ಕನಸಿಗೊಂದು ಅರ್ಥವಿದೆಯೇ? ಕಾಡುವ ಕನಸುಗಳ ಬಗ್ಗೆ ಮನಃಶಾಸ್ತ್ರ ಹೇಳುವುದೇನು? ನಿಮ್ಮ ಕನಸಿನ ಅರ್ಥ ತಿಳಿಯುವ ಆಸೆಯಿದ್ದರೆ ಈ ಬರಹ ಓದಿ -ಕಾಳಜಿ
ಡಾ ರೂಪಾ ರಾವ್: ಕನಸುಗಳು ಬೀಳುವುದು ನಮಗೇ ಆದರೂ ಎಷ್ಟೋ ಸಲ ಅದಕ್ಕೇನು ಅರ್ಥ ಎಂದು ತಿಳಿಯುವುದೇ ಇಲ್ಲ. ಎಚ್ಚರವಾದ ಮೇಲೆ ಯೋಚಿಸಿದರೆ ಏನು ಲಾಜಿಕ್ ಎಂದು ಹೊಳೆಯುವುದೂ ಇಲ್ಲ. ಅರ್ಥವಾಗದ ಕನಸುಗಳು ನಿಮ್ಮನ್ನೂ ಕಾಡುತ್ತಿದ್ದರೆ ಈ ಬರಹ ನೀವು ಓದಲೇಬೇಕು. ಕನಸುಗಳ ವಿಜ್ಞಾನಕ್ಕೆ ಇದೋ ಸ್ವಾಗತ.
ಪ್ರಶ್ನೆ: ನನಗೊಂದು ಕನಸು ಆಗಾಗ ಬಹಳ ಸಲ ಬೀಳುತ್ತದೆ. ಅದೆಂದರೆ ನಾವೆಲ್ಲಾ ಫ್ಯಾಮಿಲಿ ಎಲ್ಲೋ ಪಿಕ್‌ನಿಕ್‌ಗೆ ಹೋಗಿರುತ್ತೇವೆ. ಎಲ್ಲರೂ ಬೆಟ್ಟದ ಮೇಲೆ ಓಡಾಡುತ್ತಾ ಇದ್ದಂತೆ ನಾನು ಒಂಟಿಯಾದಂತೆ ಅನ್ನಿಸಿ, ಕೆಳಗೆ ನೋಡುತ್ತಿರುತ್ತೇನೆ. ದಿಢೀರ್ ಕೆಳಗೆ ಬೀಳಲಾರಂಭಿಸುತ್ತೇನೆ. ಭಯದಿಂದ ಬಾಯೆಲ್ಲಾ ಒಣಗಿ, ಹೃದಯ ಢವಢವ ಎಂದು ಜೋರಾಗಿ ಬಡಿದುಕೊಳ್ಳುತ್ತಿರುತ್ತದೆ. ಬೀಳುವ ಆಳವೂ ಗೊತ್ತಾಗುತ್ತಿಲ್ಲ. ಬೀಳುತ್ತಲೇ ಇರುತ್ತೇನೆ, ಉಸಿರು ನಿಲ್ಲುತ್ತದೇ ಏನೋ, ಇನ್ನೇನು ಕೆಳಗೆ ಬೀಳಬೇಕು ಎನ್ನುವಾಗ ನಾನು ಕಣ್ಣುಬಿಡುತ್ತೇನೆ. ಎದೆಬಡಿತ ಜೋರಾಗಿ ಇರುತ್ತದೆ. ಮನಸಿಗೆ ಆತಂಕ ಕಾಡುತ್ತದೆ. ನಾನು ಕಾಲೇಜು ಈ ವರ್ಷ ಮುಗಿಸುತ್ತಿರುವೆ, ಪರೀಕ್ಷೆ ಇನ್ನೆರೆಡು ತಿಂಗಳಲ್ಲಿ ಇದೆ. ಈ ರೀತಿಯ ಹಲವಾರು ಕನಸುಗಳು ಆಗಾಗ ಬಂದು ನಿದ್ದೆಕೆಡಿಸುತ್ತವೆ. ಹಾಗಾಗಿ ಓದಿನ ಮೇಲೆ ಫೋಕಸ್ ಮಾಡಲಾಗುತ್ತಿಲ್ಲ. ನನ್ನ ಕನಸಿನ ಅರ್ಥವೇನು? ಹಾಗೂ ಇದನ್ನು ತಡೆಯುವುದು ಹೇಗೆ
