logo
ಕನ್ನಡ ಸುದ್ದಿ  /  ಕರ್ನಾಟಕ  /  ವಿದ್ಯಾರ್ಥಿಗಳ ಆಕರ್ಷಣೆಗೆ ಜಾಲತಾಣಗಳ ಮೊರೆ ಹೋದ ವಿಶ್ವವಿದ್ಯಾಲಯ! ಪೋಸ್ಟರ್, ಯೂ ಟ್ಯೂಬ್‌ ಮೂಲಕ ಕೋರ್ಸ್‌, ಶುಲ್ಕ ಮತ್ತಿತರ ಮಾಹಿತಿ

ವಿದ್ಯಾರ್ಥಿಗಳ ಆಕರ್ಷಣೆಗೆ ಜಾಲತಾಣಗಳ ಮೊರೆ ಹೋದ ವಿಶ್ವವಿದ್ಯಾಲಯ! ಪೋಸ್ಟರ್, ಯೂ ಟ್ಯೂಬ್‌ ಮೂಲಕ ಕೋರ್ಸ್‌, ಶುಲ್ಕ ಮತ್ತಿತರ ಮಾಹಿತಿ

Prasanna Kumar P N HT Kannada

Nov 11, 2024 06:00 AM IST

google News

ವಿದ್ಯಾರ್ಥಿಗಳ ಆಕರ್ಷಣೆಗೆ ಜಾಲತಾಣಗಳ ಮೊರೆ ಹೋದ ವಿಶ್ವವಿದ್ಯಾಲಯ! ಪೋಸ್ಟರ್, ಯೂ ಟ್ಯೂಬ್‌ ಮೂಲಕ ಕೋರ್ಸ್‌, ಶುಲ್ಕ ಮತ್ತಿತರ ಮಾಹಿತಿ

    • Bangalore City University: ಬೆಂಗಳೂರು ನಗರ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಆಕರ್ಷಣೆಗೆ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದೆ. ಪೋಸ್ಟರ್, ಯೂ ಟ್ಯೂಬ್‌ ಮೂಲಕ ಕೋರ್ಸ್‌, ಶುಲ್ಕ ಮತ್ತಿತರ ಮಾಹಿತಿ ನೀಡುವ ಮೂಲಕ ಗಮನ ಸೆಳೆದಿದೆ. (ವರದಿ-ಎಚ್.ಮಾರುತಿ)
ವಿದ್ಯಾರ್ಥಿಗಳ ಆಕರ್ಷಣೆಗೆ ಜಾಲತಾಣಗಳ ಮೊರೆ ಹೋದ ವಿಶ್ವವಿದ್ಯಾಲಯ! ಪೋಸ್ಟರ್, ಯೂ ಟ್ಯೂಬ್‌ ಮೂಲಕ ಕೋರ್ಸ್‌, ಶುಲ್ಕ ಮತ್ತಿತರ ಮಾಹಿತಿ
ವಿದ್ಯಾರ್ಥಿಗಳ ಆಕರ್ಷಣೆಗೆ ಜಾಲತಾಣಗಳ ಮೊರೆ ಹೋದ ವಿಶ್ವವಿದ್ಯಾಲಯ! ಪೋಸ್ಟರ್, ಯೂ ಟ್ಯೂಬ್‌ ಮೂಲಕ ಕೋರ್ಸ್‌, ಶುಲ್ಕ ಮತ್ತಿತರ ಮಾಹಿತಿ

ಬೆಂಗಳೂರು: ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾರುಕಟ್ಟೆ ಮಾಡದ ವಸ್ತುವೇ ಇಲ್ಲ ಎನ್ನಬಹುದು. ಇದೀಗ ಈ ಪಟ್ಟಿಗೆ ವಿಶ್ವದ್ಯಾಲಯಗಳ ಸೇರ್ಪಡೆಯೂ ಆಗಿದೆ. ಅನೇಕ ವಿಶ್ವವಿದ್ಯಾಲಯಗಳು ವಿಡಿಯೋ, ಕೈಪಿಡಿ, ರೀಲ್ಸ್‌, ಶುಲ್ಕವನ್ನು ಕಂತುಗಳಾಗಿ ಪಾವತಿಸಲು ಅವಕಾಶ ನೀಡುವ ಮಾಹಿತಿ ನೀಡುವವರೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್​​ಗಳಿಗೆ ದಾಖಲಾತಿಗೆ ನೀರಸ ಪ್ರತಿಕ್ರಿಯೆ ಉಂಟಾಗಿದ್ದು ವಿದ್ಯಾರ್ಥಿಗಳನ್ನು ಆಕರ್ಷಿಸಲು ಜಾಲತಾಣಗಳನ್ನು ಬಳಸಿಕೊಳ್ಳಲು ಮುಂದಾಗಿವೆ.

ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಗೆ ಮೂರನೇ ಸುತ್ತಿನ ದಾಖಲಾತಿ ಆರಂಭವಾಗಿದೆ. ಆದರೆ ಕೆಲವು ಕೋರ್ಸ್‌ ಗಳಿಗೆ ಕೆಲವೇ ವಿದ್ಯಾರ್ಥಿಗಳು ದಾಖಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ. ಉದಾಹರಣೆಗೆ ಪರಿಸರ ವಿಜ್ಞಾನ, ವಿಭಾಗಕ್ಕೆ 30 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದ್ದು, ಇದುವರೆಗೂ ಕೇವಲ 6 ವಿದ್ಯಾರ್ಥಿಗಳು ಮತ್ತು ರಾಜಕೀಯ ಶಾಸ್ತ್ರ ವಿಭಾಗದಲ್ಲಿ 43 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, 6 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ಸ್ನಾತಕೋತ್ತರ ವಿಭಾಗ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ.

ಯಾವ ಕೋರ್ಸ್​​ಗೆ ಕಡಿಮೆ ದಾಖಲಾತಿ?

ವಿದ್ಯಾರ್ಥಿಗಳು ಅಕಾಡೆಮಿಕ್‌ ದೃಷ್ಟಿಯಿಂದ ಮಾತ್ರ ಸ್ನಾತಕೋತ್ತರ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಆಯಾ ವಿಭಾಗಗಳೇ ವಿದ್ಯಾರ್ಥಿಗಳನ್ನು ಆಕರ್ಷಿಸಲು ಪ್ರಯತ್ನಗಳನ್ನು ಮಾಡುತ್ತಿವೆ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಲಿಂಗರಾಜು ಗಾಂಧಿ ಹೇಳಿದ್ದಾರೆ. ಈ ವಿವಿಯಲ್ಲಿ ಮಾಸ್‌ ಕಮ್ಯೂನಿಕೇಷನ್‌ ಮತ್ತು ಪತ್ರಿಕೋದ್ಯಮ, ಸಮಾಜಶಾಸ್ತ್ರ ಮತ್ತು ಫ್ಯಾಷನ್‌ ಮತ್ತು ಆಪರೆಲ್‌ ಡಿಸೈನ್‌ ವಿಭಾಗಗಳಿಗೆ ದಾಖಲಾತಿ ಕಡಿಮೆ ಇದೆ. ವಾಣಿಜ್ಯ, ರಾಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್‌ ಸೈನ್ಸ್‌ ಮತ್ತು ಮಾಸ್ಟರ್‌ ಆಫ್‌ ಸೋಷಿಯಲ್‌ ವರ್ಕ್ ವಿಭಾಗಕ್ಕೆ ಬೇಡಿಕೆ ಕಡಿಮೆಯಾಗಿಲ್ಲ.

ಲಭ್ಯವಿರುವ ಕೋರ್ಸ್‌ ಗಳ ಮಾಹಿತಿ ನೀಡಲು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಲು ಶಾರ್ಟ್‌ ವಿಡಿಯೋ ಮಾಡಲು ಖಾಸಗಿ ಜಾಹಿರಾತು ಸಂಸ್ಥೆಯೊಂದನ್ನು ಸಂಪರ್ಕಿಸಲಾಗಿದೆ ಎಂದು ವಿವಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಕೆಲವು ವಿಡಿಯೋ ಮತ್ತು ಚಿತ್ರಗಳನ್ನು ವಿದ್ಯಾರ್ಥಿಗಳೇ ರೂಪಿಸಿಕೊಟ್ಟಿದ್ದು, ಇದಕ್ಕೆ ಭೋದಕ ಸಿಬ್ಬಂದಿ ಆಕರ್ಷಕ ಶೀರ್ಷಿಕೆ ನೀಡಿದ್ದಾರೆ. ಇದನ್ನು ಇನ್‌ ಸ್ಟಾ ಪೇಜ್‌ ಗಳಲ್ಲಿ ಪೋಸ್ಟ್‌ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಪದವಿ ಪಡೆದ ನಂತರ ವಿದ್ಯಾರ್ಥಿಗಳು ಉದ್ಯೋಗ ಮಾಡಬಹುದು. ಇಲ್ಲವೇ ಬೇಕಾದ ವಿಷಯದಲಿ ಪರಿಣಿತಿ ಪಡೆದು ನಂತರ ಉದ್ಯೋಗ ಮಾಡಬಹುದು. ಹಾಗಾಗಿ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲು ಹಿಂದೇಟು ಹಾಕುತ್ತಾರೆ ಎಂದು ತಜ್ಞರು ಹೇಳುತ್ತಾರೆ.

