ಬೆಂಗಳೂರಲ್ಲಿ ಬರಲಿದೆ ಡಬ್ಬಲ್ ಡೆಕ್ಕರ್ ಮೆಟ್ರೋ ಮಾರ್ಗ, 3ನೇ ಹಂತದ ವಿಸ್ತರಣೆಯಲ್ಲಿ ಹೊಸ ಮಾರ್ಗಕ್ಕೆ ಚಾಲನೆಗೆ ಯೋಜನೆ
Nov 14, 2024 08:29 PM IST
ಬೆಂಗಳೂರಿನ ನಮ್ಮ ಮೆಟ್ರೋ ಡಬ್ಬಲ್ ಡೆಕ್ಕರ್ ಮಾರ್ಗ ಸಹಿತ ಹಲವು ಯೋಜನೆಗಳನ್ನು ಮೂರನೇ ಹಂತದಲ್ಲಿ ವಿಸ್ತರಿಸುತ್ತಿದೆ.
- Bangalore Namma Metro Updates: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ತನ್ನ ನಮ್ಮ ಮೆಟ್ರೋ 3 ನೇ ಹಂತದ ವಿಸ್ತರಣೆಯ ಭಾಗವಾಗಿ ಡಬಲ್ ಡೆಕ್ಕರ್ ಮೆಟ್ರೋ ಮಾರ್ಗವನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.
ಬೆಂಗಳೂರು: ಒಂದು ದಶಕದಿಂದ ನಿರಂತರವಾಗಿ ಬೆಂಗಳೂರಿಗರಿಗೆ ಸೇವೆ ನೀಡುತ್ತಲೇ ಜನ ಸಂಚಾರ ಒತ್ತಡದ ನಡುವೆಯೂ ನಿತ್ಯದ ಕೆಲಸ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಲು ಅವಕಾಶ ಮಾಡಿಕೊಡುತ್ತಿರುವ ಬೆಂಗಳೂರು ನಮ್ಮ ಮೆಟ್ರೋ ಸೇವೆ ವಿಸ್ತರಣೆಯಾಗುತ್ತಲೇ ಇದೆ. ಈಗ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ ಸಿಎಲ್) ನಮ್ಮ ಮೆಟ್ರೋ 3 ನೇ ಹಂತದ ಭಾಗವಾಗಿ ಡಬಲ್ ಡೆಕ್ಕರ್ ಮೆಟ್ರೋ ಮಾರ್ಗವನ್ನು ಪ್ರಾರಂಭಿಸಲು ಯೋಜಿಸಿದೆ. ವರದಿಯ ಪ್ರಕಾರ, ಈ ಹೊಸ ಮಾರ್ಗದ ನಿರ್ಮಾಣವು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮತ್ತು ಬೆಂಗಳೂರಿನಾದ್ಯಂತ ಸಾಮೂಹಿಕ ಸಾರಿಗೆಯನ್ನು ಹೆಚ್ಚಿಸಲು ಈ ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತದೆ.
ಮೂರು ಪ್ರಮುಖ ಕಾರಿಡಾರ್ ಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಗಳನ್ನು ಒಳಗೊಂಡಿರುವ 3 ನೇ ಹಂತಕ್ಕೆ ಮೂಲಸೌಕರ್ಯಗಳನ್ನು ವಿನ್ಯಾಸಗೊಳಿಸಲು ಬಿಎಂಆರ್ ಸಿಎಲ್ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಮೆಟ್ರೋ ಗುರಿ ಏನು
ಈ ಮಹತ್ವಾಕಾಂಕ್ಷೆಯ ವಿಸ್ತರಣೆಯು ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವ ಮತ್ತು ನಗರದೊಳಗಿನ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ ಎತ್ತರಿಸಿದ ಮಾರ್ಗಗಳು, ಮೆಟ್ರೋ ನಿಲ್ದಾಣಗಳು, ರ್ಯಾಂಪ್ ಗಳು, ಸುಮ್ಮನಹಳ್ಳಿ ಕ್ರಾಸ್ ನಿಂದ ಕಡಬಗೆರೆ ಮತ್ತು ಜೆ.ಪಿ.ನಗರ ನಿಲ್ದಾಣದಿಂದ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ವರೆಗೆ ಹೆಚ್ಚುವರಿ ರಸ್ತೆ ಮೂಲಸೌಕರ್ಯ ಕಲ್ಪಿಸಲಾಗುವುದು ಎನ್ನುವುದು ಮೆಟ್ರೋ ಅಧಿಕಾರಿಗಳ ವಿವರಣೆ.