ಉತ್ತರ: ನಿಮ್ಮ ಪ್ರಶ್ನೆಯ ಉತ್ತರಕ್ಕೆ ಪೂರಕವಾಗಿ ನಿದ್ದೆ ಮತ್ತು ಕನಸುಗಳ ಬಗ್ಗೆ ಒಂದು ಸಣ್ಣ ಪರಿಚಯದಿಂದ ಶುರು ಮಾಡಿ ಮುಂದೆ ನಿಮ್ಮ ಕನಸಿನ ಅರ್ಥ ಹೇಳೋಣ. ಮೊದಲಿಗೆ ಕನಸುಗಳಿಗೆ ರಹದಾರಿ ಆಗಿರುವ ನಿದ್ದೆ. ಈ ನಿದ್ದೆಯ ಬಗ್ಗೆ ಮಾತನಾಡೋಣ. ನಿದ್ದೆಯ ಮಹತ್ವವನ್ನು ವೈಜ್ಞಾನಿಕವಾಗಿ ಪರಿಶೀಲಿಸೋಣ. ಊಟ ಇಲ್ಲದೆ ಮನುಷ್ಯ ಕನಿಷ್ಠ 45 ದಿನ ಬದುಕಬಲ್ಲ, ನೀರಿಲ್ಲದೆ 21 ದಿನ ಆದರೆ ನಿದ್ದೆ ಮಾಡದೇ ಕೇವಲ 5 ರಿಂದ 10 ದಿನ ಮಾತ್ರ ಬದುಕಬಲ್ಲ. ಈ ಮಾತಿನ ಅರ್ಥವೆಂದರೆ, ನಿದ್ದೆಯು ನಮಗೆ ನೀರು ಮತ್ತು ಆಹಾರಕ್ಕಿಂತಲೂ ಮುಖ್ಯ. ನಿದ್ದೆಯ ಮಹತ್ವ ಎಂಥದ್ದು ಎನ್ನುವುದು ಈಗ ನಿಮಗೆ ಅರ್ಥ ಆಗಿರಬಹುದು.
ಸಂಶೋಧಕರ ಪ್ರಕಾರ ನಿದ್ದೆಯ ಮುಖ್ಯ ಕಾರ್ಯ ನಮ್ಮ ದೇಹದ ಸ್ಥಿತಿಯನ್ನು ದುರಸ್ತಿ ಮಾಡಿ ಸುಸ್ಥಿತಿಯಲ್ಲಿಡುವುದು. ನಿದ್ದೆಯ ಇನ್ನಷ್ಟು ಉಪಯೋಗಗಳ ಹುಡುಕಾಟ ಇನ್ನೂ ನಡೆಯುತ್ತಿದೆ. ಸಾಮಾನ್ಯ ಮನುಷ್ಯರು ತಮ್ಮ ಜೀವಮಾನದ ಸರಾಸರಿ 20 ವರ್ಷಗಳನ್ನು ನಿದ್ದೆಯಲ್ಲಿಯೇ ಕಳೆಯುತ್ತಾರೆ. ತಮ್ಮ ಜೀವಿತಾವಧಿಯಲ್ಲಿ ಸುಮಾರು 3 ಲಕ್ಷ ಕನಸುಗಳನ್ನು ಕಾಣುತ್ತಾರೆ. ಸರಿಯಾದ ಊಟವಿಲ್ಲದೆ ಸಾಯುವುದಕ್ಕಿಂತಲೂ ನಿಯಮಿತವಾದ ನಿದ್ದೆ ಇಲ್ಲದಿರುವುದು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ನಿದ್ರೆಯ ಬಗ್ಗೆ ನಾವೆಲ್ಲರೂ ಸರಿಯಾಗಿ ತಿಳಿದುಕೊಳ್ಳುವುದು ಒಳ್ಳೆಯದು.