ಉತ್ತಮ ಪ್ರತಿಕ್ರಿಯೆ ವ್ಯಕ್ತ

ಮಾಸ್‌ ಕಮ್ಯೂನಿಕೇಷನ್‌ ಮತ್ತು ಪತ್ರಿಕೋದ್ಯಮದ ವಿಭಾಗದ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುತ್ತಿದ್ದು, ವಿಶ್ವವಿದ್ಯಾಲಯಕ್ಕೆ ಸಾಕಷ್ಟು ಸಹಾಯವಾಗಿದೆ. ಅವರು ಪ್ರಾಯೋಗಿಕವಾಗಿ ರೂಪಿಸಿದ ಅನೇಕ ಪೋಸ್ಟರ್‌ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಾಖಲಾತಿ ಆರಂಭವಾಗುವುದಕ್ಕೂ ಕೆಲವು ತಿಂಗಳು ಮೊದಲೇ ವಿದ್ಯಾರ್ಥಿಗಳು ರೂಪಿಸಿದ ವಿಡಿಯೋಗಳನ್ನು ವಿವಿಯ ಯೂ ಟ್ಯೂಬ್‌ ಚಾನೆಲ್‌ ಗಳಲ್ಲಿ ಅಪ್‌ ಲೋಡ್‌ ಮಾಡಿ ಮಾಹಿತಿ ನೀಡುತ್ತಿದೆ. ಸಂಯೋಜನೆ ಹೊಂದಿರುವ ಕಾಲೇಜುಗಳಿಗೆ ಬೇಟಿ ನೀಡಿ ವಿದ್ಯಾರ್ಥಿ ವೇತನ ಮತ್ತು ವಿವಿಧ ಯೋಜನೆಗಳನ್ನು ಕುರಿತು ಮಾಹಿತಿ ನೀಡುತ್ತಿದೆ.

ಸರ್ಕಾರಿ ವಿಶ್ವವಿದ್ಯಾಲಯಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದರಲ್ಲಿ ಸಾರಿಗೆ ವ್ಯವಸ್ಥೆಯೂ ಒಂದು. ಮೇಲಾಗಿ ಖಾಸಗಿ ವಿಶ್ವವಿದ್ಯಾಲಯಗಳ ಪೈಪೋಟಿ ಎದುರಿಸಬೇಕಾಗಿದೆ. ಕಂಪ್ಯೂಟರ್‌ ಮೂಲಕ ಅರ್ಜಿ ಪಡೆದುಕೊಳ್ಳುವ, ಕಂತುಗಳಲ್ಲಿ ಶುಲ್ಕ ಪಾವತಿಸುವ ಅವಕಾಶ ನೀಡಲಾಗಿದೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಸಹಾಯಕವಾಗಿದೆ. ಬಿಸಿಎ ಪದವಿಗೆ 76 ಸಾವಿರ ಶುಲ್ಕವಿದ್ದು, ದಾಖಲಾದ 120 ವಿದ್ಯಾರ್ಥಿಗಳ ಪೈಕಿ 39 ವಿದ್ಯಾರ್ಥಿಗಳು ಕಂತುಗಳಲ್ಲಿ ಪಾವತಿಸುವ ಯೋಜನೆಯನ್ನು ಅಯಕೆ ಮಾಡಿಕೊಂಡಿದ್ದಾರೆ ಎಂದು ವಿವಿ ತಿಳಿಸಿದೆ. ಉಳಿವಿಗಾಗಿ ಅನೇಕ ಮಾರ್ಗಗಳನ್ನು ಕಂಡುಕೊಳ್ಳುವುದು ತಪ್ಪೇನೂ ಅಲ್ಲವಲ್ಲ!

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