Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ
ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

ಹಾಸನದ ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ದೇವರಾಜೇಗೌಡ ಮಾಡಿರುವ ಆರೋಪಗಳ ಕುರಿತು ಎಸ್‌ಐಟಿ ತಂಡ ಪರಿಶೀಲಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ಧಾರೆ.

ತುಮಕೂರನಲ್ಲಿ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌
ತುಮಕೂರನಲ್ಲಿ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌

ತುಮಕೂರು: ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಮಾಡಿರುವ ಆರೋಪ, ಡಿ.ಕೆ.ಶಿವಕುಮಾರ್ 100 ಕೋಟಿ ಆಫರ್ ಮಾಡಿದ್ದರು ಎಂಬ ವಿಚಾರವನ್ನು ಎಸ್‌ಐಟಿ ತನಿಖಾ ತಂಡ ನೋಡಿಕೊಳ್ಳಲಿದೆ. ಪೆನ್ ಡ್ರೈವ್ ಕೇಸ್ ಸಂಬಂಧ ಎಸ್‌ಐಟಿ ಸೂಕ್ತ ರೀತಿಯಲ್ಲಿ ತನಿಖೆ ನಡೆಯುತ್ತಿದೆ, ಬಿಜೆಪಿಯವರು ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಜೈಲಿನಿಂದ ಬರಲ್ಲ, ಅಲ್ಲೇ ಇರುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ದೇವರಾಜೇಗೌಡ ಜೈಲಿನಿಂದ ಬಂದ ನಂತರ ಸರ್ಕಾರ ಪತನವಾಗುತ್ತಂತೆ, ದೇವರಾಜೇಗೌಡ ಹೇಳಿಕೆ ನೀಡಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಜೈಲಿನಿಂದ ಬರಲ್ಲ, ಅಲ್ಲೇ ಇರುತ್ತಾರೆ ಎಂದು ಹೇಳಿದರು.

ಹೇಮಾವತಿ ವಿವಾದ ಚರ್ಚೆ

ಹೇಮಾವತಿ ಎಕ್ಸ್‌ಪ್ರೆಕ್ಸ್‌ ಲಿಂಕ್ ಕೆನಾಲ್ ಬಗ್ಗೆ ಮಾತನಾಡಿ, ಯೋಜನೆಯ ಸಾಧಕ- ಬಾಧಕಗಳ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯಿಂದ ಜಿಲ್ಲೆಗೆ ಏನೆಲ್ಲಾ ತೊಂದರೆಯಾಗುತ್ತದೆ ಎಂಬುದರ ಬಗ್ಗೆ ನಾನು ಮತ್ತು ಸಚಿವ ರಾಜಣ್ಣನವರು ಸಚಿವ ಸಂಪುಟ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ, ಆದರೆ ಸಂಪುಟ ನಮ್ಮೊಬ್ಬರದ್ದೇ ಅಲ್ಲವಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ವಿಷಯ ಪ್ರಸ್ತಾಪವಾಗಿ ಈ ಲಿಂಕ್ ಕೆನಾಲ್ ಮಾಡಬಹುದು ಎಂದು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ, ಇದು ಸರ್ಕಾರದ ತೀರ್ಮಾನ, ನನ್ನ ತೀರ್ಮಾನವಲ್ಲ ಎಂದು ಸ್ಪಷ್ಟಪಡಿಸಿದರು.

