈ ಆಟೋ ಶೋನಲ್ಲಿ ಪ್ರದರ್ಶಿಸಿದ ನಂತರ ನಾವು 2024-25 ರ ಆರ್ಥಿಕ ವರ್ಷಕ್ಕೆ ಭಾರತದಲ್ಲಿ ನಮ್ಮ ಮೊದಲ ಎಲೆಕ್ಟ್ರಿಕ್ ವಾಹನ ಆರಂಭಿಸಲು ಯೋಜಿಸಿದ್ದೇವೆ. ಕಂಪನಿಯು ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ತಡವಾಗಿ ಪ್ರವೇಶಿಸಿರುವುದು ನಿಜ, ಆದರೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ನಮಗೆ ಇನ್ನೂ ಬೇಕಾದ್ದಷ್ಟು ಸಮಯವಿದೆ" ಎಂದು ಅವರು ಹೇಳಿದ್ದಾರೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯು ಕಳೆದ ವರ್ಷ ಒಟ್ಟು ಮಾರುಕಟ್ಟೆಯ ಶೇಕಡಾ 5 ರಿಂದ ಈಗ ಶೇಕಡಾ 8 ಕ್ಕೆ ವಿಸ್ತರಿಸಿದೆ. ಹೀಗಾಗಿ, ಎಲೆಕ್ಟ್ರಿಕ್ ಮಾರುಕಟ್ಟೆಗೆ ಪ್ರವೇಶಿಸಲು ಇದು ಸರಿಯಾದ ಸಮಯ ಎಂದು ಯೋಗೇಶ್ ಮಾಥುರ್ ಹೇಳಿದ್ದಾರೆ.. ಕಂಪನಿಯು 2030 ರ ವೇಳೆಗೆ ತನ್ನ ದೇಶೀಯ ಮಾರಾಟದ ಮೂರನೇ ಒಂದು ಭಾಗದಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಹೊಂದುವ ಗುರಿ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಎಲೆಕ್ಟ್ರಿಕ್ ಆಕ್ಟಿವಾ ಎಂಬ ಹೆಸರಿರಬಹುದೇ?
ಹೋಂಡಾ ಆಕ್ಟಿವಾ ಸಾಕಷ್ಟು ಜನಪ್ರಿಯತೆ ಪಡೆದಿದೆ. ಈಗಲೂ ಇದು ಉತ್ತಮವಾಗಿ ಮಾರಾಟವಾಗುತ್ತಿರುವ ಕಂಪನಿಯು ಆಕ್ಟಿವಾ ಹೆಸರಿನಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಹೊರತರುವ ಸೂಚನೆಯಿದೆ. ಹೋಂಡಾ ಈ ವರ್ಷದ ಅಂತ್ಯದ ವೇಳೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗೆ ಸಂಬಂಧಪಟ್ಟಂತೆ ತನ್ನ ತಂತ್ರಜ್ಞಾನ ಕೆಲಸವನ್ನು ಪೂರ್ಣಗೊಳಿಸಬಹುದು. ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2025ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಬಹುದು.
ಕಂಪನಿಯೂ ಈಗಾಗಲೇ ಬ್ಯಾಟರಿ, ಮೋಟಾರ್‌ಗಳು, ನಿಯಂತ್ರಕಗಳು ಮತ್ತು ಚಾರ್ಜರ್‌ಗಳು ಸೇರಿದಂತೆ ಇವಿ ತಂತ್ರಜ್ಞಾನಕ್ಕಾಗಿ ಪೇಟೆಂಟ್ ಅನ್ನು ಸಲ್ಲಿಸಿದೆ. ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಫ್ಲೋರ್‌ಬೋರ್ಡ್ ಅಡಿಯಲ್ಲಿ ಸ್ಥಿರ ಬ್ಯಾಟರಿ ಮತ್ತು ಹಿಂಭಾಗದಲ್ಲಿ ಹಬ್ ಮೋಟರ್ ಅನ್ನು ಹೊಂದಿರುತ್ತದೆ ಎಂದು ಪೇಟೆಂಟ್‌ಗಳು ಸೂಚಿಸುತ್ತವೆ.
ಇತರೆ ಇ-ಸ್ಕೂಟರ್‌ಗಳಿಗೆ ಆತಂಕ
ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ. ಭಾರತದಲ್ಲಿ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯು ಸಹಜವಾಗಿ ಪ್ರತಿಸ್ಪರ್ಧಿಗಳಿಗೆ ಭಯ ಹುಟ್ಟಿಸಬಹುದು. ಉತ್ತಮ ಶ್ರೇಣಿ, ಉತ್ತಮ ವೈಶಿಷ್ಟ್ಯಗಳು, ಆಧುನಿಕ ವಿನ್ಯಾಸದೊಂದಿಗೆ ಓಲಾ, ಈಥರ್‌ನಂತಹ ಎಲ್ಲಾ ಇವಿ ಸ್ಕೂಟರ್‌ಗಳಿಗೆ ಆಕ್ಟಿವಾ ಇವಿ ಪ್ರಬಲ ಪ್ರತಿಸ್ಪರ್ಧೆ ನೀಡುವ ನಿರೀಕ್ಷೆಯಿದೆ. ಆಕ್ಟಿವಾದ ಎಲೆಕ್ಟ್ರಿಕ್ ಆವೃತ್ತಿಯು ಆರಂಭದಲ್ಲಿಯೇ ಉತ್ತಮ ಅಭಿಪ್ರಾಯ ಪಡೆದರೆ, ಯಾವುದೇ ನ್ಯೂನತೆ ತೋರಿಸದೆ ಇದ್ದರೆ ಮಾರಾಟ ಹೆಚ್ಚಲಿದೆ. Ether 450X, Ola, TVS iQube ಮುಂತಾದ ಇವಿಗಳಿಗೆ ಸಹಜವಾಗಿ ಆಕ್ಟಿವಾ ತುಸು ಆತಂಕ ಹುಟ್ಟಿಸಲಿದೆ.