Bangalore News: ಬೆಂಗಳೂರಿನ ಬಾಬುಸಾ ಪಾಳ್ಯದಲ್ಲಿರಸ್ತೆಗಾಗಿ ವಿಭಿನ್ನ ಪ್ರತಿಭಟನೆ, ಬಿಬಿಎಂಪಿ ವಿರುದ್ದ ಸ್ಥಳೀಯರ ಆಕ್ರೋಶ
Oct 29, 2024 11:55 AM IST
ಬೆಂಗಳೂರಿನ ಬಾಬುಸಾ ಪಾಳ್ಯದಲ್ಲಿನ ರಸ್ತೆ ಅವ್ಯವಸ್ಥೆ ಹೀಗಿದೆ.
- ಬೆಂಗಳೂರಿನ ಬಾಬುಸಾ ಪಾಳ್ಯದಲ್ಲಿನ ರಸ್ತೆ ದುಸ್ಥಿತಿಯಿಂದ ರೋಸಿ ಹೋಗಿರುವ ಸ್ಥಳೀಯರು ಗುಂಡಿಯಲ್ಲಿ ಕಾಗದದ ದೋಣಿಗಳನ್ನು ತೇಲಿ ಬಿಟ್ಟು ಪ್ರತಿಭಟಿಸಿ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು: ನಿರ್ಮಾಣ ಹಂತದಲ್ಲಿದ್ದ ಭಾರೀ ಕಟ್ಟಡವೊಂದು ಕುಸಿದು 9 ಮಂದಿ ಮೃತಪಟ್ಟು ಸುದ್ದಿಯಾದ ಬೆಂಗಳೂರಿನ ಬಾಬುಸಾಪಾಳ್ಯದ ಜನತೆ ಮೂಲಸೌಕರ್ಯ ಸರಿಯಾಗಿಲ್ಲದೇ ಹೈರಾಣಾಗಿ ಹೋಗಿದ್ದಾರೆ. ಅದರಲ್ಲೂ ಸೂಕ್ತ ರಸ್ತೆಗಳು ಇಲ್ಲದೇ ಆಕ್ರೋಶಗೊಂಡಿದ್ದಾರೆ. ಈ ಭಾಗದಲ್ಲಿ ರಸ್ತೆಗಳು ಗುಂಡಿಮಯವಾಗಿ ಹೋಗಿವೆ. ವಾಹನ ಸಂಚಾರ ದುಸ್ತರವಾಗಿ ಹೋಗಿದೆ. ಈ ಕುರಿತು ಬಿಬಿಎಂಪಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ಧಾರೆ. ಬೆಂಗಳೂರಿನ ಬಾಬುಸಾಪಾಳ್ಯದ ರಸ್ತೆಗಳ ದುಸ್ಥಿತಿಯನ್ನು ತೋರಿಸಲು ಪ್ರತಿಭಟನಾಕಾರರು ಕಾಗದದ ದೋಣಿಗಳನ್ನು ತಯಾರಿಸಿ ಜಲಾವೃತವಾದ ಗುಂಡಿಗಳಲ್ಲಿ ತೇಲಿ ಬಿಟ್ಟು ಆಕ್ರೋಶ ಹೊರ ಹಾಕಿದರು. ಅಲ್ಲದೇ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಬಿಬಿಎಂಪಿಯ ಅಧಿಕಾರಿಗಳ ವಿರುದ್ದವೂ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಈಗಾಗಲೇ ಹಲವಾರು ದಿನಗಳಿಂದ ಹಾಳಾಗಿರುವ ರಸ್ತೆಗಳಲ್ಲಿ ಗೊಣಗುತ್ತಲೇ ಸಂಚರಿಸುತ್ತಿದ್ದ ಬಾಬುಸಾ ಪಾಳ್ಯದ ನಿವಾಸಿಗಳಲ್ಲಿ ಬಹುತೇಕರು ಕೆಲಸದಿಂದ ರಜೆ ಪಡೆದು ರಸ್ತೆಗಿಳಿದ ಬೆಂಗಳೂರು ಪ್ರತಿಭಟನಾಕಾರರು ಜಲಾವೃತವಾದ ಗುಂಡಿಗಳಲ್ಲಿ ಕಾಗದದ ದೋಣಿಗಳನ್ನು ತೇಲಿ ಬಿಟ್ಟರು. ಪ್ರತಿಯೊಬ್ಬರೂ ದೋಣಿಗಳನ್ನು ಹಿಡಿದುಕೊಂಡೇ ಬಂದು ನೀರಿನಲ್ಲಿ ಹರಿ ಬಿಟ್ಟು ಆಕ್ರೋಶವನ್ನು ಕೊಂಚ ಜೋರಾಗಿಯೇ ಹೊರ ಹಾಕಿದರು. ಅಲ್ಲದೇ ಪ್ಲೇ ಕಾರ್ಡ್‌ಗಳನ್ನು ಹಿಡಿದು ಬಿಬಿಎಂಪಿ ನಿರ್ಲಕ್ಷ್ಯದ ವಿರುದ್ದವೂ ಧಿಕ್ಕಾರ ಕೂಗಿದರು.