ಮೂರು ಹಂತದಲ್ಲಿ ವಿಸ್ತರಣೆ
ನಿರ್ಮಾಣವನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ, ಇದು ಮೆಟ್ರೋ ಡಿಪೋ, ಸ್ಕೈವಾಕ್ ಮತ್ತು ಪೀಣ್ಯ ಮತ್ತು ಸುಮ್ಮನಹಳ್ಳಿ ಬಳಿ ಬಹು ಮಾದರಿ ಸಾರಿಗೆ ಹಬ್ ನಂತಹ ಸೌಲಭ್ಯಗಳನ್ನು ಒದಗಿಸುವುದು ಇದರಲ್ಲಿದೆ.
ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರವು 3 ನೇ ಹಂತಕ್ಕೆ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರದ ಧನಸಹಾಯದೊಂದಿಗೆ, ರಾಜ್ಯ ಸರ್ಕಾರವು ಡಬಲ್ ಡೆಕ್ಕರ್ ಫ್ಲೈಓವರ್ ವೆಚ್ಚವನ್ನು ಒದಗಿಸಲು ಒಪ್ಪಿಕೊಂಡಿದೆ. ಬಿಎಂಆರ್‌ಸಿಎಲ್ ಸುಮಾರು 44.65 ಕಿಲೋಮೀಟರ್ ಉದ್ದದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದೆ, ಇದು ಉದ್ದೇಶಿತ ಮಾರ್ಗಗಳಲ್ಲಿ 299 ಆಸ್ತಿಗಳನ್ನು ಒಳಗೊಂಡಿದ್ದು, ಹಂತ ಹಂತವಾಗಿ ಇದು ಜಾರಿಯಾಗಲಿದೆ.
ಭವಿಷ್ಯದ ಬೆಂಗಳೂರಿಗಾಗಿ
ಮೆಟ್ರೋ ಕೈಗೊಳ್ಳಲಿರುವ ಈ ಕ್ರಮವು ಬೆಂಗಳೂರಿನ ಹೆಚ್ಚುತ್ತಿರುವ ಸಾರಿಗೆ ಬೇಡಿಕೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಟೆಕ್ ಹಬ್ ನ ಸಂಚಾರ ದಟ್ಟೆಗೆ ಪರ್ಯಾಯ ವ್ಯವಸ್ಥೆಗಳೊಂದಿಗೆ ಸಂಚಾರ ಸರಾಗಗೊಳಿಸಲು ಭೂಗತ ಸುರಂಗ ಜಾಲ ವ್ಯವಸ್ಥೆಯಂತಹ ಇತರ ಮೂಲಸೌಕರ್ಯಗಳನ್ನು ನಿರ್ಮಿಸಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ. ಮುಂದಿನ ಒಂದು ದಶಕದಲ್ಲಿ ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ ಕಾಣುವ ಸೂಚನೆಗಳಂತೂ ಇವೆ.
ಇದೇ ನಿಟ್ಟಿನಲ್ಲಿ ಯೋಜನೆಗಳು ಪ್ರಗತಿಯಲ್ಲಿವೆ. ಬೆಂಗಳೂರು ನಗರದ ಎಲ್ಲಾ ಭಾಗದಲ್ಲೂ ಮೆಟ್ರೋ ವಿಸ್ತರಣೆಯಾಗಬೇಕು ಎನ್ನುವ ಉದ್ದೇಶದೊಂದಿಗೆ ಈ ವಿಸ್ತರಣೆ ನಡೆದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.