ಕನಸು ಮತ್ತು ನಿದ್ದೆಯ ವಿವಿಧ ಹಂತಗಳು
ನಿದ್ದೆಯಲ್ಲಿ 4 ಹಂತಗಳಿವೆ. ಈ ನಾಲ್ಕೂ ಹಂತಗಳು ಸೇರಿ ಒಂದು ಆವರ್ತ (ಸೈಕಲ್) ಆಗುತ್ತದೆ. ನೀವು ನಿದ್ದೆಯನ್ನು ಪ್ರವೇಶಿಸಿದ ನಂತರ ಇಷ್ಟೆಲ್ಲ ಆಗುತ್ತೆ.
ಹಂತ 1: ಈ ಹಂತದಲ್ಲಿ ನಿದ್ರೆ ಮತ್ತು ಎಚ್ಚರದ ಸ್ಥಿತಿಯ ಮಧ್ಯದಲ್ಲಿ ಇರುತ್ತೇವೆ. ಒಂದು ರೀತಿಯ ಮಂಪರು ಅಥವಾ ತೂಕಡಿಕೆಯ ಸ್ಥಿತಿ ಅನ್ನಬಹುದು.
ಹಂತ 2: ಈ ಹಂತದಲ್ಲಿ ನಿದ್ದೆ ಮಾಡುತ್ತೇವೆ. ಆದರೆ ಈ ಹಂತದಲ್ಲಿ ಕೂಡ ಸಣ್ಣ ಸದ್ದೂ ಸಹ ನಮ್ಮನ್ನು ಸುಲಭವಾಗಿ ಎಚ್ಚರಗೊಳಿಸಬಲ್ಲದು.
ಹಂತ 3: ಇದು ದೊಡ್ಡ ಸದ್ದಿಗೆ ಮಾತ್ರ ಎಚ್ಚರವಾಗುವ ಆಳವಾದ ನಿದ್ದೆ. ಈ ಮೇಲಿನ ಮೂರು ಹಂತಗಳು ನಡೆಯಲು 20 ನಿಮಿಷಗಳು ಹಿಡಿಯುತ್ತವೆ.
ಹಂತ 4: ಇಲ್ಲಿ ನಮ್ಮ ದೇಹ ಮತ್ತು ಮನಸ್ಸುಗಳು ತಮ್ಮ ದುರಸ್ತಿಗೆ ಬೇಕಾದ ಚಿಕಿತ್ಸೆಗಳನ್ನು ಪಡೆಯುತ್ತವೆ. ಇದಕ್ಕಾಗಿ ಗ್ರೋತ್ ಹಾರ್ಮೋನ್‌ಗಳು ನೆರವಾಗುತ್ತವೆ.
ಈ ನಾಲ್ಕೂ ಹಂತಗಳ ನಂತರ ನಿದ್ರೆಯ ಆವರ್ತ 4 ರಿಂದ ಹಂತ ಮೂರು ನಂತರ ಎರಡು ಮತ್ತೆ 1 ಹೀಗೆ ಹಿಮ್ಮುಖವಾಗಿ ಚಲಿಸುತ್ತವೆ. ಆದರೆ ಮೊದಲನೇ ಹಂತಕ್ಕೆ ಮರಳಿದ ಮೇಲೆ ಎಚ್ಚರವಾಗುವ ಬದಲು ಕಣ್ಣಾಲಿಗಳ ಚುರುಕು ಚಲನೆಯ ಹಂತಕ್ಕೆ (REM SLEEP stage ಅಂದರೆ Rapid Eye Movement ಹಂತಕ್ಕೆ) ಬರುತ್ತದೆ. ಈ ಹಂತದಲ್ಲಿಯೇ ನಮಗೆ ಕನಸುಗಳು ಬರುವುದು ಅಥವಾ ಬಂದ ಕನಸುಗಳು ನಮ್ಮ ಅರಿವಿಗೆ ಬರುವುದು.
