ಇಂದಿನಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ; ಪ್ರತಿಧ್ವನಿಸಲಿರುವ ಮುಡಾ ನಿವೇಶನ ಹಂಚಿಕೆ, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ
Jul 15, 2024 11:13 AM IST
ಬೆಂಗಳೂರಿನಲ್ಲಿ ಸೋಮವಾರ ವಿಧಾನಮಂಡಲ ಅಧಿವೇಶನ ಶುರು
- Karnataka Assembly Session ಲೋಕಸಭೆ ಚುನಾವಣೆ ಬಳಿಕ ಕರ್ನಾಟಕದ ಮೊದಲ ವಿಧಾನಮಂಡಲ ಅಧಿವೇಶನ ಸೋಮವಾರ ಬೆಂಗಳೂರಲ್ಲಿ ಆರಂಭವಾಗಲಿದೆ. ಸರ್ಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ಸಜ್ಜಾಗಿದ್ದರೆ ರಚನಾತ್ಮಕ ಚರ್ಚೆಗೆ ಸಿಗಲಿದೆಯೇ ಅವಕಾಶ ಎನ್ನುವ ಪ್ರಶ್ನೆ ಎದುರಾಗಿದೆ.
- ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಜುಲೈ 15 ಸೋಮವಾರದಿಂದ ರಾಜ್ಯ ವಿಧಾನಮಂಡಲದ ಅಧಿವೇಶನ ಅರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ನಡೆಯುವ ಸಾಧ್ಯತೆಗಳಿವೆ. ಪ್ರತಿಪಕ್ಷಗಳ ಕೈಗೆ ವಿಫುಲವಾದ ಅಸ್ತ್ರಗಳೇ ಸಿಕ್ಕಿವೆ. ಪ್ರಮುಖವಾಗಿ ವಾಲ್ಮೀಕಿ ನಿಗಮದ ಅವ್ಯವಹಾರ, ಮೈಸೂರಿನ ಮುಡಾ ಹಗರಣ ಮತ್ತು ತಮಿಳುನಾಡಿಗೆ ನೀರು ಬಿಡುವ ವಿಷಯ ಪ್ರಮುಖವಾಗಿ ಪ್ರತಿಧ್ವನಿಸಲಿವೆ. 9 ದಿನಗಳ ಅಧಿವೇಶನದಲ್ಲಿ ಬಿಜೆಪಿ ಈ ಹಗರಣಗಳನ್ನು ಪ್ರಸ್ತಾಪಿಸಲು ತುದಿಗಾಲಲ್ಲಿ ನಿಂತಿದ್ದು, ಆಡಳಿತ ಪಕ್ಷದ ಮೇಲೆ ಮುಗಿ ಬೀಳಲು ಸಿದ್ದತೆಗಳನ್ನು ಮಾಡಿಕೊಂಡಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ.
ಲೋಕಸಭಾ ಚುನಾವಣೆ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. 187 ಕೋಟಿ ರೂ. ಅವ್ಯವಹಾರ ನಡೆದಿದೆ ಎನ್ನಲಾದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ದಿ ನಿಗಮ ಮತ್ತು ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ 4000 ಕೋಟಿ ರೂ.ಗಳ ನಿವೇಶನ ಹಂಚಿಕೆ ಹಗರಣ ಪ್ರಮುಖ ಅಸ್ತ್ರವಾಗಿವೆ.
