ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಗೃಹ ಸಚಿವರ ಆಪ್ತ ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ 1 ಕೋಟಿ ರೂ. ವಂಚಿಸಿದ್ದ ಯುವಕ ಬಂಧನ

Bangalore Crime: ಗೃಹ ಸಚಿವರ ಆಪ್ತ ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ 1 ಕೋಟಿ ರೂ. ವಂಚಿಸಿದ್ದ ಯುವಕ ಬಂಧನ

Youth arrested ಗೃಹ ಸಚಿವ ಡಾ.ಜಿ.ಪರಮೇಶ್ವರ್‌(Dr G Parmeshwara) ಅವರ ಆಪ್ತ ಎಂದು ಹೇಳಿಕೊಂಡು ವಂಚಿಸುತ್ತಿದ್ದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಯುವಕ  ಜುಬೇರ್
ಬಂಧಿತ ಯುವಕ ಜುಬೇರ್

ಬೆಂಗಳೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಆಪ್ತ ಎಂದು ಹೇಳಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಿದ್ದ ಆರೋಪಗಳ ಮೇಲೆ ತುಮಕೂರು ಜಿಲ್ಲೆ ಕೊರಟಗೆರೆಯ ಮಹಮ್ಮದ್ ಜುಬೇರ್ ಎಂಬಾತನನ್ನು ಬೆಂಗಳೂರಿನ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. 33 ವರ್ಷದ ಜುಬೇರ್, ಮೆಡಿಕಲ್ ಸೀಟು, ಕಡಿಮೆ ಬೆಲೆಗೆ ಸೈಟ್ ಮತ್ತು ವಿವಿಧ ಬ್ಯಾಂಕ್‌ ಗಳಿಂದ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.ಕೆಂಗೇರಿ ನಿವಾಸಿ ಸಾಯಿದ ತಬಸುಂ ಎಂಬುವರು ದೂರು ಸಲ್ಲಿಸಿ, ಜುಬೇರ್ ತನಗೆ ರೂ. 1.20 ಕೋಟಿ ಹಾಗೂ 186 ಗ್ರಾಂ ಚಿನ್ನಾಭರಣಗಳನ್ನು ವಂಚನೆ ಮಾಡಿದ್ದಾನೆ ಎಂದು ಆಪಾದಿಸಿದ್ಧರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನಾಲ್ಕು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.

ಆರೋಪಿ ಜುಬೇರ್ ವಂಚಿಸಿದ್ದ 80 ಲಕ್ಷ ರೂಪಾಯಿ ಹಣದ ಮಾಹಿತಿ ಸಿಕ್ಕಿದ್ದು, ಉಳಿದ ಹಣವನ್ನು ಎಲ್ಲಿ ಅಡಗಿಸಿಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಹಣವನ್ನು ಪತ್ತೆ ಮಾಡಲು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಚಿವರ ಸ್ವಕ್ಷೇತ್ರ ಕೊರಟಗೆರೆ ಹಾಗೂ ತುಮಕೂರು ಜಿಲ್ಲೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಅವರ ಆಪ್ತ ಎಂದು ಬಿಂಬಿಸಿಕೊಂಡು ಓಡಾಡುತ್ತಿದ್ದ. ವಿವಿಧ ಇಲಾಖೆಗಳ ಅಧಿಕಾರಿಗಳ ಹೆಸರಿನ ನಕಲಿ ಸೀಲ್ ಮತ್ತು ನಕಲಿ ಲೆಟರ್ ಹೆಡ್ ಗಳನ್ನು ಬಳಸಿಕೊಂಡು ವಂಚಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಗೃಹ ಸಚಿವರ ಜೊತೆಗಿರುವ ಭಾವಚಿತ್ರ ಹಾಗೂ ವಿಡಿಯೊಗಳನ್ನು ತೋರಿಸಿಕೊಂಡು ಸಾರ್ವಜನಿಕರನ್ನು ನಂಬಿಸುತ್ತಿದ್ದ. ಕೆಂಗೇರಿ, ತುಮಕೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿ ವಿರುದ್ಧ 14 ದೂರುಗಳು ದಾಖಲಾಗಿವೆ. ಬೆಂಗಳೂರು, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳ ಸಾರ್ವಜನಿಕರನ್ನು ಹಣ ಪಡೆದು ವಂಚಿಸುತ್ತಿದ್ದ ಎನ್ನುವ ದೂರುಗಳು ಬಂದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಮೋಜಿನಜೀವನ ನಡೆಸುತ್ತಿದ್ದ.ಇಟ್ಟಿಗೆ ಫ್ಯಾಕ್ಟರಿಗಳಿಗೆ ಅಕ್ರಮವಾಗಿ ಅಕ್ರಮವಾಗಿ ಮಣ್ಣು ಪೂರೈಕೆ ಮಾಡುತ್ತಿದ್ದ ಎಂದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ. ಇನ್ನಷ್ಟು ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಪೊಲೀಸರು ಮುಂದುವರೆಸಿದ್ದಾರೆ.

(ವರದಿ: ಎಚ್‌.ಮಾರುತಿ.ಬೆಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point