1 ರಿಂದ 4 ಹಂತ ಮುಮ್ಮುಖ, ಮತ್ತೆ ನಾಲ್ಕರಿಂದ ಮೊದಲನೇ ಹಂತದವರೆಗೆ ಹಿಮ್ಮುಖ, ನಂತರ REM stage ಗೆ ಬರುತ್ತದೆ. ಈ ರೀತಿ ಒಂದು ಆವರ್ತವು ಸುಮಾರು 90 ರಿಂದ 100 ನಿಮಿಷ ತೆಗೆದುಕೊಳ್ಳುತ್ತದೆ. ಒಂದು ರಾತ್ರಿಯಲ್ಲಿ 5 ರಿಂದ 6 ನಿದ್ದೆಯ ಆವರ್ತಗಳು ಉಂಟಾಗುತ್ತದೆ. ಹಾಗಾಗಿ ಒಂದು ರಾತ್ರಿಯಲ್ಲಿ ಆಳವಾದ ನಿದ್ದೆ ಸಾಧ್ಯವಾಗುವುದು ವಯಸ್ಕರಿಗೆ ಕೇವಲ 55 ರಿಂದ 97 ನಿಮಿಷ ಮಾತ್ರ.
ಯಾವ ವಯಸ್ಸಿನವರಿಗೆ ಎಷ್ಟು ನಿದ್ದೆ ಬೇಕು
ಈಗ ಯಾವ ವಯಸಿನವರಿಗೆ ಎಷ್ಟು ನಿದ್ದೆ ಅವಶ್ಯಕ ಎನ್ನುವುದನ್ನು ಈಗ ನೋಡೋಣ
1) 0 ರಿಂದ 3 ತಿಂಗಳು: 14 ರಿಂದ 17 ಗಂಟೆ
2) 4 ರಿಂದ 12 ತಿಂಗಳು: 12 ರಿಂದ 16 ಗಂಟೆ
3) 1 ರಿಂದ 2 ವರ್ಷ: 11 ರಿಂದ 14 ಗಂಟೆ
4) 3 ರಿಂದ 5 ವರ್ಷ: 10 ರಿಂದ 13 ಗಂಟೆ
5) 6 ರಿಂದ 13 ವರ್ಷ: 9 to 12 ಗಂಟೆ
6) 14 ರಿಂದ 19 ವರ್ಷ: 8 ರಿಂದ 10 ಗಂಟೆ
7) 19 ವರ್ಷ ದಾಟಿದ ವಯಸ್ಕರಿಗೆ ಕನಿಷ್ಠ 7 ಗಂಟೆ ನಿದ್ದೆ ಬೇಕು.
ಉತ್ತಮ ನಿದ್ದೆಗಾಗಿ ಹೀಗೆ ಮಾಡಿ
ಈಗಿನ ಜೀವನಶೈಲಿ ಬಹಳ ಜನರಿಗೆ ನಿದ್ರಾಹೀನತೆ ತರುತ್ತಿದೆ. ಸಿಬಿಟಿ ಮತ್ತು ಇತರ ಬಿಹೇವಿಯರಲ್ ಥೆರಪಿ ಪ್ರಕಾರ ನಿದ್ರಾಹೀನತೆ ಇಂದ ಬಳಲುವವರಿಗೆ ಒಂದಷ್ಟು ಸಲಹೆಗಳು ಹೀಗಿವೆ.
1) ನಿದ್ದೆ ಮಾಡುವ ಕನಿಷ್ಠ ಒಂದು ಗಂಟೆಗೆ ಮೊದಲು ಟಿವಿ, ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ದೂರ ಇರಿಸಿ
2) ಮಲಗುವ ಕನಿಷ್ಠ 4 ಗಂಟೆಗಳ ಮೊದಲು ಕಾಫಿ / ಟೀ ಸೇವಿಸಬೇಡಿ
3) ಮಲಗುವ ಎರಡು ಗಂಟೆ ಮೊದಲು ಊಟ ಮುಗಿಸಿ
4) ಮಲಗುವ ಕೋಣೆ ಸಂಪೂರ್ಣ ಕತ್ತಲಾಗಿರಬೇಕು
5) ಪ್ರತಿದಿನ ಒಂದೇ ಸಮಯದಲ್ಲಿ ಮಲಗಬೇಕು
6) ನಿದ್ದೆ ಬಂದರೇ ಮಾತ್ರ ಹಾಸಿಗೆಯ ಮೇಲೆ ಮಲಗಿ. ಇಲ್ಲವಾದರೆ ಬೇರೆ ಸ್ಥಳಕ್ಕೆ ಎದ್ದು ಹೋಗಿ. ಹಾಸಿಗೆಯಲ್ಲಿ ಮಲಗಿದ ಕೂಡಲೇ ನಿದ್ದೆ ಬರುವಂತೆ ಆಗಬೇಕು
7) ಮಲಗುವ ಒಂದೆರೆಡು ಗಂಟೆಯ ಮುನ್ನ ಲಘು ವ್ಯಾಯಾಮ ಮಾಡಿ. ಇದು ಸಹ ನಿದ್ದೆಗೆ ಸಹಾಯ ಮಾಡುತ್ತದೆ
ಆದರೆ ಪ್ರಸ್ತುತ ಜೀವನಶೈಲಿಯು ಇವುಗಳಿಗೆ ಆಸ್ಪದ ಕೊಡುವುದಿಲ್ಲ. ಹೀಗಾಗಿ ಸಾಧ್ಯವಾದಷ್ಟು ಪಾಲಿಸಲು ಯತ್ನಿಸಬಹುದು. ಇವಿಷ್ಟು ನಿದ್ದೆಯ ಬಗ್ಗೆ ಆಯಿತು.