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜೀನಾಮೆ ನೀಡಿರುವ ಪರಿಶಿಷ್ಟ ಪಂಗಡ ಕಲ್ಯಾಣ ಅಭಿವೃದ್ಧಿ ನಿಗಮದ ಸಚಿವ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಮತ್ತೊಂದು ಕಡೆ ನಿಗಮದ ಅಧ್ಯಕ್ಷ ಶಾಸಕ ಬಸವರಾಜ ದದ್ದಲ್ ಅವರ ಹುಡುಕಾಟದಲ್ಲಿದೆ. ಮೇ 26ರಂದು ನಿಗಮದ ಅಧಿಕಾರಿ ಪಿ.ಚಂದ್ರಶೇಖರರನ್ ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ಈ ಹಗರಣ ಬೆಳಕಿಗೆ ಬಂದಿತ್ತು. ನಂತರ ರಾಜ್ಯ ಸರ್ಕಾರ ವಿಶೇಷ ತನಿಖಾ ದಳವನ್ನು ರಚಿಸಿತ್ತು. ಎಸ್ ಐಟಿ ಇದುವರೆಗೂ 11ಅಧಿಕಾರಿಗಳನ್ನು ಬಂದಿಸಿದೆ. ಮತ್ತೊಂದು ಕಡೆ ಇಡಿ ತನಿಖೆಯೂ ನಡೆದಿದೆ. ತನಿಖೆ ಮುಂದುವರೆದಂತೆಲ್ಲಾ ಆಡಳಿತ ಪಕ್ಷದ ಶಾಸಕರ ಕೈವಾಡ ಇರುವುದು ಸ್ಪಷ್ಟವಾಗುತ್ತಾ ಬಂದಿದೆ.
ಜೊತೆಗೆ ಮೈಸೂರಿನ ಮುಡಾದಲ್ಲಿ ಪರ್ಯಾಯ ನಿವೇಶನ ನೀಡುವ ಸಂಬಂಧ ಅಂದಾಜು 4,000 ಕೋಟಿ ರೂ. ಹಗರಣ ನಡೆದಿದೆ ಎಂದು ಪ್ರತಿಪಕ್ಷಗಳು ಆಪಾದಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಭಾರಿ ಪ್ರಮಾಣದಲ್ಲಿ ಪರಿಹಾರ ಘೋಷಣೆಯಾಗಿರುವುದು ಅವರನ್ನು ಸಂದಿಗ್ಧಕ್ಕೆ ಸಿಲುಕಿಸಿದೆ. ಈ ಹಗರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡಿವೆ.
ಈ ಎರಡೂ ಹಗರಣಗಳು ಸರ್ಕಾರವನ್ನು ಮುಜುಗರಕ್ಕೀಡು ಮಾಡಿರುವುದಂತೂ ನಿಜ. 3-4 ಸಾವಿರ ಕೋಟಿ ರೂ.ಗಳ ಹಗರಣವಾಗಿರುವ ಮುಡಾ ಹಗರಣವನ್ನು ಸಿಬಿಐಗೆ ವಹಿಸುವಂತೆಯೂ ಬಿಜೆಪಿ ಆಗ್ರಹಪಡಿಸುತ್ತಾ ಬಂದಿದೆ. ಈ ಎರಡೂ ಹಗರಣಗಳಿಗೆ ಸಂಬಂಧಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಬಿಜೆಪಿ ಮತ್ತು ಜೆಡಿಎಸ್ ಪಟ್ಟು ಹಿಡಿದಿವೆ.
ಈ ಹಗರಣಗಳ ಜೊತೆಗೆ ಎಸ್ ಸಿ, ಎಸ್ ಟಿ ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ಐದು ಗ್ತಾರಂಟಿಗಳ ಜಾರಿಗೆ ಬಳಸಿಕೊಂಡಿರುವುದನ್ನು ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್‌ಸರ್ಕಾರ ಪರಿಶಿಷ್ಟ ಜಾತಿ ಪಂಗಡಗಳ ವಿರೋಧಿ ಎಂದು ಬಿಂಬಿಸಲು ಹೋರಾಟ ನಡೆಸಲಿವೆ.
