ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 1.45 ಕೋಟಿ ಮೌಲ್ಯದ ನಿಷೇಧಿತ ಹುಕ್ಕಾ ಉತ್ಪನ್ನ ಜಪ್ತಿ -Bangalore Crime News
Feb 14, 2024 08:43 AM IST
ಬೆಂಗಳೂರಿನಲ್ಲಿರುವ ಕೇಂದ್ರ ಅಪರಾಧ ವಿಭಾಗದ ಕಚೇರಿ. ಸಿಸಿಬಿ ಪೊಲೀಸರು 1.45 ಕೋಟಿ ಮೌಲ್ಯ ಹುಕ್ಕಾ ಸೀಜ್ ಮಾಡಿದ್ದಾರೆ.
- Bangalore crime: ಸಿಸಿಬಿ ಪೊಲೀಸರು ನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 1.45 ಕೋಟಿ ಮೌಲ್ಯದ ಹುಕ್ಕಾ ಉತ್ಪನ್ನಗಳನ್ನು ಜಪ್ತಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಹುಕ್ಕಾವನ್ನ ನಿಷೇಧಿಸಲಾಗಿತ್ತು.
Bangalore crime news: ಬೆಂಗಳೂರು ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, 1.45 ಕೋಟಿ ಮೌಲ್ಯದ ಹುಕ್ಕಾ ಉತ್ಪನ್ನಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಅವುಗಳನ್ನು ಬೆಂಬಲಿಸುವ ಪ್ರಚೋದಿಸುವ ಜಾಹೀರಾತು, ಸೇವನೆಗೆ ಪ್ರಚೋದನೆ ಮತ್ತು ಸಂಗ್ರಹಣೆಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಬೆಂಗಳೂರಿನ ಚಾಮರಾಜಪೇಟೆ, ರಾಮಮೂರ್ತಿನಗರ ಹಾಗೂ ಮಹದೇವಪುರ ಠಾಣೆ ವ್ಯಾಪ್ತಿಯ ಮಳಿಗೆಗಳಲ್ಲಿ ಹುಕ್ಕಾ ಉತ್ಪನ್ನಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಇದರ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಉತ್ಪನ್ನಗಳನ್ನು ಜಪ್ತಿ ಮಾಡಿದ್ದಾರೆ ಮತ್ತು 9 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ತಿಳಿಸಿದ್ದಾರೆ.
ಮೈಸೂರಿನ ಮುರಳೀಧರ್ (59), ಇ. ಅಂಥೋನಿ (59), ಬೆಂಗಳೂರಿನ ಸಂಪಂಗಿರಾಮನಗರದ ನಿವಾಸಿ ವಿಶ್ವನಾಥ್ ಪ್ರತಾಪ್ ಸಿಂಗ್ (26), ಭರತ್ (29), ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಂಡಿಬೇಡಳ ಮಧು (36), ಹರಿಕೃಷ್ಣ (35), ಚಿರಕೂರಿ ರಮೇಶ್ (30), ದಿವಾಕರ್ ಚೌಧರಿ (30) ಹಾಗೂ ಮಹದೇವಪುರ ಮಧು (38) ಬಂಧಿತ ಆರೋಪಿಗಳಾಗಿದ್ದಾರೆ.