ಕನಸುಗಳು ಎಂದರೆ ಸುಪ್ತ ಮನಸಿಗೆ ರಾಜಮಾರ್ಗ
ಕನಸು ಎನ್ನುವುದೊಂದು ಅದ್ಭುತ ಲೋಕ. ಅಲ್ಲಿ ವಿಹರಿಸದೇ ಇರುವವರು ಯಾರೂ ಇಲ್ಲ. ನನಗೆ ಕನಸು ಬೀಳುವುದಿಲ್ಲ ಎನ್ನುವವರೂ ಕನಸು ಕಂಡಿರುತ್ತಾರೆ. ಆದರೆ ಅವರಿಗೆ ನೆನಪು ಮಾತ್ರ ಇರುವುದಿಲ್ಲ. ಕನಸುಗಳ ಬಗ್ಗೆ ನೂರಾರು, ಸಾವಿರಾರು ನಂಬಿಕೆ, ಕಥೆ, ಕಲ್ಪನೆ ಅನಿಸಿಕೆಗಳಿವೆ. ಸ್ವತಃ ಮನಃಶಾಸ್ತ್ರಕ್ಕೂ ಕನಸಿನ ಬಗ್ಗೆ ಇದು ಹೀಗೆಯೇ ಎಂದು ವ್ಯಾಖ್ಯಾನ ಕೊಡಲು ಸಾಧ್ಯವಾಗಿಲ್ಲ.
ಅಂದಿನ ಸಿಗ್ಮಂಡ್ ಫ್ರಾಯ್ಡ್ ಹಿಡಿದು ಇಂದಿನ ಮ್ಯಾಥ್ಯೂ ವಾಕರ್‌ವರೆಗೆ (ಇಬ್ಬರೂ ಖ್ಯಾತ ಮನಃಶಾಸ್ತ್ರಜ್ಞರು) ಕನಸಿನ ವಿಶ್ಲೇಷಣೆ ಎಂಬ ಮಾಯಾಲೋಕವನ್ನು ಜಾಲಾಡುತ್ತಲೇ ಇದ್ದಾರೆ. ಸಿಗ್ಮಂಡ್ ಫ್ರಾಯ್ಡ್ ಅವರ ಕನಸಿನ ವಿಶ್ಲೇಷಣೆ ಅವೈಜ್ಞಾನಿಕ. ನಮ್ಮ ಅಪೂರ್ಣ, ಪೂರೈಸಲಾಗದ ಆಸೆಗಳು ಕನಸಿನಲ್ಲಿ ಬೇರೆಬೇರೆ ವೇಷದಲ್ಲಿ ಬರುತ್ತವೆ ಎನ್ನುವುದು ಸಿಗ್ಮಂಡ್ ಫ್ರಾಯ್ಡ್ ವಾದ. ಉದಾಹರಣೆಗೆ ಮೇಲಿನಿಂದ ಕೆಳಗೆ ಬೀಳುವ ಕನಸು ಆತಂಕದ ಶಮನಗೊಳಿಸುವಿಕೆ ಅಂತಲೂ, ಈಜಾಡುವಂತೆ ಕನಸು ಬಿದ್ದರೆ ಮೂತ್ರಕ್ಕೆ ಹೋಗುವ ಸಂಕೇತವನ್ನು ಎಂಜಾಯ್ ಮಾಡುವುದು ಎಂತಲೂ ಹೇಳುತ್ತಾರೆ.
