logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime:ಬೆಂಗಳೂರಲ್ಲಿ ಥಾಯ್ಲೆಂಡ್ ದೇಶದ ಹೈಡ್ರೋ ಗಾಂಜಾ ಮಾರಾಟ: ವಿದೇಶಿ ಮಹಿಳೆ ಸೇರಿ 7 ಡ್ರಗ್ ಪೆಡ್ಲರ್‌ಗಳ ಸೆರೆ

Bangalore Crime:ಬೆಂಗಳೂರಲ್ಲಿ ಥಾಯ್ಲೆಂಡ್ ದೇಶದ ಹೈಡ್ರೋ ಗಾಂಜಾ ಮಾರಾಟ: ವಿದೇಶಿ ಮಹಿಳೆ ಸೇರಿ 7 ಡ್ರಗ್ ಪೆಡ್ಲರ್‌ಗಳ ಸೆರೆ

Umesha Bhatta P H HT Kannada

Sep 10, 2024 04:40 PM IST

google News

ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇಧಿಸಿ ವಸ್ತು ವಶಕ್ಕೆ ಪಡೆಯಲಾಗಿದೆ.

    • Drug Peddlers Arrested in Bangalore ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟದ ಜಾಲ ಬಲವಾಗಿದ್ದು, ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಏಳು ಮಂದಿ ಬಂಧಿಸಿ ಭಾರೀ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇಧಿಸಿ ವಸ್ತು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇಧಿಸಿ ವಸ್ತು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು: ಬೆಂಗಳೂರಿನ 12 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಿಸಿಬಿ, ಮಾದಕ ದ್ರವ್ಯ ನಿಗಹ ದಳ ಕಾರ್ಯಾಚರಣೆ ನಡೆಸಿ ಓರ್ವ ವಿದೇಶಿ ಮಹಿಳೆ ಸೇರಿದಂತೆ 7 ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ 3 ಕೋಟಿ ರೂ ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಿಷೇದಿತ ಮಾದಕ ವಸ್ತು ಹೈಡ್ರೋ ಗಾಂಜಾವನ್ನು ವಿದೇಶದಿಂದ ಆಮದು ಮಾಡಿಕೊಂಡು, ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ 1.22 ಕೋಟಿ ರೂ. ಮೌಲ್ಯದ 2.770 ಕೆಜಿ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಥಾಯ್ಲೆಂಡ್ ದೇಶದಿಂದ ಹೈಡ್ರೋ ಗಾಂಜಾವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಪ್ಯಾಕ್ ಮಾಡಿ, ಬೇಕರಿ ಐಟಂ ಬಾಕ್ಸ್‌ಗಳಲ್ಲಿ ತುಂಬಿ, ಅವುಗಳನ್ನು ಬಿಸ್ಕೆಟ್, ಚಾಕ್‌ಲೇಟ್ ಎಂದು ವಿಮಾನದ ಮೂಲಕ ಬೆಂಗಳೂರಿಗೆ ತರಿಸಿಕೊಂಡಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ.

ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಇಂಡಿಯನ್ ಪೋಸ್ಟ್ ಆಫೀಸ್ ಮೂಲಕ ಬೆಲ್ಜಿಯಂ ದೇಶದಿಂದ ನಿಷೇದಿತ ಮಾದಕ ವಸ್ತುಗಳಾದ ಎಲ್ ಎಸ್ ಡಿ ಸ್ಟ್ರಿಪ್ಸ್, ಎಂಡಿಎಂಎ, ಏಕಸ್ಥಸಿ ಪಿಲ್ಸ್ ಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿರುತ್ತಾನೆ. ಈತನ ಮನೆಯಿಂದ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 1.50 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ವಾಸಿ. ಆರೋಪಿಯು ತನ್ನ ಸ್ನೇಹಿತನ ಮೂಲಕ ಬೆಲ್ಜಿಯಂ ದೇಶದಿಂದ ಬೆಂಗಳೂರು ನಗರದ ಖಾಸಗಿ ಕಂಪನಿಯ ಉದ್ಯೋಗದ ವಿಳಾಸಕ್ಕೆ ನಿಷೇದಿತ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದಾನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುತ್ತದೆ. ಆರೋಪಿಯ ಸ್ನೇಹಿತನು ಬೆಲ್ಲಿಯಂ ದೇಶದಲ್ಲಿದ್ದು, ಈತನ ವಿರುದ್ಧ ತನಿಖೆ ಮುಂದುವರೆದಿದೆ.

ಯಶವಂತಪುರ ಠಾಣಾ ವ್ಯಾಪ್ತಿಯ ಜೆ.ಪಿ.ಪಾರ್ಕ್ ಹತ್ತಿರವಿರುವ ಎಸ್.ಬಿ.ಎಂ. ಕಾಲೋನಿಯಲ್ಲಿ ಮಣಿಪುರ ಮೂಲದ ಡ್ರಗ್‌ ಪೆಡ್ಲರ್ ವೋಬ್ಬ ಹೆರಾಯಿನ್‌ ಮಾರಾಟ ಮಾಡುತ್ತಿರುವ ಮಾಹಿತಿ ಲಾಭ್ಯವಾಗಿರುತ್ತದೆ. ಈತನನ್ನು ಬಂಧಿಸಿದ ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ತಂಡ 75 ಲಕ್ಷ ರೂಪಾಯಿ ಮೌಲ್ಯದ 84 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

ಈತ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತನ ಸಹಕಾರದಿಂದ ಹೆರಾಯಿನ್‌ ಖರೀದಿಸಿ, ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಅಕ್ರಮ ಹಣದ ಸಂಪಾದನೆಯಲ್ಲಿ ತೊಡಗಿರುತ್ತಾನೆ.

ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೋಸ್ ಗಾರ್ಡನ್ ಬಳಿ ಡ್ರಗ್‌ ಪೆಡ್ಲರ್ ವೊಬ್ಬ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿಯನ್ನಾಧರಿಸಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ತಂಡವು ಆರೋಪಿಯ ಮನೆಯ ಮೇಲೆ ದಾಳಿ ಮಾಡಿ, 10 ಲಕ್ಷ ರೂ. ಮೌಲ್ಯದ 10 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಆಧರಿಸಿ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ 8ನೇ ಇ ಮೈನ್‌ನಲ್ಲಿರುವ ವಾಸದ ಮನೆಯೊಂದರಲ್ಲಿ ಓರ್ವ ವಿದೇಶಿ ಮಹಿಳಾ ಡ್ರಗ್‌ ಪೆಡ್ಲರ್ ಅನ್ನು ಬಂಧಿಸಿ ಆಕೆಯಿಂದ ರೂ.10 ಲಕ್ಷ ಬೆಲೆ ಬಾಳುವ 96.66 ಗ್ರಾಂ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ.

ಈಕೆ 2019 ರಲ್ಲಿ ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ಡ್ರಗ್‌ ಮಾರಾಟ ದಂಧೆಯಲ್ಲಿ ತೊಡಗಿರುತ್ತಾಳೆ. ಈ ಹಿಂದೆ 2023 ನೇ ಸಾಲಿನಲ್ಲಿ ಈಕೆಯ ವಿರುದ್ಧ ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಪ್ರಕರಣದ ದಾಖಲಾಗಿ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನು ಪಡೆದು ಹೊರಬಂದು ಮತ್ತೆ ಡ್ರಗ್‌ಪೆಡ್ಡಿಂಗ್‌ನಲ್ಲಿ ತೊಡಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ವ್ಯಾಪಿಯಲ್ಲಿರುವ ಮಂಗಮ್ಮನ ಪಾಳ್ಯದಲ್ಲಿ, ಕೇರಳ ಮೂಲದ ಡ್ರಗ್‌ ಪೆಡ್ಲರ್‌ ಗಾಂಜಾವನ್ನು ಮಾರಾಟ ಮಾಡುತ್ತಿರುವ ಮಾಹಿತಿ ಆಧಾರದ ಮೇರೆಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ತಂಡ ಆತನನ್ನು ಬಂಧಿಸಿ 50 ಲಕ್ಷ ರೂಪಾಯಿ ಮೌಲ್ಯದ 1.40 ಕೆಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈತ ಥೈಲ್ಯಾಂಡ್‌ನಿಂದ ಹೈಡ್ರೋ ಗಾಂಜಾವನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೊಂಗಸಂದ್ರದಲ್ಲಿರುವ ಅಪಾರ್ಟ್‌ಮೆಂಟ್‌ ವೊಂದರಲ್ಲಿ ಹೊರ ರಾಜ್ಯದ ವ್ಯಕ್ತಿಯು ನಿಷೇದಿತ ಮಾದಕ ವಸ್ತು ಗಾಂಜಾವನ್ನು ಇಂಡಿಯನ್ ಪೋಸ್ಟ್ ಆಫೀಸ್ ಮೂಲಕ ಮೇಘಾಲಯ ರಾಜ್ಯದ ಶಿಲ್ಲಾಂಗ್ ನಿಂದ ಕಡಿಮೆ ಬೆಲೆಗೆ ತರಿಸಿಕೊಂಡು, ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಗಾಂಜಾವನ್ನು ಶೇಖರಿಸಿಟ್ಟಿರುವ ಮಾಹಿತಿ ದೊರೆತ್ತಿರುತ್ತದೆ. ಈ ಮಾಹಿತಿಯ ಆಧಾರದ ಮೇರೆಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಆರೋಪಿಯ ಹೊಂಗಸಂದ್ರದಲ್ಲಿರುವ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿ 4 ಲಕ್ಷ ರೂ. ಮೌಲ್ಯದ 5 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಹೆಣ್ಣೂರು ಬಂಡೆ ಆಟದ ಮೈದಾನದಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಹೊರ ರಾಜ್ಯದ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಅವರಿಂದ 2 ಸೂಟ್‌ಕೇಸ್‌ನಲ್ಲಿ ತುಂಬಿಟ್ಟಿದ್ದ 21 ಲಕ್ಷ ರೂ. ಮೌಲ್ಯದ 21 ಕೆ.ಜಿ ಗಾಂಜಾ ವನ್ನು ವಶಕ್ಕೆ ಪಡೆಯಲಾಗಿದೆ.

ಇವರು ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ರೈಲಿನಲ್ಲಿ ಎಸ್.ಎಂ.ವಿ.ಟಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 1 ಲಕ್ಷ ರೂ. ಮೌಲ್ಯದ 5 ಕೆ.ಜಿ 20 ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದಾರೆ.

ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಕ್ರಿಸ್ಟೆಲ್‌ಗಳನ್ನು ಮಾರಾಟ ಮಾಡುತ್ತಿದ್ದ ಹೊರ ರಾಜ್ಯದ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 2.34 ಲಕ್ಷ ರೂ. ಮೌಲ್ಯದ 78 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟೆಲ್‌ ವಶ ಪಡಿಸಿಕೊಳ್ಳಲಾಗಿದೆ.

(ವರದಿ: ಎಚ್‌.ಮಾರುತಿ. ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