ನಿಂದನೆ-ಕಪಾಳಮೋಕ್ಷದ ತಪ್ಪಿಗೆ 30 ಸಾವಿರ ಖರ್ಚು, 4 ದಿನ ಜೈಲು; ಯುವತಿಗೆ ಹಲ್ಲೆ ಮಾಡಿದ್ದ ಆಟೋ ಚಾಲಕ ಜಾಮೀನಿಗೆ ಪರದಾಟ
ಕನ್ನಡ ಸುದ್ದಿ  /  ಕರ್ನಾಟಕ  /  ನಿಂದನೆ-ಕಪಾಳಮೋಕ್ಷದ ತಪ್ಪಿಗೆ 30 ಸಾವಿರ ಖರ್ಚು, 4 ದಿನ ಜೈಲು; ಯುವತಿಗೆ ಹಲ್ಲೆ ಮಾಡಿದ್ದ ಆಟೋ ಚಾಲಕ ಜಾಮೀನಿಗೆ ಪರದಾಟ

ನಿಂದನೆ-ಕಪಾಳಮೋಕ್ಷದ ತಪ್ಪಿಗೆ 30 ಸಾವಿರ ಖರ್ಚು, 4 ದಿನ ಜೈಲು; ಯುವತಿಗೆ ಹಲ್ಲೆ ಮಾಡಿದ್ದ ಆಟೋ ಚಾಲಕ ಜಾಮೀನಿಗೆ ಪರದಾಟ

Bengaluru Auto Driver: ಆಟೋ ಬುಕ್ಕಿಂಗ್ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಅಂತಾರಾಜ್ಯ ಮಹಿಳೆಯೊಬ್ಬರನ್ನು ನಿಂದಿಸಿ ಹಲ್ಲೆ ನಡೆಸಿದ್ದ ಆಟೋ ಚಾಲಕ ಬಂಧನಕ್ಕೆ ಒಳಗಾಗಿದ್ದು, ಇದೀಗ ಜಾಮೀನಿಗೆ 30 ಸಾವಿರ ಖರ್ಚು ಮಾಡಲು ಪರದಾಡುತ್ತಿದ್ದಾರೆ.

ಯುವತಿಗೆ ಹಲ್ಲೆ ಮಾಡಿದ್ದ ಆಟೋ ಚಾಲಕ ಜಾಮೀನಿಗೆ ಪರದಾಟ
ಯುವತಿಗೆ ಹಲ್ಲೆ ಮಾಡಿದ್ದ ಆಟೋ ಚಾಲಕ ಜಾಮೀನಿಗೆ ಪರದಾಟ

ಬೆಂಗಳೂರು: ಆಟೋ ಬುಕ್ಕಿಂಗ್ ರದ್ದು ಮಾಡಿದ್ದಕ್ಕೆ ಕನ್ನಡೇತರ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಮತ್ತು ನಿಂದಿಸಿದ್ದ ಆರೋಪದ ಮೇಲೆ ಕಳೆದ ವಾರ ಬಂಧನ ಆಗಿರುವ ನಗರದ ಚಿಕ್ಕಲ್ಲಸಂದ್ರದ ಆಟೋ ಚಾಲಕ ಮುತ್ತುರಾಜ್​ ತನ್ನ ಜಾಮೀನು, ಇತರೆ ಕಾನೂನು ಶುಲ್ಕ ಪಾವತಿಸಲು 30,000 ಹೊಂದಿಸಲು ಪರದಾಡುತ್ತಿದ್ದಾರೆ. ಒಂದು ವೇಳೆ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದರೆ 40 ರಿಂದ 50 ರೂಪಾಯಿ ಮಾತ್ರ ನಷ್ಟ ಆಗುತ್ತಿತ್ತು. ಆದರೀಗ ಜಾಮೀನು ಪಡೆಯಲು 30 ಸಾವಿರ ಬೇಕಾಗಿ ಬಂದಿದೆ.