ಇವುಗಳು ಒಂದು ಮಟ್ಟಕ್ಕೆ ಸತ್ಯ ಎನಿಸಬಹುದಾದರೂ ಈಗಿನ ನರವಿಜ್ಞಾನಿಗಳು ಮತ್ತು ಮನಶಾಸ್ತ್ರಜ್ಞರು ಇದನ್ನು ಅಲ್ಲಗೆಳೆಯುತ್ತಾರೆ. ಆದರೆ ಕೆಟ್ಟ ಕನಸುಗಳಲ್ಲಿ ನಾವು ನೋಡುವ ದೃಶ್ಯ ಹೊಸದಿರಬಹುದು. ಆದರೆ ಆ ದೃಶ್ಯದ ಹಿಂದಿನ ಭಾವನೆಯು ಕೋಪಗೊಂಡ ಜಿಗುಪ್ಸೆಯೋ, ಬೇಸರ, ಸಂತೋಷ ಅಂದಿನ ದಿನದ ನಮ್ಮ ದಿನಚರಿಯಲ್ಲಿ ಮುಖ್ಯವಾದ ಘಟನೆಯೊಂದರದ್ಧೇ ಆಗಿರುತ್ತದೆ.
ಕನಸುಗಳಿಂದ ಹಲವು ಉಪಯೋಗ
ನಮ್ಮ ತೊಂದರೆಗಳನ್ನು ಪರಿಹರಿಸಿಕೊಳ್ಳಲು ಕನಸುಗಳು ಹೇಗೆ ಸಹಾಯ ಮಾಡುತ್ತವೆ ಎಂದು ಕೆಲ ಸಂಶೋಧನೆಗಳು ಹೇಳುತ್ತವೆ:
1) ಕೆಲವರ ಕನಸುಗಳಲ್ಲಿ ಭವಿಷ್ಯವೂ ಕಾಣುತ್ತದೆ. ಅದರ ಬಗ್ಗೆ ಇನ್ನೂ ಆಧಾರಗಳನ್ನು ಹುಡುಕುವ ಪ್ರಯತ್ನ ಸಾಗುತ್ತಿದೆ.
2) ಮೊದಲೇ ಹೇಳಿದ್ದಂತೆ ಫ್ರಾಯ್ಡ್ ಪ್ರಕಾರ ಕನಸುಗಳು ಅಪೂರ್ಣಗೊಂಡ ಆಸೆ, ಅದುಮಿಟ್ಟ ಕೋಪ, ನೋವು, ನಿರಾಸೆಗಳ ಸಾಕ್ಷಾತ್ಕಾರ.
3) ಕಾರ್ಲ್ ಜಂಗ್ ಎನ್ನುವ ಮನಃಶಾಸ್ತ್ರಜ್ಞನ ಪ್ರಕಾರ, ಕನಸುಗಳು ಅಗೋಚರ ಭಾವನೆಗಳ ಸಂಕೇತ. ಕನಸುಗಳಿಗೆ ನಮ್ಮನ್ನು ನಮಗೆ ಮತ್ತು ನಾವಿರುವ ವಾಸ್ತವವನ್ನು ತೋರಿಸುವ ಶಕ್ತಿ ಇದೆ. ಹಾಗಾಗಿ ಕನಸುಗಳಿಗೆ ಸಿದ್ದ ಸೂತ್ರ ಕೊಡುವುದು ಅವುಗಳನ್ನು ಅರ್ಥೈಸುವುದಕ್ಕೆ ಸರಿಯಾದ ಮಾರ್ಗವಲ್ಲ.