ತುಮಕೂರು ಜಿಲ್ಲೆಗೆ ಹೇಮಾವತಿ ಡ್ಯಾಂನಿಂದ 25 ಟಿಎಂಸಿ ನೀರು ಕೊಟ್ಟಿದ್ದಾರೆ, ಆದರೆ ಹಾಸನ ಜಿಲ್ಲೆಯಿಂದ 18 ರಿಂದ 19 ಟಿಎಂಸಿ ನೀರು ನಮ್ಮ ಜಿಲ್ಲೆಗೆ ಇದುವರೆಗೂ ಬಂದಿಲ್ಲ, ಸುಮಾರು 14 ರಿಂದ 15 ಟಿಎಂಸಿ ನೀರು ಬಂದಿರಬಹುದು ಅಷ್ಟೇ . ಗುಬ್ಬಿ, ತುರುವೇಕೆರೆ, ತಿಪಟೂರಿಗೆ ಕುಡಿಯುವ ನೀರಿಗೆ ಹಂಚಿಕೆಯಾಗಿದೆ, ಇಲ್ಲಿಂದ ಮುಂದೆ ಕುಣಿಗಲ್ ಕೆರೆಗೂ ಹೋಗಲು ಅವಕಾಶ ಮಾಡಿಕೊಡಲಾಗಿದೆ, ಮಧ್ಯೆದಲ್ಲಿ ಹೆಬ್ಬೂರಿಗೂ ಏತನೀರಾವರಿ ಮೂಲಕ ನೀರು ಹರಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ಗುಬ್ಬಿ ತಾಲ್ಲೂಕಿನ ಡಿ.ರಾಂಪುರದ ಬಳಿ ಇರುವ 70ನೇ ಕಿ.ಮೀ ನಿಂದ ನೇರವಾಗಿ ಕುಣಿಗಲ್‌ಗೆ ನೀರು ತೆಗೆದುಕೊಂಡು ಹೋಗಬೇಕೆಂದು ಕಳೆದ ಐದಾರು ವರ್ಷಗಳಿಂದ ಪ್ರಸ್ತಾವನೆ ಇದೆ, ಇದಕ್ಕೆ ಪರ- ವಿರೋಧ ವ್ಯಕ್ತವಾಗಿದೆ, ಈ ಬಾರಿ ಸಂಪುಟದಲ್ಲಿ ವಿಷಯ ಮಂಡಿಸಿ, ಸರ್ಕಾರ ಎಕ್ಸ್‌ಪ್ರೆಸ್ ಕೆನಾಲ್ ಮಾಡಬಹುದು ಎಂದು ತೀರ್ಮಾನ ತೆಗೆದುಕೊಂಡಿದೆ ಎಂದರು.

ಈ ಮಧ್ಯೆ ರೈತರು ಈ ಎಕ್ಸ್‌ಪ್ರೆಸ್ ಕೆನಾಲ್ ಕೆಲಸ ಆಗಬಾರದು ಎಂದು ತಡೆದು ನಿಲ್ಲಿಸಿದ್ದಾರೆ, ತಹಶೀಲ್ದಾರ್‌ಗೆ ಮನವಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ, ಈ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಬೇಕಾಗಿದೆ .ಕಳೆದ ಜಿಪಂ ಕೆಡಿಪಿ ಸಭೆಯಲ್ಲೂ ಈ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಸ್ಥಗಿತಗೊಳಿಸುವ ಸಂಬಂಧ ನಿರ್ಣಯ ಕೈಗೊಳ್ಳಲಾಗಿತ್ತು, ಸಭೆಯು ತೀರ್ಮಾನ ಮಾಡಿದಂತೆ ನಡಾವಳಿ ಮಾಡಿ ಸರ್ಕಾರಕ್ಕೆ ಕಳುಹಿಸಿಕೊ,ಟ್ಟಿದ್ದೇವೆ ಎಂದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ

ರಾಜ್ಯದಲ್ಲಿ ಬಿಜೆಪಿಯವರು ಹೇಳುವಂತೆ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ, ಎಲ್ಲವೂ ಸರಿಯಾಗಿದೆ, ಜನತೆ ಶಾಂತಿ- ನೆಮ್ಮದಿಯಿಂದ ಇರಲು ಏನು ಕ್ರಮ ಬೇಕಾದರೂ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಬಿಜೆಪಿಯವರು ಶಾಂತಿ ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ, ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ, ಒಂದೊಂದು ಘಟನೆಗೂ ಒಂದೊಂದು ಕಾರಣ ಇರುತ್ತದೆ, ಎಲ್ಲದರ ಬಗ್ಗೆಯೂ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮುದ್ದಹನುಮೇಗೌಡ, ಶಿರಾ ಶಾಸಕ ಟಿ.ಬಿ.ಜಯಚಂದ್ರ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ವರದಿ: ಈಶ್ವರ್.‌ ತುಮಕೂರು

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

Whats_app_banner