ಜೊತೆಗೆ ತಮಿಳುನಾಡಿಗೆ ನೀರು ಬಿಡುವ ವಿಷಯ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಕಾವೇರಿ ನೀರು ನಿಯಂತ್ರಣ ಪಾಧಿಕಾರ ಈ ತಿಂಗಳ ಅಂತ್ಯದವರೆಗೆ ಪ್ರತಿದಿನ 1 ಟಿಎಂಸಿ ನೀರು ಬಿಡುವಂತೆ ಆದೇಶಿಸಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ರಾಜ್ಯ ಸಹಕಾರ ಸಂಸ್ಥೆಗಳ ತಿದ್ದುಪಡಿ ಮಸೂದೆ-2024 ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ-2024 ಮಂಡನೆಯಾಗಲಿದ್ದು, ಅಂಗೀಕಾರ ಪಡೆಯುವ ಸಾಧ್ಯತೆಗಳಿವೆ. ಗ್ರೇಟರ್ ಬೆಂಗಳೂರು ರಚನೆಯಾಗುವ ಬಿಲ್ ಕೂಡಾ ಮಂಡನೆಯಾಗುವ ಸಾಧ್ಯತೆಗಳಿವೆ. ಬೆಂಗಳೂರು ಮಹಾನಗರ ಪಾಲಿಕೆಯನ್ನು ಇಬ್ಭಾಗ ಮಾಡುವ ಪ್ರಸ್ತಾಪವನ್ನು ಬಿಜೆಪಿ ಮತ್ತು ಜೆಡಿಎಸ್ ವಿರೋಧಿಸಲಿವೆ. ರಾಜ್ಯಾದ್ಯಂತ ಹೆಚ್ಚುತ್ತಿರುವ ಡೆಂಗಿ, ರಾಮನಗರ ಜಿಲ್ಲೆ ಹೆಸರು ಬದಲಾವಣೆ ಕುರಿತು ಭಾರಿ ಚರ್ಚೆ ನಡೆಯಲಿದೆ. ಲೋಕಸಭಾ ಚುನಾವಣಾ ಫಲಿತಾಂಶ, ಮುಖ್ಯಮಂತ್ರಿ ಹುದ್ದೆಗಾಗಿ ನಡೆಯುತ್ತಿರುವ ಪೈಪೋಟಿ, ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಪ್ರತಿಪಕ್ಷಗಳ ಬತ್ತಳಿಕೆಯಲ್ಲಿವೆ. ಕಾಂಗ್ರೆಸ್ ಪಕ್ಷ ಎಚ್.ಡಿ.ರೇವಣ್ಣ ಕುಟುಂಬದ ಲೈಂಗಿಕ ಹಗರಣಗಳನ್ನು ಪ್ರಸ್ತಾಪಿಸುವ ಅವಕಾಶವನ್ನುತಪ್ಪಿಸಿಕೊಳ್ಳುವುದಿಲ್ಲ.
ಪ್ರತಿಪಕ್ಷದ ಸಾಲಿನಲ್ಲಿ ಪ್ರಮುಖ ಎದುರಾಳಿಗಳಿಲ್ಲದಿರುವುದು ಕೊರತೆಯಾಗಬಹುದು. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರ ಕೊರತೆ ಎದ್ದು ಕಾಣಲಿದೆ. ವಿಪಕ್ಷ ನಾಯಕ ಆರ್. ಅಶೋಕ ಅವರು ಎಷ್ಟರ ಮಟ್ಟಿಗೆ ಸರ್ಕಾರವನ್ನು ಕಟ್ಟಿ ಹಾಕಲಿದ್ದಾರೆ ಎಂದು ಕಾದು ನೋಡಬೇಕಿದೆ. ಆಡಳಿತ ಪಕ್ಷದ ಸಾಲಿನಲ್ಲಿ ಸಿಎಂ ಡಿಸಿಎಂ ಸೇರಿದಂತೆ ಘಟಾನುಘಟಿ ಸಚಿವರು ಮತ್ತು ಶಾಸಕರಿರುವುದು ಸರ್ಕಾರದ ವಿಶ್ವಾಸವನ್ನು ಹೆಚ್ಚಿಸಿದೆ.
ವಿಶ್ಲೇಷಣೆ: ಎಚ್.ಮಾರುತಿ, ಬೆಂಗಳೂರು