ತಿಂಗಳಿಗೆ 25 ಕೋಟಿ ರೂಪಾಯಿ ವಹಿವಾಟು
ಪ್ರಮುಖ ಆರೋಪಿ ಮುರಳೀಧರ್ ಚಾಮರಾಜಪೇಟೆಯಲ್ಲಿ ಹುಕ್ಕಾ ಉತ್ಪನ್ನಗಳ ಮಾರಾಟ ಮಳಿಗೆ ನಡೆಸುತ್ತಿದ್ದ. ಈತ ಬೆಂಗಳೂರಿಗೆ ಪ್ರಮುಖ ವಿತರಕನಾಗಿದ್ದ. ಉಳಿದ ಆರೋಪಿಗಳು, ಉಪ ವಿತರಕರಾಗಿ ಕೆಲಸ ಮಾಡುತ್ತಿದ್ದರು. ಇವರೆಲ್ಲರೂ ಸೇರಿ ತಿಂಗಳಿಗೆ ಸುಮಾರು 25 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಹೊರ ರಾಜ್ಯಗಳಿಗೂ ಉತ್ಪನ್ನಗಳನ್ನು ಕಳುಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಫ್ಜಲ್ ಬ್ರ್ಯಾಂಡ್‌ನ ಮೊಲಾಸಿನ್, ತಂಬಾಕು ಅಂಶವಿದ್ದ ದಿಲ್‌ಬಾಗ್, ಜೆಡ್ ಎಲ್-01, ಆ್ಯಕ್ಷನ್- 7, ಬಾದ್ ಷಾ, ಮಹಾರಾಯಲ್ 717 ಹಾಗೂ ಇತರೆ ಉತ್ಪನ್ನಗಳನ್ನು ಆರೋಪಿಗಳು ಮಾರುತ್ತಿದ್ದರು. ತಮ್ಮ ಬಳಿ ಉತ್ಪನ್ನ ಖರೀದಿಸುತ್ತಿದ್ದ ವ್ಯಾಪಾರಿಗಳಿಗೆ, ಬೆಳ್ಳಿ ಹಾಗೂ ಚಿನ್ನದ ನಾಣ್ಯಗಳನ್ನು ಉಡುಗೊರೆಯನ್ನಾಗಿ ನೀಡುತ್ತಿದ್ದರು ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲಿ
ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್ ಪಶ್ಚಿಮ) ಶಸ್ತ್ರಗಾರಕ್ಕೆ ನುಗ್ಗಿದ್ದ ಸುಮಾರು 70 ಮಂದಿಯ ತಂಡವೊಂದು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ. ಈ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಲ್ಲಾಳ ಬಳಿ ಸಿಎಆರ್ ಘಟಕವಿದೆ. ಈ ಪ್ರದೇಶ ಹಾಗೂ ಸುತ್ತಮುತ್ತಲಿನ ಜಾಗದ ಸಂಬಂಧ ತಕರಾರು ಇದೆ ಎಂದು ಬಲ್ಲ ಮೂಲಗಳು ಖಚತಪಡಿಸಿವೆ. ಈ ಜಮೀನು ನಮ್ಮದೆಂದು ವಾದಿಸಿದ್ದ ಆರೋಪಿಗಳು, ಶಸ್ತ್ರಗಾರಕ್ಕೆ ನುಗ್ಗಿ ಜಾಗ ಖಾಲಿ ಮಾಡುವಂತೆ ಪೊಲೀಸರಿಗೆ ಬೆದರಿಕೆ ಒಡ್ಡಿದ್ದರು. ಪೊಲೀಸರ ಸಮವಸ್ತ್ರ ಹಿಡಿದು ಎಳೆದಾಡಿದ್ದರು.
ಜಾಗ ತೆರವು ಮಾಡಿಸುವ ಉದ್ದೇಶದಿಂದ ಆಗಮಿಸಿದ್ದ ಆರೋಪಿಗಳು, ಜೆಸಿಬಿ ಯಂತ್ರ, ಕ್ಯಾಂಟರ್, ಲಾರಿ ಹಾಗೂ ನೀರಿನ ಟ್ಯಾಂಕರ್ ಸಹಿತ ಆಗಮಿಸಿದ್ದರು. ಆದರೆ ಈ ಆರೋಪಿಗಳು ಯಾರು ಎನ್ನುವುದು ತಿಳಿದು ಬಂದಿಲ್ಲ. ಆದರೂ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (This copy first appeared in Hindustan Times Kannada website. To read more like this please logon to kannada.hindustantime.com).