ತನ್ನನ್ನು ನಿಂದಿಸಿದ್ದು ಮತ್ತು ಕಪಾಳ ಮೋಕ್ಷ ಮಾಡಿದ್ದನ್ನು ಯುವತಿ ರೆಕಾರ್ಡ್ ಮಾಡಿಕೊಂಡಿದ್ದಳು. ರಾಜ್​ಕುಮಾರ್​ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ವಿದ್ಯಾರ್ಥಿನಿ ಮುತ್ತುರಾಜ್ ವಿರುದ್ಧ ಐಪಿಸಿ ಸೆಕ್ಷನ್ 74 (ಮಹಿಳೆಯರ ಮೇಲೆ ದೌರ್ಜನ್ಯ) ಮತ್ತು 352ರ (ಉದ್ದೇಶಪೂರ್ವಕ ಅವಮಾನ) ಅಡಿ ದೂರು ನೀಡಿದ್ದರು. ಬಳಿಕ ಆತನನ್ನು ಬಂಧಿಸಲಾಗಿತ್ತು. ಸೆಪ್ಟೆಂಬರ್ 3 ಸಂಜೆ ವಾಗ್ವಾದ ನಡೆದಿದ್ದು, ಘಟನೆಯ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ತ್ವರಿತವಾಗಿ ವೈರಲ್ ಆಗಿತ್ತು.

ತನ್ನ ಜಾಮೀನಿಗೂ ಮುನ್ನ ನಾಲ್ಕು ದಿನಗಳ ಕಾಲ ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಜಾಮೀನು ಪಡೆಯಲು ಪರದಾಟ ನಡೆಸುತ್ತಿರುವ ನಡುವೆ ನೆಟ್ಟಿಗರು ಆತನನ್ನು ಕಾಲೆಳೆಯುತ್ತಿದ್ದಾರೆ. ಟ್ರೋಲ್ ಕೂಡ ಮಾಡುತ್ತಿದ್ದು, ಆರ್ಥಿಕ ಬೆಂಬಲ ನೀಡುವ ಕುರಿತು ವ್ಯಂಗ್ಯ ಮಾಡುತ್ತಿದ್ದಾರೆ. ಆದರೆ ಕೆಲವರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಆತನ ಪರವಾಗಿ ನಿಂತು ಈಗಾಗಲೇ ನಾಲ್ಕು ದಿನಗಳ ಶಿಕ್ಷೆಯಾಗಿದೆ. ಆತನ ಜೀವನದ ಮೇಲೂ ಪರಿಣಾಮ ಬೀರುವಂತೆ ಮಾಡಿದೆ ಎಂದು ಎಂದಿದ್ದಾರೆ.

ಆಟೋ ಚಾಲಕನಿಗಾಗಿ ದೇಣಿಗೆ ಸಂಗ್ರಹ

ಮೋಹನ್ ದಾಸರಿ ಎಂಬವರು ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಬರೆದಿದ್ದು, ಒಬ್ಬ ಆಟೋ ಚಾಲಕ ಇಷ್ಟರಮಟ್ಟಿಗೆ ಆರ್ಥಿಕ ಹೊರೆಗೆ ಅರ್ಹರಲ್ಲ. ಅಂದು ಹತಾಶೆಯಲ್ಲಿ ಆ ವರ್ತಿಸಿರಬಹುದು. ಅದಕ್ಕಾಗಿ ಅವರು 4 ದಿನಗಳ ಕಾಲ ಜೈಲಿನ ಶಿಕ್ಷೆ ಅನುಭವಿಸಿದ್ದು ಸಾಕು. ಏಕೆಂದರೆ ಇದರಿಂದ ಸಂಪಾದನೆ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ. ಆಟೋ ಓಡಿಸಿ ದುಡಿಯುತ್ತಿದ್ದವನಿಗೆ 30,000 ಕಾನೂನು ವೆಚ್ಚ ತುಂಬಾ ದುಬಾರಿ ಆಗುತ್ತದೆ. ನಾನು ಕೂಡ 1000 ದೇಣಿಗೆ ನೀಡುತ್ತೇನೆ ಎಂದು ಬರೆದಿದ್ದಾರೆ.