4) ಕನಸುಗಳಿಗೆ ಇದೇ ಅರ್ಥ ಎನ್ನುವುದಕ್ಕಿಂತಲೂ ಅದಕ್ಕಿರುವ ಇತರ ಆಯಾಮಗಳನ್ನು ವಿಶ್ಲೇಷಿಸಿದಾಗ ಪ್ರತಿಯೊಬ್ಬರ ಕನಸುಗಳಿಗೂ ಅವರದ್ದೇ ಆದ ಸ್ಥಿತಿ, ಸನ್ನಿವೇಶ ಚಿತ್ರಣವಿರುವುದು ಕಂಡು ಬರುತ್ತದೆ.
ಎತ್ತರದ ಸ್ಥಳದಿಂದ ಬೀಳುವಂತೆ ಕನಸು ಬಿದ್ದರೆ ಏನು ಅರ್ಥ
ಈಗ ಈ ಬರಹಕ್ಕೆ ಕಾರಣವಾದ ಮೂಲ ಪ್ರಶ್ನೆಗೆ ಬರೋಣ. ನಿಮಗೆ ಎತ್ತರದ ಸ್ಥಳ (ಬೆಟ್ಟದ ಮೇಲಿಂದ, ಮಹಡಿಯ ಮೇಲಿಂದ, ಬಾವಿಗೆ) ಬಿದ್ದಂತೆ ಅಥವಾ ಬೀಳುತ್ತಿರುವಂತೆ ಕನಸುಗಳು ಬಂದರೆ ಅವುಗಳಿಗೆ ಏನು ಅರ್ಥ ಎಂದು ನೋಡೋಣ.
ಸಾಮಾನ್ಯವಾಗಿ ಬದುಕಿನ ಅಭದ್ರತೆ, ಅನಿಶ್ಚಿತತೆ ಮುಂದೇನು ಮಾಡುವುದು ಎಂಬ ಭಯ ಹಾಗೂ ಆತಂಕಗಳು ಜಾಗೃತ ಮನಸನ್ನು ಕಾಡುತ್ತಿದ್ದಾಗ ಸುಪ್ತಮನಸು ಕೂಡ ಇದೇ ವಿಷಯವಾಗಿ ಯೋಚಿಸುತ್ತಿರುತ್ತದೆ. ಹಾಗಾಗಿ ಯಾವುದೋ ಎತ್ತರದ ಪ್ರದೇಶದಿಂದ ಕೆಳಗೆ ಬೀಳುತ್ತಲೇ ಇರುವಂತೆ; (ಗ್ರಾವಿಟಿ ಬಗ್ಗೆ ಕನಸು ಯೋಚಿಸಲ್ಲ) ಕನಸು ಬಿದ್ದರೆ, ಭರವಸೆ ಇಲ್ಲದ ಹತಾಶೆಯು ಕನಸಿನಲ್ಲಿ ವ್ಯಕ್ತವಾಗುತ್ತಿರಬಹುದು.
ಎತ್ತರದಿಂದ ಬೀಳುವಂತೆ ಕನಸು ಬಂದರೆ ಇಷ್ಟೆಲ್ಲ ಕಾರಣಗಳು
1) ಆರ್ಥಿಕ ಅನಿಶ್ಚಿತತೆ
2) ನಿರುದ್ಯೋಗ
3) ಉದ್ಯೋಗ ನಷ್ಟ (ಉದ್ಯೋಗ ಕಳೆದುಕೊಳ್ಳುವುದು)
4) ವ್ಯಾಪಾರ, ವ್ಯವಹಾರಗಳಲ್ಲಿ ನಷ್ಟದ ಭಯ
5) ಸಂಬಂಧಗಳಲ್ಲಿ ಬಿರುಕು, ಡೈವೋರ್ಸ್, ಪ್ರೀತಿ ಪಾತ್ರರ ಅಗಲಿಕೆ
6) ಯಾವುದೋ ಸಂದರ್ಭದ ಅವಮಾನ
ಒಂದೇ ವಾಕ್ಯದಲ್ಲಿ ಹೇಳುವುದಾದರೆ ಮೇಲಿನಿಂದ ಬೀಳುವ ಕನಸುಗಳು, ವ್ಯಕ್ತ, ಅವ್ಯಕ್ತ ಭಯ ಮತ್ತು ಆತಂಕಗಳನ್ನು ಸೂಚಿಸುತ್ತವೆ.