ಸೋಮವಾರ ಬೆಳಿಗ್ಗೆ ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ಪ್ರತಿಭಟನಾಕಾರರ ಗುಂಪು ಬೀದಿಗಿಳಿದು ಈ ಪ್ರದೇಶದ ರಸ್ತೆಗಳ ದಯನೀಯ ಸ್ಥಿತಿಯ ವಿರುದ್ಧ ಧ್ವನಿ ಎತ್ತಿತು. ಸಾವಿರಾರು ಟೆಕ್ಕಿಗಳು ವಾಸಿಸುವ ನಗರದ ಪೂರ್ವ ಭಾಗದ ರಸ್ತೆಗಳ ಸ್ಥಿತಿಯನ್ನು ಬಹಿರಂಗಪಡಿಸಲು ಪ್ರತಿಭಟನಾಕಾರರು ಕಾಗದದ ದೋಣಿಗಳನ್ನು ತಯಾರಿಸಿದರು ಮತ್ತು ಜಲಾವೃತವಾದ ಗುಂಡಿಗಳಲ್ಲಿ ಅವುಗಳನ್ನು ತೇಲಿ ಬಿಟ್ಟರು. ಈಗಲಾದರೂ ಬಿಬಿಎಂಪಿ ಕಣ್ಣು ಬಿಡುತ್ತದೆಯೋ ನೋಡೋಣ. ಸ್ಥಳೀಯ ಶಾಸಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಹಲವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ಸ್ಥಳೀಯ ನಿವಾಸಿ. ವಾಲ್ಮೀಕಿ, ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಳೆದ ಹಲವಾರು ವರ್ಷಗಳಿಂದ ಈ ಪ್ರದೇಶದ ರಸ್ತೆಗಳ ಸ್ಥಿತಿಯನ್ನು ಬಿಬಿಎಂಪಿ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ನಾನು ಆರು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇನೆ, ಮತ್ತು ಸಣ್ಣ ಮಳೆಯ ನಂತರ ನಾನು ಒಳ್ಳೆಯ ರಸ್ತೆಯನ್ನು ನೋಡಿಲ್ಲ. ರಸ್ತೆಗಳು ನೀರಿನಿಂದ ತುಂಬಿರುವುದರಿಂದ ಮತ್ತು ಯಾರೂ ಕಾರ್ಯನಿರ್ವಹಿಸಲು ತಲೆಕೆಡಿಸಿಕೊಳ್ಳದ ಕಾರಣ ನಾವು ಇಲ್ಲಿ ಬದುಕುವುದೇ ದುಸ್ತರ ಎನ್ನುವಂತಾಗಿದೆ. 10 ನಿಮಿಷಗಳ ಮಳೆ ನಮ್ಮ ಜೀವನವನ್ನು ಕಠಿಣಗೊಳಿಸುತ್ತದೆ. ಬಿಬಿಎಂಪಿ ಮುಂದೆ ಬಂದು ಈ ಪ್ರದೇಶದಲ್ಲಿನ ರಸ್ತೆ ದುಸ್ಥಿತಿಯನ್ನು ಸರಿಪಡಿಸಬೇಕು" ಎಂದು ಅವರು ಹೇಳಿದರು.
ಸ್ಥಳೀಯರಾದ ಸೌಮ್ಯಾ ಅಕುಲಾ ಪ್ರಕಾರ, "ಇತ್ತೀಚೆಗೆ ಕುಸಿದ ಕಟ್ಟಡವು ಇಲ್ಲಿಂದ ಕೆಲವೇ ಮೀಟರ್ ದೂರದಲ್ಲಿದೆ. ಮುಖ್ಯಮಂತ್ರಿ ಸೇರಿದಂತೆ ಅನೇಕ ನಾಯಕರು ಕಳೆದ ವಾರ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು. ಆದರೆ ಈ ಪ್ರದೇಶದ ರಸ್ತೆಗಳ ಸ್ಥಿತಿಯನ್ನು ಪರಿಹರಿಸಲಾಗಲಿಲ್ಲ. ನಾವು ಕೆಲಸದಿಂದ ರಜೆ ತೆಗೆದುಕೊಂಡು ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಸೇರಬೇಕಾಯಿತು ಎಂಬುದು ದುಃಖಕರವಾಗಿದೆ. ಸಂಬಂಧಪಟ್ಟವರು ಈಗಾಲಾದರೂ ನಮ್ಮ ಮಾತನ್ನು ಕೇಳುತ್ತಾರೆ ಎನ್ನುವ ನಂಬಿಕೆಯಿದೆ. ಇಲ್ಲದೇ ಇದ್ದರೆ ಹೋರಾಟ ಮತ್ತೆ ಮಾಡುತ್ತೇವೆ ಎನ್ನುತ್ತಾರೆ.
ಕೆಟ್ಟ ರಸ್ತೆಗಳ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ, ನಿವಾಸಿಗಳು ಕಾಗದದ ದೋಣಿಗಳನ್ನು ಸಿದ್ಧಪಡಿಸಿ ನೀರು ತುಂಬಿದ ಗುಂಡಿಗಳಲ್ಲಿ ತೇಲಿಬಿಟ್ಟ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವಾರು ಬಳಕೆದಾರರು ಬಿಬಿಎಂಪಿಯ ಬದಲಾಗದ ನಿರ್ಲಕ್ಷ್ಯಕ್ಕಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಕೆದಾರರೊಬ್ಬರು, ಬೆಂಗಳೂರಿನಾದ್ಯಂತ ಸಾಮೂಹಿಕ ಪ್ರತಿಭಟನೆಗಳು ನಡೆಯಬೇಕಾಗಿದೆ. ದುರದೃಷ್ಟವಶಾತ್, ಹೆಚ್ಚಿನ ರಾಷ್ಟ್ರಗಳು ಲಘುವಾಗಿ ಪರಿಗಣಿಸುವ ಮೂಲಭೂತ ಸೌಲಭ್ಯಗಳಿಗಾಗಿ ನಾವು ಪ್ರತಿಭಟಿಸಬೇಕಾಗಿದೆ, ನಮಗಿಂತ ಬಡ ರಾಷ್ಟ್ರಗಳು ಸಹ. ಎಂದು ಕಾಲೆಳೆದಿದ್ದಾರೆ.
ವಿಭಾಗ