ಕೆಲವರು ಈತನನ್ನು ಬೆಂಬಲಿಸಿದ್ದು, ಹಣ ಸಂಗ್ರಹಕ್ಕೆ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಕನ್ನಡಿಗರು ಆಟೋ ಚಾಲಕನಿಗಾಗಿ 30 ಸಾವಿರ ಸಂಗ್ರಹಿಸಬಹುದೇ ಎಂದು ನಮಗೆ ತಿಳಿಸಿ ಎಂದು ಕೇಳಿದ್ದಾರೆ. ನಾನು 1 ಸಾವಿರ ಕೊಡುಗೆ ನೀಡಲು ಬಯಸುತ್ತೇನೆ. ತನ್ನ ವರ್ತನೆಗಾಗಿ ಅವರು 4 ದಿನಗಳ ಜೈಲು ಶಿಕ್ಷೆಗೆ ಅರ್ಹನಾಗಿದ್ದಾರೆ. ಆದರೆ 30 ಸಾವಿರ ವೆಚ್ಚವಾಗಬಾರದು ಎಂದು ಅವರು ಹೇಳಿದ್ದಾರೆ. ಇದಕ್ಕೆ ಕೆಲವರು ಒಪ್ಪಿ ನಾನು ಸಹ ನಿಮ್ಮೊಂದಿಗೆ ನಿಲ್ಲುತ್ತೇನೆ, 1000 ರೂಪಾಯಿ ನೀಡುತ್ತೇನೆ ಎಂದಿದ್ದಾರೆ.

ದೇಣಿಗೆ ಸಂಗ್ರಹಕ್ಕೆ ಕೆಲವರಿಂದ ಆಕ್ರೋಶ

ದೇಣಿಗೆ ಸಂಗ್ರಹದ ನಡೆಯನ್ನು ಕೆಲವರು ಖಂಡಿಸಿದ್ದಾರೆ. ಮಹಿಳೆಯರನ್ನು ನಿಂದಿಸಿ ಮತ್ತು ಹಲ್ಲೆ ನಡೆಸಿದ ವ್ಯಕ್ತಿ ಆರ್ಥಿಕ ಸಹಾಯವನ್ನು ಹೇಗೆ ಅರ್ಹರು ಎಂದು ಪ್ರಶ್ನೆ ಮಾಡಿದ್ದಾರೆ. ಸಿದ್ ಎನ್ನುವ ಬಳಕೆದಾರ ಯುವ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಅಪರಾಧಿಗೆ ಕನ್ನಡ ಯೋಧರು ದೇಣಿಗೆ ಸಂಗ್ರಹಿಸುತ್ತಿದ್ದಾರೆಯೇ? ಇಂತಹ ಅಪರಾಧ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಪ್ರಾದೇಶಿಕ ಹೆಮ್ಮೆ ಬಳಸುವುದು ತಪ್ಪು ಎಂದು ಬರೆದುಕೊಂಡಿದ್ದಾರೆ. ಇದು ಸರಿಯಾದ ನಡೆಯೂ ಅಲ್ಲ ಎನ್ನುತ್ತಿದ್ದಾರೆ ಕೆಲವರು.

ಈ ಘಟನೆ ಕುರಿತು ಅಧಿಕಾರಿ ಹೇಳಿದ್ದೇನು?

ಇದೊಂದು ರಾಕ್ಷಸ ಕೃತ್ಯವಾಗಿದೆ. ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಆರೋಪಿಯು ಯುವತಿಯೊಬ್ಬಳನ್ನು ಅವಾಚ್ಯವಾಗಿ ನಿಂದಿಸಿ ಮತ್ತು ದೈಹಿಕವಾಗಿ ಹಲ್ಲೆ ಮಾಡಿದ್ದು ಸರಿಯಲ್ಲ. ಅಂತಹ ನಡವಳಿಕೆಯು ಸ್ವೀಕಾರಾರ್ಹವಲ್ಲ. ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದರಿಂದ ಬಹುಶಃ 40 ರಿಂದ 50 ರೂಪಾಯಿ ನಷ್ಟವಾಗುತ್ತಿತ್ತು. ಆದರೆ, ಆತನಿಗೆ ಈಗ ಜಾಮೀನು ಅರ್ಜಿ ಮತ್ತು ಇತರೆ ಕಾನೂನು ಶುಲ್ಕಗಳು 30 ಸಾವಿರಕ್ಕಿಂತ ಹೆಚ್ಚು ಖರ್ಚಾಗಲಿದೆ. ಸಂಯಮದಿಂದ ವರ್ತಿಸಿದ್ದರೆ, ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Whats_app_banner