ಪದೇಪದೆ ಮೇಲಿನಿಂದ ಕೆಳಗೆ ಬೀಳುವ ಕನಸು ಬೀಳುತ್ತಿದ್ದರೆ ಹೀಗೆ ಮಾಡಿ
ಒಂದು ವೇಳೆ ಮೇಲೆ ಪಟ್ಟಿ ಮಾಡಿದ ತೊಂದರೆಗಳಲ್ಲಿ ನಿಮಗೆ ಯಾವುದಾದರೂ ಸಮಸ್ಯೆಗಳಿದ್ದಲ್ಲಿ, ರಾತ್ರಿ ಮಲಗುವ ಮುನ್ನ ಅವುಗಳನ್ನು ಒಂದು ಡೈರಿಯಲ್ಲಿ ವಿವರವಾಗಿ ಬರೆದಿಡಿ. ನಿಮಗೆ ಹೊಳೆಯುವ ಪರಿಹಾರಗಳನ್ನೂ ಬರೆಯಿರಿ. ನಿಮ್ಮ ಮನಸ್ಸು ನಿಮ್ಮ ಈ ಚಿಂತೆಗೆ ಪರಿಹಾರ ಸಿಕ್ಕಿದೆ ಎಂದುಕೊಂಡು ಪಾಸಿಟಿವ್ ಕನಸುಗಳನ್ನು ಕಾಣಬಹುದು.
ಒಂದು ವೇಳೆ ಇಂತಹ ಕನಸುಗಳು ಪದೇಪದೆ ಬೀಳುತ್ತಿದ್ದರೆ ಮತ್ತು ನಿಮ್ಮ ಪ್ರಕಾರ ನಿಮಗೆ ಯಾವುದೇ ತೊಂದರೆ ಇಲ್ಲ ಎಂದಾದರೆ ನಿಮ್ಮ ಜಾಗೃತ ಮನಸಿನ ಅರಿವಿಗೆ ಬಾರದ ಯಾವುದೋ ಆತಂಕ ಸುಪ್ತಮನಸನ್ನು ಕಾಡುತ್ತಿದೆ. ಅಥವಾ ನಿಮ್ಮ ಅರಿವಿಗೆ ಬಾರದ ಯಾವುದೋ ಘಟನೆ ನಿಮ್ಮ ಸುಪ್ತ ಮನಸ್ಸನ್ನು ಕೊರೆಯುತ್ತಿದ್ದರೆ ಅದು ಯಾವುದು ಎಂದು ನೋಡಿಕೊಂಡು ಸರಿಪಡಿಸಿಕೊಳ್ಳಲು ನಿಮಗೊಂದು ಅವಕಾಶವೂ ಸಿಕ್ಕಂತಾಗುತ್ತದೆ.
ಹಾಗೆಯೇ ನಿಮಗೆ ಯಾವುದೇ ತೊಂದರೆ ಇಲ್ಲ ಆದರೂ ಈ ರೀತೀ ಕನಸುಗಳು ಬೀಳುತ್ತಿವೆ ಅಂದರೆ ರಾತ್ರಿ ಮಲಗುವ ಮುನ್ನ ಯಾವುದೇ ಭಯಾತಂಕ ಕೊಡುವ ಸಿನಿಮಾ, ಕಥೆ, ಫೇಸ್‌ಬುಕ್ ಗಲಾಟೆ, ಘಟನೆಗಳಿಂದ ದೂರವಿರಿ. ಸಾಧ್ಯವಾದಷ್ಟೂ ಮನಸ್ಸನ್ನು ಸಮಾಧಾನಪಡಿಸುವ ಮುದಗೊಳಿಸುವ ಸಂಗೀತ, ಕಥೆ, ತಮಾಷೆ, ಹಾಸ್ಯ ಸಂಗತಿಗಳನ್ನು ಕೇಳಿ, ಓದಿ, ನೋಡಿ, ಅಥವಾ ಮಾತಾಡಿ.
ಸುಪ್ತಮನಸಿಗೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲ. ನಿಮ್ಮ ಓದು, ಮಾತು, ನೀವು ನೋಡಿದ ದೃಶ್ಯ ಎಲ್ಲವೂ ಮನಸಿನ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಮೇಲಿನ ತಂತ್ರಗಳು ಕೆಲಸ ಮಾಡುತ್ತವೆ.
ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990.